ಹೊಸ ವರ್ಷದ ಶುಭಾಶಯ ಹೇಳುವಾಗ ಯುಗಾದಿ ಹೊಸ ವರ್ಷವೆಂಬ ಗೊಣಗಾಟ ಏಕೆ? ಸೋಷಿಯಲ್‌ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ
ಕನ್ನಡ ಸುದ್ದಿ  /  ಜೀವನಶೈಲಿ  /  ಹೊಸ ವರ್ಷದ ಶುಭಾಶಯ ಹೇಳುವಾಗ ಯುಗಾದಿ ಹೊಸ ವರ್ಷವೆಂಬ ಗೊಣಗಾಟ ಏಕೆ? ಸೋಷಿಯಲ್‌ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ

ಹೊಸ ವರ್ಷದ ಶುಭಾಶಯ ಹೇಳುವಾಗ ಯುಗಾದಿ ಹೊಸ ವರ್ಷವೆಂಬ ಗೊಣಗಾಟ ಏಕೆ? ಸೋಷಿಯಲ್‌ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ

2025ರ ಹೊಸ ವರ್ಷದ ಶುಭಾಶಯಗಳ ಮಹಾಪೂರ ಎಲ್ಲೆಡೆ ಎಲ್ಲರಿಗೂ ಹರಿದುಬರುತ್ತಿರಬಹುದು. ಇದೇ ಸಮಯದಲ್ಲಿ ಸಾಕಷ್ಟು ಜನರು ಇದು ನಮ್ಮ ಹೊಸ ವರ್ಷವಲ್ಲ, ಇದು ಕ್ಯಾಲೆಂಡರ್‌ ವರ್ಷ, ನಮಗೆ ಯುಗಾದಿ ಹೊಸ ವರ್ಷ ಎಂದು ಗೊಣಗುತ್ತಾರೆ. ಈ ರೀತಿ ಮಾಡುವುದು ಸರಿಯೇ? ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ಭಾರತೀಯರ ಹೊಸ ವರ್ಷದ ಸಂಭ್ರಮ
ಭಾರತೀಯರ ಹೊಸ ವರ್ಷದ ಸಂಭ್ರಮ

ಎಲ್ಲೆಡೆ ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. ಫೇಸ್‌ಬುಕ್‌, ವಾಟ್ಸಪ್‌, ಮೆಸೆಜ್‌ಗಳಲ್ಲಿ, ಕಾಲ್‌ ಮಾಡುವಾಗ ಎಲ್ಲರೂ "ಹ್ಯಾಪಿ ನ್ಯೂ ಇಯರ್‌" ಎಂದು ಶುಭಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಕೆಲವರು ಹೊಸ ವರ್ಷದ ಸಂಭ್ರಮದಲ್ಲಿದ್ದುಕೊಂಡೇ "ಇದು ಹೊಸ ವರ್ಷವಲ್ಲ, ಇದು ಕ್ಯಾಲೆಂಡರ್‌ ಹೊಸ ವರ್ಷ" "ನಮಗೆ ಯುಗಾದಿ ಹೊಸ ವರ್ಷ" ಎಂದೆಲ್ಲ ಹೇಳುತ್ತಾರೆ. ಸಾಕಷ್ಟು ವಾಟ್ಸಪ್‌ ಮೆಸೆಜ್‌ಗಳಲ್ಲಿಯೂ ಈ ಕುರಿತಾದ ಸಂದೇಶಗಳು ಹರಿದುಬರುತ್ತಿರಬಹುದು. ಈ ರೀತಿಯ ಗೊಣಗಾಟ ಬೇಕೆ? ಖುಷಿಯಾಗಿರಲು ಅಡ್ಡಿ ,ಅಡೆತಡೆಗಳೇಕೆ? ಎಂದು ಸೋಷಿಯಲ್‌ ಮೀಡಿಯಾದಲ್ಲಿ ಕೆಲವರು ಚರ್ಚಿಸುತ್ತಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಇಂತಹ ಚರ್ಚೆ ನಡೆಯುತ್ತಿರುವ ಎರಡು ಫೇಸ್‌ಬುಕ್‌ ಪೋಸ್ಟ್‌ಗಳನ್ನು ಇಲ್ಲಿ ನೀಡಲಾಗಿದೆ.

ರಂಗಸ್ವಾಮಿ ಮೂಕನಹಳ್ಳಿ ಅಭಿಪ್ರಾಯ

ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಓದುಗರಿಗೆ ತಮ್ಮ ವೈವಿಧ್ಯಮಯ ಬರಹಗಳ ಮೂಲಕ ಪರಿಚಿತರಾಗಿರುವ ರಂಗಸ್ವಾಮಿ ಮೂಕನಹಳ್ಳಿ ಅವರು ಫೇಸ್‌ಬುಕ್‌ನಲ್ಲಿ ಹೀಗೆಂದು ಬರೆದಿದ್ದಾರೆ. " ಜನವರಿ 1ನೇ ತಾರೀಕು ಹೊಸ ವರ್ಷದ ಶುಭಾಶಯಗಳು ಎಂದರೆ ಈಗೀಗ ಬಹಳ ಜನರಿಗೆ ಅಲರ್ಜಿ. ಇದು ನಮ್ಮ ಹೊಸ ವರ್ಷವಲ್ಲ , ಯುಗಾದಿ ನಮ್ಮ ಹೊಸ ವರ್ಷ ಎನ್ನುವ ಉತ್ತರ ಸಿದ್ದ .ಸೂಪರ್ ಇದರ ಬಗ್ಗೆ ಯಾವ ತಕರಾರು ನನಗಿಲ್ಲ. ಆದರೆ ಹುಟ್ಟುಹಬ್ಬದ ಜೊತೆಗೆ ಬೇರೆ ಆಚರಣೆಗಳಿಗೆ ಮಾತ್ರ ಕ್ಯಾಲೆಂಡರ್ ಇಯರ್ ಏಕೆ ಓಕೆ? ಅಲ್ಲೂ ನಮ್ಮ ಕ್ಯಾಲೆಂಡರ್ ,ಪಂಚಾಂಗ ಉಪಯೋಗಿಸಬೇಕು ಅಲ್ವಾ ? ಕೇವಲ ವಿರೋಧಿಸಬೇಕು ಅಂತ ವಿರೋಧಿಸುವುದರ ವಿರುದ್ದವಷ್ಟೆ ನನ್ನ ತಕರಾರು. ಖುಷಿಯಾಗಿರಲು ಅಡ್ಡಿ , ಅಡೆತಡೆಗಳೇಕೆ?" ಎಂದು ಅವರು ಪ್ರಶ್ನಿಸಿದ್ದಾರೆ.

ರೇಣುಕಾ ಮಂಜುನಾಥ್‌ ಅಭಿಪ್ರಾಯ

"ಇಂದು ಎಂದಿನಂತೆ‌ ಒಂದು ದಿನ, ಇದು ನಮಗೆ ಹೊಸವರ್ಷ ಅಲ್ಲ, ನಮ್ಮ ಹೊಸವರ್ಷ ಗಮನಿಸಿ ಪ್ರಕೃತಿಯಲ್ಲಿ ಅದೆಷ್ಟು ಬದಲಾವಣೆ ಇರುತ್ತೆ. ಜನವರಿ ಒಂದು ಕ್ಯಾಲೆಂಡರ್ ಆರಂಭವಷ್ಟೆ, ನಮ್ಮ ಸಂಸ್ಕೃತಿ ಪರಂಪರೆಗೆ ಇದು ಸಲ್ಲದು....ಅಂತೆಲ್ಲಾ ಭಾಷಣ ಶುರು ಹಚ್ಕೊಂಡು ಚಪ್ಪಾಳೆ ಗಿಟ್ಟಿಸುವವರು , ಇಂದು ನಮ್ಮ ಸನಾತನ‌ ಪರಂಪರೆಯ ಸನ್ನಿಧಾನವೆನಿಸಿಕೊಳ್ಳುವ ದೇವಾಲಯಗಳಿಗೆ ಹೋಗುವಂತಿಲ್ಲ.. ಎಲ್ಲಾ ದೇವಾಲಯಗಳಲ್ಲೂ ಹಬ್ಬದ ಸಡಗರ, ಹೂವಿನ ಅಲಂಕಾರ, ಜನರ ಸರತಿಸಾಲು!

ಜಾಗತೀಕರಣದ ಈ ಸಂದರ್ಭದಲ್ಲಿ, ಪಾಶ್ಚಾತ್ಯ ಸಂಸ್ಕೃತಿ ನಮಗೆ ಸಲ್ಲದು, ನಮ್ಮದೇ ಶ್ರೇಷ್ಠ ಅಂತೆಲ್ಲಾ ಸಮಯ ವ್ಯರ್ಥಮಾಡದೆ, ಕಾಲೋಚಿತವಾಗಿ ನಮ್ಮನ್ನು ನಾವು ಮಾರ್ಪಾಟು ನೇರ್ಪಾಟಿಗೆ ಸಜ್ಜಾಗಬೇಕು. ನಮ್ಮ ಹಬ್ಬವೂ ಇರಲಿ, ಇಂದೂ ಹಬ್ಬವಲ್ಲದಿದ್ದರೆ ಹೇಗೆ ಸಾಧ್ಯ!? ನಮ್ಮ ಕೈಮೀರಿ ಬೆಳೆಯುವ ಬದಲಾವಣೆಗಳಿಗೆ ಸ್ಪಂದಿಸದಿದ್ದರೆ ... ಗೊಣಗಜ್ಜ/ಗೊಣಗಜ್ಜಿಯರಂತೆ ವಟವಟಾಂತ ಕಹಿಕಹಿಯಾಗೇ ಕಾಲಹಾಕಬೇಕಾಗುತ್ತೆ. ಬದುಕಲ್ಲಿ ಉಳಿಸಲು ಬೆಳೆಸಲು ಬಹಳಷ್ಟು ಬೇರೆಬೇರೆ ವಿಷಯಗಳಿವೆಯಷ್ಟೆ. ಜನವರಿ‌ ಒಂದು ಯಾರ ಅಂಕೆಗೂ ಸಿಗದಷ್ಟು ಮುಂದೆಹೋಗುತ್ತೆ. ಸಂಭ್ರಮಿಸೋದಷ್ಟೆ ನಮಗೆ ದಕ್ಕಿದ ವಿಚಾರ" ಎಂದು ರೇಣುಕಾ ಮಂಜುನಾಥ್‌ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ವಿವಿಧ ಜನರ ಅನಿಸಿಕೆಗಳು

ರೇಣುಕಾ ಮಂಜುನಾಥ್‌ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. "ಹೀಗೆ ಹೇಳುವವರು ವರ್ಷವಿಡೀ ಆ ಕ್ಯಾಲೆಂಡರ್ ನ್ನೇ ಅನುಸರಿಸುತ್ತಾರೆ.ತಮ್ಮ ಜನ್ಮ ದಿನಾಂಕ ಕೂಡ ಆ ಕ್ಯಾಲೆಂಡರ್ ದಿನಾಂಕವೇ ಹೇಳ್ತಾರೆ.ಬದುಕೆಲ್ಲಾ ಕ್ಯಾಲೆಂಡರ್ ಅವಲಂಬಿಸಿರುವ ನಾವು ಹೊಸ ಕ್ಯಾಲೆಂಡರ್ ಬರುವ ದಿನ ಸಂಭ್ರಮಿಸಬಾರದೇಕೆ?? ಹೊಸವರ್ಷದ ಶುಭಾಶಯ" ಎಂದು ವಸಂತಿ ಎಂಬವರು ಕಾಮೆಂಟ್‌ ಮಾಡಿದ್ದಾರೆ. "ಅಷ್ಟೊಂದು ಮಡಿವಂತಿಕೆ ಬೇಡ . ನಮ್ಮ ಜನ್ಮದಿನಾಂಕ, ಪಡೆಯುವ ವೇತನ , ವ್ಯವಹಾರಗಳಲ್ಲಿ ಈ ಕ್ಯಾಲೆಂಡರ್ ಅನ್ನೇ ಉಪಯೋಗಿಸುವಾಗ ಇಲ್ಲದೆ ನೆಪಗಳೇಕೆ ? ಅದನ್ನೂ ಯುಗಾದಿಯೆಂದು ಸಂಭ್ರಮಿಸುತ್ತೇವೆ. ಎರಡನ್ನೂ ಆಚರಿಸೋಣ" ಎಂದು ಅನುಸೂಯ ರಾಮಯ್ಯ ಕಾಮೆಂಟ್‌ ಮಾಡಿದ್ದಾರೆ.

ರಂಗಸ್ವಾಮಿ ಮೂಕನಹಳ್ಳಿ ಪೋಸ್ಟ್‌ಗೂ ವಿವಿಧ ರೀತಿಯ ಕಾಮೆಂಟ್‌ಗಳು ಬಂದಿವೆ. "ನಾವು ಪಂಚಾಂಗ ಲೆಕ್ಕದಲ್ಲಿಯೇ ಅಂದು ಇಂದು ಮುಂದು ಹುಟ್ಟು ಹಬ್ಬ ಆಚರಣೆಯನ್ನು ಮಾಡುವುದು. ಮಕ್ಕಳು ಹುಟ್ಟಿದ ದಿನವನ್ನು ಪಂಚಾಂಗ ಲೆಕ್ಕದಲ್ಲಿಯೇ ಆಚರಿಸುವುದು. ಸಣ್ಣ ಮಗಳ ಗುರುಕುಲ ದಲ್ಲಿ ಪಂಚಾಗ ಲೆಕ್ಕದಲ್ಲಿ ಮಕ್ಕಳು ಹುಟ್ಟಿದ ದಿನವನ್ನು ಮನೆಯಲ್ಲಿ ಮಾಡಿ ಕೊಟ್ಟ ಸಿಹಿಯೊಂದಿಗೆ ಆಚರಣೆಯನ್ನು ಮಾಡುತ್ತಾರೆ. ಲೋಕದ ಕಣ್ಣಿಗೆ ಕ್ಯಾಲೆಂಡರ್ ಲೆಕ್ಕ. ಹಾಗೆಂದು ಯಾವುದನ್ನೂ ವಿರೋಧಿಸಿವುದಿಲ್ಲ. ಇದನ್ನು ದಿನ ಬದಲಾವಣೆ ಇಸ್ವಿ ಬದಲಾವಣೆ ಇಸ್ವಿ ಬದಲಾವಣೆ ಕೂಡ ಸಂಖ್ಯಾ ಶಾಸ್ತ್ರದಲ್ಲಿ ಲೆಕ್ಕಾಚಾರಕ್ಕೆ ಸಿಗುತ್ತದೆ. ಎಂದಿನಂತೆ ದೇವರ ಪೂಜೆ ಸಿಹಿ ನೈವೇದ್ಯ ದೊಂದಿಗೆ 2025 ಕ್ಕೆ ಸ್ವಾಗತ ನೀಡಿದೆವು" ಎಂದು ಎಚ್‌ಎಸ್‌ ಭವಾನಿ ಉಪಾಧ್ಯ ಕಾಮೆಂಟ್‌ ಮಾಡಿದ್ದಾರೆ. "ಹುಟ್ಟುಹಬ್ಬದ ಆಚರಣೆ ಕೂಡಾ ನಮ್ಮನೆಯಲ್ಲಿ ಕ್ಯಾಲೆಂಡರ್ ಪ್ರಕಾರ ಮಾಡೋದಿಲ್ಲ, ಪಂಚಾಂಗವನ್ನೇ ಅನುಸರಿಸೋದು" ಎಂದು ಸಂತೋಷ್‌ ವಿಶ್ವಾಮಿತ್ರ ಎಂಬವರು ಪ್ರತಿಕ್ರಿಯೆ ನೀಡಿದ್ದಾರೆ. "ಅವರವರ ಆಚರಣೆ ಅವರವರ ಇಷ್ಟ. ಎಲ್ಲವನ್ನು ನೋಡಿ ಖುಷಿಪಡುತ್ತಿರಬೇಕು ಮುಂದೆ ಹೋಗ್ತಾ ಇರಬೇಕು" ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.

Whats_app_banner