ಚಳಿಗಾಲದಲ್ಲಿ ಕಿಡ್ನಿಯಲ್ಲಿ ಕಲ್ಲುಗಳು ಉಂಟಾಗದಂತೆ ತಡೆಯುವುದು ಹೇಗೆ, ಯಾವ ರೀತಿಯ ಆಹಾರ ಸೇವಿಸಬೇಕು?
Winter Care: ಚಳಿಗಾದಲ್ಲಿ ಬಹಳಷ್ಟು ಜನರು ನೀರನ್ನು ಕಡಿಮೆ ಕುಡಿಯುತ್ತಾರೆ. ಜೊತೆಗೆ ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ದೇಹವು ಕಡಿಮೆ ಬೆವರುತ್ತದೆ. ಆಗ ದೇಹದಲ್ಲಿರುವ ಸೋಡಿಯಂ ಕಿಡ್ನಿಯಲ್ಲಿ ಕಲ್ಲುಗಳಾಗುವ ಸಾಧ್ಯತೆ ಇರುತ್ತದೆ. ಚಳಿಗಾಲದಲ್ಲಿ ಕಿಡ್ನಿಯಲ್ಲಿ ಕಲ್ಲುಗಳು ಉಂಟಾಗದಂತೆ ತಡೆಯಲು ಅಗತ್ಯ ಆಹಾರ ಸೇವಿಸುವುದರ ಜೊತೆ ವ್ಯಾಯಮವನ್ನೂ ಮಾಡಬೇಕು.
ನಾವು ಪ್ರತಿದಿನ ಸೇವಿಸುವ ಆಹಾರ ಪದ್ದತಿಯನ್ನು ಆಧರಿಸಿ ನಮ್ಮ ಅರೋಗ್ಯ ನಿರ್ಧಾರವಾಗುತ್ತದೆ. ಆದರೆ ಒಂದೊಂದು ಋತುವಿನಲ್ಲೂ ಒಂದೊಂದು ರೀತಿಯ ಆಹಾರ ಪದ್ದತಿಯನ್ನು ಅನುಸರಿಸುವುದು ಬಹಳ ಮುಖ್ಯವಾಗಿದೆ. ಏಕೆಂದರೆ ಆಯಾ ಕಾಲಕ್ಕೆ ತಕ್ಕಂತೆ ಆಹಾರ ಸೇವಿಸದಿದ್ದರೆ ವಿವಿಧ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ.
ಈಗ ಚಳಿ ಶುರುವಾಗಿದೆ, ಚಳಿಗಾಲದ ಪರಿಣಾಮ ಮೂತ್ರಪಿಂಡಗಳ ಮೇಲೆ ಹೆಚ್ಚಾಗಿರುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ವಿಶೇಷವಾಗಿ ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುವ ಆಹಾರವನ್ನು ತೆಗೆದುಕೊಳ್ಳಬೇಕು. ಹಾಗೇ ಮೂತ್ರಪಿಂಡಗಳ ಮೇಲೆ ಒತ್ತಡವನ್ನುಂಟು ಮಾಡುವ ಆಹಾರವನ್ನು ತ್ಯಜಿಸಬೇಕು. ಯಕೃತ್ತು, ಹೃದಯ ಮತ್ತು ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಬಹಳ ಮುಖ್ಯ ಅಂಗಗಳಾಗಿವೆ. ಆರೋಗ್ಯಕರ ಆಹಾರವನ್ನು ಸೇವಿಸುವ ಮೂಲಕ ಇವುಗಳನ್ನು ಕಾಪಾಡಿಕೊಳ್ಳಬೇಕು. ಅನೇಕರು ಚಳಿಗಾಲದಲ್ಲಿ ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯುತ್ತಾರೆ. ಆದರೆ ಹೀಗೆ ಮಾಡಿದರೆ ಸಮಸ್ಯೆ ಹೆಚ್ಚುತ್ತದೆ. ಹಾಗೆಯೇ ನೀರು ಕುಡಿಯುವುದನ್ನು ನಿಲ್ಲಿಸಿದರೆ ಕಿಡ್ನಿ ಹಾಳಾಗುತ್ತದೆ. ಪ್ರತಿದಿನ ನೀವು ಎಷ್ಟು ನೀರು ಕುಡಿಯುವಿರೋ ಚಳಿಗಾದಲ್ಲಿ ಕೂಡಾ ಅಷ್ಟೇ ನೀರು ಕುಡಿಯಬೇಕು.
ಕಿಡ್ನಿ ಕಲ್ಲುಗಳು ಉಂಟಾಗಲು ಕಾರಣವೇನು?
ಚಳಿಗಾಲದ ಆರಂಭದೊಂದಿಗೆ, ಅನೇಕ ಜನರು ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸುತ್ತಾರೆ. ದೈಹಿಕ ಚಟುವಟಿಕೆಯ ಕೊರತೆಯು ದೀರ್ಘಾವಧಿಯವರೆಗೆ ಕುಳಿತುಕೊಳ್ಳುವುದು ಅಥವಾ ನಿದ್ರೆಗೆ ಆದ್ಯತೆ ನೀಡುವುದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಅಧಿಕ ರಕ್ತದೊತ್ತಡ ಮತ್ತು ದೇಹದ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಅಲ್ಲದೆ ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ದೇಹವು ಕಡಿಮೆ ಬೆವರುತ್ತದೆ. ಆಗ ದೇಹದಲ್ಲಿರುವ ಸೋಡಿಯಂ ಕಿಡ್ನಿಯಲ್ಲಿ ಕಲ್ಲುಗಳಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ವಾಕಿಂಗ್ ಮತ್ತು ವ್ಯಾಯಾಮದ ಮೂಲಕ ಬೆವರುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ದೇಹ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಿ. ಮೂತ್ರಪಿಂಡಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ. ಮೂತ್ರಪಿಂಡದ ಕಲ್ಲುಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಪ್ರತಿದಿನ 8 ರಿಂದ 10 ಗ್ಲಾಸ್ ನೀರು ಕುಡಿಯಿರಿ.
ಮೂತ್ರ ಪಿಂಡ ಆರೋಗ್ಯವಾಗಿರಲು ಯಾವ ಆಹಾರವನ್ನು ತಪ್ಪಿಸಬೇಕು?
ಮೂತ್ರಪಿಂಡಗಳು ಆರೋಗ್ಯವಾಗಿರಲು, ನೀವು ಚಳಿಗಾಲದಲ್ಲಿ ಕೆಲವು ಆಹಾರಗಳನ್ನು ತ್ಯಜಿಸಬೇಕು. ವಿಶೇಷವಾಗಿ ಉಪ್ಪು ಹೆಚ್ಚಾಗಿರುವ ಆಹಾರವನ್ನು ತಪ್ಪಿಸಿ. ಉಪ್ಪು ಸೇವನೆಯನ್ನು ಕಡಿಮೆ ಮಾಡಿ. ಇಲ್ಲವಾದರೆ, ಮೂತ್ರಪಿಂಡದ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಅವು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುತ್ತವೆ ಮತ್ತು ಮೂತ್ರಪಿಂಡದ ಆರೋಗ್ಯವನ್ನು ಹಾನಿಗೊಳಿಸುತ್ತವೆ. ಹಾಗಾಗಿ ಉಪ್ಪು ಹೆಚ್ಚಾಗಿರುವ ಆಹಾರ ಮತ್ತು ಸಂಸ್ಕರಿಸಿದ ತಿಂಡಿಗಳಿಂದ ದೂರವಿರುವುದು ಉತ್ತಮ. ಹೆಚ್ಚಿನ ಕೊಬ್ಬಿನ ಆಹಾರವನ್ನು ಕೂಡಾ ತಪ್ಪಿಸಿ. ಮಟನ್ ತಿನ್ನದಿರುವುದು ಉತ್ತಮ. ಹಾಗೆಂದ ಮಾತ್ರಕ್ಕೆ ಚಿಕನ್ ಹೆಚ್ಚು ಸೇವಿಸಬಾರದು, ಚಿಕನ್ ಹಾಗೂ ಮೀನು ಮಿತಿಯಲ್ಲಿರಬೇಕು. ಪ್ರತಿದಿನ ವ್ಯಾಯಾಮ ಮಾಡುವುದನ್ನು ಮರೆಯಬೇಡಿ. ದಿನಕ್ಕೆ ಅರ್ಧ ಗಂಟೆ ವ್ಯಾಯಾಮ ಮಾಡುವುದರಿಂದ ಕಿಡ್ನಿ ಸಮಸ್ಯೆಗಳನ್ನು ತಡೆಯಬಹುದು. ನಿಮ್ಮ ಮೂತ್ರಪಿಂಡಗಳು ಸಕ್ರಿಯವಾಗಿರಲು ಶೀತ ವಾತಾವರಣದಲ್ಲಿ ಕೂಡಾ ವ್ಯಾಯಾಮ ಅತ್ಯಗತ್ಯ ಎನ್ನುವುದನ್ನು ಮರೆಯಬೇಡಿ.