ಚುಮುಚುಮು ಚಳಿಗೆ ಬೆಳಗ್ಗೆ ಹಾಸಿಗೆಯಿಂದ ಎದ್ದೇಳಲು ಆಗ್ತಿಲ್ವ? ಚಳಿಗಾಲದ ಸೋಮಾರಿತನ ಬಿಡಲು ಇಲ್ಲಿದೆ ಬೆಚ್ಚಗಿನ ಟಿಪ್ಸ್
ಚಳಿಗಾಲದಲ್ಲಿ ತಡವಾಗಿ ಎದ್ದೇಳುವವರು ನೀವಾಗಿರಬಹುದು. ಅದರ ಬದಲು ಬೇಗನೇ ಎದ್ದು, ಪ್ರಾಡಕ್ಟಿವಿಟಿ ಹೆಚ್ಚಿಸಿಕೊಳ್ಳಲು ಆದ್ಯತೆ ನೀಡಿ. ಚಳಿಗಾಲದಲ್ಲಿ ಹಾಸಿಗೆಯಿಂದ ಎದ್ದೇಳುವುದು ಕಷ್ಟ ಎನ್ನುವವರಿಗೆ ಇಲ್ಲಿ ಸಲಹೆ ನೀಡಲಾಗಿದೆ.
ಚಳಿಗಾಲವೆಂದರೆ ಹಾಗೇ. ಹಾಸಿಗೆಯಲ್ಲಿ ಬೆಚ್ಚಗೆ ಮಲಗಿರುವ ಆಸೆ. ಎದ್ದೇಳಬೇಕೆಂದರೂ ಬೆಡ್‌ಶೀಟ್ ಸರಿಸಲು ಮನಸ್ಸಾಗದು. ಆದರೆ, ಚಳಿಗಾಲದಲ್ಲಿ ತಡವಾಗಿ ಎದ್ದು ನಿಮ್ಮ ಅಮೂಲ್ಯವಾದ ದಿನ ಕಳೆದುಕೊಳ್ಳಬೇಡಿ. ಚಳಿಗಾಲದಲ್ಲಿ ಸೂರ್ಯ ಬೇಗ ಮುಳುಗ್ತಾನೆ, ಬೇಗ ಕತ್ತಲಾಗುತ್ತದೆ, ಹಗಲು ಕಡಿಮೆ ಇರುತ್ತದೆ. ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ. ಇಂತಹ ಸಮಯದಲ್ಲಿ ಅಯ್ಯೋ ಇವತ್ತು ಏನೂ ಕೆಲಸ ಮಾಡಲಾಗಿಲ್ಲ ಎಂದು ಆಮೇಲೆ ಚಿಂತೆ ಮಾಡಬೇಡಿ. ಈ ಚಳಿಗಾಲದಲ್ಲಿ ಚುಮುಚುಮು ಚಳಿಯಲ್ಲಿ ಬೇಗನೇ ಎದ್ದರೆ ನಿಮ್ಮ ಪ್ರಾಡಕ್ಟಿವಿಟಿ ಖಂಡಿತಾ ಹೆಚ್ಚಾಗುತ್ತದೆ.
ಹಗಲಿನ ಬೆಳಕು ಮತ್ತು ಪ್ರಾಡಕ್ಟಿವಿಟಿ ಕುರಿತು ಅನೇಕ ಅಧ್ಯಯನಗಳು ನಡೆದಿವೆ, ನಡೆಯುತ್ತಿವೆ. ಆಫೀಸ್ ಉದ್ಯೋಗಿಗಳ ಒಟ್ಟಾರೆ ಆರೋಗ್ಯಕ್ಕೆ ನೈಸರ್ಗಿಕ ಬೆಳಕು ಸಹಕಾರಿ ಎಂದು ಸಾಕಷ್ಟು ಅಧ್ಯಯನಗಳು ತಿಳಿಸಿವೆ. ಚಳಿಗಾಲದಲ್ಲಿ ಬೇಗ ಎದ್ದೇಳದೆ ಕಷ್ಟಪಡಬೇಡಿ, ಬೇಗ ಎದ್ದೇಳಲು ಮನಸ್ಸು ಮಾಡಿ. ಚಳಿಗಾಲದಲ್ಲಿ ಆಫೀಸ್‌ನಲ್ಲಿ ಅಥವಾ ನೀವು ಕೆಲಸ ಮಾಡುವ ಸ್ಥಳದಲ್ಲಿ ಹೆಚ್ಚು ಬೆಳಕು ಇರುವಂತೆ ನೋಡಿಕೊಳ್ಳಿ. ನೈಸರ್ಗಿಕ ಬೆಳಕು ಇಲ್ಲದೆ ಇದ್ದರೆ ಬ್ರೈಟ್ ಲೈಟ್ ಹಾಕಿ. ಆಗ ನಿಮಗೆ ಚಳಿಗಾಲದ ಮಂಕು ಕವಿಯದು.
ಚಳಿಗಾಲದಲ್ಲಿ ಹೆಚ್ಚು ಹೊತ್ತು ಹಾಸಿಗೆಯಲ್ಲಿ ಕಳೆದು, ಆಮೇಲೆ ಅಯ್ಯೋ ಕೆಲಸ ಮಾಡಲಾಗಿಲ್ಲ, ಕೆಲಸ ಎಲ್ಲಾ ಪೆಂಡಿಂಗ್ ಉಳಿದಿದೆ ಎಂದು ಕೊರಗದಿರಿ. ಚಳಿಗಾಲದಲ್ಲಿಯೂ ಹೇಗೆ ಬಿಝಿಯಾಗಿರುವುದು, ಹೆಚ್ಚು ಪ್ರಾಡಕ್ಟಿವ್ ಅಥವಾ ಉತ್ಪಾದಕತೆ ಹೊಂದುವುದು ಎಂದು ಚಿಂತಿಸುವವರಿಗೆ ಇಲ್ಲೊಂದಿಷ್ಟು ಸಲಹೆ ನೀಡಲಾಗಿದೆ.
ನಿಮ್ಮ ದಿನವನ್ನು ಬೇಗ ಆರಂಭಿಸಿ
ಬೆಳಗ್ಗೆ ಎಚ್ಚರವಾದ ತಕ್ಷಣ ಎದ್ದೇಳಿ. ನಿಮ್ಮ ಮನಸ್ಸು ಇನ್ನು ಸ್ವಲ್ಪ ಹೊತ್ತು ಮಲಗೋಣ ಎನ್ನುವ ಮೊದಲೇ ಎದ್ದೇಳಿ. ಬೆಳಗ್ಗೆ ಚಳಿಯಲ್ಲಿ ವಾಕಿಂಗ್ ಮಾಡಿ. ಚಳಿಗಾಲದಲ್ಲಿ ಇನ್ನಷ್ಟು ಹೊತ್ತು ಮಲಗೋಣ ಎಂದು ಟೆಂಪ್ಟ್ ಆಗುತ್ತದೆ. ಆದರೆ, ಬೆಳಗ್ಗೆ ಯೋಗ, ಜಿಮ್ ಇತ್ಯಾದಿಗಳಿಗೆ ನಿಮ್ಮ ಶೆಡ್ಯೂಲ್ ಅನ್ನು ಬಿಝಿ ಮಾಡಿಡಿ. ಎದ್ದೇಳುವುದು ಅನಿವಾರ್ಯವಾಗುತ್ತದೆ.
ದಿನಪೂರ್ತಿ ಇರುವಂತೆ ಶೆಡ್ಯೂಲ್ ರಚಿಸಿ
ಚಳಿಗಾಲವು ಇತರೆ ಸಮಯದಂತೆ ಇರುವುದಿಲ್ಲ. ಶೀತಶೀತ ಇರುತ್ತದೆ, ಎದ್ದೇಳುವುದು ಬೇಡ ಎನಿಸುತ್ತದೆ. ಆದರೆ, ಚಳಿಗಾಲದಲ್ಲಿಯೂ ನೀವು ಟೈಟ್ ಶೆಡ್ಯೂಲ್ ಹೊಂದಿದ್ದರೆ ಎದ್ದೇಳದೆ ವಿಧಿ ಇರುವುದಿಲ್. ಆ ದಿನ ಮಾಡಬೇಕಾದ ಪಟ್ಟಿ ತಯಾರಿಸಿ. ಈ ರೀತಿ ಮಾಡಲೇಬೇಕಾದ ಶೆಡ್ಯೂಲ್ ರಚಿಸಿದರೆ ನೀವು ಎದ್ದೇಳದೆ ವಿಧಿ ಇರುವುದಿಲ್ಲ. ಈ ರೀತಿಯ ಶೆಡ್ಯೂಲ್ ನಿಮಗೆ ಎದ್ದೇಳಲು ಸ್ಪೂರ್ತಿ ನೀಡುತ್ತದೆ. ನೀವು ಸರಿಯಾಗಿ ಕೆಲಸ ಮಾಡುವುದನ್ನು ಖಾತ್ರಿ ಪಡಿಸಿಕೊಳ್ಳಲು ಫೋನ್‌ಅಥವಾ ಇತರೆ ಸಾಧನಗಳಲ್ಲಿ ಟ್ರ್ಯಾಕರ್ ಅಥವಾ ನಿಗಾ ವಹಿಸುವ ಫೀಚರ್‌ಗಳನ್ನು ಬಳಸಿ. ಚಳಿಗಾಲದಲ್ಲಿ ಆಲಸ್ಯ ಕಡಿಮೆಯಾಗುತ್ತಿಲ್ಲ ಎಂದಾದರೆ ತುಸು ವಿಶ್ರಾಂತಿ ಪಡೆದು ಕೆಲಸ ಮುಂದುವರೆಸಿ.
ಬೆಡ್‌ರೂಂ ಲೈಟ್ ಗಮನಿಸಿ
ಮೂಡಿ ಲೈಟಿಂಗ್ ಬೇಡ, ಮಂದ ಬೆಳಕಿನ ಲೈಟ್ ಬೇಡ. ಬಾರ್‌ನಲ್ಲಿ ಮಂದ ಬೆಳಕು ಹಾಕಿರುತ್ತಾರೆ. ಕುಡುಕರು ಲೋಕದ ಪರಿವೆ ಇಲ್ಲದೆ ಅಲ್ಲೇ ಕುಳಿತಿರಲಿ ಎನ್ನುವುದು ಅದರ ಉದ್ದೇಶ. ಇದೇ ರೀತಿ ಬೆಡ್‌ರೂಂನಲ್ಲಿ ಬೆಳಗ್ಗೆ ಕತ್ತಲು ಕತ್ತಲು ಅಥವಾ ಮಂದ ಬೆಳಕು ಇದ್ದರೆ ಬೇಗ ಎದ್ದೇಳಲು ಮನಸಾಗದು. ವಿಂಟರ್‌ನ ಮಂದ ಲೈಟ್‌ಗಳ ಬದಲು ಬ್ರೈಟ್ ಲೈಟ್ ಹಾಕಿ.
ಅಲಾರಂ ಬಳಸಿ ಎದ್ದೇಳಿ
ಚಳಿಗಾಲದಲ್ಲಿ ಎಷ್ಟು ಕಷ್ಟಪಟ್ಟರೂ ಎದ್ದೇಳಲು ಸಾಧ್ಯವಾಗುತ್ತಿಲ್ಲ ಎನ್ನುವವರು ಬೇಗ ಅಲಾರಂ ಇಡಿ. ಆರು ಗಂಟೆಗೆ ಎದ್ದೇಳಬೇಕು ಎಂದಾದರೆ ಐದು ಗಂಟೆ, ಐದು ಕಾಲು ಗಂಟೆಗೆ, ಐದೂವರೆ ಗಂಟೆಗೆ, ಐದು ಮುಕ್ಕಾಳು ಗಂಟೆಗೆ ಎಂದು ಹಲವು ಅಲಾರಂ ಇಡಿ. ಅಲಾರಂ ಅನ್ನು ಕೈಗೆಟಕುವಂತೆ ಇಡುವ ಬದಲು ಎದ್ದು ತೆಗೆದುಕೊಳ್ಳುವಂತೆ ತುಸು ದೂರದಲ್ಲಿ ಇಡಿ. ಇದೇ ಸಮಯದಲ್ಲಿ ಅಲಾರಂ ವಾಲ್ಯೂಂ ಹೆಚ್ಚು ಇರುವಂತೆ ನೋಡಿಕೊಳ್ಳಿ.