ಚಳಿಗಾಲದಲ್ಲಿ ಹೃದಯಾಘಾತ, ಹೃದ್ರೋಗಗಳು ಹೆಚ್ಚಲು ಪ್ರಮುಖ ಕಾರಣವಿದು; ನಡುಗುವ ಚಳಿಯಲ್ಲಿ ಹೃದಯದ ಕಾಳಜಿ ಮರಿಬೇಡಿ
ಚಳಿಗಾಲದಲ್ಲಿ ಹೃದಯಾಘಾತ, ಪಾರ್ಶ್ವವಾಯು ಸೇರಿದಂತೆ ಹೃದ್ರೋಗದ ಸಮಸ್ಯೆಗಳು ಹೆಚ್ಚಾಗುತ್ತವೆ. ಹೃದಯಕ್ಕೆ ರಕ್ತ ಪಂಪ್ ಆಗುವುದು ಕಡಿಮೆಯಾದರೆ ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಚಳಿಗಾಲದಲ್ಲಿ ಹೃದಯಾಘಾತ ಹೆಚ್ಚಲು ಕಾರಣವೇನು, ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬ ವಿವರ ಇಲ್ಲಿದೆ.

ಚಳಿಗಾಲ ಎಂದರೆ ದೇಹ, ಮನಸ್ಸು ಎರಡೂ ಮಂಕಾಗುತ್ತದೆ. ಈ ಸಮಯದಲ್ಲಿ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಜ್ವರ, ಕೆಮ್ಮು, ನೆಗಡಿಯ ಜೊತೆಗೆ ಗಂಭೀರ ಆರೋಗ್ಯ ಸಮಸ್ಯೆಗಳೂ ಕಾಣಿಸಬಹುದು. ಶೀತ ವಾತಾವರಣವು ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದ ಹೃದಯಾಘಾತದ ಪ್ರಮಾಣವೂ ಹೆಚ್ಚು. ತಾಪಮಾನ ಕಡಿಮೆಯಾದಾಗ ರಕ್ತನಾಳಗಳು ಸಂಕುಚಿತಗೊಳ್ಳುವುದರಿಂದ, ಇದು ಪಾರ್ಶ್ವವಾಯು ಮತ್ತು ಹೃದಯಾಘಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಪರಿಧಮನಿಯ ಸಂಕೋಚನದಿಂದಾಗಿ ಎದೆ ನೋವು ಉಲ್ಬಣಗೊಳ್ಳುತ್ತದೆ.
ಚಳಿಗಾಲದಲ್ಲಿ ಹೃದಯಘಾತ ಹೆಚ್ಚಲು ಕಾರಣವೇನು?
‘ರಕ್ತದೊತ್ತಡದ ಹೆಚ್ಚಳದ ಪರಿಣಾಮವಾಗಿ ಚಳಿಗಾಲದಲ್ಲಿ ಅದೇ ಪ್ರಮಾಣದ ರಕ್ತವನ್ನು ಪಂಪ್ ಮಾಡಲು ಹೃದಯವು ಹೆಚ್ಚು ಶ್ರಮಿಸಬೇಕಾಗುತ್ತದೆ. ನಮ್ಮ ರಕ್ತ ಅಪಧಮನಿಗಳು ಕಿರಿದಾಗಿರುವುದರಿಂದ ನಮ್ಮ ದೇಹದ ಉಷ್ಣತೆಯನ್ನು ಸ್ಥಿರವಾಗಿಡಲು ಹೃದಯಕ್ಕೆ ಹತ್ತಿರವಾಗಿರುವ ಆಂತರಿಕ ಅಂಗಗಳಿಗೆ ಇದು ರಕ್ತದ ಹರಿವನ್ನು ಹೆಚ್ಚಿಸುತ್ತದೆ‘ ಎಂದು ಕೊಚ್ಚಿ ಅಮೃತಾ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದ ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಮತ್ತು ಕ್ಲಿನಿಕಲ್ ಅಸೋಸಿಯೇಟ್ ಪ್ರೊಫೆಸರ್ ಡಾ ಹಿಶಾಮ್ ಅಹಮದ್ ಹೇಳುತ್ತಾರೆ. ಅವರು ಹೇಳುವಂತೆ ಹೊರಗಿನ ವಾತಾವರಣವು ರಕ್ತದೊತ್ತಡಕ್ಕೆ ವಿರುದ್ಧವಾದ ಸಂಬಂಧವನ್ನು ಹೊಂದಿದೆ.
ಹೃದಯದ ಸುತ್ತಲಿನ ಅಂಗಗಳಿಗೆ ರಕ್ತದ ಹರಿವು ಹೆಚ್ಚಾಗುವ ಪರಿಣಾಮವಾಗಿ ಹೃದಯದಿಂದ ಮುಂದೆ ಇರುವ ಚರ್ಮ ಮತ್ತು ಕೈಕಾಲುಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ.
‘ಸಂಕುಚಿತಗೊಂಡ ರಕ್ತನಾಳಗಳು ಸರಿಯಾಗಿ ಕಾರ್ಯನಿರ್ವಹಿಸಲು ಹೃದಯವು ರಕ್ತವನ್ನು ಪಂಪ್ ಮಾಡಲು ಹೆಚ್ಚು ಶ್ರಮಿಸಬೇಕಾಗುತ್ತದೆ ಮತ್ತು ಇಂತಹ ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯೂ ಇದೆ. ಇದಲ್ಲದೆ, ತಂಪಾದ ತಾಪಮಾನದಲ್ಲಿ ರಕ್ತದ ಪ್ಲೇಟ್‌ಲೆಟ್‌ಗಳು ಒಂದಕ್ಕೊಂದು ಹೆಚ್ಚಾಗಿ ಅಂಟಿಕೊಳ್ಳುತ್ತವೆ. ‘ಶೀತ ವಾತಾವರಣವು ದೇಹದೊಳಗೆ ಮಾರಣಾಂತಿಕ ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ, ಪ್ಲೇಟ್‌ಲೆಟ್‌ಗಳು ಸಾಮಾನ್ಯವಾಗಿ ಒಟ್ಟಿಗೆ ಸೇರಿಕೊಂಡು ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತವೆ, ಅದು ರಕ್ತಸ್ರಾವವನ್ನು ನಿಲ್ಲಿಸಲು ಸಹಾಯ ಮಾಡುತ್ತದೆ" ಎಂದು ಡಾ. ಅಹಮದ್ ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಡಾಕ್ಟರ್ ಅಹಮದ್.
ಅಧ್ಯಯನಗಳ ಪ್ರಕಾರ, ಚಳಿಗಾಲದಲ್ಲಿ ಬೆಳಗಿನ ಸಮಯದಲ್ಲಿ ಹೃದಯಾಘಾತ ಮತ್ತು ಹೃದ್ರೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ‘ಇತ್ತೀಚಿನ ಅಧ್ಯಯನಗಳು ಹೃದಯಾಘಾತವು ಸಾಮಾನ್ಯವಾಗಿ ಬೆಳಿಗ್ಗೆ ರಕ್ತದೊತ್ತಡದ ಹೆಚ್ಚಳದಿಂದ ಉಂಟಾಗುತ್ತದೆ ಎಂದು ಕಂಡುಕೊಂಡಿದೆ. ಇದರೊಂದಿಗೆ ಕೆಲವು ಹಾರ್ಮೋನ್‌ಗಳು ಅಸಮತೋಲನವು ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು ಎಂದು ಅಹಮದ್ ಹೇಳುತ್ತಾರೆ.
ಚಳಿಗಾಲದಲ್ಲಿ ಸಿಂಪಥೆಟಿಕ್ ಹಾರ್ಮೋನ್ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ದೇಹದ ನಿಯಂತ್ರಕ ವ್ಯವಸ್ಥೆ ಮತ್ತು ಸಿಂಪಥೆಟಿಕ್ ನರ್ವ್ ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ನಿಯಂತ್ರಣದಲ್ಲಿರಿಸುತ್ತದೆ. ಚಳಿಗಾಲದಲ್ಲಿ ರಕ್ತದೊತ್ತಡದ ಏರಿಕೆಯಿಂದಾಗಿ ಪ್ಲೇಕ್‌ಗಳು ಛಿದ್ರವಾಗುವುದರಿಂದ ಚಳಿಗಾಲದ ಬೆಳಿಗ್ಗೆ ಹೃದಯಾಘಾತಗಳು ಸಂಭವಿಸಬಹುದು ಎಂದು ಡಾ.ಅಹಮದ್ ಹೇಳುತ್ತಾರೆ.
ಚಳಿಗಾಲದಲ್ಲಿ ಜಡಜೀವನಶೈಲಿ ಮತ್ತು ತೂಕ ಹೆಚ್ಚಾಗುವುದರಿಂದ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು, ಹೃದಯದ ಸಮಸ್ಯೆಗಳು ಈ ಕಾರಣದಿಂದಲೇ ಹೆಚ್ಚಾಗುತ್ತವೆ. ಚಳಿಗಾಲದಲ್ಲಿ ಕರಿದ ಪದಾರ್ಥಗಳು ಸೇರಿದಂತೆ ಆಹಾರದ ಕಡುಬಯಕೆ ಹೆಚ್ಚುತ್ತದೆ. ಇದು ತೂಕ ಹೆಚ್ಚಾಗುವುದು ಮತ್ತು ಕೊಲೆಸ್ಟ್ರಾಲ್‌ಗೆ ಕಾರಣವಾಗುತ್ತದೆ. ಹೃದಯದ ಮೇಲೆ ಪರಿಣಾಮ ಬೀರುವ ಮತ್ತೊಂದು ಅಂಶವೆಂದರೆ ವಿಟಮಿನ್ ಡಿಗೆ ಕೊರತೆ, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳದೇ ಇರುವುದು ಇದಕ್ಕೆ ಕಾರಣವಾಗಬಹುದು. ಹಲವಾರು ಅಧ್ಯಯನಗಳು ಕಡಿಮೆ ವಿಟಮಿನ್ ಡಿ ಮಟ್ಟ ಮತ್ತು ಹೃದಯರಕ್ತನಾಳದ ಆರೋಗ್ಯದ ನಡುವಿನ ಸಂಪರ್ಕವನ್ನು ತೋರಿಸಿವೆ. ವಿಟಮಿನ್ ಕೊರತೆಯು ಹೃದಯದ ಸಮಸ್ಯೆಗಳಿಗೆ ನೇರವಾಗಿ ಸಂಬಂಧಿಸಿದೆ.
ಚಳಿಗಾಲದಲ್ಲಿ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಹೃದ್ರೋಗದ ಸಮಸ್ಯೆ ಇರುವವರು ಚಳಿಗಾಲದಲ್ಲಿ ತಮ್ಮ ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುವುದು ಅವಶ್ಯ ಎಂದು ವೈದ್ಯರು ಹೇಳುತ್ತಾರೆ. ಹಣ್ಣು ಮತ್ತು ತರಕಾರಿಗಳ ಸೇವನೆಯನ್ನು ಹೆಚ್ಚಿಸಬೇಕು, ಕನಿಷ್ಠ 30-40 ನಿಮಿಷಗಳ ಕಾಲ ದೈಹಿಕ ಚಟುವಟಿಕೆ ಮಾಡಬೇಕು.
ಪ್ರತಿದಿನ ಬ್ರಿಸ್ಕ್ ವಾಕ್ ಮಾಡುವುದು, ಸೈಕ್ಲಿಂಗ್, ಈಜು ಮತ್ತು ಜಾಗಿಂಗ್‌ನಂತಹ ಇತರ ಚಟುವಟಿಕೆಗಳು ಕೂಡ ಹೃದಯದ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತವೆ. ಇವುಗಳನ್ನು ಐಸೊಟೋನಿಕ್ ವ್ಯಾಯಾಮಗಳು ಎಂದು ಕರೆಯಲಾಗುತ್ತದೆ. ಇದು ಹೃದಯದ ಆರೋಗ್ಯಕ್ಕೆ ಮುಖ್ಯವಾಗಿದೆ. ಆದರೆ ತೂಕ ಎತ್ತುವಂತಹ ಐಸೋಮೆಟ್ರಿಕ್ ವ್ಯಾಯಾಮಗಳು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವೈದ್ಯರು ಸೂಚನೆ ನೀಡುತ್ತಾರೆ. ಇದರೊಂದಿಗೆ ಚಳಿಗಾಲದಲ್ಲಿ ತಪ್ಪದೇ ಮದ್ಯಪಾನ, ಧೂಮಪಾನ ಸೇವನೆ ಕಡಿಮೆ ಮಾಡಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
