ಕೆಮ್ಮು, ಶೀತ, ಗಂಟಲುನೋವಿಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು: ಚಳಿಗಾಲದಲ್ಲಿ ಮನೆಯಲ್ಲೇ ರೋಗಲಕ್ಷಣಗಳನ್ನು ಹೀಗೆ ನಿರ್ವಹಿಸಿ
ಹವಾಮಾನ ಬದಲಾವಣೆಯು ಸಾಮಾನ್ಯವಾಗಿ ಕೆಮ್ಮು,ಶೀತ ಮತ್ತು ಗಂಟಲು ನೋವಿನ ಸಮಸ್ಯೆಯನ್ನು ತಂದೊಡ್ಡುತ್ತದೆ. ಇದೀಗ ಚಳಿಗಾಲ ಆರಂಭವಾಗಿದ್ದು, ಈ ಶೀತದ ತಿಂಗಳಿನಲ್ಲಿ ಈಗಾಗಲೇ ಹಲವಾರು ಮಂದಿ ಈ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಮನೆಯಲ್ಲೇ ರೋಗಲಕ್ಷಣಗಳನ್ನು ನಿರ್ವಹಿಸಬಹುದು, ಇದಕ್ಕಾಗಿ ಇಲ್ಲಿದೆ ಮನೆಮದ್ದು.
ಈಗಾಗಲೇ ಚಳಿಗಾಲ ಆರಂಭವಾಗಿದ್ದು, ಹಲವಾರು ಮಂದಿ ಋತುಮಾನದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಎಲ್ಲಿ ನೋಡಿದರೂ ಶೀತ, ಕೆಮ್ಮು, ಗಂಟಲು ನೋವಿನಿಂದ ಜನರು ಬಳಲುತ್ತಿರುವುದು ಕಂಡುಬರುತ್ತಿದೆ. ಹವಾಮಾನ ಬದಾಲಾದಾಗ ಈ ರೀತಿಯಾಗುವುದು ಸಹಜ. ತಾಪಮಾನದಲ್ಲಿನ ಬದಲಾವಣೆಯು ದೇಹದ ಮೇಲೆ ಪರಿಣಾಮ ಬೀರುತ್ತದೆ. ವೈರಸ್, ಬ್ಯಾಕ್ಟೀರಿಯಾಗಳಿಗೆ ಹೆಚ್ಚಿನ ಒಡ್ಡಿಕೊಳ್ಳುವಿಕೆಯು ಗಂಟಲು ನೋವು, ಒಣ ಕೆಮ್ಮು, ಜ್ವರ, ಕಫ, ಶೀತಗಳಿಗೆ ಕಾರಣವಾಗಬಹುದು. ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯವಾಗಿದ್ದರೂ ಕೆಮ್ಮು, ಗಂಟಲುನೋವಿಗೆ ಮನೆಮದ್ದಿನಿಂದ ಪರಿಹಾರ ಪಡೆಯಬಹುದು. ನೀವು ಕೂಡ ಶೀತ, ಕೆಮ್ಮು, ಗಂಟಲುನೋವಿನಿಂದ ಬಳಲುತ್ತಿದ್ದರೆ, ಈ ಮನೆಮದ್ದುಗಳನ್ನು ಪ್ರಯತ್ನಿಸಬಹುದು.
ಶೀತ, ಕೆಮ್ಮು ಮತ್ತು ಗಂಟಲುನೋವಿಗೆ ಇಲ್ಲಿದೆ 6 ಮನೆಮದ್ದುಗಳು
ಜೇನು ಮತ್ತು ನಿಂಬೆ: ಕೆಮ್ಮು ಮತ್ತು ಗಂಟಲು ನೋವಿಗೆ ಇದು ಅತ್ಯುತ್ತಮ ಪರಿಹಾರವಾಗಿದೆ. ಜೇನುತುಪ್ಪ ಮತ್ತು ನಿಂಬೆಯು ಸಿನರ್ಜಿಸ್ಟಿಕ್ ಆಗಿ ಕೆಲಸ ಮಾಡುತ್ತದೆ. ಜೇನುತುಪ್ಪವು ಕಿರಿಕಿರಿಯುಂಟುಮಾಡುವ ಗಂಟಲಿನ ಅಂಗಾಂಶಗಳನ್ನು ಶಮನಗೊಳಿಸುತ್ತದೆ. ಹಾಗೆಯೇ ನಿಂಬೆಯು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಅಗತ್ಯವಾದ ವಿಟಮಿನ್ ಸಿ ಅನ್ನು ದೇಹಕ್ಕೆ ಒದಗಿಸುತ್ತದೆ. ಜೇನುತುಪ್ಪವು ಗಂಟಲಿಗೆ ವಿಶ್ರಾಂತಿ ನೀಡುತ್ತದೆ.
ಶುಂಠಿ ಚಹಾ: ಶುಂಠಿಯು ಅದರ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ಕೆಮ್ಮು ಮತ್ತು ಶೀತಕ್ಕೆ ಉತ್ತಮ ಪರಿಹಾರವಾಗಿದೆ. ಇದು ಕೆಮ್ಮನ್ನು ನಿವಾರಿಸಲು ಮತ್ತು ಗಂಟಲನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.
ಹರ್ಬಲ್ ಕಷಾಯ: ಔಷಧೀಯ ಎಲೆಗಳು, ಬೇರು ಹಾಗೂ ಸಾಂಬಾರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುವ ಕಷಾಯವನ್ನು ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತಿದೆ. ಇದು ಶೀತ, ಕೆಮ್ಮು, ಗಂಟಲು ಸಮಸ್ಯೆ ಮುಂತಾದ ದೈನಂದಿನ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸಲು ಪರಿಣಾಮಕಾರಿಯಾಗಿದೆ.
ಅರಿಶಿನ ಹಾಲು: ಅರಶಿನವು ಆಯುರ್ವೇದದಲ್ಲಿ ವಿಶೇಷ ಸ್ಥಾನ ಪಡೆದಿದೆ. ಅರಿಶಿನವು ಶಕ್ತಿಯುತವಾದ ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಏಜೆಂಟ್ ಆಗಿದ್ದು, ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹೀಗಾಗಿ ಅರಶಿನ ಹಾಲನ್ನು ಸೇವಿಸುವುದರಿಂದ ಕೆಮ್ಮು, ಶೀತಕ್ಕೆ ಪರಿಹಾರ ಸಿಗುತ್ತದೆ. ಅರಶಿನದಲ್ಲಿ ಕರ್ಕ್ಯುಮಿನ್ ಇದ್ದು, ಅದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಹಾಗೆಯೇ ಉತ್ತಮ ಚೇತರಿಕೆಗೆ ಸಹಾಯ ಮಾಡುತ್ತದೆ.
ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದು: ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ನೋಯುತ್ತಿರುವ ಗಂಟಲನ್ನು ನಿವಾರಿಸಲು ಮತ್ತು ಕೆಮ್ಮನ್ನು ಕಡಿಮೆ ಮಾಡಲು ಪರಿಣಾಮಕಾರಿ ಮಾರ್ಗವಾಗಿದೆ. ಉಪ್ಪು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ. ಇದಕ್ಕಾಗಿ ಬಿಸಿ ನೀರಿಗೆ ಉಪ್ಪು ಹಾಕಿ ಮಿಶ್ರಣ ಮಾಡಿ 30 ಸೆಕೆಂಡುಗಳ ಕಾಲ ಗಂಟಲಿನಲ್ಲಿ ಗಾರ್ಗ್ಲ್ ಮಾಡಿ, ನಂತ ಉಗಳಬೇಕು.
ಸ್ಟೀಮ್ ಇನ್ಹಲೇಷನ್: ಸ್ಟೀಮ್ ಇನ್ಹಲೇಷನ್ ಮಾಡುವುದರಿಂದ ಕಟ್ಟಿರುವ ಮೂಗು ಹಾಗೂ ಕಿರಿಕಿರಿಯುಂಟುಮಾಡುವ ಗಂಟಲುನೋವು ಶಮನಗೊಳಿಸಲು ಸಹಾಯ ಮಾಡುತ್ತದೆ. ಇದು ಲೋಳೆಯ ಪೊರೆಗಳನ್ನು ಹೈಡ್ರೇಟ್ ಮಾಡುತ್ತದೆ ಮತ್ತು ತಕ್ಷಣದ ಪರಿಹಾರವನ್ನು ನೀಡುತ್ತದೆ.
ಒಟ್ಟಿನಲ್ಲಿ ಚಳಿಗಾಲದ ಸಮಯದಲ್ಲಿ ಉಂಟಾಗುವ ಶೀತ, ಕೆಮ್ಮು, ಗಂಟಲುನೋವಿಗೆ ಹಲವಾರು ಮನೆಮದ್ದುಗಳಿವೆ. ಮನೆಯಲ್ಲೇ ತಯಾರಿಸಿದ ಈ ಮನೆಮದ್ದುಗಳು ಅದ್ಭುತವಾಗಿ ಕೆಲಸ ಮಾಡಬಹುದು. ಆದರೆ, ಈ ಮನೆಮದ್ದಿನಿಂದ ಚೇತರಿಕೆ ಕಾಣದಿದ್ದರೆ ಶೀಘ್ರ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.