Winter Care: ದಿನೇ ದಿನೇ ಹೆಚ್ಚಾಗುತ್ತಿದೆ ಚಳಿ; ಮಕ್ಕಳಿಗೆ ಸ್ವೆಟರ್ ಖರೀದಿಸುವ ಯೋಚನೆಯಿದ್ದರೆ ಈ ಅಂಶಗಳು ಗಮನದಲ್ಲಿರಲಿ
ಕನ್ನಡ ಸುದ್ದಿ  /  ಜೀವನಶೈಲಿ  /  Winter Care: ದಿನೇ ದಿನೇ ಹೆಚ್ಚಾಗುತ್ತಿದೆ ಚಳಿ; ಮಕ್ಕಳಿಗೆ ಸ್ವೆಟರ್ ಖರೀದಿಸುವ ಯೋಚನೆಯಿದ್ದರೆ ಈ ಅಂಶಗಳು ಗಮನದಲ್ಲಿರಲಿ

Winter Care: ದಿನೇ ದಿನೇ ಹೆಚ್ಚಾಗುತ್ತಿದೆ ಚಳಿ; ಮಕ್ಕಳಿಗೆ ಸ್ವೆಟರ್ ಖರೀದಿಸುವ ಯೋಚನೆಯಿದ್ದರೆ ಈ ಅಂಶಗಳು ಗಮನದಲ್ಲಿರಲಿ

ಕಳೆದ ಕೆಲವು ದಿನಗಳಿಂದ ಚಳಿಯ ಪ್ರಭಾವ ಜೋರಿದೆ. ಇನ್ನೂ ಕೆಲವು ದಿನಗಳು ಚಳಿ ಹೆಚ್ಚಿರುವ ಕಾರಣ ಮಕ್ಕಳು ಹಾಗೂ ವಯಸ್ಸಾದವರ‌ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಮಕ್ಕಳಿಗಾಗಿ ಚಳಿಗಾಲಕ್ಕೆ ಹೊಂದುವ ಜಾಕೆಟ್ ಖರೀದಿ ಮಾಡಬೇಕು ಅಂತಿದ್ದರೆ, ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ಸುಂದರವಾಗಿ ಕಾಣುವುದಷ್ಟೇ ಅಲ್ಲ, ಈ ವಿಚಾರಗಳನ್ನೂ ಗಮನಿಸಿ.

ಮಕ್ಕಳಿಗೆ ಸ್ವೆಟರ್ ಖರೀದಿಸಲು ಟಿಪ್ಸ್‌
ಮಕ್ಕಳಿಗೆ ಸ್ವೆಟರ್ ಖರೀದಿಸಲು ಟಿಪ್ಸ್‌ (PC: Canva)

ಈ ವರ್ಷ ಚಳಿಯ ಪ್ರಭಾವ ಜೋರಿದೆ, ದಿನೇ ದಿನೇ ಚಳಿ ಜೋರಾಗುತ್ತಿದೆ. ಶೀತ ವಾತಾವರಣವು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಈ ಸಮಯದಲ್ಲಿ ಮಕ್ಕಳ ಮೇಲೆ ಹೆಚ್ಚು ಕಾಳಜಿ ತೋರಬೇಕು. ಬೆಚ್ಚಗಿನ ಬಟ್ಟೆ ತೊಡಿಸುವ ಮೂಲಕ ಅವರ ದೇಹ ಬೆಚ್ಚಗಿರಿಸಿ, ಆರೋಗ್ಯ ಕಾಪಾಡುವತ್ತ ಪೋಷಕರು ಗಮನ ಹರಿಸಬೇಕು.

ಚಳಿಗಾಲಕ್ಕಾಗಿ ಮಕ್ಕಳಿಗೆ ಸ್ವೆಟರ್ ಅಥವಾ ಜಾಕೆಟ್ ಖರೀದಿಸುವ ಬಗ್ಗೆ ಯೋಚಿಸ್ತಾ ಇದ್ದೀರಾ, ಹಾಗಾದರೆ ಈ ಕೆಲವು ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಿ. ಈ ವರ್ಷ ಇನ್ನೂ ಚಳಿಗಾಲ ಮುಗಿದಿಲ್ಲ, ಅಲ್ಲದೆ ಮುಂದಿನ ವರ್ಷವೂ ಚಳಿಗಾಲ ಬರುತ್ತದೆ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಂಡು ಸ್ವೆಟರ್ ಖರೀದಿಸಬೇಕು. ಬೆಲೆ, ಗುಣಮಟ್ಟ, ಬಾಳಿಕೆ, ಬಣ್ಣ ಈ ಎಲ್ಲವನ್ನೂ ಗಮನಿಸುವುದನ್ನು ಮರೆಯದಿರಿ.

ದೇಹ ಬೆಚ್ಚಗಿಡುವ ಜೊತೆ ಸುಂದರವಾಗಿಯೂ ಇರಲಿ

ಚಳಿಗಾಲ ಎಂದರೆ ಒಂದು ರೀತಿಯ ಮಂದ ವಾತಾವರಣ. ಈ ಸಮಯದಲ್ಲಿ ದೇಹ, ಮನಸ್ಸು ಕೂಡ ಚುರುಕಾಗಿರುವುದಿಲ್ಲ. ಅಂತಹ ಸಮಯದಲ್ಲಿ ಮಕ್ಕಳ ದೇಹ ಬೆಚ್ಚಗಿರಿಸಿ ಚಳಿಯಿಂದ ಕಾಪಾಡುವುದು ಮಾತ್ರವಲ್ಲ, ಮಕ್ಕಳು ಸುಂದರವಾಗಿ ಕಾಣುವಂತಹ, ನಿಮ್ಮ ಮಗುವಿಗೆ ಹೊಂದುವಂತಹ ಜಾಕೆಟ್ ಖರೀದಿಸುವುದು ಕೂಡ ಬಹಳ ಮುಖ್ಯ. ಈಗೆಲ್ಲಾ ಗೊಂಬೆ ಚಿತ್ತಾರ, ಹೂವಿನ ಚಿತ್ತಾರಗಳಿರುವ ಮುದ್ದಾದ ಜಾಕೆಟ್‌ಗಳು ಲಭ್ಯವಿದೆ. ಸ್ವೆಟರ್‌ ಮೇಲೆ ಗೊಂಬೆ ಇರುವಂತಹ ಸ್ವೆಟರ್‌ಗಳು ಮಕ್ಕಳಿಗೆ ಇಷ್ಟವಾಗುತ್ತದೆ. ಗಾಢ ಬಣ್ಣದ ಸ್ವೆಟರ್‌ಗಳು ಮಕ್ಕಳ ಅಂದ ಹೆಚ್ಚಿಸುವುದು ಸುಳ್ಳಲ್ಲ.

ಟೋಪಿ, ಫುಲ್‌ ಹ್ಯಾಂಡ್

ಟ್ರೆಂಡಿ ಬಟ್ಟೆ ತೊಡಿಸುವುದರಿಂದ ಮಕ್ಕಳು ಸ್ಟೈಲಿಶ್ ಆಗಿ ಕಾಣಿಸುತ್ತಾರೆ ನಿಜ ಆದರೆ ಇದರೊಂದಿಗೆ ಮಕ್ಕಳನ್ನು ಚಳಿಯಿಂದ ರಕ್ಷಿಸುವುದು ಬಹಳ ಮುಖ್ಯ. ಸೆಟ್ವರ್ ಅಥವಾ ಜಾಕೆಟ್‌ಗೆ ಟೋಪಿ ಹಾಗೂ ಫುಲ್‌ ಹ್ಯಾಂಡ್ ಇರುವಂತೆ ನೋಡಿಕೊಳ್ಳಿ. ಕೆಲವೊಂದು ಜಾಕೆಟ್‌ಗಳಲ್ಲಿ ಗ್ಲೌಸ್ ಕೂಡ ಜೊತೆ ಬರುತ್ತದೆ. ಅಂತಹ ಜಾಕೆಟ್ ಖರೀದಿಸುವುದು ಬಹಳ ಮುಖ್ಯ. ಇದರಿಂದ ಮಕ್ಕಳ ಸಂಪೂರ್ಣ ದೇಹವನ್ನು ಬೆಚ್ಚಗಿರಿಸಬಹುದು.

ಬಣ್ಣ ಹೀಗಿರಲಿ

ಮಕ್ಕಳಿಗೆ ತಿಳಿ ಗುಲಾಬಿ, ತಿಳಿ ನೀಲಿ ಬಣ್ಣದ ಸ್ವೆಟರ್, ಜಾಕೆಟ್‌ಗಳು ಮುದ್ದಾಗಿ ಕಾಣಿಸುತ್ತದೆ. ಆದರೆ ಮಕ್ಕಳು ಇದರಲ್ಲಿ ಬೇಗ ಕೊಳೆ ಮಾಡಿಕೊಳ್ಳುತ್ತಾರೆ. ಇದರಿಂದ ಸ್ವೆಟರ್ ಬೇಗನೆ ಹಾಳಾಗುತ್ತದೆ. ಪದೇ ಪದೇ ವಾಶ್ ಮಾಡುವುದರಿಂದಲೂ ಸ್ವೆಟರ್ ಹಾಳಾಗುತ್ತದೆ. ಹಾಗಾಗಿ ಮಕ್ಕಳಿಗೆ ಗಾಢ ಬಣ್ಣದ ಸ್ವೆಟರ್ ಖರೀದಿಸುವುದು ಉತ್ತಮ.

ಗುಣಮಟ್ಟ ಅವಶ್ಯ

ಮಕ್ಕಳಿಗೆ ಖರೀದಿಸುವ ಸ್ವೆಟರ್ ಅಂದ ಹೆಚ್ಚಿಸಿದರೆ ಮಾತ್ರ ಸಾಲುವುದಿಲ್ಲ ಗುಣಮಟ್ಟವೂ ಚೆನ್ನಾಗಿರಬೇಕು. ಮೊದಲೇ ಹೇಳಿದಂತೆ ಚಳಿಗಾಲ ವರ್ಷ ವರ್ಷಕ್ಕೂ ಬರುತ್ತದೆ. ಹಾಗಂತ ಪ್ರತಿ ಬಾರಿಯೂ ಸ್ವೆಟರ್ ಖರೀದಿಸಲು ಸಾಧ್ಯವಿಲ್ಲ. ಅದಕ್ಕಾಗಿ ಉತ್ತಮ ಗುಣಮಟ್ಟದ ಕನಿಷ್ಠ ಮೂರ್ನ್ಕಾಲು ವರ್ಷ ಬಾಳಿಕೆ ಬರುವ ಉತ್ತಮ ಗುಣಮಟ್ಟದ ಸ್ವೆಟರ್ ಖರೀದಿ ಮಾಡಿ.

ಉಣ್ಣೆಯ ಸ್ವೆಟರ್

ಮಕ್ಕಳ ಚರ್ಮ ತುಂಬಾ ನಯವಾಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಅವರಿಗೆ ಉಣ್ಣೆಯ ಸ್ವೆಟರ್ ತೊಡಿಸುವುದು ಉತ್ತಮ. ಉಣ್ಣೆಯ ಸ್ವೆಟರ್ ಅನ್ನು ದಿನವಿಡೀ ತೊಡಿಸಿದರೂ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಉಣ್ಣೆಯ ಬಟ್ಟೆ ಚಳಿಗಾಲದಲ್ಲಿ ಮಕ್ಕಳನ್ನು ಬೆಚ್ಚಗಿಡುತ್ತದೆ.

ಪ್ಯಾಂಟ್ ಅಂಡ್ ಶರ್ಟ್

ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಟ್ರೆಂಡ್‌ನ ಸ್ವೆಟರ್‌ಗಳು ಮಾರುಕಟ್ಟೆಗೆ ಬರುತ್ತಿವೆ. ಈಗ ಪ್ಯಾಂಟ್ ಶರ್ಟ್ ಎರಡೂ ಇರುವ ರೀತಿಯ ಜಾಕೆಟ್‌ಗಳು ಬರುತ್ತಿವೆ. ಇದು ಮಕ್ಕಳಿಗೆ ಹೆಚ್ಚು ಸೂಕ್ತ ಎನ್ನಿಸುತ್ತವೆ. ಕುತ್ತಿಗೆಯಿಂದ ಕಾಲಿನವರೆಗೆ ಮಕ್ಕಳನ್ನು ಬೆಚ್ಚಗಿಡುವ ಈ ಸ್ವೆಟರ್‌ಗಳು ಸ್ಟೈಲಿಶ್ ಲುಕ್ ನೀಡುವಂತೆ ಮಾಡುವುದು ಸುಳ್ಳಲ್ಲ. ಇದು ಅತಿಯಾದ ಚಳಿಯ ವಾತಾವರಣಕ್ಕೆ ಹೇಳಿ ಮಾಡಿಸಿದ್ದು ಕೂಡ.

ಈ ಅಂಶಗಳನ್ನೂ ನೆನಪಿನಲ್ಲಿಡಿ

ಚಳಿಗಾಲದಲ್ಲಿ ಮಕ್ಕಳಿಗೆ ಸ್ವೆಟರ್, ಜಾಕೆಟ್ ಖರೀದಿಸುವಾಗ ಕುತ್ತಿಗೆಯ ಭಾಗದಿಂದ ಕವರ್‌ ಆಗುತ್ತಾ ಎಂಬುದು ಗಮನಿಸಿ. ಸಿಂಥೆಟಿಕ್ ಅಥವಾ ಚುಚ್ಚುವ ರೀತಿಯ ಬಟ್ಟೆಯ ಜಾಕೆಟ್ ಖರೀದಿಸದಿರಿ. ಇದು ಮಕ್ಕಳಿಗೆ ಕಿರಿಕಿರಿ ಉಂಟು ಮಾಡುತ್ತದೆ. ಕೆಲವೊಂದು ಜಾಕೆಟ್‌ಗಳ ನೂಲು ಬೇಗನೆ ಎದ್ದು ಬರುತ್ತದೆ. ಇದು ಮಕ್ಕಳ ಮೂಗು, ಕಿವಿಗೆ ಹೋಗುವ ಸಾಧ್ಯತೆ ಇದೆ. ಹಾಗಾಗಿ ಗುಣಮಟ್ಟವನ್ನು ನೋಡುವುದು ಬಹಳ ಮುಖ್ಯ. ಸ್ವೆಟರ್ ಖರೀದಿಸುವಾಗ ಮಫ್ಲರ್‌, ಶಾಲ್‌ಗಳನ್ನೂ ಖರೀದಿಸಿ. ಇದು ಕೂಡ ಚಳಿಗಾಲಕ್ಕೆ ಅವಶ್ಯ.

Whats_app_banner