ಚಳಿಗಾಲದಲ್ಲಿ ಉಗುರುಗಳ ಸುತ್ತಲಿನ ಚರ್ಮವು ಸಿಪ್ಪೆ ಸುಲಿಯುತ್ತಿದೆಯೇ: ಇದನ್ನು ಪರಿಹರಿಸಲು ಇಲ್ಲಿದೆ ಸಿಂಪಲ್ ಟಿಪ್ಸ್
ಚಳಿಗಾಲದಲ್ಲಿ ಚರ್ಮದ ಸಮಸ್ಯೆಗಳು ಹೆಚ್ಚಾಗುತ್ತವೆ. ಉಷ್ಣಾಂಶ ಕಡಿಮೆಯಾದಾಗ ಈ ರೀತಿ ಉಂಟಾಗುತ್ತದೆ. ಈ ವೇಳೆ ಕೆಲವು ಜನರಿಗೆ ಬೆರಳಿನ ಉಗುರುಗಳ ಸುತ್ತಲಿನ ಚರ್ಮವು ಸಿಪ್ಪೆ ಸುಲಿಯುತ್ತದೆ. ಇದು ಕಿರಿಕಿರಿ ಉಂಟು ಮಾಡುವುದು ಮಾತ್ರವಲ್ಲದೆ ನೋವಿಗೂ ಕಾರಣವಾಗುತ್ತದೆ. ಇದನ್ನು ಪರಿಹರಿಸಲು ಸಿಂಪಲ್ ಟಿಪ್ಸ್ ಇಲ್ಲಿದೆ.
ಚಳಿಗಾಲದಲ್ಲಿ ಹಲವು ಮಂದಿಯ ಉಗುರುಗಳ ಸುತ್ತಲಿನ ಚರ್ಮದ ಸಿಪ್ಪೆ ಸುಲಿಯುತ್ತದೆ. ಉಗುರುಗಳ ಸುತ್ತಲಿನ ಚರ್ಮವನ್ನು ಹೊರಪೊರೆ ಎಂದು ಕರೆಯಲಾಗುತ್ತದೆ. ಉಗುರುಗಳ ಸುತ್ತ ಬರುವ ಈ ಚರ್ಮವು ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ನೋಡಲು ಚೆನ್ನಾಗಿಯೂ ಕಾಣುವುದಿಲ್ಲ ಹಾಗೆಯೇ ಚರ್ಮವನ್ನು ಬಲವಂತವಾಗಿ ಎಳೆದು ತೆಗೆದರೆ ರಕ್ತಸ್ರಾವ ಸಂಭವಿಸಬಹುದು. ಇದರಿಂದ ಹಲವಾರು ದಿನಗಳವರೆಗೆ ನೋವಿನಿಂದ ಕೂಡಿರುತ್ತದೆ. ಊಟ ಮಾಡುವಾಗ, ಪಾತ್ರೆ ತೊಳೆಯುವಾಗ ಸೇರಿದಂತೆ ಇತ್ಯಾದಿ ಕೆಲಸಗಳನ್ನು ಮಾಡುವಾಗ ನೋವುಂಟಾಗಬಹುದು. ಕೆಲವರಿಗೆ ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚು. ಹವಾಮಾನ ತಣ್ಣಗಾದಂತೆ ಇದರ ತೀವ್ರತೆ ಹೆಚ್ಚುತ್ತದೆ. ಬೆರಳಿನ ಉಗುರಿನ ಸುತ್ತಲಿನ ಚರ್ಮವು ಸಿಪ್ಪೆ ಸುಲಿಯಲು ಕಾರಣವೇನು ಹಾಗೂ ಇದಕ್ಕೆ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಇಲ್ಲಿದೆ ಟಿಪ್ಸ್.
ಉಗುರಿನ ಸುತ್ತಲಿನ ಚರ್ಮ ಸಿಪ್ಪೆ ಸುಲಿಯಲು ಕಾರಣಗಳು
ಚಳಿಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಕಡಿಮೆ ಇರುತ್ತದೆ. ಇದರಿಂದ ಚರ್ಮ ಒಣಗುತ್ತದೆ. ಅಂತಹ ಸಮಯದಲ್ಲಿ, ಕೆಲವರಿಗೆ ಬೆರಳಿನ ಉಗುರುಗಳಲ್ಲಿ ಈ ರೀತಿ ಚರ್ಮ ಕಿತ್ತು ಬರುವಂತಹ ಸಮಸ್ಯೆ ಕಂಡು ಬರುತ್ತದೆ. ಅತಿಯಾಗಿ ಕೈ ತೊಳೆಯುವ ಕಾರಣದಿಂದಾಗಿ ಈ ರೀತಿ ಸಂಭವಿಸಬಹುದು. ಕೆಲವರಲ್ಲಿ ರಾಸಾಯನಿಕಗಳಿರುವ ವಸ್ತುಗಳ ಬಳಕೆ ಮತ್ತು ಸೋಂಕುಗಳಿಂದಲೂ ಈ ಸಮಸ್ಯೆ ಉಂಟಾಗುತ್ತದೆ.
ಉಗುರುಗಳ ಸುತ್ತಲಿನ ಚರ್ಮ ಸಿಪ್ಪೆ ಸುಲಿದರೆ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು
ತೆಂಗಿನೆಣ್ಣೆ: ಶುದ್ಧ ತೆಂಗಿನ ಎಣ್ಣೆಯನ್ನು ಚರ್ಮವು ಸಿಪ್ಪೆ ಸುಲಿಯುವ ಜಾಗಕ್ಕೆ ಹಚ್ಚಬೇಕು. ಉಗುರುಗಳ ಸುತ್ತಾ ಸಿಪ್ಪಿ ಸುಲಿದಿದ್ದರೆ ಹಾಗೂ ನೋವು ಕಾಣಿಸಿಕೊಂಡರೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ನಿಧಾನವಾಗಿ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ಚರ್ಮವು ತೇವವಾಗಿರುತ್ತದೆ. ಇದು ಚರ್ಮವನ್ನು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೆಯೇ ಪ್ಲಕ್ಕರ್ ಸಹಾಯದಿಂದ ಸತ್ತ ಚರ್ಮವನ್ನು (dead skin) ತೆಗೆದುಹಾಕಲು ಸಾಧ್ಯವಾಗುತ್ತದೆ.
ಮಾಯಿಶ್ಚರೈಸರ್ ಬಳಸಿ: ಚಳಿಗಾಲದಲ್ಲಿ ಚರ್ಮ ಒಣಗುವುದನ್ನು ತಡೆಯಲು ಮಾಯಿಶ್ಚರೈಸರ್ ಬಳಸಬೇಕು. ಉಷ್ಣಾಂಶ ತುಂಬಾ ಕಡಿಮೆಯಿರುವಾಗ ನಿಯಮಿತವಾಗಿ ಮಾಯಿಶ್ಚರೈಸರ್ ಬಳಸುವುದರಿಂದ ಚರ್ಮವನ್ನು ತೇವಾಂಶಯುಕ್ತವಾಗಿರಿಸಬಹುದು. ಚರ್ಮ ಒಣಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ.
ಪೆಟ್ರೋಲಿಯಂ ಜೆಲ್ಲಿ ಹಾಗೂ ಅಲೋವೆರಾ ಬಳಕೆ: ಪೆಟ್ರೋಲಿಯಂ ಜೆಲ್ಲಿಯನ್ನು ಸಹ ಹಚ್ಚಬಹುದು. ಪ್ರತಿದಿನ ರಾತ್ರಿ ಮಲಗುವ ಮುನ್ನ ಉಗುರುಗಳ ಸುತ್ತಲೂ ಪೆಟ್ರೋಲಿಯಂ ಜೆಲ್ಲಿಯಿಂದ ನಿಧಾನವಾಗಿ ಮಸಾಜ್ ಮಾಡಬೇಕು. ಈ ರೀತಿ ಮಾಡುವುದರಿಂದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಅಷ್ಟೇ ಅಲ್ಲ, ಅಲೋವೆರಾವನ್ನು ಕೂಡ ಹಚ್ಚಬಹುದು. ಸುಮಾರು 10 ನಿಮಿಷಗಳ ಕಾಲ ಇದನ್ನು ಹಚ್ಚುತ್ತಾ ಮಸಾಜ್ ಮಾಡಬಹುದು.
ಸಾಕಷ್ಟು ನೀರು ಸೇವನೆ ಅಗತ್ಯ: ಸಾಕಷ್ಟು ನೀರು ಕುಡಿಯದಿರುವುದು ಕೂಡ ಚಳಿಗಾಲದಲ್ಲಿ ಚರ್ಮದ ಸಮಸ್ಯೆಗಳಿಗೆ ಕಾರಣವಾಗಿದೆ. ವಾತಾವರಣ ತಂಪಾಗಿರುವುದರಿಂದ ಕೆಲವರು ನೀರು ಕುಡಿಯುವುದಿಲ್ಲ. ಇದರಿಂದ ಈ ರೀತಿಯ ಚರ್ಮದ ಸಮಸ್ಯೆ ತಲೆದೋರುತ್ತದೆ. ಇದಕ್ಕೆ ಪ್ರತಿಯೊಬ್ಬರು ಸಾಕಷ್ಟು ನೀರು ಕುಡಿಯಬೇಕು ಹಾಗೂ ದೇಹದಲ್ಲಿ ತೇವಾಂಶ ಕಾಪಾಡಿಕೊಳ್ಳುವುದು ಅಗತ್ಯವಿದೆ.
ಬಿಸಿ ನೀರಿನಲ್ಲಿ ಸ್ನಾನ ಮಾಡದಿರಿ: ಚಳಿಗಾಲದಲ್ಲಿ ಹಲವರು ಬಿಸಿ ಬಿಸಿ ನೀರಿನ ಸ್ನಾನ ಮಾಡುತ್ತಾರೆ. ಚಳಿಯಾಗುತ್ತದೆ ಅನ್ನೋ ಕಾರಣಕ್ಕಾಗಿ ಹೆಚ್ಚು ಬಿಸಿ ನೀರನ್ನೇ ಬಳಸುತ್ತಾರೆ. ಕೈತೊಳೆಯಲು ಸಹ ಬಿಸಿ ನೀರನ್ನೇ ಬಳಕೆ ಮಾಡುತ್ತಾರೆ ಅನೇಕರು. ಆದರೆ, ತುಂಬಾ ಬಿಸಿಯಾದ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮವು ತೇವಾಂಶ ಕಳೆದುಕೊಳ್ಳುತ್ತದೆ. ಇದರಿಂದ ಉಗುರುಗಳ ಸುತ್ತಲಿನ ಚರ್ಮವು ಒಣಗುತ್ತದೆ. ಇದಕ್ಕಾಗಿ ಆದಷ್ಟು ಉಗುರು ಬೆಚ್ಚಗಿನ ನೀರನ್ನು ಬಳಸುವುದು ಉತ್ತಮ. ಸ್ನಾನ ಮಾಡಿದ ನಂತರ ತೇವಾಂಶವನ್ನು ಕಾಪಾಡಿಕೊಳ್ಳಲು ಬಾಡಿಲೋಷನ್ ಬಳಸಬಹುದು.
ಪೋಷಣೆ: ಹಣ್ಣುಗಳು ಮತ್ತು ತರಕಾರಿಗಳನ್ನು ಪ್ರತಿದಿನ ಸೇವಿಸಬೇಕು. ಇವು ದೇಹಕ್ಕೆ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತವೆ. ಚರ್ಮದ ಸಮಸ್ಯೆಗಳನ್ನು ಉಂಟುಮಾಡುವ ಯಾವುದೇ ವಿಟಮಿನ್ ಕೊರತೆಯನ್ನು ಇದು ನಿಭಾಯಿಸುತ್ತದೆ. ಅದಕ್ಕಾಗಿಯೇ ಪೌಷ್ಟಿಕ ಹಣ್ಣುಗಳು, ಸೊಪ್ಪು-ತರಕಾರಿಗಳನ್ನು ಸೇವಿಸಬೇಕು.
ಇದನ್ನು ಅತಿಯಾಗಿ ಬಳಸಬೇಡಿ: ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ಮತ್ತು ಸೌಂದರ್ಯವರ್ಧಕಗಳನ್ನು ಅತಿಯಾಗಿ ಬಳಸಬಾರದು. ಕಠಿಣ ರಾಸಾಯನಿಕಗಳನ್ನು ಸಹ ಬಳಸಬಾರದು. ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಕೈಗವಸುಗಳನ್ನು ಧರಿಸುವುದು ಉತ್ತಮ.