ಹಾಲು ಕುಡಿಯೋ ಮಗು ನಿಭಾಯಿಸೋದು ಹೇಗೆ? ಕೆಲಸಕ್ಕೆ ಹೋಗೋ ಮಹಿಳೆಯರನ್ನು ಕಾಡುವ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ-women health breastfeeding and going back to work women share the stigma and struggle challenges of breastfeeding mother ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹಾಲು ಕುಡಿಯೋ ಮಗು ನಿಭಾಯಿಸೋದು ಹೇಗೆ? ಕೆಲಸಕ್ಕೆ ಹೋಗೋ ಮಹಿಳೆಯರನ್ನು ಕಾಡುವ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ

ಹಾಲು ಕುಡಿಯೋ ಮಗು ನಿಭಾಯಿಸೋದು ಹೇಗೆ? ಕೆಲಸಕ್ಕೆ ಹೋಗೋ ಮಹಿಳೆಯರನ್ನು ಕಾಡುವ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ

ಕೆಲಸಕ್ಕೆ ಹೋಗುವ ತಾಯಂದಿರು ಮಗುವಿಗೆ ಹಾಲೂಡಿಸುವ ವಿಚಾರದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ಎದೆಹಾಲು ಕುಡಿಯುವ ‍ಪುಟ್ಟ ಕಂದಮ್ಮನನ್ನ ಬಿಟ್ಟು ಕೆಲಸಕ್ಕೆ ಹೋಗುವುದು ನಿಜಕ್ಕೂ ಸುಲಭದ ಮಾತಲ್ಲ. ಹಾಗಾದರೆ ಹಾಲು ಕುಡಿಯುವ ಮಗುವಿಗಾಗಿ ತಾಯಿಗೆ ಇರುವ ಆಯ್ಕೆಗಳೇನು, ಕೆಲಸದ ವಾತಾವರಣ ಹೇಗಿದ್ದರೆ ಅನುಕೂಲ ಎಂಬೆಲ್ಲಾ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕೆಲಸಕ್ಕೆ ಹೋಗೋ ಮಹಿಳೆಯರು ಹಾಲು ಕುಡಿಯೋ ಮಗು ನಿಭಾಯಿಸೋದು ಹೇಗೆ?
ಕೆಲಸಕ್ಕೆ ಹೋಗೋ ಮಹಿಳೆಯರು ಹಾಲು ಕುಡಿಯೋ ಮಗು ನಿಭಾಯಿಸೋದು ಹೇಗೆ? (PC: Canva)

ಮಗು ಜನಿಸಿದ ನಂತರ ಕೆಲಸಕ್ಕೆ ಹೋಗುವ ಮಹಿಳೆಯರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾರೆ. ಅದರಲ್ಲಿ ಪ್ರಮುಖವಾದದ್ದು ಮಗುವಿಗೆ ಹಾಲು ಕುಡಿಸುವುದು. 6 ತಿಂಗಳು ಅಥವಾ ಒಂದು ವರ್ಷ ಮಗುವಿನ ಜೊತೆ ಇದ್ದು, ಪುನಃ ಕೆಲಸಕ್ಕೆ ಹೋಗಬೇಕಾದ ಪರಿಸ್ಥಿತಿ ಬಂದಾಗ ಮಗುವಿಗೆ ಹಾಲೂಡಿಸುವುದು ನಿಜಕ್ಕೂ ಕಷ್ಟದ ಸಂಗತಿಯಾಗುತ್ತದೆ. ಮಗುವನ್ನು ಬಿಡುವ ಹಾಗಿಲ್ಲ, ಕೆಲಸವನ್ನೂ ಬಿಡುವ ಹಾಗಿಲ್ಲ ಎನ್ನುವ ಪರಿಸ್ಥಿತಿ ಎದುರಾದಾಗ ಮಹಿಳೆಯರು ಕಂಗಾಲಾಗುತ್ತಾರೆ.

ಅಂತಹ ಸಂದರ್ಭದಲ್ಲಿ ಮಗುವನ್ನು ಕೆಲಸವನ್ನು ಮ್ಯಾನೇಜ್ ಮಾಡುವುದು ಹೇಗೆ ಎಂಬ ಬಗ್ಗೆ ಮಗು ಇರುವ ಕೆಲಸಕ್ಕೆ ಹೋಗುವ ತಾಯಂದಿರೇ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಈ ಸಲಹೆಗಳನ್ನು ಅನುಸರಿಸಿದ್ರೆ ನಿಜಕ್ಕೂ ತಾಯಿಗೆ ಅನುಕೂಲ. ಈ ಸಲಹೆಗಳು ಮಗು ಇರುವ ತಾಯಂದಿರಿಗೆ ಮಾತ್ರವಲ್ಲ, ಆಕೆ ಕೆಲಸಕ್ಕೆ ಹೋಗುವ ಕಚೇರಿ ಹಾಗೂ ಸಿಬ್ಬಂದಿಗೂ ಅನ್ವಯವಾಗುವಂತೆ. ಹಾಗಾದರೆ ಅನುಭವಿಗಳಾದ ಕೆಲಸಕ್ಕೆ ಹೋಗುವ ತಾಯಂದಿರು ನೀಡಿದ ಸಲಹೆಗಳು ಏನಿವೆ ನೋಡಿ.

ಕೆಲಸದ ಸ್ಥಳದಲ್ಲಿ ಹಾಲೂಡಿಸುವ ಜಾಗ ಹಾಗೂ ರೆಫ್ರಿಜರೇಟರ್

ಹಾಲೂಡಿಸುವ ತಾಯಂದಿರಿಗಾಗಿ ಕೆಲಸ ಮಾಡುವ ಸ್ಥಳಗಳಲ್ಲಿ ಹಾಲೂಡಿಸುವ ಜಾಗ ಎಂದರೆ ಮಗುವಿಗೆ ಹಾಲು ಕುಡಿಸಲು ನೆರವಾಗಲು ಒಂದು ಕೊಠಡಿಯನ್ನು ನಿರ್ಮಿಸುವುದು ಬಹಳ ಮುಖ್ಯ. ಜೊತೆಗೆ ಎದೆಹಾಲು ಸಂಗ್ರಹಿಸಲು ರೆಫ್ರಿಜರೇಟರ್ ಇರಿಸಬೇಕು. ಇದರಿಂದ ಎದೆಹಾಲು ಸಂಗ್ರಹಿಸಿ ಇಡಬಹುದು ಎನ್ನುವುದು ಬಹುತೇಕ ಕೆಲಸ ಮಾಡುವ ತಾಯಂದಿರ ಅಭಿಪ್ರಾಯ. ಈ ರೀತಿ ವ್ಯವಸ್ಥೆ ಮಾಡುವುದರಿಂದ ಮಗುವನ್ನ ಆಯಾ ಅಥವಾ ಮನೆಯವರು ಕಚೇರಿಗೆ ತಂದು ಹಾಲು ಕುಡಿಸುವ ವ್ಯವಸ್ಥೆ ಮಾಡಬಹುದು ಎಂಬುದು ತಾಯಿಯೊಬ್ಬರ ಅಭಿಪ್ರಾಯ.

ಎದೆಹಾಲನ್ನು ಸಂಗ್ರಹಿಸಿ ಇಡುವುದು

ಮಗುವಿಗೆ ಹಾಲು ಕುಡಿಸುವ ವಿಚಾರದಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರು ಮಾಡಬಹುದಾದ ಇನ್ನೊಂದು ಪ್ರಮುಖ ಕೆಲಸ ಎಂದರೆ ಹಾಲನ್ನು ಸಂಗ್ರಹಿಸಿ ಇಡುವುದು. ಅಂದರೆ ಎದೆಹಾಲನ್ನು ಹಿಂಡಿ, ಬಾಟಲಿಯಲ್ಲಿ ತುಂಬಿಡುವುದು. ಇದನ್ನು ಫ್ರಿಜ್‌ನಲ್ಲಿ ಇಟ್ಟು ಹಾಲಿನ ಬಾಟಲಿಯ ಮೂಲಕ ಆಗಾಗ ಮಗುವಿಗೆ ಹಾಲು ಕುಡಿಸುವಂತೆ ಮಾಡಬಹುದು. ಇದರಿಂದ ತಾಯಿ ಕೆಲಸಕ್ಕೆ ಹೋದಾಗಲೂ ನೆಮ್ಮದಿಯಿಂದ ಇರಬಹುದು. ಆದರೆ ಎದೆಹಾಲು ಸಂಗ್ರಹಿಸಿ ಇಡುವ ಬಗ್ಗೆ ತಜ್ಞರ ಸಲಹೆ ಪಡೆಯುವುದು ಉತ್ತಮ.

ತಾಯಂದಿರಿಗೆ ನೆರವಾಗುವ ಕೆಲಸದ ವಾತಾವರಣ

ಹಾಲೂಡಿಸುವ ಮಗು ಇರುವ ತಾಯಂದಿರಿಗೆ ಹೊಂದಿಕೆಯಾಗುವ ಕೆಲಸದ ವಾತಾವರಣ ನಿರ್ಮಿಸುವುದು ಬಹಳ ಮುಖ್ಯ. ಆದರೆ ಬಹುತೇಕ ಕಡೆ ಕೆಲಸದಲ್ಲಿ ಮಗು ಇರುವ ತಾಯಂದಿರ ಜೊತೆ ನಿಷ್ಠೂರವಾಗಿ ನಡೆದುಕೊಳ್ಳಲಾಗುತ್ತದೆ. ಇದು ಕನಿಷ್ಠ ದಿನಕ್ಕೊಮ್ಮೆಯಾದ್ರೂ ಮಗುವಿಗೆ ಹಾಲು ಕುಡಿಸುವ ಅವಕಾಶ ನೀಡಬೇಕು, ಇದಕ್ಕಾಗಿ ಹೆಣ್ಣುಮಕ್ಕಳು ಕಚೇರಿಗೆ ಸಮೀಪದಲ್ಲಿ ಮನೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ ಎಂದು ಕೆಲವು ಉದ್ಯೋಗಸ್ಥ ಮಹಿಳೆಯರು ಸಲಹೆ ನೀಡುತ್ತಾರೆ. ಜೊತೆ ಕೆಲಸ ಮಾಡುವ ಸಿಬ್ಬಂದಿ ಅಥವಾ ಬಾಸ್ ಹಾಲೂಡಿಸುವ ಮಗು ಇರುವ ಅಮ್ಮನಿಗೆ ಕೆಲಸದಲ್ಲಿ ಒಂದಿಷ್ಟು ಸಡಿಲ ನಿಯಮಗಳನ್ನು ರೂಪಿಸಬೇಕು ಎಂದು ಅವರು ಸಲಹೆ ನೀಡುತ್ತಾರೆ.

ನಿಷ್ಠಾವಂತ ಆಯಾ / ಮನೆಗೆಲಸದವರು

ಕೆಲಸಕ್ಕೆ ಹೋಗುವ ಮಹಿಳೆಯರು ನಿಷ್ಠಾವಂತ ಮನೆಕೆಲಸದವರು ಅಥವಾ ಆಯಾಗಳನ್ನು ಹೊಂದಿರುವುದು ಮುಖ್ಯವಾಗುತ್ತದೆ. ಕೆಲವೊಮ್ಮೆ ಹಾಲನ್ನು ಸಂಗ್ರಹಿಸಿಟ್ಟು ಬಂದರೂ ಕುಡಿಸದೇ ಇರುವುದು, ಹಾಲು ಕುಡಿಸುವ ವಿಚಾರದಲ್ಲಿ ಹೆಚ್ಚಿನ ಗಮನ ಹರಿದೇ ಇರುವುದು ಇದು ಕೂಡ ತಾಯಂದಿರು ಎದುರಿಸುವ ಸವಾಲುಗಳಲ್ಲಿ ಒಂದು. ಹಾಗಾಗಿ ನೀವು ನಿಷ್ಠಾವಂತ ಮನೆಕೆಲಸದವರು ಅಥವಾ ಮಗುವಿನ ಕೇಕ್‌ ಟೇಕರ್ ಅನ್ನು ನೇಮಿಸಿಕೊಳ್ಳುವುದು ಅಗತ್ಯ.

ಮಗು ಇರುವ ತಾಯಂದಿರಿಗೆ ವರವಾಗುವ ಬ್ರೆಸ್ಟ್ ಪಂಪ್‌ಗಳು

ಮಗು ಇರುವ ತಾಯಂದಿರಿಗೆ ಬ್ರೆಸ್ಟ್ ಪಂಪ್‌ಗಳು ವರದಾನ ಎನ್ನುವುದು ಬಹುತೇಕ ತಾಯಂದಿರ ಅಭಿಪ್ರಾಯ. ಇದರಿಂದ ಹಾಲೂಡಿಸಲು ಕಷ್ಟವಾಗುವ ತಾಯಂದಿರಿಗೆ ಇದು ಸಾಕಷ್ಟು ಸಹಾಯ ಮಾಡುತ್ತದೆ. ಇದರಿಂದ ಮಗುವಿಗೆ ಹಾಲಿನ ಕೊರತೆಯನ್ನೂ ನೀಗಿಸಬಹುದು.

ಈ ಸಲಹೆಗಳನ್ನು ತಾಯಿ ಹಾಗೂ ಕಚೇರಿ ಎರಡೂ ಕಡೆಯವರು ಪಾಲಿಸಿದಾಗ ಹಾಲೂಡಿಸುವ ತಾಯಂದಿರು ಗೊಂದಲ ಹಾಗೂ ಸವಾಲುಗಳನ್ನು ಎದುರಿಸುವುದನ್ನು ತಪ್ಪಿಸಬಹುದು, ಮಾತ್ರವಲ್ಲ ಮಗುವಿನ ಆರೋಗ್ಯವನ್ನೂ ಕಾಪಾಡಬಹುದು ಎನ್ನುವುದು ಕೆಲಸಕ್ಕೆ ಹೋಗುವ ತಾಯಂದಿರ ಸಲಹೆ.

mysore-dasara_Entry_Point