Cervical Cancer: ಮಹಿಳೆಯರನ್ನು ಕಾಡುತ್ತಿದೆ ಮಾರಣಾಂತಿಕ ಗರ್ಭಕಂಠದ ಕ್ಯಾನ್ಸರ್; ಆತಂಕ ಬೇಡ, ಇರಲಿ ಜೋಪಾನ
Cervical Cancer: ಜನವರಿ ತಿಂಗಳನ್ನು ಗರ್ಭಕಂಠದ ಕ್ಯಾನ್ಸರ್ ಜಾಗೃತಿ ತಿಂಗಳು ಎಂದೇ ಕರೆಯಲಾಗುತ್ತದೆ. ಸ್ತನ ಕ್ಯಾನ್ಸರ್ ಬಳಿಕ ಭಾರತೀಯ ಮಹಿಳೆಯರನ್ನು ಕಾಡುತ್ತಿರುವ ಮತ್ತೊಂದು ಮಾರಕ ಕ್ಯಾನ್ಸರ್ ಎಂದರೆ ಅದು ಗರ್ಭಕಂಠದ ಕ್ಯಾನ್ಸರ್. ಈ ಕಾಯಿಲೆ ಹೇಗೆ ಬರುತ್ತೆ..? ಲಕ್ಷಣಗಳೇನು..?ಚಿಕಿತ್ಸೆಯೇನು? ಇಲ್ಲಿದೆ ಮಾಹಿತಿ
ಜನವರಿ ತಿಂಗಳನ್ನು ಗರ್ಭಕಂಠದ ಜಾಗೃತಿ ತಿಂಗಳು ಎಂದು ಕರೆಯಲಾಗುತ್ತದೆ. ಇದು ಗರ್ಭಕೋಶದ ಕ್ಯಾನ್ಸರ್ಗಿಂತ ವಿಭಿನ್ನವಾದ ಮಾರಣಾಂತಿಕ ಕ್ಯಾನ್ಸರ್ನ ಒಂದು ಬಗೆಯಾಗಿದೆ. ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆ ನೀಡಿರುವ ವರದಿಯ ಪ್ರಕಾರ, ಗರ್ಭಕಂಠದ ಕ್ಯಾನ್ಸರ್ ಭಾರತದಲ್ಲಿ ಪ್ರತಿ ಎಂಟು ನಿಮಿಷಕ್ಕೆ ಒಬ್ಬ ಮಹಿಳೆಯ ಜೀವವನ್ನು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ. ಭಾರತದಲ್ಲಿ ಮಹಿಳೆಯರ ಮೇಲೆ ದುಷ್ಪರಿಣಾಮ ಬೀರುತ್ತಿರುವ ಅತ್ಯಂತ ಅಪಾಯಕಾರಿ ಕಾಯಿಲೆಗಳ ಪೈಕಿ ಗರ್ಭಕಂಠದ ಕ್ಯಾನ್ಸರ್ ಕೂಡ ಒಂದಾಗಿದೆ. ಯೋನಿಯಿಂದ ಗರ್ಭಾಶಯದವರೆಗೂ ಈ ಕ್ಯಾನ್ಸರ್ ಆವರಿಸಿಕೊಳ್ಳುತ್ತದೆ.
ಸ್ತನ ಕ್ಯಾನ್ಸರ್ ಹೊರತುಪಡಿಸಿದ್ರೆ ಭಾರತೀಯ ಮಹಿಳೆಯರಲ್ಲಿ ಕ್ಯಾನ್ಸರ್ ಸಂಬಂಧಿ ಸಾವುಗಳಿಗೆ ಕಾರಣವಾಗುತ್ತಿರುವ ಎರಡನೇ ಕ್ಯಾನ್ಸರ್ ವಿಧ ಇದಾಗಿದೆ. ದೆಹಲಿಯ ಕ್ಯಾನ್ಸರ್ ಆಸ್ಪತ್ರೆಯ ಆಂಕೋಲೊಜಿ ವಿಭಾಗದ ವೈದ್ಯರಾದ ಡಾ. ಆಶಿಶ್ ಗುಪ್ತಾ ನೀಡಿರುವ ಮಾಹಿತಿಯ ಪ್ರಕಾರ, ಗರ್ಭಕಂಠದ ಕ್ಯಾನ್ಸರ್ ಹೆಚ್ಪಿವಿ ( HPV) ಸೋಂಕಿನೊಂದಿಗೆ ನೇರ ಸಂಬಂಧ ಹೊಂದಿರುತ್ತದೆ. ಇದು ನಮ್ಮ ದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕ್ಯಾನ್ಸರ್ನ ಬಗೆಗಳ ಪೈಕಿ ಒಂದಾಗಿದೆ ಎಂದು ಹೇಳಿದ್ದಾರೆ.
ಮತ್ತೊಬ್ಬ ಖ್ಯಾತ ಆಂಕೋಲಜಿ ವೈದ್ಯೆ ಡಾ. ಇಶು ಗುಪ್ತಾ ಕೂಡ ಈ ವಿಚಾರವಾಗಿ ಮಾತನಾಡಿದ್ದು, ಗರ್ಭಕಂಠದ ಕ್ಯಾನ್ಸರ್ ಸೋಂಕನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಈ ಕ್ಯಾನ್ಸರ್ನ ವಿವಿಧ ಹಂತಗಳ ಬಗ್ಗೆಯೂ ಅವರು ಮಾತನಾಡಿದ್ದು ಅವುಗಳ ಬಗ್ಗೆಯೂ ತಿಳಿದುಕೊಳ್ಳೋಣ :
ಈ ಕ್ಯಾನ್ಸರ್ನ ಆರಂಭಿಕ ಹಂತದಲ್ಲಿ ಅಸಹಜ ಜೀವಕೋಶಗಳು ದೇಹದಲ್ಲಿ ಅಭಿವೃದ್ಧಿ ಹೊಂದಲು ಆರಂಭಿಸುತ್ತದೆ ಇವುಗಳು ಗರ್ಭಕಂಠದ ಒಳ ಪದರಕ್ಕೆ ಮಾತ್ರ ಸೀಮಿತವಾಗಿ ಇರುತ್ತದೆ. ಈ ಹಂತದಲ್ಲಿ ಕ್ಯಾನ್ಸರ್ನಿಂದ ಗುಣಮುಖರಾಗುವುದು ಸುಲಭವಾಗಿರುತ್ತದೆ. ವಿವಿಧ ಶಸ್ತ್ರಚಿಕಿತ್ಸೆಯ ಮೂಲಕ ಕ್ಯಾನ್ಸರ್ ಪೀಡಿತ ಮಹಿಳೆಯು ಪ್ರಾಣಾಪಾಯದಿಂದ ಪಾರಾಗಬಹುದಾಗಿದೆ.
ಮೊದಲನೇ ಹಂತ : ಈ ಹಂತದಲ್ಲಿ ಗರ್ಭಕಂಠದಲ್ಲಿ ಮಾತ್ರ ಕ್ಯಾನ್ಸರ್ ಇರುತ್ತದೆ. ಇದಕ್ಕೆ ನಿಮಗೆ ಸೂಕ್ತ ಶಸ್ತ್ರಚಿಕಿತ್ಸೆ ಕೂಡ ಇದೆ. ರೆಡಿಯೇಷನ್ ಚಿಕಿತ್ಸೆ ಅಥವಾ ಗಡ್ಡೆಯನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದು ಹಾಕಬಹುದಾಗಿದೆ.
ಎರಡನೇ ಹಂತ : ಈ ಹಂತದಲ್ಲಿ ಕ್ಯಾನ್ಸರ್ ಗರ್ಭಕಂಠದ ಆಚೆಗೂ ವಿಸ್ತರಿಸಲು ಆರಂಭಿಸುತ್ತದೆ. ಆದರೂ ಶ್ರೋಣಿ ಭಾಗಕ್ಕೆ ಇದರ ಸೋಂಕು ಇನ್ನೂ ಹರಡಿಲ್ಲವಾದ್ದರಿಂದ ಈ ಹಂತದಲ್ಲಿಯೂ ಕೂಡ ರೇಡಿಯೇಷನ್ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ಮೂಲಕ ಕ್ಯಾನ್ಸರ್ನ್ನು ಹೊಡೆದೋಡಿಸುವ ಪ್ರಯತ್ನ ಮಾಡಬಹುದಾಗಿದೆ.
ಮೂರನೇ ಹಂತ : ಈ ಹಂತದಲ್ಲಿ ಕ್ಯಾನ್ಸರ್ ಯೋನಿಯ ಕೆಳಭಾಗ, ಶ್ರೋಣಿ ಭಾಗವನ್ನು ಆವರಿಸಲು ಆರಂಭಿಸುತ್ತದೆ. ಈ ಹಂತದಲ್ಲಿ ವೈದ್ಯರು ಕೀಮೋಥೆರಪಿ ಮೊರೆ ಹೋಗಬಹುದು. ಅಲ್ಲವೇ ಶಸ್ತ್ರಚಿಕಿತ್ಸೆ ಹಾಗೂ ರೆಡಿಯೇಷನ್ ಥೆರಪಿ ಮೂಲಕ ರೋಗಿಯನ್ನು ಬಚಾವು ಮಾಡುವ ಪ್ರಯತ್ನ ಮಾಡುತ್ತಾರೆ.
ನಾಲ್ಕನೇ ಹಂತ : ಇದು ಗರ್ಭಕಂಠ ಕ್ಯಾನ್ಸರ್ನ ಅತ್ಯಂತ ಗಂಭೀರ ಹಂತವಾಗಿದೆ. ಈ ಹಂತದಲ್ಲಿ ಕ್ಯಾನ್ಸರ್ ಮೂತ್ರಕೋಶ, ಗುದನಾಳ ಸೇರಿದಂತೆ ಅಕ್ಕಪಕ್ಕದ ಅಂಗಗಳಿಗೆ ಹರಡಿರುತ್ತದೆ. ಈ ಸಮಯದಲ್ಲಿ ಚಿಕಿತ್ಸೆ ಕೊಡುವುದೂ ಸಹ ಕಷ್ಟವಾಗಿಬಿಡುತ್ತದೆ. ಕೀಮೋಥೆರಪಿ ಮೂಲಕ ರೋಗಿಯನ್ನು ರಕ್ಷಿಸುವ ವಿಧಾನವನ್ನು ವೈದ್ಯರು ಅರಿಸಿಕೊಳ್ಳಬಹುದಾದರೂ ಇದು ಅತ್ಯಂತ ಕ್ಲಿಷ್ಟಕರ ಹಂತವಾಗಿರುತ್ತದೆ ಎಂಬುದನ್ನು ಮರೆಯುವಂತಿಲ್ಲ.
ಆರಂಭಿಕ ಹಂತದಲ್ಲಿಯೇ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಸುಳಿವು ಸಿಕ್ಕಲ್ಲಿ ರೋಗಿಯನ್ನು ಬಚಾವ್ ಮಾಡುವುದು ಸುಲಭವಾಗುತ್ತದೆ. ರೆಡಿಯೇಷನ್ ಥೆರಪಿ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಕ್ಯಾನ್ಸರ್ಕಾರಕ ಕೋಶಗಳನ್ನು ಸಾಯಿಸಬಹುದು. ಗರ್ಭಕಂಠದ ಕ್ಯಾನ್ಸರ್ಗೆ ಹೆಚ್ಪಿವಿ ಸೋಂಕು ಮುಖ್ಯ ಕಾರಣವಾಗಿರುವ ಹಿನ್ನೆಲೆಯಲ್ಲಿ ಹೆಚ್ಪಿವಿ ಲಸಿಕೆ ಪಡೆಯುವುದು ಬಹಳ ಮುಖ್ಯವಾಗಿದೆ. 11-26 ವರ್ಷದ ಹೆಣ್ಣುಮಕ್ಕಳು ಕಡ್ಡಾಯವಾಗಿ ಹೆಚ್ಪಿವಿ ಲಸಿಕೆಗಳನ್ನು ಪಡೆಯುವುದು ಉತ್ತಮ. ಅಲ್ಲದೇ ಹೆಚ್ಪಿವಿ ಸೋಂಕಿತ ಪುರುಷನಿಂದ ಈ ಕಾಯಿಲೆಯು ಹರಡುವುದರಿಂದ ಮಹಿಳೆಯರು ಅಸುರಕ್ಷಿತ ಲೈಂಗಿಕ ಕ್ರಿಯೆಗಳನ್ನು ನಡೆಸಬಾರದು. ಅತಿಯಾಗಿ ಜನನನಿಯಂತ್ರಣ ಮಾತ್ರೆ ಸೇವನೆ ಕೂಡ ಗರ್ಭಕಂಠದ ಕ್ಯಾನ್ಸರ್ಗೆ ಒಂದು ಕಾರಣವಾಗಿರುವುದರಿಂದ ಮಹಿಳೆಯರು ಈ ಬಗ್ಗೆಯೂ ಜಾಗೃತಿಯನ್ನು ಹೊಂದಿರುವುದು ತುಂಬಾ ಮುಖ್ಯವಾಗಿದೆ.