Republic Day: ಗಣರಾಜ್ಯೋತ್ಸವದಂದು ಧ್ವಜ ಏರಿಸುವುದಲ್ಲ, ಬದಲಾಗಿ ಅರಳಿಸುವುದು, ಈ ವ್ಯತ್ಯಾಸ ತಿಳಿಯಿರಿ
ಗಣರಾಜ್ಯೋತ್ಸವ ಇನ್ನೇನು ಬರುತ್ತಿದೆ. ದೇಶದಲ್ಲಿ ಬ್ರಿಟಿಷ್ ಆಡಳಿತದಿಂದ ಮುಕ್ತಿ ಹೊಂದಿ ನಮ್ಮದೇ ಆದ ಸಂವಿಧಾನ ಬದ್ಧ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದ ದಿನವನ್ನು ಗಣರಾಜ್ಯೋತ್ಸವ ಎಂದು ಆಚರಿಸುತ್ತೇವೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರ ಧ್ವಜ ಏರಿಸುವುದಿಲ್ಲ, ಬದಲಾಗಿ ರಾಷ್ಟ್ರಪತಿಯವರು ಧ್ವಜ ಅರಳಿಸುತ್ತಾರೆ. ಈ ವ್ಯತ್ಯಾಸ ಯಾಕೆಂದು ನಿಮಗೆ ತಿಳಿದಿದೆಯೇ?

ನಮ್ಮ ದೇಶದಲ್ಲಿ ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯೋತ್ಸವ ಆಚರಿಸುತ್ತೇವೆ. ಆಗಸ್ಟ್ 15 ಹೇಗೆ ಸ್ವಾತಂತ್ರ್ಯ ದಿನಾಚರಣೆಯಾಗಿ ಮಹತ್ವ ಪಡೆದುಕೊಂಡಿದೆಯೋ, ಅದೇ ರೀತಿಯಲ್ಲಿ ಜನವರಿ 26ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಕಾರ್ಯಕ್ರಮ, ಶಾಲಾ-ಕಾಲೇಜುಗಳಲ್ಲಿ ಆಚರಣೆ, ಸಂಭ್ರಮ ಇರುತ್ತದೆ.
ಬ್ರಿಟಿಷರ ಆಡಳಿತದಿಂದ ಮುಕ್ತಿ ಹೊಂದಿದ ಬಳಿಕ, ನಮ್ಮ ದೇಶದಲ್ಲಿ ಸಂವಿಧಾನಬದ್ಧ ಗಣತಂತ್ರ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಚುನಾಯಿತ ಸರ್ಕಾರ ಆಡಳಿತ ನಡೆಸುವ ಪದ್ಧತಿ, ಪ್ರಜಾಪ್ರಭುತ್ವ ವಿಧಾನಗಳನ್ನು ಅಳವಡಿಸಿಕೊಳ್ಳಲಾಯಿತು. ಅದರ ಸಲುವಾಗಿ ಜನವರಿ 26ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ.
ರಾಷ್ಟ್ರೀಯ ಹಬ್ಬ
ಗಣರಾಜ್ಯೋತ್ಸವವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಲಾಗುತ್ತದೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರನ್ನು ಸ್ಮರಿಸಲಾಗುತ್ತದೆ.
ಧ್ವಜ ಏರಿಸುವುದಲ್ಲ..
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ದೆಹಲಿಯ ಕೆಂಪುಕೋಟೆಯಲ್ಲಿ ದೇಶದ ಪ್ರಧಾನಿಯವರು ಧ್ವಜಾರೋಹಣ ಮಾಡಿ, ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ಜತೆಗೆ ಸೇನೆಯ ವಿವಿಧ ತುಕಡಿಗಳ ಪಥಸಂಚಲನ, ಗೌರವ ವಂದನೆಯೂ ಇರುತ್ತದೆ. ಆ ಸಂದರ್ಭದಲ್ಲಿ ಧ್ವಜಸ್ತಂಭಕ್ಕೆ ಕಟ್ಟಿರುವ ಧ್ವಜವನ್ನು, ಕೆಳಗಿನಿಂದ ಮೇಲಕ್ಕೆ ಏರಿಸಿ, ನಂತರ ಹಾರಿಸಲಾಗುತ್ತದೆ. ಅದನ್ನು ಧ್ವಜಾರೋಹಣ ಎನ್ನುತ್ತಾರೆ. ಆದರೆ ಗಣರಾಜ್ಯೋತ್ಸವ ಆಚರಣೆಯ ಸಂದರ್ಭ ಮಾತ್ರ ಧ್ವಜ ಏರಿಸುವ ಕ್ರಮದಲ್ಲಿ ಭಿನ್ನತೆಯಿದೆ.
ಗಣರಾಜ್ಯೋತ್ಸವದಲ್ಲಿ ಧ್ವಜ ಅರಳಿಸುವುದು
ಜನವರಿ 26ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ರಾಷ್ಟ್ರಪತಿಯವರು, ಧ್ವಜಸ್ತಂಭದಲ್ಲಿ ಮೊದಲೇ ಏರಿಸಿ, ಕಟ್ಟಿರುವ ರಾಷ್ಟ್ರಧ್ವಜವನ್ನು ಅರಳಿಸುತ್ತಾರೆ. ಅಲ್ಲಿ ಧ್ವಜಾರೋಹಣ ಕ್ರಮ ಇರುವುದಿಲ್ಲ. ಈ ವ್ಯತ್ಯಾಸ ಬಹಳಷ್ಟು ಜನರಿಗೆ ತಿಳಿದಿಲ್ಲ ಮತ್ತು ಅದನ್ನು ಗಮನಿಸಿರುವುದಿಲ್ಲ.
ಯಾಕೆ ಈ ವ್ಯತ್ಯಾಸ
ರಾಷ್ಟ್ರಧ್ವಜ ಏರಿಸುವುದು ಮತ್ತು ಧ್ವಜ ಅರಳಿಸುವುದಕ್ಕೆ ಅದರದ್ದೇ ಆದ ಕಾರಣಗಳಿವೆ. ಈ ವ್ಯತ್ಯಾಸವನ್ನು ಗಮನಿಸುವುದಾದರೆ, ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಧ್ವಜವನ್ನು ಕೆಳಗಿನಿಂದ ಮೇಲಕ್ಕೆ ಏರಿಸಲಾಗುತ್ತದೆ. ಇದು ಹೊಸ ರಾಷ್ಟ್ರವೊಂದರ ಉದಯ, ರಾಷ್ಟ್ರಭಕ್ತಿ, ದೇಶಪ್ರೇಮ ಮತ್ತು ದಾಸ್ಯದಿಂದ ಮುಕ್ತಿ ಹೊಂದಿದ ಸಂಕೇತವಾಗಿ ಆ ರೀತಿ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಧ್ವಜ ಅರಳಿಸುವುದು, ವಸಾಹತುಶಾಹಿ ಆಡಳಿತದಿಂದ ಮುಕ್ತಿ ಹೊಂದಿ, ಸಂವಿಧಾನಾತ್ಮಕ ಮತ್ತು ಪ್ರಜಾಪ್ರಭುತ್ವ ರೀತಿಯ ಸರ್ಕಾರ, ಪದ್ಧತಿಯನ್ನು ಜಾರಿಗೆ ತಂದಿರುವುದರ ದ್ಯೋತಕವಾಗಿದೆ.
