ಶ್ವಾಸಕೋಶದ ತೊಂದರೆಗಳಿಗೆ ಈ ಮೂರು ಯೋಗಾಸನಗಳು ಉತ್ತಮ; ನಿಯಮಿತವಾಗಿ ಮಾಡಿದರೆ ಅಸ್ತಮಾದಿಂದ ಸಿಗಬಹುದು ಮುಕ್ತಿ
ಚಳಿಗಾಲದ ಶೀತ ವಾತಾವರಣದಲ್ಲಿ ಅಸ್ತಮಾ ರೋಗಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅಸ್ತಮಾ ಪೀಡಿತರು ಈ ಮೂರು ಯೋಗಾಸನಗಳನ್ನು ಮಾಡುವುದರಿಂದ ಪರಿಹಾರ ಕಂಡುಕೊಳ್ಳಬಹುದು. ಈ ಮೂಲಕ ಶ್ವಾಸಕೋಶದ ತೊಂದರೆಗಳನ್ನು ಕಡಿಮೆ ಮಾಡಬಹುದು. ಅಂತಹ ಮೂರು ಯೋಗಾಸನಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಇತ್ತೀಚೆಗೆ ಉಸಿರಾಟದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಚಳಿಗಾಲದ ಶೀತ ವಾತಾವರಣದಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಹೆಚ್ಚು ಚಳಿಯು ಅಸ್ತಮಾ ರೋಗಿಗಳ ಮೇಲೂ ಪರಿಣಾಮ ಬೀರುತ್ತದೆ. ಮಾಲಿನ್ಯ, ಮಾನಸಿಕ ಒತ್ತಡ ಮತ್ತು ಫೋಬಿಯಾಗಳು ಅಸ್ತಮಾಗೆ ಮುಖ್ಯ ಕಾರಣಗಳಾಗಿವೆ. ಕೆಲವರಿಗೆ ವಂಶಪಾರಂಪರ್ಯವಾಗಿಯೂ ಬರುತ್ತದೆ. ಅಸ್ತಮಾ ಶ್ವಾಸಕೋಶಕ್ಕೆ ಸಮಸ್ಯೆಯಾಗಿ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಭಾರವಾದ ವ್ಯಾಯಾಮಗಳನ್ನು ಮಾಡುವುದರಿಂದ ಆಸ್ತಮಾ ಉಲ್ಬಣಗೊಳ್ಳಬಹುದು ಎಂದು ಕೆಲವರು ಭಾವಿಸುತ್ತಾರೆ. ಅದು ನಿಜವೇನೋ ಹೌದು. ಆದರೆ, ಸಂಪೂರ್ಣವಾಗಿ ವ್ಯಾಯಾಮಕ್ಕೆ ವಿದಾಯ ಹೇಳಬಾರದು. ಅಸ್ತಮಾ ಪೀಡಿತರು ಕೆಲವು ರೀತಿಯ ಯೋಗಾಸನಗಳನ್ನು ಮಾಡಬಹುದು. ಇವು ಅಸ್ತಮಾಕ್ಕೆ ಪರಿಹಾರ ನೀಡುತ್ತವೆ. ಈ ಆಸನಗಳು ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅಸ್ತಮಾ ಇರುವವರು ಯೋಗಾಸನಗಳನ್ನು ಮಾಡುವುದು ಉಪಯುಕ್ತವಾಗಿದೆ. ಶ್ವಾಸಕೋಶಕ್ಕೆ ಆಮ್ಲಜನಕದ ಉತ್ತಮ ಹರಿವು ಮತ್ತು ತ್ಯಾಜ್ಯ ಅನಿಲಗಳನ್ನು ಸುಲಭವಾಗಿ ತೆಗೆಯಲು ಅವು ಕೊಡುಗೆ ನೀಡುತ್ತವೆ. ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತದೆ. ಅಸ್ತಮಾ ಇರುವವರು ಮಾಡಬೇಕಾದ ಮೂರು ಯೋಗಾಸನಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯಿರಿ.
ಅಸ್ತಮಾ ನಿವಾರಣೆಗಾಗಿ ಈ ಯೋಗಾಸನಗಳು ಉತ್ತಮ
ಉಸ್ತ್ರಾಸನ: ಮೊದಲು ನಿಮ್ಮ ಮೊಣಕಾಲುಗಳ ಮೇಲೆ ಕುಳಿತುಕೊಳ್ಳಿ. ಉಸಿರು ತೆಗೆದುಕೊಳ್ಳುತ್ತಾ ನಿಮ್ಮ ಕೈಗಳನ್ನು ಮೇಲಕ್ಕೆತ್ತಿ. ನಂತರ ಸೊಂಟವನ್ನು ಹಿಂದಕ್ಕೆ ಬಗ್ಗಿಸಿ. ಅಂಗೈಗಳಿಂದ ಅಡಿಭಾಗವನ್ನು ಹಿಡಿದುಕೊಳ್ಳಿ. ಆ ಭಂಗಿಯನ್ನು ತಲುಪಿದ ನಂತರ ಉಸಿರಾಡಿ. ಕೆಲವು ಸೆಕೆಂಡುಗಳ ಕಾಲ ಆ ಭಂಗಿಯಲ್ಲಿ ಇರಿ. ಈ ಉಸ್ತ್ರಾಸನವನ್ನು ಒಂಟೆ ಆಸನ ಎಂದೂ ಕರೆಯುತ್ತಾರೆ.
ಸೇತು ಬಂಧಾಸನ: ಸೇತು ಎಂದರೆ ಸೇತುವೆ ಎಂಬರ್ಥ ಬರುತ್ತದೆ. ದೇಹವನ್ನು ಸೇತುವೆಯಂಕೆ ಬಾಗಿಸುವುದಕ್ಕೆ ಈ ಹೆಸರು ಬಂದಿದೆ. ಸೇತುಬಂಧನಾಸನ ಮಾಡಲು ಮೊದಲು ಒಂದೇ ಜಾಗದಲ್ಲಿ ಮಲಗಬೇಕು. ಕೈಗಳನ್ನು ನೆಲಕ್ಕೆ ಸ್ಪರ್ಶಿಸಬೇಕು. ನಂತರ, ಆಳವಾದ ಉಸಿರನ್ನು ತೆಗೆದುಕೊಂಡು ಮೊಣಕಾಲುಗಳನ್ನು ಬಾಗಿಸಿ. ಎದೆ ಮತ್ತು ಸೊಂಟವನ್ನು ಮೇಲಕ್ಕೆತ್ತಿ. ಈ ಭಂಗಿಯನ್ನು 10 ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ. ಈ ಭಂಗಿಯಲ್ಲಿ ದೇಹವು ಸೇತುವೆ ಅಥವಾ ಕಮಾನಿನಂತೆ ಕಾಣುತ್ತದೆ. ಅದಕ್ಕಾಗಿಯೇ ಇದನ್ನು ಬ್ರಿಡ್ಜ್ ಪೋಸ್ ಅಥವಾ ಸೇತು ಬಂಧಾಸನ ಎಂದು ಕರೆಯಲಾಗುತ್ತದೆ.
ಭುಜಂಗಾಸನ: ಈ ಆಸನವನ್ನು ಮಾಡುವ ಮೊದಲು, ವ್ಯಕ್ತಿಯು ಒಂದೇ ಸ್ಥಳದಲ್ಲಿ ನೆಲದ ಮೇಲೆ ನೇರವಾಗಿ ಮಲಗಬೇಕು. ನಂತರ ಮೊಣಕೈಗಳನ್ನು ಬಗ್ಗಿಸಿ ಮತ್ತು ಅಂಗೈಗಳನ್ನು ಎದೆಗೆ ತನ್ನಿ. ಬಳಿಕ, ಉಸಿರನ್ನು ತೆಗೆದುಕೊಂಡು ಅಂಗೈಗಳ ಮೇಲೆ ಭಾರವನ್ನು ಹಾಕಿ, ಭುಜದ ಸಹಾಯದಿಂದ ತಲೆಯನ್ನು ನಿಧಾನವಾಗಿ ಮೇಲಕ್ಕೆತ್ತಬೇಕು. ಈ ಸ್ಥಿತಿಯಲ್ಲಿ ಎದೆಯ ಭಾಗವು ಸಂಪೂರ್ಣವಾಗಿ ಮೇಲಕ್ಕೆ ಇರಬೇಕು. ಒಂದೆರಡು ಬಾರಿ ಉಸಿರಾಡಿದ ನಂತರ ನಿಧಾನವಾಗಿ ಮೊದಲಿನ ಸ್ಥಿತಿಗೆ ಬನ್ನಿ. ಇದನ್ನು ನಾಗರ ಭಂಗಿ ಎನ್ನುತ್ತಾರೆ. ಭುಜಂಗ ಎಂದರೆ ಹೆಡೆ ಎತ್ತಿದ ಸರ್ಪ ಎಂದರ್ಥ ಬರುತ್ತದೆ. ನಾಗರಹಾವು ತಲೆಯನ್ನು ಎತ್ತುವಂತೆ ಈ ಭಂಗಿಯನ್ನು ಮಾಡುವುದರಿಂದ ಭುಜಂಗಾಸನ ಎಂದು ಕರೆಯುತ್ತಾರೆ.
ಮೇಲೆ ತಿಳಿಸಿರುವ ಈ ಮೂರು ಆಸನಗಳನ್ನು ಮಾಡುವುದರಿಂದ ಎದೆ, ಭುಜ ಮತ್ತು ಹೊಟ್ಟೆಯ ಸ್ನಾಯುಗಳು ಹಿಗ್ಗುತ್ತವೆ. ಇದು ಮೂತ್ರಪಿಂಡಗಳ ದಕ್ಷತೆ ಮತ್ತು ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಅದಕ್ಕಾಗಿಯೇ ಅಸ್ತಮಾ ಇರುವವರು ಈ ಯೋಗಾಸನಗಳನ್ನು ನಿಯಮಿತವಾಗಿ ಮಾಡಬಹುದು. ಈ ಆಸನಗಳು ಹೃದಯದ ಆರೋಗ್ಯಕ್ಕೂ ಉತ್ತಮ. ಇದು ಬೆನ್ನು ನೋವು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.