ಚಳಿಗಾಲದಲ್ಲಿ ಕಾಡುವ ಒಣ ಚರ್ಮದ ಸಮಸ್ಯೆಗೆ ಹೆಚ್ಚು ನೀರು ಕುಡಿಯುವುದೇ ಪರಿಹಾರವೇ? ಇಲ್ಲಿದೆ ತಜ್ಞರ ಉತ್ತರ
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಕಾಡುವ ಒಣ ಚರ್ಮದ ಸಮಸ್ಯೆಗೆ ಹೆಚ್ಚು ನೀರು ಕುಡಿಯುವುದೇ ಪರಿಹಾರವೇ? ಇಲ್ಲಿದೆ ತಜ್ಞರ ಉತ್ತರ

ಚಳಿಗಾಲದಲ್ಲಿ ಕಾಡುವ ಒಣ ಚರ್ಮದ ಸಮಸ್ಯೆಗೆ ಹೆಚ್ಚು ನೀರು ಕುಡಿಯುವುದೇ ಪರಿಹಾರವೇ? ಇಲ್ಲಿದೆ ತಜ್ಞರ ಉತ್ತರ

ಚಳಿಗಾಲದಲ್ಲಿ ಬೇಡವೆಂದರೂ ಚರ್ಮದ ಸಮಸ್ಯೆಗಳು ಕಾಡಲು ಆರಂಭಿಸುತ್ತವೆ. ಚರ್ಮ ಒಣಗುವ ಕಾರಣ ಸಿಪ್ಪೆ ಏಳುವುದು, ಬಿರುಕು ಮೂಡುವುದು ಇಂತಹ ಲಕ್ಷಣಗಳು ಕಾಣಿಸುತ್ತವೆ. ಹಾಗಾದರೆ ಚಳಿಗಾಲದಲ್ಲಿ ಹೆಚ್ಚು ನೀರು ಕುಡಿಯವುದರಿಂದ ಒಣ ಚರ್ಮದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದೇ? ಇಲ್ಲಿದೆ ತಜ್ಞರ ಉತ್ತರ.

ಚಳಿಗಾಲದಲ್ಲಿ ಕಾಡುವ ಒಣ ಚರ್ಮದ ಸಮಸ್ಯೆಗೆ ಹೆಚ್ಚು ನೀರು ಕುಡಿಯುವುದೇ ಪರಿಹಾರವೇ
ಚಳಿಗಾಲದಲ್ಲಿ ಕಾಡುವ ಒಣ ಚರ್ಮದ ಸಮಸ್ಯೆಗೆ ಹೆಚ್ಚು ನೀರು ಕುಡಿಯುವುದೇ ಪರಿಹಾರವೇ (PC: Canva)

ಚಳಿಗಾಲದಲ್ಲಿ ತ್ವಚೆಯ ಅಂದ ಕಾಪಾಡಿಕೊಳ್ಳುವುದು ಸವಾಲೇ ಸರಿ. ಅದರಲ್ಲೂ ಒಣ ಚರ್ಮದ ಸಮಸ್ಯೆಯಿಂದ ಈ ಸಮಯದಲ್ಲಿ ಸಾಕಷ್ಟು ಕಿರಿಕಿರಿ ಉಂಟಾಗುತ್ತದೆ. ಇದರ ನಿವಾರಣೆಗೆ ಮಾಯಿಶ್ಚರೈಸರ್ ಕ್ರೀಮ್‌ ಹಚ್ಚಿದರೂ ಪರಿಹಾರ ಸಿಗುವುದಿಲ್ಲ. ಆದರೆ ಕೆಲವರು ಹೆಚ್ಚು ಹೆಚ್ಚು ನೀರು ಕುಡಿಯುವುದರಿಂದ ತ್ವಚೆಯ ಅಂದ ಹೆಚ್ಚಿಸಿಕೊಳ್ಳುವ ಜೊತೆಗೆ ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎನ್ನುತ್ತಾರೆ.

ಚಳಿಗಾಲದಲ್ಲಿ ಒಣ ಚರ್ಮ ಸಮಸ್ಯೆ ನಿವಾರಣೆಗೆ ನೀರು ಕುಡಿಯವುದು ನಿಜಕ್ಕೂ ಪರಿಹಾರವೇ, ಹೆಚ್ಚು ನೀರು ಕುಡಿಯುವುದರಿಂದ ಚಳಿಗಾಲದ ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತವೆಯೇ? ಈ ಪ್ರಶ್ನೆಗೆ ತಜ್ಞರ ಉತ್ತರ ಇಲ್ಲಿದೆ ನೋಡಿ.

ನೀರು ಕುಡಿಯುವುದು ನಮ್ಮ ಚರ್ಮದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬ ಮಾತಿದೆ. ಇದಕ್ಕೆ ಕಾರಣ ನೀರು ಕುಡಿಯುವುದು ನಮ್ಮ ದೇಹಕ್ಕೆ ಅತ್ಯಗತ್ಯವಾಗಿರುವುದು. ಸರಿಯಾದ ಜಲಸಂಚಯನವು ನಮ್ಮ ಆಂತರಿಕ ಅಂಗಗಳ ಕಾರ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಸ್ವಲ್ಪ ಮಟ್ಟಿಗೆ ನಮ್ಮ ಚರ್ಮದ ನೋಟವನ್ನು ಸುಧಾರಿಸುತ್ತದೆ. ಆದರೆ ಚಳಿಗಾಲದಲ್ಲಿ ಹೆಚ್ಚು ನೀರು ಕುಡಿಯುವುದರಿಂದ ಚರ್ಮದ ಸಮಸ್ಯೆ ಸುಧಾರಿಸಬಹುದು ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎನ್ನುತ್ತಾರೆ ಸ್ಕಿನ್‌ವುಡ್‌ನ ಸಂಸ್ಥಾಪಕ ಮತ್ತು ಮುಖ್ಯಸ್ಥ (ಐಎಫ್‌ಎಎಡಿ) ಡಾ. ಸಾಗರ್ ಗುಜ್ಜರ್. ಸಾಮಾನ್ಯಕ್ಕಿಂತ ಹೆಚ್ಚು ನೀರು ಕುಡಿಯುವುದರಿಂದ ಒಣಚರ್ಮದ ಸಮಸ್ಯೆಯನ್ನು ನಿವಾರಿಸಬಹುದು ಎಂದು ಸತ್ಯಕ್ಕೆ ದೂರವಾಗಿದೆ. ಆದರೆ ದೇಹವನ್ನು ಹೈಡ್ರೇಟ್ ಆಗಿ ಇರಿಸಿಕೊಳ್ಳುವುದರಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಹಾಗಂತ ಚಳಿಗಾಲದಲ್ಲಿ ಹೆಚ್ಚು ನೀರು ಕುಡಿಯುವುದರಿಂದ ಚರ್ಮದ ಆರೋಗ್ಯ ಹಾಗೂ ನೋಟ ಸುಧಾರಿಸುತ್ತದೆ ಎಂಬುದು ಖಂಡಿತ ನಿಜವಲ್ಲ ಎನ್ನುತ್ತಾರೆ ಡಾ. ಗುಜ್ಜರ್‌.

ಚಳಿಗಾಲದಲ್ಲಿ ಚರ್ಮ ಒಣಗಲು ಕಾರಣವೇನು?

ಚಳಿಗಾಲದಲ್ಲಿ ಕೇವಲ ನೀರು ಕುಡಿಯುವುದು ಕಡಿಮೆಯಾಗುವುದರಿಂದ ಮಾತ್ರ ತ್ವಚೆ ಒಣಗುವುದಲ್ಲ. ಚಳಿಗಾಲದಲ್ಲಿ ಒಣ ಚರ್ಮದ ಸಮಸ್ಯೆ ಕಾಡಲು ನೂರಾರು ಕಾರಣಗಳಿವೆ. ಹಾಗಂತ ಇದಕ್ಕೆ ಹೆಚ್ಚು ನೀರು ಕುಡಿಯುವುದರಿಂದ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ.

ಚಳಿಗಾಲದಲ್ಲಿ ಒಣ ಚರ್ಮದ ಸಮಸ್ಯೆ ಕಾಡಲು ಇದು ಕಾರಣ

ಆರ್ದ್ರತೆ ಕಡಿಮೆಯಾಗುವುದು: ತಂಪಾದ ಗಾಳಿಯು ಬೆಚ್ಚಗಿನ ಗಾಳಿಗಿಂತ ಕಡಿಮೆ ತೇವಾಂಶವನ್ನು ಹೊಂದಿರುತ್ತದೆ ಮತ್ತು ಒಳಾಂಗಣ ತಾಪನ ವ್ಯವಸ್ಥೆಗಳು ಆರ್ದ್ರತೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಈ ಶುಷ್ಕ ಗಾಳಿಯು ನಿಮ್ಮ ಚರ್ಮದಿಂದ ತೇವಾಂಶವನ್ನು ಹೀರಿಕೊಳ್ಳುತ್ತದೆ. ಅದು ಚರ್ಮ ಒಣಗಲು ಆರಂಭವಾಗುವಂತೆ ಮಾಡುತ್ತದೆ.

ಚರ್ಮ ತಡೆಗೋಡೆಗಳು ದುರ್ಬಲವಾಗುವುದು: ನಿಮ್ಮ ಚರ್ಮದ ಹೊರ ಪದರ, ಸ್ಟ್ರಾಟಮ್ ಕಾರ್ನಿಯಮ್, ರಕ್ಷಣಾತ್ಮಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ತೇವಾಂಶವನ್ನು ಲಾಕ್ ಮಾಡುವ ಕೋಶಗಳು ಮತ್ತು ನೈಸರ್ಗಿಕ ತೈಲಗಳಿಂದ ಮಾಡಲ್ಪಟ್ಟಿದೆ. ಚಳಿಗಾಲದ ಪರಿಸ್ಥಿತಿಗಳು, ಗಾಳಿ ಮತ್ತು ಬಿಸಿ ಶವರ್‌ಗಳಿಗೆ ಒಡ್ಡಿಕೊಳ್ಳುವುದರೊಂದಿಗೆ, ಅದರ ರಕ್ಷಣಾತ್ಮಕ ಘಟಕಗಳ ಈ ತಡೆಗೋಡೆಯನ್ನು ತೆಗೆದುಹಾಕಿ, ನಿಮ್ಮ ಚರ್ಮದಿಂದ ನೀರು ಹೊರಬರಲು ಅನುವು ಮಾಡಿಕೊಡುತ್ತದೆ.

ಆಗಾಗ್ಗೆ ತೊಳೆಯುವುದು: ಪದೇ ಪದೇ ಕೈ ತೊಳೆಯುವುದು ಮತ್ತು ಚಳಿಗಾಲದ ದಿನಗಳಲ್ಲಿ ಬಿಸಿ ನೀರಿನ ಸ್ನಾನವು ಚರ್ಮದ ನೈಸರ್ಗಿಕ ತೈಲವನ್ನು ತೊಡೆದು ಹಾಕುತ್ತದೆ. ಇದರಿಂದ ಶುಷ್ಕತೆಯು ಉಲ್ಬಣಗೊಳ್ಳುತ್ತದೆ.

ಚಳಿಗಾಲದಲ್ಲಿ ಚರ್ಮದ ಆರೈಕೆ ಹೀಗಿರಲಿ

ಕೇವಲ ನೀರು ಕುಡಿಯುವುದರಿಂದ ಒಣ ಚರ್ಮದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಇದಕ್ಕಾಗಿ ನೀವು ಕೆಲವು ಇತರ ಕ್ರಮಗಳನ್ನು ಅನುಸರಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಸ್ಕಿನ್ ಬ್ಯಾರಿಯರ್ ಅನ್ನು ಬಲಪಡಿಸಿ: ಚರ್ಮದ ತಡೆಗೋಡೆಯನ್ನು ಆರೋಗ್ಯಕರವಾಗಿರಿಸಿಕೊಳ್ಳುವುದು ಚಳಿಗಾಲದ ಶುಷ್ಕತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಈ ಸೀಸನ್‌ನಲ್ಲಿ ತಪ್ಪದೇ ಮಾಯಿಶ್ಚರೈಸರ್ ಬಳಸಬೇಕು.

ಹೈಲುರಾನಿಕ್ ಆಮ್ಲ ಮತ್ತು ಗ್ಲಿಸರಿನ್‌ನಂತಹ ಹ್ಯೂಮೆಕ್ಟಂಟ್‌ಗಳು ಚರ್ಮಕ್ಕೆ ನೀರನ್ನು ಸೆಳೆಯುತ್ತವೆ. ಸೆರಾಮಿಡ್‌ಗಳು ಮತ್ತು ಕೊಬ್ಬಿನಾಮ್ಲಗಳು ಚರ್ಮದ ರಕ್ಷಣಾತ್ಮಕ ಪದರವನ್ನು ಸರಿಪಡಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ. ಪೆಟ್ರೋಲಿಯಂ ಜೆಲ್ಲಿ, ಜೇನುಮೇಣ ಅಥವಾ ಡೈಮೆಥಿಕೋನ್‌ನಂತಹ ಆಕ್ಲೂಸಿವ್ ಪದಾರ್ಥಗಳು ನೀರಿನ ನಷ್ಟವನ್ನು ತಡೆಯಲು ತಡೆಗೋಡೆಯನ್ನು ಸೃಷ್ಟಿಸುತ್ತವೆ.

ಸಣ್ಣ ಮತ್ತು ಬೆಚ್ಚಗಿನ ಶವರ್ ತೆಗೆದುಕೊಳ್ಳಿ: ಚಳಿಗಾಲದಲ್ಲಿ ಬಿಸಿಯಾದ ತುಂತುರು ನೀರು ಉತ್ತಮ ಅನುಭವವನ್ನು ನೀಡುತ್ತದೆ. ಆದರೆ ಇದು ಚರ್ಮದಿಂದ ನೈಸರ್ಗಿಕ ತೈಲ ಹೊರ ಹೋಗುವಂತೆ ಮಾಡುತ್ತದೆ. ಚಳಿಗಾಲದಲ್ಲಿ ಸ್ನಾನಕ್ಕೆ ಉಗುರು ಬೆಚ್ಚಗಿನ ನೀರು ಬಳಸಿ. 10 ನಿಮಷದೊಳಗೆ ಸ್ನಾನ ಮುಗಿಸಿ, ನಂತರ ಮಾಯಿಶ್ಚರೈಸರ್ ಕ್ರೀಮ್ ಹಚ್ಚಿ.

ದೇಹವನ್ನು ಒಳಗಿನಿಂದ ಹೈಡ್ರೇಟ್ ಮಾಡಿ: ಹೆಚ್ಚುವರಿ ನೀರು ಒಣ ಚರ್ಮವನ್ನು ಗುಣಪಡಿಸುವುದಿಲ್ಲವಾದರೂ, ಸಮರ್ಪಕವಾಗಿ ಹೈಡ್ರೀಕರಿಸಿರುವುದು ನಿಮ್ಮ ಚರ್ಮದ ಒಟ್ಟಾರೆ ಆರೋಗ್ಯವನ್ನು ಬೆಂಬಲಿಸುತ್ತದೆ. ದಿನಕ್ಕೆ 8-10 ಗ್ಲಾಸ್ ನೀರನ್ನು ಗುರಿಯಾಗಿಸಿ ಮತ್ತು ಸೌತೆಕಾಯಿಗಳು, ಕಿತ್ತಳೆ ಮತ್ತು ಕಲ್ಲಂಗಡಿಗಳಂತಹ ಆರ್ಧ್ರಕ ಆಹಾರಗಳೊಂದಿಗೆ ಅದನ್ನು ಪೂರಕಗೊಳಿಸಿ.

ಚರ್ಮದ ಆರೋಗ್ಯದ ಕುರಿತ ಮಿಥ್ಯ

ಹೆಚ್ಚು ನೀರು ಕುಡಿಯುವುದರಿಂದ ಒಣ ತ್ವಚೆಗೆ ಚಿಕಿತ್ಸೆ ನೀಡಬಹುದು ಎಂಬ ಊಹೆ, ತಪ್ಪು ಕಲ್ಪನೆಯಾಗಿದೆ ಎಂದು ವೈದ್ಯರು ಹೇಳುತ್ತಾರೆ. ‘ಒಟ್ಟಾರೆ ಆರೋಗ್ಯಕ್ಕೆ ಹೈಡ್ರೇಟ್ ಆಗಿರುವುದು ಮುಖ್ಯವಾಗಿದ್ದರೂ, ಚಳಿಗಾಲದಲ್ಲಿ ನೀವು ಅನುಭವಿಸುವ ಶುಷ್ಕತೆ ಹೆಚ್ಚಾಗಿ ಕಡಿಮೆ ಆರ್ದ್ರತೆ, ಶೀತ ಗಾಳಿ ಮತ್ತು ರಾಜಿ ಚರ್ಮದ ತಡೆಗೋಡೆಯಂತಹ ಪರಿಸರ ಅಂಶಗಳಿಂದ ಉಂಟಾಗುತ್ತದೆ. ಲೀಟರ್‌ಗಟ್ಟಲೆ ನೀರನ್ನು ಕುಡಿಯುವುದು ಸಹ ಈ ಸಂದರ್ಭಗಳಲ್ಲಿ ಉಂಟಾಗುವ ಹಾನಿಯನ್ನು ಸರಿಪಡಿಸುವುದಿಲ್ಲ.‘ ಡಾ ಗುಜ್ಜರ್ ಅವರ ಮಾತುಗಳನ್ನು ಉಲ್ಲೇಖಿಸಿದೆ ಟೈಮ್ಸ್ ನೌ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner