ಈ ಚಳಿಗಾಲದಲ್ಲಿ ಅನ್ನದೊಂದಿಗೆ ಸವಿಯಿರಿ ರುಚಿಕರವಾದ ಶುಂಠಿ-ಮೊಸರು ಪಚಡಿ: ಇಲ್ಲಿದೆ ರೆಸಿಪಿ
ಚಳಿಗಾಲದಲ್ಲಿ ಶೀತ, ಕೆಮ್ಮು ಉಂಟಾಗುವುದು ಸಹಜ. ಈ ಶೀತ ವಾತಾವರಣಕ್ಕೆಸೂಕ್ತವಾಗುವಂತಹ ಆಹಾರಗಳನ್ನು ಸೇವಿಸುವುದರಿಂದ ಈ ಕಾಯಿಲೆಗಳಿಂದ ದೂರವಿರಬಹುದು. ಶುಂಠಿ-ಮೊಸರು ಪಚಡಿ ತಯಾರಿಸಿ ಸೇವಿಸುವುದರಿಂದ ಹಲವು ಪ್ರಯೋಜನವಿದೆ. ರುಚಿ ಕೂಡ ಅದ್ಭುತ. ಈ ರೆಸಿಪಿ ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಚಳಿಗಾಲದಲ್ಲಿ ಶುಂಠಿ-ಮೊಸರು ಪಚಡಿ ತಿನ್ನುವುದರಿಂದ ದೇಹಕ್ಕೆ ರೋಗನಿರೋಧಕ ಶಕ್ತಿ ಸಿಗುತ್ತದೆ. ಅದರಲ್ಲೂ ಶೀತ ವಾತಾವರಣದಲ್ಲಿ ಶುರುವಾಗುವ ನೆಗಡಿ ಮತ್ತು ಕೆಮ್ಮುವನ್ನು ದೂರವಿರಿಸಲು ಸಹಾಯಕವಾಗುತ್ತದೆ. ಈ ಶುಂಠಿ-ಮೊಸರು ಪಚಡಿಯನ್ನು ಅನ್ನದೊಂದಿಗೆ ತಿಂದರೆ ರುಚಿಯಾಗಿರುತ್ತದೆ. ಶುಂಠಿಯನ್ನು ಹೆಚ್ಚಿನವರು ತಿನ್ನಲು ಬಯಸುವುದಿಲ್ಲ. ಆದರೆ, ಒಮ್ಮೆ ಶುಂಠಿ-ಮೊಸರು ಪಚಡಿ ತಿಂದು ನೋಡಿ, ಖಂಡಿತ ನಿಮಗೆ ಇಷ್ಟವಾಗುತ್ತದೆ. ಇದು ರುಚಿಯಾಗಿರುವುದು ಮಾತ್ರವಲ್ಲದೆ ಔಷಧಿಯಂತೆ ಕೆಲಸ ಮಾಡುತ್ತದೆ. ಇಲ್ಲಿದೆ ಶುಂಠಿ-ಮೊಸರು ಪಚಡಿ ರೆಸಿಪಿ ಮಾಡುವ ವಿಧಾನ.
ಶುಂಠಿ-ಮೊಸರು ಪಚಡಿ ರೆಸಿಪಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ಶುಂಠಿ- ಒಂದು ನಿಂಬೆ ಗಾತ್ರ, ಕರಿಬೇವು ಸೊಪ್ಪು- 3, ಮೆಂತ್ಯ ಕಾಳು- ಒಂದು ಟೀ ಚಮಚ, ಹಸಿಮೆಣಸಿನಕಾಯಿ- ಎರಡು, ತುರಿದ ತೆಂಗಿನಕಾಯಿ- ಒಂದು ಕಪ್, ಅರಿಶಿನ- ಕಾಲು ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ- ಅಗತ್ಯವಿದ್ದಷ್ಟು, ಸಾಸಿವೆ- ಒಂದು ಟೀ ಚಮಚ, ಕೊತ್ತಂಬರಿ ಪುಡಿ- ಎರಡು ಟೀ ಚಮಚ, ನೀರು- ಬೇಕಾದಷ್ಟು, ಮೊಸರು- ಒಂದು ಕಪ್, ಜೀರಿಗೆ- ಅರ್ಧ ಟೀ ಚಮಚ, ಇಂಗು- ಚಿಟಿಕೆ, ಕಡಲೆ ಬೇಳೆ- ಒಂದು ಟೀ ಚಮಚ, ಒಣಮೆಣಸು- ಒಂದು, ಉದ್ದಿನ ಬೇಳೆ- ಒಂದು ಟೀ ಚಮಚ.
ಪಚಡಿ ರೆಸಿಪಿ ಮಾಡುವ ವಿಧಾನ: ಸ್ಟೌವ್ ಮೇಲೆ ಕಡಾಯಿ ಇಟ್ಟು ಮೊದಲಿಗೆ ಮೆಂತ್ಯ ಹಾಕಿ ಹುರಿಯಿರಿ.
- ನಂತರ ಕರಿಬೇವಿನ ಎಲೆಗಳನ್ನು ಹಾಕಿ ಫ್ರೈ ಮಾಡಿ.
- ಹುರಿದ ಮೆಂತ್ಯ ಕಾಳು, ಸ್ವಲ್ಪ ಕರಿಬೇವಿನ ಎಲೆಗಳು, ಶುಂಠಿ ತುಂಡು, ಹಸಿಮೆಣಸಿನಕಾಯಿ, ಅರಿಶಿನ ಮತ್ತು ತುರಿದ ತೆಂಗಿನಕಾಯಿಯನ್ನು ಮಿಕ್ಸಿ ಜಾರ್‌ನಲ್ಲಿ ಸೇರಿಸಿ ಅವುಗಳನ್ನು ನುಣ್ಣಗೆ ರುಬ್ಬಿಕೊಳ್ಳಿ.
- ಈ ಸಂಪೂರ್ಣ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ.
- ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ.
- ಈಗ ಸ್ಟೌವ್ ಮೇಲೆ ಸಣ್ಣ ಪ್ಯಾನ್ ಇಟ್ಟು ಎರಡು ಟೀ ಚಮಚ ಎಣ್ಣೆಯನ್ನು ಹಾಕಿ.
- ಸಾಸಿವೆ, ಒಣಮೆಣಸು, ಜೀರಿಗೆ, ಇಂಗು, ಕಡಲೆಬೇಳೆ, ಉದ್ದಿನ ಬೇಳೆಯನ್ನು ಸೇರಿಸಿ ಆ ಎಣ್ಣೆಯಲ್ಲಿ ಫ್ರೈ ಮಾಡಿ .
- ಇದಕ್ಕೆ ಕರಿಬೇವಿನ ಎಲೆಗಳು ಮತ್ತು ರುಬ್ಬಿರುವ ಮಿಶ್ರಣವನ್ನು ಸೇರಿಸಿ, ಎರಡು ನಿಮಿಷಗಳ ಕಾಲ ಫ್ರೈ ಮಾಡಿ. ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಸ್ಟೌವ್ ಆಫ್ ಮಾಡಿ.
- ತಣ್ಣಗಾದ ನಂತರ ಒಂದು ಕಪ್ ಮೊಸರನ್ನು ಈ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ಶುಂಠಿ-ಮೊಸರು ಪಚಡಿ ಸವಿಯಲು ಸಿದ್ಧ.
ಒಮ್ಮೆ ಈ ರೆಸಿಪಿಯನ್ನು ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎನಿಸುತ್ತದೆ. ಬಿಸಿ ಅನ್ನದೊಂದಿಗೆ ಬೆರೆಸಿ ತಿಂದರೆ ರುಚಿ ಅದ್ಭುತವಾಗಿರುತ್ತದೆ. ಈ ರೆಸಿಪಿಯಲ್ಲಿ ಬಳಸಲಾಗುವ ಶುಂಠಿ, ಮೆಂತ್ಯ, ಕರಿಬೇವಿನ ಸೊಪ್ಪು, ಅರಿಶಿನ, ಮೊಸರು ಕೂಡ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಚಳಿಗಾಲದಲ್ಲಿ ಬರುವ ಜ್ವರ, ಶೀತ ಮತ್ತು ಕೆಮ್ಮು ಹೋಗಲಾಡಿಸಲು ಸಹಕಾರಿಯಾಗಿದೆ.