Laziness: ಬೆಳಗ್ಗೆ ಹಾಸಿಗೆಯಿಂದ ಏಳುವುದೇ ದೊಡ್ಡ ಸವಾಲಾಗಿದ್ಯಾ? ಮುಂಜಾನೆಯ ಆಲಸ್ಯಕ್ಕೆ ಇಲ್ಲಿದೆ ಮದ್ದು
ಕನ್ನಡ ಸುದ್ದಿ  /  ಜೀವನಶೈಲಿ  /  Laziness: ಬೆಳಗ್ಗೆ ಹಾಸಿಗೆಯಿಂದ ಏಳುವುದೇ ದೊಡ್ಡ ಸವಾಲಾಗಿದ್ಯಾ? ಮುಂಜಾನೆಯ ಆಲಸ್ಯಕ್ಕೆ ಇಲ್ಲಿದೆ ಮದ್ದು

Laziness: ಬೆಳಗ್ಗೆ ಹಾಸಿಗೆಯಿಂದ ಏಳುವುದೇ ದೊಡ್ಡ ಸವಾಲಾಗಿದ್ಯಾ? ಮುಂಜಾನೆಯ ಆಲಸ್ಯಕ್ಕೆ ಇಲ್ಲಿದೆ ಮದ್ದು

ಚಳಿಗಾಲದಲ್ಲಿ ಬೆಳಗ್ಗೆ ಹಾಸಿಗೆಯಿಂದ ಎದ್ದೇಳುವುದೇ ಒಂದು ದೊಡ್ಡ ಸವಾಲು. ಚುಮು ಚುಮು ಚಳಿಯಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಮುಂಜಾನೆಯ ಆಲಸ್ಯ ಕಾಡುತ್ತದೆ. ಪ್ರತಿದಿನ ಮಂಚದಿಂದ ಇಳಿಯಲು ನಿಮ್ಮ ಆಲಸ್ಯ ನಿಮಗೆ ಅಡ್ಡಿ ಮಾಡುತ್ತಿದ್ದರೆ ಇದರಿಂದ ಪಾರಾಗಲು ಸರಳ ಸಲಹೆಗಳು ಇಲ್ಲಿದೆ ನೋಡಿ..

ಮುಂಜಾನೆಯ ಆಲಸ್ಯಕ್ಕೆ ಇಲ್ಲಿದೆ ಮದ್ದು
ಮುಂಜಾನೆಯ ಆಲಸ್ಯಕ್ಕೆ ಇಲ್ಲಿದೆ ಮದ್ದು

ಈಗಂತೂ ಚಳಿಗಾಲ. ಚುಮು ಚುಮು ಚಳಿಯಲ್ಲಿ ಬೆಚ್ಚನೆಯ ಹೊದಿಕೆ ಹೊದ್ದು ಮಲಗುವುದು ಎಂದರೆ ಎಲ್ಲರಿಗೂ ಪ್ರಿಯ. ಆದರೆ ಬೆಳಗ್ಗೆ ಆದೊಡನೆಯೇ ಆ ಕೊರೆಯುವ ಚಳಿಯ ನಡುವೆಯೇ ಎದ್ದು ದಿನನಿತ್ಯದ ಕೆಲಸಗಳನ್ನು ಆರಂಭಿಸುವುದು ಬಹುತೇಕರಿಗೆ ತುಂಬಾನೇ ಕಷ್ಟದ ಕೆಲಸ. ಚಳಿಗಾಲದ ಸಮಯದಲ್ಲಿ ಅತಿಯಾದ ಶೀತ ಹಾಗೂ ಸೂರ್ಯನ ಬೆಳಕುಗಳ ಕೊರತೆಯಿಂದಾಗಿ ನಿಮಗೆ ಈ ರೀತಿಯ ಆಲಸ್ಯ ಬರುತ್ತದೆ. ಹೀಗಾಗಿ ಹಾಸಿಗೆಯಿಂದ ಎದ್ದೇಳಲು ಆಲಸ್ಯದ ಭಾವ ಕಾಡುತ್ತದೆ. ನೀವು ಕೂಡ ಈ ಪೈಕಿ ಒಬ್ಬರಾಗಿದ್ದರೆ ಇಲ್ಲಿರುವ ಸಲಹೆಗಳನ್ನು ನಿಮ್ಮದಾಗಿಸಿಕೊಳ್ಳುವ ಮೂಲಕ ಬೆಳಗ್ಗಿನ ಸೋಮಾರಿತನದಿಂದ ಪಾರಾಗಬಹುದಾಗಿದೆ.

ಪ್ರತಿನಿತ್ಯ ನಿರ್ದಿಷ್ಟ ಗುರಿಯನ್ನು ಇಟ್ಟುಕೊಳ್ಳಿ : ರಾತ್ರಿ ಮಲಗುವ ಮುನ್ನ ನಾಳೆ ನೀವು ಏನನ್ನು ಸಾಧಿಸಬೇಕು ಎಂದುಕೊಂಡಿದ್ದೀರಿ ಎಂಬ ಗುರಿಯನ್ನು ಇಟ್ಟುಕೊಳ್ಳಿ. ಇದನ್ನು ನೀವು ಈ ಸಮಯದ ಒಳಗಾಗಿ ಮುಗಿಸಬೇಕು ಎಂದು ನಿಮಗೆ ನೀವೇ ಒಂದು ಗಡುವನ್ನು ಹಾಕಿಕೊಳ್ಳಿ. ಅದು ವಾಕಿಂಗ್​ ಆಗಿರಬಹುದು, ಅಥವಾ ಕಚೇರಿಗೆ ಸರಿಯಾದ ಸಮಯಕ್ಕೆ ತೆರಳುವುದು ಆಗಿರಬಹುದು. ಹೀಗೆ ಯಾವುದಾದರೊಂದು ಗುರಿಯನ್ನು ಇಟ್ಟುಕೊಂಡು ಮಲಗಿ. ಇದು ನಿಮಗೆ ಬೆಳಗ್ಗೆ ಸಮಯಕ್ಕೆ ಸರಿಯಾಗಿ ಹಾಸಿಗೆಯಿಂದ ಏಳಲು ಪ್ರೇರೇಪಿಸುತ್ತದೆ.

ಪ್ರಾಣಾಯಾಮ, ಧ್ಯಾನ ಮಾಡಿ : ದೇಹಕ್ಕೆ ಹಾಗೂ ಮನಸ್ಸಿಗೆ ತಾಜಾತನದ ಭಾವನೆ ಮೂಡಬೇಕು ಎಂದರೆ ನೀವು ಮಾಡಬೇಕಾದ ಮೊದಲ ಕೆಲಸ ಬೆಳಗ್ಗೆ ಎದ್ದಾಕ್ಷಣ ಧ್ಯಾನ ಮಾಡವುದು. ಇದು ನಿಮ್ಮ ದೇಹ ಹಾಗೂ ಮನಸ್ಸು ಎರಡನ್ನೂ ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ ಹಾಗೂ ನಿಮ್ಮ ಮುಂದಿನ ಕೆಲಸಗಳನ್ನು ಉತ್ಸಾಹದಿಂದ ಮಾಡಲು ನೆರವಾಗುತ್ತದೆ.

ಬೆಳಗ್ಗಿನ ದಿನಚರಿಯನ್ನು ಇಟ್ಟುಕೊಳ್ಳಿ : ಬೆಳಗ್ಗೆ ಎದ್ದಕೂಡಲೇ ನಾನು ಈ ಕೆಲಸಗಳನ್ನು ಮಾಡಬೇಕು ಎಂಬ ದಿನಚರಿಯನ್ನು ರೂಢಿಸಿಕೊಳ್ಳಿ. ಬೆಳಗ್ಗೆ ಎದ್ದು ವಾಕ್​ ಹೋಗುವುದು ಅಥವಾ ಡೈರಿಯಲ್ಲಿ ಏನನ್ನಾದರೂ ಬರೆಯುವುದು,ವ್ಯಾಯಾಯ ಮಾಡುವುದು. ಹೀಗೆ ಏನಾದರೂ ಒಂದು ದಿನಚರಿಯನ್ನು ಇಟ್ಟುಕೊಳ್ಳಿ.

ನೀವು ಯಶಸ್ಸು ಸಾಧಿಸುತ್ತಿರುವುದನ್ನು ಊಹಿಸಿಕೊಳ್ಳಿ : ಹಾಸಿಗೆಯಿಂದ ಏಳಲು ನಿಮಗೆ ಉದಾಸೀನವಾಗುತ್ತಿದ್ದರೆ ನೀವು ಕಂಡಂತಹ ಕನಸೊಂದು ನನಸಾಗಿ ನಿಮಗೆ ಯಶಸ್ಸು ಸಿಗುತ್ತಿರುವುದನ್ನು ಸುಮ್ಮನೇ ನಿಮಗೆ ನೀವೇ ಊಹಿಸಿಕೊಳ್ಳಿ. ಆಗ ನಿಮ್ಮಲ್ಲಿ ಖಂಡಿತ ಚೈತನ್ಯದ ಭಾವ ಮೂಡಲಿದೆ.

ಚಿಕ್ಕ ಪುಟ್ಟ ಹೆಜ್ಜೆಗಳಿಂದ ನಿಮ್ಮ ದಿನವನ್ನು ಆರಂಭಿಸಿ : ದೊಡ್ಡ ದೊಡ್ಡ ಕೆಲಸಗಳನ್ನು ನೆನಪು ಮಾಡಿಕೊಂಡರೆ ಆ ದಿನದ ಆರಂಭವೇ ನಿಮಗೆ ಭಯಾನಕ ಎನಿಸಿಬಿಡಬಹುದು. ಹೀಗಾಗಿ ಚಿಕ್ಕ ಚಿಕ್ಕ ಮೈಲಿಗಲನ್ನು ಸಾಧಿಸುತ್ತಾ ದಿನವನ್ನು ಆರಂಭಿಸುವ ಬಗ್ಗೆ ಯೋಚಿಸಿ. ಯಾವ ರೀತಿ ಹೆಜ್ಜೆಗಳನ್ನು ಇಟ್ಟು ನಾನು ಇಂದಿನ ಕೆಲಸಗಳನ್ನು ಮುಗಿಸಬಹುದು ಎಂಬುದಕ್ಕೆ ಲೆಕ್ಕಾಚಾರ ಹಾಕಿಕೊಳ್ಳಿ . ಆಗ ನಿಮಗೆ ಹಾಸಿಗೆಯಿಂದ ಎದ್ದು ನಿಮ್ಮ ಗುರಿಯನ್ನು ಸಾಧಿಸೋಣ ಎಂಬ ಭಾವನೆ ಖಂಡಿತ ಮೂಡುತ್ತದೆ.

Whats_app_banner