ಈ ಚಳಿಯಲ್ಲಿ ಬಿಸಿ ಬಿಸಿ ಕಾಶ್ಮೀರಿ ಪಿಂಕ್ ಟೀ ಕುಡಿದರೆ ಅದರ ಮಜಾವೇ ಬೇರೆ: ಇಲ್ಲಿದೆ ರೆಸಿಪಿ
ನಮ್ಮಲ್ಲಿ ಚಹಾ ಪ್ರಿಯರು ಬಹಳಷ್ಟಿದ್ದಾರೆ. ಕೆಲವರಂತೂ ದಿನಕ್ಕೆ ಎಷ್ಟು ಸಲ ಟೀ ಕುಡಿಯುತ್ತಾರೋ ಬಹುಷಃ ಅವರಿಗೇ ತಿಳಿದಿರಲಿಕ್ಕಿಲ್ಲ. ಇನ್ನೂ ಕೆಲವರಿಗಂತೂ ದಿನಕ್ಕೆ ಎರಡು ಬಾರಿಯಾದರೂ ಚಹಾ ಕುಡಿಯದಿದ್ದರೆ ಕೆಲಸವೇ ಸಾಗುವುದಿಲ್ಲ. ನೀವೂ ಚಹಾ ಪ್ರಿಯರಾಗಿದ್ದರೆ ಕಾಶ್ಮೀರಿ ಗುಲಾಬಿ ಚಹಾ ಅಥವಾ ಪಿಂಕ್ ಟೀ ಕುಡಿಯಿರಿ. ಇದನ್ನು ಮನೆಯಲ್ಲೇ ಮಾಡಬಹುದು. ಇಲ್ಲಿದೆ ರೆಸಿಪಿ.
ಕೆಲವರು ದಿನಕ್ಕೆ ಎಷ್ಟು ಬಾರಿ ಚಹಾ ಕುಡಿಯುತ್ತಾರೋ ಲೆಕ್ಕವೇ ಇಲ್ಲ. ಇನ್ನೂ ಕೆಲವರಿಗೆ ದಿನಕ್ಕೆರಡು ಬಾರಿಯಾದರೂ ಟೀ ಕುಡಿಯದೆ ಕೆಲಸ ಮಾಡಲಾಗದವರೂ ಇದ್ದಾರೆ. ಅದರಲ್ಲೂ ಚಳಿಗಾಲದಲ್ಲಿ ಬಿಸಿ ಬಿಸಿ ಚಹಾ ಹೀರುತ್ತಾ ಬೆಚ್ಚಗಿನ ಭಾವ ಅನುಭವಿಸುತ್ತಾರೆ. ಸಾಮಾನ್ಯವಾಗಿ ಮನೆಗಳಲ್ಲಿ ಶುಂಠಿ ಮತ್ತು ಏಲಕ್ಕಿ ಸೇರಿಸಿದ ಚಹಾವನ್ನು ಹೆಚ್ಚಾಗಿ ಕುಡಿಯುತ್ತಾರೆ. ಕೆಲವು ಆರೋಗ್ಯ ಪ್ರೇಮಿಗಳು ಕಪ್ಪು ಚಹಾ (black tea) ಮತ್ತು ಗ್ರೀನ್ ಟೀ ಅನ್ನು ಸಹ ಕುಡಿಯುತ್ತಾರೆ. ನೀವು ಚಹಾ ಪ್ರೇಮಿಯಾಗಿದ್ದು, ಎಂದಾದರೂ ಕಾಶ್ಮೀರಿ ಗುಲಾಬಿ ಚಹಾವನ್ನು ಕುಡಿದಿದ್ದೀರಾ? ಇದನ್ನು ಬಿಸಿ ಬಿಸಿಯಾಗಿ ಕುಡಿದರೆ ತುಂಬಾ ರುಚಿಯಾಗಿರುತ್ತದೆ. ಕಾಶ್ಮೀರದ ಕಣಿವೆಗಳಲ್ಲಿ ವಾಸಿಸುವ ಜನರು ಇಷ್ಟಪಡುವ ಚಹಾ ಇದು. ಇದನ್ನು ನೂನ್ ಟೀ ಎಂದೂ ಕರೆಯುತ್ತಾರೆ. ಇದು ಶೀತ ವಾತಾವರಣದಲ್ಲಿ ದೇಹಕ್ಕೆ ಉಷ್ಣತೆಯನ್ನು ನೀಡುತ್ತದೆ. ಇದರ ರುಚಿ ಸಾಮಾನ್ಯ ಚಹಾಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.
ಕಾಶ್ಮೀರಿ ಪಿಂಕ್ ಟೀ ತಯಾರಿಸುವು ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ತಣ್ಣೀರು- ಎರಡು ಕಪ್, ನಕ್ಷತ್ರ ಹೂವು- 2, ದಾಲ್ಚಿನ್ನಿ- ಒಂದು ತುಂಡು, ಏಲಕ್ಕಿ- ಮೂರು, ಕಾಶ್ಮೀರಿ ಚಹಾ ಪುಡಿ ಅಥವಾ ಗ್ರೀನ್ ಟೀ ಪುಡಿ- ಮೂರು ಚಮಚ, ಅಡುಗೆ ಸೋಡಾ- ಚಿಟಿಕೆ, ಉಪ್ಪು- ಚಿಟಿಕೆ, ಹಾಲು- ಅರ್ಧ ಕಪ್, ಸಕ್ಕರೆ - ಎರಡು ಚಮಚ, ಪಿಸ್ತಾ- ಒಂದು ಚಮಚ, ಬಾದಾಮಿ- ಒಂದು ಚಮಚ.
ತಯಾರಿಸುವ ವಿಧಾನ: ಪ್ರಸಿದ್ಧವಾದ ಕಾಶ್ಮೀರಿ ಗುಲಾಬಿ ಚಹಾವನ್ನು ತಯಾರಿಸಲು, ಮೊದಲು ಒಂದು ಪಾತ್ರೆಯಲ್ಲಿ ಎರಡು ಕಪ್ ತಣ್ಣೀರು ತೆಗೆದುಕೊಳ್ಳಿ.
- ಆ ನೀರಿಗೆ ಏಲಕ್ಕಿ, ನಕ್ಷತ್ರ ಹೂ ಮತ್ತು ದಾಲ್ಚಿನ್ನಿ ತುಂಡುಗಳನ್ನು ಹಾಕಿ ಕುದಿಸಿ.
- ಸ್ವಲ್ಪ ಸಮಯದ ನಂತರ ಕಾಶ್ಮೀರಿ ಟೀ ಪುಡಿ ಕೂಡ ಸೇರಿಸಿ.
- ಚಹಾ ಕುದಿಯುತ್ತಿರುವಾಗ ಚಿಟಿಕೆ ಅಡುಗೆ ಸೋಡಾ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ.
- ಹೆಚ್ಚಿನ ಉರಿಯಲ್ಲಿ ಕುದಿಸಿದರೆ ನೀರು ಅರ್ಧಕ್ಕೆ ಕಡಿಮೆಯಾಗುತ್ತದೆ. ಅದರ ನಂತರ ಮತ್ತೆ ಎರಡು ಕಪ್ ನೀರು ಸೇರಿಸಿ, ಒಂದು ಲೋಟದೊಂದಿಗೆ ಮಿಶ್ರಣ ಮಾಡಿ.
- ಇದನ್ನು ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ, ರುಚಿ ಅದ್ಭುತವಾಗಿರುತ್ತದೆ.
- ಈ ಸಂಪೂರ್ಣ ಮಿಶ್ರಣವನ್ನು ಒಂದು ಕಪ್‌ಗೆ ಇಳಿಸುವವರೆಗೆ ಕುದಿಸಿ.
- ನೀವು ಚಹಾ ಕುಡಿಯಲು ಬಯಸಿದಾಗ, ಒಂದು ಪಾತ್ರೆಯಲ್ಲಿ ಒಂದೂವರೆ ಕಪ್ ಹಾಲು ಮತ್ತು ಸಕ್ಕರೆಯನ್ನು ಹಾಕಿ ಸ್ಟೌವ್ ಮೇಲಿಟ್ಟು ಕುದಿಸಿ.
- ಫ್ರಿಡ್ಜ್‌ನಲ್ಲಿ ಸಿದ್ಧವಾಗಿರುವ ಟೀ ಮಿಶ್ರಣವನ್ನು ತೆಗೆದುಕೊಂಡು ಅದರಲ್ಲಿ ಅರ್ಧ ಕಪ್ ಸೇರಿಸಿ. ನಂತರ ಅದನ್ನು ಕುದಿಸಿ. ಈ ಸಂಪೂರ್ಣ ಮಿಶ್ರಣವನ್ನು ಅರ್ಧಕ್ಕೆ ಇಳಿಸುವವರೆಗೆ ಕುದಿಸಿ ನಂತರ ಸ್ಟೌವ್ ಆಫ್ ಮಾಡಿ.
- ಕಾಶ್ಮೀರಿ ಪಿಂಕ್ ಟೀ ಕಾಶ್ಮೀರದ ಜನರ ನೆಚ್ಚಿನ ಪಾನೀಯವಾಗಿದೆ. ಅಲ್ಲಿನ ಪ್ರತಿ ಮನೆಯಲ್ಲೂ ಈ ಚಹಾವನ್ನು ಸಿದ್ಧಪಡಿಸಲಾಗುತ್ತದೆ. ನೀವು ಕೂಡ ಇದನ್ನು ಪ್ರಯತ್ನಿಸಿ ಖಂಡಿತವಾಗಿಯೂ ನಿಮಗೂ ಇಷ್ಟವಾಗುತ್ತದೆ.
- ಚಹಾದ ಮೇಲೆ ಬಾದಾಮಿ ಮತ್ತು ಪಿಸ್ತಾ ಹಾಕಿದರೆ ಪಿಂಕ್ ಟೀ ಕುಡಿಯಲು ಇನ್ನೂ ಉತ್ತಮವಾಗಿರುತ್ತದೆ. ಬಿಸಿ ಬಿಸಿಯಾಗಿ ಕುಡಿದರೆ ಹೆಚ್ಚು ರುಚಿಕರವಾಗಿರುತ್ತದೆ.