Women Day 2024: ಮುದ್ದು ಮಗಳನ್ನು ಅಲಂಕರಿಸುವುದೇ ತಾಯಿಗೆ ಅಚ್ಚುಮೆಚ್ಚಿನ ಕೆಲಸ: ಹೆಣ್ಣು ಕಂದಮ್ಮನಾಗಿ ಆಸೆ ಪಡಲು ಇದೇ ಕಾರಣ
ಕನ್ನಡ ಸುದ್ದಿ  /  ಜೀವನಶೈಲಿ  /  Women Day 2024: ಮುದ್ದು ಮಗಳನ್ನು ಅಲಂಕರಿಸುವುದೇ ತಾಯಿಗೆ ಅಚ್ಚುಮೆಚ್ಚಿನ ಕೆಲಸ: ಹೆಣ್ಣು ಕಂದಮ್ಮನಾಗಿ ಆಸೆ ಪಡಲು ಇದೇ ಕಾರಣ

Women Day 2024: ಮುದ್ದು ಮಗಳನ್ನು ಅಲಂಕರಿಸುವುದೇ ತಾಯಿಗೆ ಅಚ್ಚುಮೆಚ್ಚಿನ ಕೆಲಸ: ಹೆಣ್ಣು ಕಂದಮ್ಮನಾಗಿ ಆಸೆ ಪಡಲು ಇದೇ ಕಾರಣ

International Womenʼs Day: ಹೆಣ್ಣು ಮನೆಯ ಕಣ್ಣು ಎಂದು ಹೇಳುತ್ತಾರೆ. ಆಧುನಿಕ ಸಮಾಜದಲ್ಲಿ ಬಹುತೇಕ ಪೋಷಕರು ಹೆಣ್ಣು ಮಗುವಿಗೆ ಹೆಚ್ಚು ಆಸೆ ಪಡುತ್ತಾರೆ. ಪೋಷಕರು ಈ ರೀತಿ ಹೆಣ್ಣು ಮಗುವಿಗಾಗಿ ಹಾತೊರೆಯುವ ಹಿಂದೆ ಕೆಲವು ಕಾರಣಗಳಿವೆ. ಅದರಲ್ಲೂ ಹೆಣ್ಣು ಮಕ್ಕಳನ್ನು ಚೆನ್ನಾಗಿ ಸಿಂಗರಿಸಬೇಕೆನ್ನುವುದು ಎಲ್ಲಾ ತಾಯಿಯ ಆಸೆಯಾಗಿರುತ್ತದೆ.

ಬಹುತೇಕ ಪೋಷಕರು ಹೆಣ್ಣು ಮಕ್ಕಳನ್ನು ಬಯಸುವ ಹಿಂದಿದೆ ಪ್ರಮುಖ ಕಾರಣ
ಬಹುತೇಕ ಪೋಷಕರು ಹೆಣ್ಣು ಮಕ್ಕಳನ್ನು ಬಯಸುವ ಹಿಂದಿದೆ ಪ್ರಮುಖ ಕಾರಣ (PC: Pixabay)

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಯಾವ ಮನೆಯಲ್ಲಿ ಹೆಣ್ಣು ಮಗು ಇರುತ್ತದೆಯೋ ಆ ಮನೆ ಪರಿಪೂರ್ಣವಾಗಿರುತ್ತದೆ ಎಂದು ಹೇಳುತ್ತಾರೆ. ಹೆಣ್ಣು ಮಕ್ಕಳು ಎಂದರೇನೆ ಒಂದು ಸಂಭ್ರಮ. ಹಿಂದೆಲ್ಲ ಒಂದು ಕಾಲವಿತ್ತು. ಭ್ರೂಣ ಹತ್ಯೆ, ಹೆಣ್ಣು ಮಗುವೆಂದರೆ ತಾತ್ಸಾರ ಮಾಡುವಂಥ ಅನೇಕ ಘಟನೆಗಳು ನಡೆಯುತ್ತಿದ್ದವು.

ಹೆಣ್ಣು ಎಂದರೆ ಒಂದು ರೀತಿಯಲ್ಲಿ ಶಾಪ. ಮನೆಗೆ ಭಾರ ಎಂಬ ಅಭಿಪ್ರಾಯಗಳಿದ್ದವು. ಆದರೀಗ ಕಾಲ ಬದಲಾಗಿದೆ. ಹೆಣ್ಣು ಮಗು ಬೆಳೆದು ದೊಡ್ಡವಳಾಗಿ ಉತ್ತಮ ವಿದ್ಯಾಭ್ಯಾಸ ಪಡೆದು ತನ್ನ ಕಾಲ ಮೇಲೆ ತಾನು ನಿಲ್ಲುವಷ್ಟು ಸಶಕ್ತಳಾಗಿದ್ದಾಳೆ.

ಕಾಲ ಬದಲಾಗಿದೆ

ಮೊದಲೆಲ್ಲಾ ಮನೆಗೆ ಗಂಡು ಬಂದರೆ ಮಾತ್ರ ಸಂಭ್ರಮಿಸುವಂತಹ ಪರಿಸ್ಥಿತಿಯಿತ್ತು. ಗಂಡು ಎಂದರೆ ವಂಶೋದ್ಧಾರಕ ಎಂಬೆಲ್ಲ ಭಾವನೆಗಳಿದ್ದವು. ಆದರೆ ಈಗ ಹಾಗಿಲ್ಲ. ಈಗಿನ ಬಹುತೇಕ ಪೋಷಕರು ತಮಗೆ ಹೆಣ್ಣು ಮಗು ಬೇಕು ಎಂದು ಆಸೆ ಪಡುವ ಮಟ್ಟಿಗೆ ಕಾಲ ಬದಲಾಗಿದೆ. ಸಮಾಜ ಹೆಣ್ಣು ಮಕ್ಕಳನ್ನು ನೋಡಿ ರೀತಿಯೇ ಮಾರ್ಪಾಡಾಗಿದೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮಗೆ ಹೆಣ್ಣು ಮಗು ಬೇಕೆಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಹರಕೆ ಹೊತ್ತಿದ್ದರಂತೆ. ತಮಗೆ ಎರಡನೇ ಮಗು ಹೆಣ್ಣಾಗುತ್ತಿದ್ದಂತೆಯೇ ಪುತ್ರಿ ಹಾಗೂ ಕುಟುಂಬಸ್ಥರ ಸಮೇತ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಆಗಮಿಸಿ ತಾಯಿಗೆ ಉಡಿ ತುಂಬಿಸಿ ಹೋಗಿದ್ದರು. ಅಷ್ಟರ ಮಟ್ಟಿಗೆ ಈಗಿನ ಪೋಷಕರು ಹೆಣ್ಣು ಮಗುವಿಗೆ ಆಸೆ ಪಡುತ್ತಾರೆ.

ಬಹುತೇಕ ಪೋಷಕರಿಗೆ ಹೆಣ್ಣು ಮಗು ಜನಿಸಬೇಕು ಎಂದು ಎನಿಸಲು ಕಾರಣವೆಂದರೆ ಅವರನ್ನು ಚೆನ್ನಾಗಿ ಸಿಂಗಾರಗೊಳಿಸಬಹುದು ಎಂಬ ಕಾರಣಕ್ಕೆ. ಹೆಣ್ಣು ಮಕ್ಕಳ ಉಡುಗೆ ಎಂದಾಕ್ಷಣ ನಿಮಗೆ ಸಾಕಷ್ಟು ಆಯ್ಕೆಗಳು ಸಿಗುತ್ತವೆ. ಚಂದ ಚಂದದ ಉಡುಗೆಗಳನ್ನು ಹಾಕಿ ಅದಕ್ಕೊಪ್ಪುವ ಆಭರಣಗಳನ್ನು ಧರಿಸಿ ಹೆಣ್ಣು ಮಗುವಿನ ಫೊಟೋ ಶೂಟ್ ಮಾಡುವುದೇ ಒಂದು ಸಂಭ್ರಮ. ಈಗಿನ ಸಮಾಜದಲ್ಲಿ ಬಹುತೇಕ ಪೋಷಕರು ಹೆಣ್ಣು ಮಗುವಿನ ಅಲಂಕಾರ ಮಾಡಬೇಕು ಎಂಬ ಆಸೆಯಿಂದಲೇ ತಮಗೆ ಹೆಣ್ಣು ಮಗುವೇ ಜನಿಸಲಿ ಎಂದು ಆಸೆ ಪಡುತ್ತಾರೆ.

ಹೆಣ್ಣು ಮಗುವನ್ನು ಸಿಂಗರಿಸುವ ಆಸೆ

ಅದರಲ್ಲೂ ತಂದೆಯಾದವನಿಗೆ ಹೆಣ್ಣು ಮಕ್ಕಳೆಂದರೆ ಅಚ್ಚು ಮೆಚ್ಚು. ಹೀಗಾಗಿ ಮೊದಲನೇ ಬಾರಿಗೆ ಪೋಷಕರಾಗಲು ಹೊರಟ ಬಹುತೇಕ ಪುರುಷರು ತಮಗೆ ಹೆಣ್ಣು ಮಗು ಬೇಕು ಎಂದೇ ಆಸೆ ಪಡುತ್ತಾರೆ. ಹೆಣ್ಣು ಮಕ್ಕಳು ಮನೆಯನ್ನು ಜೀವಂತವಾಗಿಸುತ್ತಾರೆ.

ಹೆಣ್ಣು ಮಕ್ಕಳು ಅಲಂಕಾರಗೊಳ್ಳುವುದನ್ನು ನೋಡುವುದೇ ಒಂದು ಕಣ್ಣಿಗೆ ಹಬ್ಬ. ಈಗಂತೂ ಮಾರುಕಟ್ಟೆಗಳಲ್ಲಿ ತಾಯಿಗೆ ಮಗುವಿಗೆ ಒಂದೇ ರೀತಿಯ ಟ್ವಿನ್ನಿಂಗ್ ಬಟ್ಟೆಗಳು ಕೂಡ ಸಿಗುತ್ತವೆ. ಇಂಥವುಗಳನ್ನೆಲ್ಲ ನೋಡಿದಾಗ ಬಹುತೇಕ ಮಹಿಳೆಯರು ಇದನ್ನೆಲ್ಲ ಅನುಭವಿಸಬೇಕು ಎಂದರೆ ತಮಗೊಂದು ಹೆಣ್ಣು ಮಗುವೇ ಬೇಕು ಎಂದು ಆಸೆ ಪಡುತ್ತಾರೆ.

ಕಾರಣ ಯಾವುದೇ ಇರಲಿ.. ಹೆಣ್ಣು ಮಗುವೆಂದರೆ ಮೂಗು ಮುರಿಯುತ್ತಿದ್ದ ಈ ಸಮಾಜ ಇಂದು ಹೆಣ್ಣು ಮಗುವಿಗಾಗಿ ಆಸೆ ಪಡುವವರೆಗೆ ಬದಲಾಗಿದೆ. ಗಂಡು ಮಗು ಜನಿಸಿದರೆ ಮಾತ್ರ ಸಂಭ್ರಮಿಸುತ್ತಿದ್ದ ಅದೆಷ್ಟೋ ಮನೆಗಳು ಈಗ ಹೆಣ್ಣು ಮಗುವಿನ ಆಗಮನಕ್ಕೆ ಹಾತೊರೆಯುತ್ತಿವೆ. ಸಮಾಜದಲ್ಲಾದ ಈ ಬದಲಾವಣೆಗಳನ್ನೆಲ್ಲ ನೋಡುತ್ತಿದ್ದರೆ ಮಹಿಳಾ ದಿನದ ಆಚರಣೆಗೂ ಒಂದು ವಿಶೇಷ ಅರ್ಥ ಸಿಕ್ಕಿದೆ ಎಂದು ಹೇಳಬಹುದಲ್ಲವೇ..?

Whats_app_banner