ಚಳಿಗಾಲದಲ್ಲಿ ಏನೇ ಮಾಡಿದ್ರೂ ಸೋಮಾರಿತನ ಬಿಡ್ತಾ ಇಲ್ವಾ; ದೇಹ, ಮನಸ್ಸು ಆ್ಯಕ್ಟಿವ್ ಆಗಿರಲು ಪ್ರತಿದಿನ ಬೆಳಿಗ್ಗೆ ಈ 7 ಯೋಗಾಸನ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಏನೇ ಮಾಡಿದ್ರೂ ಸೋಮಾರಿತನ ಬಿಡ್ತಾ ಇಲ್ವಾ; ದೇಹ, ಮನಸ್ಸು ಆ್ಯಕ್ಟಿವ್ ಆಗಿರಲು ಪ್ರತಿದಿನ ಬೆಳಿಗ್ಗೆ ಈ 7 ಯೋಗಾಸನ ಮಾಡಿ

ಚಳಿಗಾಲದಲ್ಲಿ ಏನೇ ಮಾಡಿದ್ರೂ ಸೋಮಾರಿತನ ಬಿಡ್ತಾ ಇಲ್ವಾ; ದೇಹ, ಮನಸ್ಸು ಆ್ಯಕ್ಟಿವ್ ಆಗಿರಲು ಪ್ರತಿದಿನ ಬೆಳಿಗ್ಗೆ ಈ 7 ಯೋಗಾಸನ ಮಾಡಿ

ಚಳಿಗಾಲ ಅಂದ್ರೆ ಸೋಮಾರಿತನ ಕಾಡುವ ಸಮಯ, ಈ ಸಮಯದಲ್ಲಿ ಎಷ್ಟೇ ಆ್ಯಕ್ಟಿವ್ ಆಗಿರಬೇಕು ಅಂದುಕೊಂಡ್ರು ದೇಹ, ಮನಸ್ಸು ಕೇಳುವುದಿಲ್ಲ, ಹಾಗಂತ ಆ್ಯಕ್ಟಿವ್ ಆಗಿರದೇ ಇರಲು ಸಾಧ್ಯವಿಲ್ಲ. ನೀವು ಚಳಿಗಾಲದಲ್ಲಿ ಆ್ಯಕ್ಟಿವ್ ಆಗಿರಲು ಬಯಸಿದರೆ ಪ್ರತಿದಿನ ಬೆಳಗೆದ್ದು ಈ ಯೋಗಾಸನಗಳನ್ನ ಅಭ್ಯಾಸ ಮಾಡಿ. ಇದರಿಂದ ದೈಹಿಕ, ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ.

ಚಳಿಗಾಲದಲ್ಲಿ ದೇಹವನ್ನ ಆ್ಯಕ್ಟಿವ್ ಆಗಿರಿಸುವ ಯೋಗಾಸನಗಳು
ಚಳಿಗಾಲದಲ್ಲಿ ದೇಹವನ್ನ ಆ್ಯಕ್ಟಿವ್ ಆಗಿರಿಸುವ ಯೋಗಾಸನಗಳು

ಚಳಿಗಾಲವು ಮನುಷ್ಯನನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸೋಮಾರಿಗಳನ್ನಾಗಿ ಮಾಡುತ್ತದೆ. ನಾವು ಎಷ್ಟೇ ಕ್ರಿಯಾಶೀಲವಾಗಿರಬೇಕು ಎಂದು ಬಯಸಿದರೂ ಹಾಗಿರಲು ಆಗುವುದಿಲ್ಲ. ಯಾವಾಗಲೂ ಬೆಚ್ಚಗೆ ಹೊದ್ದು ಮಲಗಬೇಕು ಎಂದೆನ್ನಿಸುತ್ತದೆ, ಆದರೂ ಹಾಗಿರಲು ಸಾಧ್ಯವಿಲ್ಲ. ಚಳಿಗಾಲದ ಸೀಸನ್‌ನಲ್ಲಿ ನಾವು ಆ್ಯಕ್ಟಿವ್ ಆಗಿರಬೇಕು ಅಂದ್ರೆ ಈ ಕೆಲವು ಯೋಗಾಸನಗಳನ್ನು ಅಭ್ಯಾಸ ಮಾಡಬೇಕು.

ಚಳಿಗಾಲದಲ್ಲಿ ಮನುಷ್ಯ ಕ್ರಿಯಾಶೀಲವಾಗಿರಬೇಕು ಅಂದ್ರೆ ಸರಿಯಾದ ಆಹಾರಕ್ರಮ ಹಾಗೂ ದೈಹಿಕ ಚಟುವಟಿಕೆ ಬಹಳ ಮುಖ್ಯವಾಗುತ್ತದೆ. ಈ ಎರಡರಿಂದ ನಮ್ಮ ದೇಹ ಹಾಗೂ ಮನಸ್ಸು ಎರಡೂ ಚುರುಕಾಗಿ ಕೆಲಸ ಮಾಡುತ್ತದೆ, ಇದರಿಂದ ನಾವು ದಿನವಿಡೀ ಆ್ಯಕ್ಟಿವ್ ಆಗಿರಬಹುದು. ಚಳಿಗಾಲದಲ್ಲಿ ದೇಹ ಹಾಗೂ ಮನಸ್ಸಿನ ನಡುವೆ ಸಮತೋಲನ ಕಾಪಾಡಿಕೊಂಡು ಸಕ್ರಿಯವಾಗಿರುವಂತೆ ನೋಡಿಕೊಳ್ಳಬೇಕು ಎಂದರೆ ಈ ಯೋಗಾಸನಗಳನ್ನ ಅಭ್ಯಾಸ ಮಾಡಿ.

ಸೂರ್ಯ ನಮಸ್ಕಾರ

ದಿನದ ಆರಂಭದಿಂದಲೇ ನಿಮ್ಮ ದೈಹಿಕ ಹಾಗೂ ಮಾನಸಿಕ ಸ್ಥಿತಿ ಸುಧಾರಿಸಲು ಸೂರ್ಯ ನಮಸ್ಕಾರ ಒಂದು ಆದರ್ಶ ಮಾರ್ಗವಾಗಿದೆ. ಇದರಿಂದ ಚಳಿಗಾಲದಲ್ಲಿ ನಾವು ದಿನವನ್ನು ಕಿಕ್‌ಸ್ಟಾರ್ಟ್ ಮಾಡಲು ಸಾಧ್ಯವಿದೆ. ಇದು ರಕ್ತಪರಿಚಲನೆಯನ್ನೂ ಸುಧಾರಿಸುತ್ತದೆ. ಕೀಲುಗಳ ಚಲನಶೀಲತೆಯನ್ನು ವೃದ್ಧಿಸುತ್ತದೆ. ಬೆನ್ನುಮೂಳೆಯ ನಮ್ಯತೆಯನ್ನು ಸುಧಾರಿಸುತ್ತದೆ ಮತ್ತು ಇಂದ್ರಿಯ ಗ್ರಹಿಕೆಯನ್ನು ತೀಕ್ಷ್ಣಗೊಳಿಸುತ್ತದೆ. ದೇಹಕ್ಕೆ ಶಕ್ತಿ ನೀಡಿ, ಮನಸ್ಸು ಆ್ಯಕ್ಟಿವ್ ಆಗಿ ಇರುವಂತೆ ನೋಡಿಕೊಳ್ಳುತ್ತದೆ.

ವೀರಭದ್ರಾಸನ

ಚಳಿಗಾಲದಲ್ಲಿ ವೀರಭದ್ರಾಸನ ಮಾಡುವುದರಿಂದ ದೇಹದಲ್ಲಿ ಶಾಖ ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ. ಶೀತ ವಾತಾವರಣವನ್ನು ಎದುರಿಸಲು ಇದು ಸಹಾಯ ಮಾಡುತ್ತದೆ. ಈ ಭಂಗಿಯು ತ್ರಾಣ ಮತ್ತು ಸಮತೋಲನವನ್ನು ಸುಧಾರಿಸುವಾಗ ಕಾಲುಗಳು, ತೋಳುಗಳು ಮತ್ತು ಕೋರ್ ಅನ್ನು ಬಲಪಡಿಸುತ್ತದೆ. ಇದು ಉತ್ತಮ ರಕ್ತ ಪರಿಚಲನೆಗೆ ಉತ್ತೇಜನ ನೀಡುತ್ತದೆ. ದೇಹವನ್ನು ಚೈತನ್ಯಗೊಳಿಸುತ್ತದೆ ಮತ್ತು ಚಳಿಗಾಲದ ಸಮಯದಲ್ಲಿ ನೀವು ಸಕ್ರಿಯವಾಗಿರಲು ಇದು ಹೇಳಿ ಮಾಡಿಸಿದ ವ್ಯಾಯಾಮ.

ನಟರಾಜಾಸನ

ನಟರಾಜಾಸನ ಅಥವಾ ನರ್ತಕಿ ಭಂಗಿ ಎಂದು ಇದನ್ನು ಕರೆಯುತ್ತಾರೆ. ಇದು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿ ಉಷ್ಣತೆಯನ್ನು ಉಂಟುಮಾಡುತ್ತದೆ. ಈ ಭಂಗಿಯು ನಮ್ಯತೆ, ಸಮತೋಲನ ಮತ್ತು ಬಲವನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಎದುರಾಗುವ ಕಾಲು ಹಾಗೂ ಬೆನ್ನುಮೂಳೆಗಳ ಬಿಗಿತದ ಸಮಸ್ಯೆಗೆ ಇದು ಪರಿಹಾರ ನೀಡುತ್ತದೆ. ನಟರಾಜಾಸನವು ಮನಸ್ಸನ್ನು ಉತ್ತೇಜಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಗಮನವನ್ನು ಹೆಚ್ಚಿಸುತ್ತದೆ, ಚಳಿಗಾಲದ ತಿಂಗಳುಗಳಲ್ಲಿ ನಿಮ್ಮ ಚಿತ್ತವನ್ನು ಸುಧಾರಿಸುತ್ತದೆ ಮತ್ತು ನಿಮ್ಮ ದೇಹವನ್ನು ಚುರುಕಾಗಿ ಮತ್ತು ಸಕ್ರಿಯವಾಗಿ ಇರಿಸುತ್ತದೆ.

ಭುಜಂಗಾಸನ

ಈ ಆಸನವು ಕೂಡ ದೇಹದಲ್ಲಿ ಶಾಖ ಉತ್ಪತ್ತಿ ಮಾಡುವ ಕಾರಣ ಚಳಿಗಾಲದ ತಿಂಗಳುಗಳಿಗೆ ಹೇಳಿ ಮಾಡಿಸಿದ್ದಾಗಿದೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಶೀತ ವಾತಾವರಣದಿಂದ ಉಂಟಾಗುವ ಆಲಸ್ಯವನ್ನು ಪ್ರತಿರೋಧಿಸುತ್ತದೆ. ಈ ಭಂಗಿಯು ಎದೆ, ಶ್ವಾಸಕೋಶ ಮತ್ತು ಕಿಬ್ಬೊಟ್ಟೆಯ ಸ್ನಾಯುಗಳನ್ನು ವಿಸ್ತರಿಸುತ್ತದೆ, ಉಸಿರಾಟದ ಕಾರ್ಯವನ್ನು ವರ್ಧಿಸುತ್ತದೆ ಮತ್ತು ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ.

ಉತ್ಕಟಾಸನ

ಚಳಿಗಾಲದಲ್ಲಿ ದೇಹ ಬಿಗಿದಂತಹ ಅನುಭವ ನಿಮಗೂ ಆಗುತ್ತಿದ್ದರೆ, ದೇಹವನ್ನು ಸಡಿಲವಾಗಿಸಿ, ಆ್ಯಕ್ಟಿವ್ ಆಗಿರಲು ಇದು ಹೇಳಿ ಮಾಡಿಸಿದ ಆಸನ. ಈ ಆಸನವು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಈ ಭಂಗಿಯು ದೇಹದೊಳಗೆ ಶಾಖವನ್ನು ಉಂಟುಮಾಡುತ್ತದೆ, ಸ್ನಾಯುಗಳನ್ನು ಬೆಚ್ಚಗಾಗಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

ಅಧೋ ಮುಖ ಸ್ವನಾಸನ

ಈ ಭಂಗಿಯು ಇಡೀ ದೇಹವನ್ನು ಹಿಗ್ಗಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ, ತಲೆ ಮತ್ತು ದೇಹದ ಮೇಲ್ಭಾಗಕ್ಕೆ ರಕ್ತವನ್ನು ಹರಿಯುವಂತೆ ಮಾಡುತ್ತದೆ, ಆಯಾಸದ ಭಾವನೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವೃಕ್ಷಾಸನ

ವೃಕ್ಷಾಸನ, ಟ್ರೀ ಪೋಸ್ ಎಂದೂ ಕರೆಯಲ್ಪಡುವ ಸಮತೋಲನ ಮತ್ತು ಸ್ಥಿರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವೃಕ್ಷಾಸನದ ನಿಯಮಿತ ಅಭ್ಯಾಸವು ಮನಸ್ಸನ್ನು ಸಮತೋಲನಗೊಳಿಸಲು ಒತ್ತಡವನ್ನು ಕಡಿಮೆ ಮಾಡಲು ಮತ್ತು ಮಾನಸಿಕ ಸ್ಪಷ್ಟತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದು ಶೀತ ವಾತಾವರಣದಲ್ಲಿ ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಚಳಿಗಾಲದಲ್ಲಿ ಆ್ಯಕ್ಟಿವ್ ಆಗಿರಲು ಬಯಸುವವರು ಈ ವ್ಯಾಯಾಮಗಳನ್ನು ತಪ್ಪದೇ ಅಭ್ಯಾಸ ಮಾಡಿ. ಇದರಿಂದ ನೀವು ದಿನವಿಡೀ ಆ್ಯಕ್ಟಿವ್ ಆಗಿರುವ ಜೊತೆಗೆ ದೇಹ ಹಾಗೂ ಮನಸ್ಸು ಎರಡೂ ಸಕ್ರಿಯವಾಗಿ ಕೆಲಸ ಮಾಡುತ್ತದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner