ಚಳಿ ಇದೆ ಎಂದು ವಾಕಿಂಗ್-ಜಾಗಿಂಗ್ ನಿಲ್ಲಿಸಿದರೆ ಅಪಾಯಕ್ಕೆ ಆಹ್ವಾನ; ನಿಮ್ಮ ಚಳಿಗಾಲದ ದಿನಚರಿ ಹೀಗಿರಲಿ
ಚಳಿಗಾಲದಲ್ಲಿ ಬೆಳಗ್ಗೆ ಎದ್ದು ಜಾಗಿಂಗ್ ಮಾಡಲು ಹಲವರು ಹಿಂದೇಟು ಹಾಕುತ್ತಾರೆ. ನಿತ್ಯದ ಸರಳ ವ್ಯಾಯಾಮಗಳನ್ನು ನಿಲ್ಲಿಸಿದರೆ, ದೇಹಕ್ಕೆ ಆಲಸ್ಯ ಹೆಚ್ಚುತ್ತದೆ. ಅಲ್ಲದೆ ಕೆಲವೊಂದು ಆರೋಗ್ಯ ಸಮಸ್ಯೆಯೂ ಕಾಡಲು ಶುರು ಮಾಡುತ್ತದೆ. ಹೀಗಾಗಿ ಈ ಸಲಹೆಗಳನ್ನು ಪಾಲಿಸಿ ನಿತ್ಯ ಜಾಗಿಂಗ್ ಮಾಡಿದರೆ ಒಳ್ಳೆಯದು.
ನಿತ್ಯ ವಾಕಿಂಗ್ ಮಾಡಿದರೆ ಅದುವೇ ಆರೋಗ್ಯಕರ ವ್ಯಾಯಾಮ ಎಂದು ಹೇಳಲಾಗುತ್ತದೆ. ದೇಹದ ಆರೋಗ್ಯಕ್ಕೆ ಕಠಿಣ ವರ್ಕೌಟ್ ಮಾಡಿ ನಿತ್ಯ ಬೆವರಿಳಿಸಬೇಕೆಂದು ಇಲ್ಲ. ಸರಳವಾಗಿ ವಾಕಿಂಗ್, ಜಾಗಿಂಗ್ ಮಾಡಿದರೆ ಸಾಕು. ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸಲು, ಸ್ನಾಯುಗಳನ್ನು ಬಲಪಡಿಸಲು ಮತ್ತು ತೂಕ ನಿರ್ವಹಣೆಗಾಗಿ ಇದು ಸರಳ ವ್ಯಾಯಾಮ. ನಿಯಮಿತವಾದ ನಡಿಗೆಯು ದೇಹಕ್ಕೆ ಮಾತ್ರವಲ್ಲದೆ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು. ಅಲ್ಲದೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಮನಸ್ಥಿತಿಯನ್ನು ಸುಧಾರಿಸುತ್ತದೆ.
ಚಳಿಗಾಲ ಬಂದಾಗಿದೆ. ಚಳಿಗೆ ಬೆಳಗ್ಗೆ ಎದ್ದು ನಡೆಯುವುದು ಎಂದರೆ ಕೆಲವರಿಗೆ ಆಲಸ್ಯ ಹೆಚ್ಚಾಗುತ್ತದೆ. ಹೀಗಾಗಿ ವಾಕಿಂಗ್‌ಗೆ ಬ್ರೇಕ್ ಹಾಕಿ ನಿದ್ದೆಯನ್ನು ಮುಂದುವರೆಸುವವರ ಸಂಖ್ಯೆ ಹೆಚ್ಚು. ಆದರೆ, ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಚಳಿಗಾಲದಲ್ಲಿ ನಡೆಯಬಹುದು. ಇದು ಆರೋಗ್ಯಕ್ಕೂ ಒಳ್ಳೆಯದು. ಶೀತ ಹವಾಮಾನದಲ್ಲಿ ಕ್ಯಾಲರಿ ಬರ್ನ್ ಮಾಡಲು, ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಮರ್ಥವಾಗಿ ಉತ್ತೇಜಿಸಲು ನಡಿಗೆ ಅವಶ್ಯಕ. ಹೀಗಾಗಿ ಚಳಿಗಾಲದಲ್ಲಿ ವಾಕಿಂಗ್ ಮಾಡದಿದ್ದರೆ, ಕೆಲವೊಂದು ಆರೋಗ್ಯ ಸಮಸ್ಯೆಗಳು ಎದುರಾಗಬಹುದು.
ಹೃದಯಾಘಾತದ ಅಪಾಯ ಹೆಚ್ಚಬಹುದು
ಶೀತ ವಾತಾವರಣವು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಅತಿಯಾದ ಚಳಿಯು ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚು. ಒತ್ತಡ, ಜ್ವರ ಮತ್ತು ಕಡಿಮೆ ಕ್ರಿಯಾಶೀಲತೆಯಿಂದ ಈ ಅಪಾಯ ಹೆಚ್ಚಾಗುತ್ತದೆ.
ವಿಟಮಿನ್ ಡಿ ಕಡಿಮೆಯಾಗುವುದು
ಚಳಿಗೆ ಮನೆಯಿಂದ ಹೊರಬರಲು ಹೆಚ್ಚಿವರು ಹಿಂದೆ ಮುಂದೆ ನೋಡುತ್ತಾರೆ. ಹೀಗಾಗಿ ದೇಹ ವಿಟಮಿನ್ ಡಿಗೆ ಒಡ್ಡಿಕೊಳ್ಳುವುದು ಕಡಿಮೆಯಾಗುತ್ತದೆ. ಬೆಳಗ್ಗಿನ ಸೂರ್ಯನ ಕಿರಣಗಳು ದೇಹಕ್ಕೆ ತಾಕುವುದು ಒಳ್ಳೆಯದು. ಇದು ತಪ್ಪಿದರೆ, ದೇಹಕ್ಕೆ ಬೇಕಾದ ಅಗತ್ಯ ವಿಟಮಿನ್ ಸಿಗುವುದಿಲ್ಲ. ಇದು ದೇಹಕ್ಕೆ ದಣಿದ ಅಥವಾ ಆಯಾಸದ ಅನುಭವ ಹೆಚ್ಚಿಸುತ್ತದೆ.
ಹೈಪೋಥರ್ಮಿಯಾ
ವಯಸ್ಸಾದವರಲ್ಲಿ ಹೈಪೋಥರ್ಮಿಯಾ ಸಾಧ್ಯತೆ ಹೆಚ್ಚು. ಅಂದರೆ ದೇಹದ ಉಷ್ಣತೆಯು 95 ° Fಗಿಂತ ಕಡಿಮೆಯಾಗುವುದಾಗಿದೆ. ದೇಹವು ನಡುಗುವುದು, ಕೈಕಾಲುಗಳಲ್ಲಿ ಬಿಗಿತ, ನಿದ್ರಾಹೀನತೆ, ಅಸ್ಪಷ್ಟ ಮಾತು ಮತ್ತು ಹೃದಯದ ಬಡಿತದಲ್ಲಿ ಏರಿಳಿತವಾಗುವುದು ಇದರ ಸಾಮಾನ್ಯ ಲಕ್ಷಣಗಳು.
ಹೀಗಾಗಿ ವಾರದಲ್ಲಿ ಕನಿಷ್ಠ 2ರಿಂದ 3 ಗಂಟೆಯ ವಾಕಿಂಗ್ ದೇಹಕ್ಕೆ ಅಗತ್ಯವಿದೆ. ದೈಹಿಕ ಚಟುವಟಿಕೆಯಿಂದ ದೇಹ ಸಕ್ರಿಯವಾಗಿರುತ್ತದೆ. ಇದು ಹೃದ್ರೋಗ, ಪಾರ್ಶ್ವವಾಯು, ಮಧುಮೇಹ, ಬೊಜ್ಜು ಮತ್ತು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಚಳಿಗಾಲವೆಂದರೆ ಹೆಚ್ಚಿನವರು ಇದು ವಿಶ್ರಾಂತಿ ಸಮಯವೆಂದು ಭಾವಿಸುತ್ತಾರೆ. ಮನೆಯವರು ಹಾಗೂ ಸ್ನೇಹಿತರೊಂದಿಗೆ ಮನೆಯೊಳಗೆ ಸಮಯ ಕಳೆಯಲು ಮುಂದಾಗುತ್ತಾರೆ. ಆದರೆ, ಇದರಿಂದ ಆರೋಗ್ಯ ಸಮಸ್ಯೆ ಕೂಡಾ ಹೆಚ್ಚಾಗಬಹುದು. ನಿರಂತರ ವ್ಯಾಯಾಮದ ಅಭ್ಯಾಸ ಆಗಿರುವ ದೇಹಕ್ಕೆ ವಿಶ್ರಾಂತಿ ಹೊಂದಿಕೆ ಆಗುವುದಿಲ್ಲ. ಎಲ್ಲಾ ಕಾಲದಲ್ಲೂ ಲಘು ವ್ಯಾಯಾಮ ದೇಹಕ್ಕೆ ಬೇಕು.
ಹೀಗಾಗಿ ಚಳಿಗಾಲದಲ್ಲಿ ನೀವು ನಡೆಯಲು ನಿರ್ಧರಿಸಿದರೆ ಕೆಲವೊಂದು ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು. ನಡೆಯುವಾಗ ಸೂಕ್ತ ಬಟ್ಟೆ ಧರಿಸಿ. ದೇಹ ಬೆಚ್ಚಗಾಗಲು ಬೆಚ್ಚಗಿನ ಬಟ್ಟೆ ಧರಿಸಿ. ನಿಧಾನವಾಗಿ ವಾಕಿಂಗ್ ಆರಂಭಿಸಿ. ದೇಹವು ಶೀತ ವಾತಾವರಣಕ್ಕೆ ಹೊಂದಿಕೊಂಡಂತೆ ನಡಿಗೆ ವೇಗ ಪಡೆಯಲಿ. ಹೃದ್ರೋಗದ ಅಪಾಯವಿದ್ದರೆ, ವ್ಯಾಯಾಮಕ್ಕಿಳಿಯುವ ಮೊದಲು ವೈದ್ಯರ ಸಲಹೆ ಪಡೆಯಿರಿ. ಅದರಂತೆ ದಿನಚರಿ ರೂಢಿಸಿಕೊಳ್ಳಿ.