ಚಳಿಗಾಲದಲ್ಲಿ ತಲೆಹೊಟ್ಟು ಸಮಸ್ಯೆಯಿಂದ ಬೇಸತ್ತಿದ್ದೀರಾ: ಈ ಆಯುರ್ವೇದ ಪರಿಹಾರವನ್ನು ಪ್ರಯತ್ನಿಸಿ, ಡ್ಯಾಂಡ್ರಫ್‍ಗೆ ವಿದಾಯ ಹೇಳಿ
ಚಳಿಗಾಲದಲ್ಲಿ ಬಹುತೇಕ ಮಂದಿ ತಲೆಹೊಟ್ಟು ಸಮಸ್ಯೆಯಿಂದ ಬಳಲುತ್ತಾರೆ.ಡ್ಯಾಂಡ್ರಫ್ ಸಮಸ್ಯೆ ಹೋಗಲಾಡಿಸಲು ಆಯುರ್ವೇದದಿಂದ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿ ತಿಳಿಸಿರುವ ಮನೆಮದ್ದನ್ನು ಬಳಸುವುದರಿಂದತಲೆಹೊಟ್ಟು ಸಮಸ್ಯೆಗೆ ವಿದಾಯ ಹೇಳಬಹುದು. ತಲೆಹೊಟ್ಟು, ನೆತ್ತಿಯ ಸಮಸ್ಯೆಗಳನ್ನು ನಿವಾರಿಸಲು ಈ ನೈಸರ್ಗಿಕ ಆಯುರ್ವೇದ ಪರಿಹಾರವನ್ನು ಪ್ರಯತ್ನಿಸಿ.
ಚಳಿಗಾಲದಲ್ಲಿ ಬಹುತೇಕ ಮಂದಿ ತಲೆಹೊಟ್ಟು ಸಮಸ್ಯೆಯಿಂದ ಬಳಲುತ್ತಾರೆ. ತಲೆಹೊಟ್ಟು ಅಥವಾ ಡ್ಯಾಂಡ್ರಫ್ ನೆತ್ತಿಯ ಮೇಲೆ ತುರಿಕೆ ಮತ್ತು ಬಿಳಿ ಪದರ ತರಹದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆಗಾಗ ತುರಿಕೆ ಹಾಗೂ ತಲೆಹೊಟ್ಟು ತಮ್ಮ ಉಡುಪುಗಳಲ್ಲಿ ಬೀಳುವುದರಿಂದ ಕೆಲವೊಮ್ಮೆ ಮುಜುಗರ ಎದುರಿಸಬೇಕಾಗುತ್ತದೆ. ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸಲು ಜನರು ಅನೇಕ ರೀತಿಯ ಶಾಂಪೂ ಮತ್ತು ಕಂಡೀಷನರ್‌ಗಳನ್ನು ಬಳಸಲಾಗುತ್ತದೆ. ಆದರೆ, ಇದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಹೇಳಲಾಗುವುದಿಲ್ಲ. ಆಯುರ್ವೇದದ ಪ್ರಕಾರ, ದೇಹದಲ್ಲಿನ ಅಸಮತೋಲನದ ಪಿತ್ತ ಮತ್ತು ವಾತ ದೋಷಗಳು ತಲೆಹೊಟ್ಟು ಸಮಸ್ಯೆಗೆ ಮುಖ್ಯ ಕಾರಣವೆಂದು ಹೇಳಲಾಗಿದೆ. ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಕೆಲವು ವಿಶೇಷ ಪರಿಹಾರಗಳನ್ನು ಪ್ರಯತ್ನಿಸುವುದು ಬಹಳ ಅವಶ್ಯಕ. ಇಲ್ಲಿ ನೀಡಿರುವ ಆಯುರ್ವೇದ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಡ್ಯಾಂಡ್ರಫ್‍ಗೆ ವಿದಾಯ ಹೇಳಿ.
ಕೂದಲಿನಲ್ಲಿ ಡ್ಯಾಂಡ್ರಫ್ ಸಮಸ್ಯೆ ಏಕೆ ಕಾಣಿಸಿಕೊಳ್ಳುತ್ತದೆ?
ಚಳಿಗಾಲದಲ್ಲಿ ತಲೆಹೊಟ್ಟು ಸಮಸ್ಯೆಗೆ ಮುಖ್ಯ ಕಾರಣವೆಂದರೆ ನೆತ್ತಿಯ ಕೋಶಗಳ ಶೇಖರಣೆ ಹಾಗೂ ಕೂದಲಿನಿಂದ ತೈಲ ಹೊರಬರುವುದು. ಕೆಲವೊಮ್ಮೆ ನೆತ್ತಿಯ ಮೇಲೆ ಎಣ್ಣೆ ಸಂಗ್ರಹವಾಗುತ್ತದೆ. ಇದರಿಂದ ಇಡೀ ತಲೆಯ ಮೇಲೆ ಬಿಳಿ ಪದರವು ರೂಪುಗೊಳ್ಳುತ್ತದೆ. ಇದರಿಂದಾಗಿ ನೆತ್ತಿಯಲ್ಲಿ ತುರಿಕೆ, ಉರಿ, ತೀವ್ರ ನೋವಿನಂತಹ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.
ತಲೆಹೊಟ್ಟು ಸಮಸ್ಯೆಗೆ ಆಯುರ್ವೇದದ ಪರಿಹಾರ
ವೈದ್ಯ ಮಿಹಿರ್ ಖಾತ್ರಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಲೆಹೊಟ್ಟು ಸಮಸ್ಯೆಗೆ ಆಯುರ್ವೇದದ ಪರಿಹಾರವನ್ನು ಹಂಚಿಕೊಂಡಿದ್ದಾರೆ. ಇದನ್ನು ಮಾಡುವುದು ಹೇಗೆ ಎಂಬುದು ಇಲ್ಲಿದೆ:
ಬೇಕಾಗುವ ಪದಾರ್ಥಗಳು: ಮಾವಿನ ಬೀಜದ ಪುಡಿ- 10 ಗ್ರಾಂ, ತ್ರಿಫಲ ಪುಡಿ- 10 ಗ್ರಾಂ, ನೀರು- 500 ಮಿಲಿ, ಮಜ್ಜಿಗೆ - 500 ಮಿಲಿ.
ಮಾಡುವ ವಿಧಾನ: ಇದನ್ನು ತಯಾರಿಸಲು, ಮೊದಲು ಬಾಣಲೆಯಲ್ಲಿ 500 ಮಿಲಿ ನೀರನ್ನು ಬಿಸಿ ಮಾಡಿ. ಬಿಸಿ ನೀರಿಗೆ ತ್ರಿಫಲ ಪುಡಿ ಮತ್ತು ಮಾವಿನ ಬೀಜದ ಪುಡಿ ಸೇರಿಸಿ ಮಿಶ್ರಣ ಮಾಡಿ.
- ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಕುದಿಸಿ ಮತ್ತು ದಪ್ಪವಾಗುವವರೆಗೆ ಕುದಿಸಿ. ಸ್ವಲ್ಪ ದಪ್ಪಗಾದಾಗ ಅದನ್ನೊಂದು ಪಾತ್ರೆಗೆ ವರ್ಗಾಯಿಸಿ ಸ್ವಲ್ಪ ತಣ್ಣಗಾಗಲು ಬಿಡಿ.
- ಈ ಮಿಶ್ರಣವು ಸ್ವಲ್ಪ ಬೆಚ್ಚಗಿರುವಾಗ, ಅದಕ್ಕೆ 500 ಮಿಲಿ ಮಜ್ಜಿಗೆ ಸೇರಿಸಿ. ಈ ಮಿಶ್ರಣದಿಂದ ಕೂದಲನ್ನು ಚೆನ್ನಾಗಿ ಮಸಾಜ್ ಮಾಡಿ ತೊಳೆಯಿರಿ.
- ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸಲು ಈ ಪರಿಹಾರವನ್ನು ಬಳಸಿದ ನಂತರ, ಯಾವುದೇ ರೀತಿಯ ಶಾಂಪೂ ಅಥವಾ ಕಂಡಿಷನರ್ ಅನ್ನು ಬಳಸಬೇಡಿ ಎಂಬುದು ನೆನಪಿರಲಿ.
ಚಳಿಗಾಲದಲ್ಲಿ ತಲೆಹೊಟ್ಟು ಸಾಮಾನ್ಯವಾಗಿರುವುದರಿಂದ ಈ ಪರಿಹಾರವನ್ನು ಅಳವಡಿಸಿಕೊಳ್ಳಬಹುದು. ವಾರಕ್ಕೆ 2 ರಿಂದ 3 ಬಾರಿ ಈ ರೀತಿ ಮಾಡಿ ತಲೆಸ್ನಾನ ಮಾಡುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗಬಹುದು. ಮನೆಮದ್ದನ್ನು ಬಳಸುವುದರಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಆದರೆ, ಅಲರ್ಜಿ ಸಮಸ್ಯೆ ಇರುವವರು ಎಚ್ಚರ ವಹಿಸುವುದು ಸೂಕ್ತ. ಇದನ್ನು ತಲೆಗೆ ಹಚ್ಚುವ ಮುನ್ನ ಪ್ಯಾಚ್ ಪರೀಕ್ಷೆಯನ್ನು ಮಾಡಿ ನಂತರ ಬಳಸುವುದು ಉತ್ತಮ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)