ಚಳಿಗಾಲದಲ್ಲಿ ಸಂಧಿವಾತದ ಲಕ್ಷಣಗಳು ಉಲ್ಬಣವಾಗಲು ಪ್ರಮುಖ ಕಾರಣವಿದು, ನೋವು ನಿವಾರಣೆಗೆ ಇಲ್ಲಿದೆ ಸರಳ ಪರಿಹಾರ
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಸಂಧಿವಾತದ ಲಕ್ಷಣಗಳು ಉಲ್ಬಣವಾಗಲು ಪ್ರಮುಖ ಕಾರಣವಿದು, ನೋವು ನಿವಾರಣೆಗೆ ಇಲ್ಲಿದೆ ಸರಳ ಪರಿಹಾರ

ಚಳಿಗಾಲದಲ್ಲಿ ಸಂಧಿವಾತದ ಲಕ್ಷಣಗಳು ಉಲ್ಬಣವಾಗಲು ಪ್ರಮುಖ ಕಾರಣವಿದು, ನೋವು ನಿವಾರಣೆಗೆ ಇಲ್ಲಿದೆ ಸರಳ ಪರಿಹಾರ

ಚಳಿಗಾಲದಲ್ಲಿ ವಿಟಮಿನ್ ಡಿ ಕೊರತೆಯು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ. ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿನ ವ್ಯತ್ಯಯವು ಮೈಕೈ ನೋವು, ಜ್ವರ, ಆಯಾಸದಂತಹ ಸಮಸ್ಯೆ ಎದುರಾಗಲು ಕಾರಣವಾಗುತ್ತದೆ. ಶೀತ ವಾತಾವರಣದಲ್ಲಿ ಸಂಧಿವಾತದ ಲಕ್ಷಣಗಳು ಉಲ್ಬಣಗೊಂಡು ಪರಿಸ್ಥಿತಿ ಹದಗೆಡುತ್ತದೆ. ಇದಕ್ಕೆ ಕಾರಣ ಹಾಗೂ ಪರಿಹಾರವೇನು ನೋಡಿ.

ಚಳಿಗಾಲದ ಸಂಧಿವಾತ ಹೆಚ್ಚಲು ಕಾರಣ, ಪರಿಹಾರ
ಚಳಿಗಾಲದ ಸಂಧಿವಾತ ಹೆಚ್ಚಲು ಕಾರಣ, ಪರಿಹಾರ (PC: Canva)

ಸಂಧಿವಾತ ಸಮಸ್ಯೆ ಇರುವವರಿಗೆ ಚಳಿಗಾಲ ಶಾಪವಾಗುವುದು ಸುಳ್ಳಲ್ಲ. ಯಾಕೆಂದರೆ ಈ ಸಮಯದಲ್ಲಿ ಸಂಧಿವಾತದ ಲಕ್ಷಣಗಳು ಉಲ್ಬಣವಾಗುತ್ತವೆ. ಇದರಿಂದ ಅವರು ಅಸಹನೀಯ ನೋವು, ಅನುಭವಗಳನ್ನು ಎದುರಿಸಬೇಕಾಗಬಹುದು. ಹಾಗಂತ ಸಂಧಿವಾತ ಸಮಸ್ಯೆ ಇರುವ ಎಲ್ಲರೂ ಚಳಿಗಾಲದಲ್ಲಿ ತೊಂದರೆ ಎದುರಿಸುತ್ತಾರೆ ಅಂತೇನಿಲ್ಲ.

ಶೀತ ವಾತಾವರಣದಲ್ಲಿ ಸಂಧಿವಾತದ ಲಕ್ಷಣಗಳು ಉಲ್ಬಣಗೊಳ್ಳಲು ನಿಖರವಾದ ಕಾರಣ ಏನು ಎಂಬುದು ತಿಳಿದಿಲ್ಲವಾದರೂ ಈ ಕೆಲವು ಸಿದ್ಧಾಂತಗಳು ಶೀತ ವಾತಾವರಣದಲ್ಲಿ ಮೂಳೆ, ಕೀಲುನೋವಿನಂತಹ ಸಮಸ್ಯೆ ಹೆಚ್ಚಲು ಕಾರಣವಾಗುವ ಅಂಶಗಳ ಬಗ್ಗೆ ತಿಳಿಸಿವೆ. ಇದರೊಂದಿಗೆ ಸಂಧಿವಾತದ ಸಮಸ್ಯೆ ನಿವಾರಣೆ ಹೇಗೆ ಎಂಬ ಬಗ್ಗೆಯೂ ಇಲ್ಲಿದೆ ವಿವರ.

ಚಳಿಗಾಲದಲ್ಲಿ ಸಂಧಿವಾತದ ಲಕ್ಷಣ ಉಲ್ಬಣಿಸಲು ಕಾರಣ

ಶೀತ ವಾತಾವರಣದಲ್ಲಿ ಮೂಳೆಯ ತುದಿಯಲ್ಲಿರುವ ಸೈನೋವಿಯಲ್ ಎಂಬ ದ್ರವವು ದಪ್ಪವಾಗುತ್ತದೆ. ಇದು ಚಳಿಗಾಲದಲ್ಲಿ ಸಂಧಿವಾತದ ಸಮಸ್ಯೆ ಉಲ್ಬಣಗೊಳ್ಳಲು ಪ್ರಮುಖ ಕಾರಣವಾಗಿದೆ. ಸೈನೋವಿಯಲ್ ದ್ರವವು ಕೀಲುಗಳು ಸರಾಗವಾಗಿ ಚಲಿಸಲು ಸಹಾಯ ಮಾಡುವ ಲೂಬ್ರಿಕಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ದ್ರವ ದಪ್ಪವಾಗುವುದರಿಂದ ಕೀಲುಗಳು ಗಟ್ಟಿಯಾಗುತ್ತವೆ. ಇದರಿಂದ ನೋವು ಹೆಚ್ಚಾಗುತ್ತದೆ.

ಚಳಿಗಾಲದ ವಾತಾವರಣವು ದೇಹವನ್ನು ಆಲಸ್ಯಗೊಳಿಸುತ್ತದೆ. ಮಾತ್ರವಲ್ಲ ದೈಹಿಕ ವ್ಯಾಯಾಮ ಮಾಡದಂತೆ ನಿರುತ್ಸಾಹಗೊಳಿಸುತ್ತದೆ. ಸ್ನಾಯು ದೌರ್ಬಲ್ಯ ಹಾಗೂ ಕೀಲುಗಳಲ್ಲಿನ ಬಿಗಿತ ಕಾರಣದಿಂದ ಚಳಿಗಾಲದಲ್ಲಿ ಹಲವರು ಹೊರಾಂಗಣ ಚಟುವಟಿಕೆಗೆ ಕಡಿವಾಣ ಹಾಕುತ್ತಾರೆ. ಅಲ್ಲದೇ ವ್ಯಾಯಾಮ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತಾರೆ. ಇದು ಸಂಧಿವಾತದ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸಬಹುದು.

ಚಳಿಗಾಲದಲ್ಲಿ ಸೂರ್ಯ ನೈಸರ್ಗಿಕ ಬೆಳಕಿನ ಕೊರೆಯು ವಿಟಮಿನ್ ಡಿ ಕೊರತೆಗೆ ಕಾರಣವಾಗಬಹುದು. ಇದರಿಂದ ದೇಹ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಬದಲಾವಣೆಗಳಾಗುತ್ತವೆ. ಇದರಿಂದ ಮೈಕೈ ನೋವು, ಆಯಾಸ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತವೆ. ಇದು ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಲು ಅಡ್ಡಿಯಾಗುತ್ತದೆ.

ಚಳಿಗಾಲದಲ್ಲಿ ಸಂಧಿವಾತ ನಿವಾರಿಸಲು ಸಲಹೆ

ದೇಹವನ್ನು ಬೆಚ್ಚಗಿರಿಸಿ

ಶೀತ ವಾತಾವರಣದಲ್ಲಿ ದೇಹವನ್ನು ಬೆಚ್ಚಗಿರಿಸುವುದು ನೆಗಡಿ, ಜ್ವರ ಕೆಮ್ಮಿನಂತಹ ಸಮಸ್ಯೆಗೆ ಪರಿಹಾರ ನೀಡುವುದು ಮಾತ್ರವಲ್ಲ ನೀವು ಕೀಲುಗಳ ರಕ್ಷಣೆಗೂ ಸಹಕಾರಿ. ಉಣ್ಣೆಯ ಉಡುಪುಗಳನ್ನು ಧರಿಸಿ. ಕೋಣೆ ಅಥವಾ ಮನೆಯ ವಾತಾವರಣವನ್ನು ಬೆಚ್ಚಗಿರಿಸಿ. ರೂಮ್ ಹೀಟರ್‌ಗಳ ಬಳಕೆ ಕೂಡ ಉತ್ತಮ. ಇದರಿಂದ ಕೀಲುಗಳ ಬಿಗಿತವನ್ನೂ ತಪ್ಪಿಸಬಹುದು.

ಸಾಕಷ್ಟು ನೀರು ಕುಡಿಯಿರಿ

ಎಲ್ಲಾ ಕಾಲದಲ್ಲೂ ಆರೋಗ್ಯ ಸಮಸ್ಯೆಗಳಿಂದ ರಕ್ಷಣೆ ಪಡೆಯಲು ನೀರು ಕುಡಿಯುವುದು ಪರಿಹಾರ. ಸಾಕಷ್ಟು ನೀರು ಕುಡಿಯುವುದರಿಂದ ಕೀಲು ನೋವು ಹಾಗೂ ಬಿಗಿತದ ಸಮಸ್ಯೆಗೆ ಪರಿಹಾರ ನೀಡುತ್ತದೆ.

ನಿಯಮಿತ ವ್ಯಾಯಾಮ

ಚಳಿಗಾಲದಲ್ಲಿ ಎದ್ದು ವಾಕಿಂಗ್ ಮಾಡುವುದು ಕಷ್ಟವಾದರೆ ಯೋಗ, ವ್ಯಾಯಾಮ, ಸ್ಟ್ರೆಚಿಂಗ್, ಈಜು ಮುಂತಾದ ಒಳಾಂಗಣ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ. ವ್ಯಾಯಾಮವು ಸ್ನಾಯುವಿನ ಸಾಮರ್ಥ್ಯ ಹೆಚ್ಚಲು ಮತ್ತು ಕೀಲುಗಳ ಚಲನಶೀತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಒತ್ತಡ ನಿರ್ವಹಣೆ

ನಿಮ್ಮ ದಿನಚರಿಯಲ್ಲಿ ಯೋಗ, ಧ್ಯಾನ, ದೀರ್ಘವಾದ ಉಸಿರಾಟ ಮುಂತಾದ ಒತ್ತಡ ನಿರ್ವಹಣೆಯ ತಂತ್ರಗಳನ್ನು ರೂಢಿಸಿಕೊಳ್ಳುವುದು ಸಂಧಿವಾತ ಸಮಸ್ಯೆ ನಿವಾರಣೆಗೆ ಪರಿಹಾರ ನೀಡುತ್ತದೆ.

ಸಾಕಷ್ಟು ನಿದ್ದೆ

ಚಳಿಗಾಲದಲ್ಲಿ ಸಾಕಷ್ಟು ನಿದ್ದೆ ಮಾಡುವುದು ಕೂಡ ಅತಿ ಅಗತ್ಯ. ಪ್ರತಿದಿನ 8ಗಂಟೆಗಳ ಕಾಲ ಯಾವುದೇ ಅಡಚಣೆ ಇಲ್ಲದೇ ನಿದ್ದೆ ಮಾಡಬೇಕು. ಇದು ಉರಿಯೂತ ನಿವಾರಣೆಗೆ ಸಹಾಯ ಮಾಡುತ್ತದೆ. ಉರಿಯೂತವು ಸಂಧಿವಾತದ ಸಮಸ್ಯೆ ಹೆಚ್ಚಲು ಕಾರಣವಾಗುತ್ತದೆ.

ವೈದ್ಯರೊಂದಿಗೆ ಸಮಾಲೋಚನೆ

ನೀವು ಉರಿಯೂತದ ಔಷಧಿಗಳ ಮೇಲೆ ಅವಲಂಬಿತವಾಗಿದ್ದರೆ ನಿಮ್ಮ ವೈದ್ಯರೊಂದಿಗೆ ಅಗತ್ಯವಿರುವ ಯಾವುದೇ ಡೋಸೇಜ್ ಹೊಂದಾಣಿಕೆಗಳ ಬಗ್ಗೆ ಚರ್ಚಿಸಿ. ಪರಿಣಾಮಕಾರಿಯಾದ ಔಷಧಿ ನಿರ್ವಹಣೆಯು ರೋಗಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಚಳಿಗಾಲದ ತಿಂಗಳುಗಳ ಉದ್ದಕ್ಕೂ ಅನಗತ್ಯ ನೋವನ್ನು ತಡೆಯುತ್ತದೆ.

ವಿಟಮಿನ್ ಡಿ ಮಟ್ಟವನ್ನು ಪರಿಶೀಲಿಸಿ

ವಿಟಮಿನ್ ಡಿ ಕೊರತೆಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾದ ಕಾರಣ, ಚಳಿಗಾಲದಲ್ಲಿ ದೇಹಕ್ಕೆ ವಿಟಮಿನ್ ಪೂರೈಸುವ ಆಹಾರಗಳ ಸೇವನೆಗೆ ಒತ್ತು ನೀಡಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

 

Whats_app_banner