Women Health: ನಿಂಬೆ ನೀರು, ಶುಂಠಿ ಚಹಾ ಸೇರಿದಂತೆ ಋತುಸ್ರಾವದ ನೋವಿನಿಂದ ಪಾರಾಗಲು ಇಲ್ಲಿದೆ 9 ಪಾನೀಯಗಳು
Women Health: ಮುಟ್ಟಿನ ದಿನಗಳಲ್ಲಿ ಮಹಿಳೆಯರು ಅತೀವವಾದ ನೋವನ್ನು ಅನುಭವಿಸುತ್ತಾರೆ. ಈ ಸಮಸ್ಯೆಯಿಂದ ಪಾರಾಗಲು ಮಹಿಳೆಯರು ಶುಂಠಿ ಚಹಾ, ನಿಂಬೆ ನೀರು ಸೇರಿದಂತೆ ಮನೆಯಲ್ಲೇ ಸುಲಭವಾಗಿ ಈ ಪಾನೀಯಗಳನ್ನು ತಯಾರಿಸಿ ಸೇವಿಸಬಹುದಾಗಿದೆ.
Women Health: ಮಹಿಳೆಯರ ಬಳಿ ಏನಾದರೂ ವರ ಬೇಕೇ ಎಂದು ದೇವರೇನಾದರೂ ಕೇಳಿದರೆ ನೋವಿಲ್ಲದ ಋತುಚಕ್ರ ಕೊಡು ಎಂದು ಕೇಳಬಹುದೇನೋ..! ಅಷ್ಟರ ಮಟ್ಟಿಗೆ ಋತುಚಕ್ರ ಮಹಿಳೆಯರ ಜೀವ ಹಿಂಡುತ್ತದೆ. ಮುಟ್ಟಿನ ಸೆಳೆತವು ಯಾವ ಹೆಣ್ಣು ಮಕ್ಕಳನ್ನೂ ಬಿಟ್ಟಿಲ್ಲ.
ಕಿಬ್ಬೊಟ್ಟೆ ನೋವು ಕೆಲವರಿಗೆ ಸೌಮ್ಯವಾಗಿದ್ದರೆ ಇನ್ನೂ ಕೆಲವರಿಗೆ ಅತ್ಯಂತ ತೀವ್ರವಾಗಿ ಇರುತ್ತದೆ. ಹಾರ್ಮೋನ್‌ಗಳ ಏರಿಳಿತ, ಗರ್ಭಕೋಶದ ಪರಿಸ್ಥಿತಿ ಇದೆಲ್ಲವನ್ನೂ ಆಧರಿಸಿ ಮಹಿಳೆಯರು ಮುಟ್ಟಿನ ನೋವನ್ನು ಅನುಭವಿಸುತ್ತಾರೆ. ನಮ್ಮ ದಿನನಿತ್ಯದ ಜೀವನಶೈಲಿ ಹಾಗೂ ಆಹಾರ ಕ್ರಮ ಕೂಡ ನಮ್ಮ ಮುಟ್ಟಿನ ದಿನಗಳಲ್ಲಿ ಬರುವ ನೋವಿನ ಮೇಲೆ ಪರಿಣಾಮ ಬೀರುತ್ತದೆ. ಅನೇಕರು ನೋವಿನಿಂದ ಪಾರಾಗಲು ಮಾತ್ರೆ ಸೇವಿಸುತ್ತಾರೆ.
ಆದರೆ ನೀವು ಋತುಮತಿಯಾದಾಗ ಉಂಟಾಗುವ ಸೆಳೆತಗಳಿಂದ ಪಾರಾಗಲು ಮನೆಯಲ್ಲಿಯೇ ಕೆಲವೊಂದು ಪಾನೀಯಗಳನ್ನು ಸೇವಿಸಬಹುದಾಗಿದೆ. ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ತೀವ್ರವಾದ ಸೆಳೆತದಿಂದ ಪಾರಾಗಲು ಮಹಿಳೆಯರು ಕೆಲವೊಂದು ಆರೋಗ್ಯಕರ ಪಾನೀಯಗಳನ್ನು ಸೇವಿಸಬೇಕು. ಈ ಪಾನೀಯಗಳು ಮಹಿಳೆಯರ ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ನೀರು: ಇದನ್ನು ಕೇಳಿದಾಗ ನಿಮಗೆ ಇಷ್ಟೇನಾ ಎನಿಸಬಹುದು. ಆದರೆ ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಅನುಭವಿಸುವ ತೀವ್ರವಾದ ಸೆಳೆತದಿಂದ ಪಾರಾಗಲು ನೀರು ಸೇವಿಸುವುದು ಬಹಳ ಒಳ್ಳೆಯದು. ದೇಹದಲ್ಲಿ ನೀರಿನ ಪ್ರಮಾಣ ಇದ್ದಷ್ಟೂ ಮಹಿಳೆಯರು ಮುಟ್ಟಿನ ಸಮಯದಲ್ಲಿ ಆರಾಮದಾಯಕ ಭಾವನೆ ಅನುಭವಿಸಲಿದ್ದಾರೆ.
ಹರ್ಬಲ್ ಚಹಾಗಳು: ಗಿಡಮೂಲಿಕೆಗಳನ್ನು ಬಳಸಿ ತಯಾರಿಸುವ ಚಹಾಗಳು ಮುಟ್ಟಿನ ನೋವಿನಿಂದ ಪರಿಹಾರ ಒದಗಿಸುತ್ತವೆ. ಕ್ಯಾಮೋಮೈಲ್ ಚಹಾದಿಂದ ಸ್ನಾಯುಗಳಿಗೆ ವಿಶ್ರಾಂತಿ ಸಿಕ್ಕ ಅನುಭವವಾಗುತ್ತದೆ. ಪುದೀನಾ ಚಹಾದಿಂದ ನೋವು ನಿವಾರಣೆಯಾಗುತ್ತದೆ ಹಾಗೂ ಸ್ನಾಯುಗಳಿಗೆ ನಿರಾಳತೆ ಸಿಕ್ಕಂತಾಗುತ್ತದೆ.
ಶುಂಠಿ ಚಹಾ : ಜರ್ನಲ್ ಆಫ್ ಹೆಲ್ತ್ & ಸೈನ್ಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಶುಂಠಿ ಚಹಾದಿಂದ ಮಹಿಳೆಯರಲ್ಲಿ ಋತುಸ್ರಾವದ ನೋವು ಕಡಿಮೆಯಾಗುತ್ತದೆ ಎನ್ನಲಾಗಿದೆ. ಶುಂಠಿಯು ಆಂಟಿ ಆಕ್ಸಿಡಂಟ್ ಗುಣಗಳನ್ನು ಹೊಂದಿದೆ. ಹಾಗೂ ಗರ್ಭಕೋಶ ಸಂಕೋಚನಕ್ಕೆ ಕಾರಣವಾಗಬಲ್ಲ ಪ್ರೋಸ್ಟಗ್ಲಾಂಡಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ನಿಂಬು ಹಾಕಿದ ಬೆಚ್ಚನೆಯ ನೀರು : ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸವನ್ನು ಹಿಂಡಿ ಸೇವಿಸುವುದರಿಂದಲೂ ಮುಟ್ಟಿನ ನೋವಿನಿಂದ ಪರಿಹಾರ ಪಡೆಯಬಹುದಾಗಿದೆ.
ಅರಿಶಿಣ ಹಾಲು: ಅರಿಶಿಣದಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದೆ. ಇದು ನೋವನ್ನು ಶಮನ ಮಾಡುವ ಗುಣವನ್ನು ಹೊಂದಿರುತ್ತದೆ. ಹೀಗಾಗಿ ಅರಿಶಿಣದ ಹಾಲನ್ನು ಕುಡಿಯುವ ಮೂಲಕ ಮುಟ್ಟಿನ ಸೆಳೆತದಿಂದ ಕೊಂಚ ನಿರಾಳತೆ ಪಡೆಯಬಹುದಾಗಿದೆ.
ಬೆಚ್ಚನೆಯ ಹಾಲು : ಹಾಲಿನಲ್ಲಿ ಕ್ಯಾಲ್ಶಿಯಂ ಹಾಗೂ ವಿಟಮಿನ್ ಡಿ ಪ್ರಮಾಣ ಹೇರಳವಾಗಿರುತ್ತದೆ. ಇವುಗಳು ಮೂಳೆಯ ಆರೋಗ್ಯವನ್ನು ವೃದ್ಧಿಸುತ್ತದೆ. ಹೀಗಾಗಿ ಬೆಚ್ಚನೆಯ ಹಾಲನ್ನು ಕುಡಿಯುವುದರಿಂದ ಮೂಳೆಗಳಿಗೆ ಶಕ್ತಿ ಬರುತ್ತದೆ.
ಚೆರ್ರಿ ಜ್ಯೂಸ್ : ಚೆರ್ರಿ ಹಣ್ಣುಗಳು ಆಂಟಿಆಕ್ಸಿಡಂಟ್ ಗುಣಗಳನ್ನು ಹೊಂದಿರುತ್ತದೆ. ಹೀಗಾಗಿ ಇವುಗಳಿಂದ ತಯಾರಿಸಿದ ಜ್ಯೂಸ್‌ನಿಂದ ಋತುಸ್ರಾವದ ನೋವು ಕಡಿಮೆಯಾಗುತ್ತದೆ.
ಗ್ರೀನ್ ಟೀ: ತೂಕ ಇಳಿಸುವ ಪ್ರಯಾಣದಲ್ಲಿರುವ ಜನರು ಗ್ರೀನ್ ಟೀ ಸೇವಿಸುತ್ತಾರೆ. ಗ್ರೀನ್ ಟೀ ಕುಡಿಯುವುದು ನೋವನ್ನು ಕಡಿಮೆ ಮಾಡಲು ಮತ್ತು ಮುಟ್ಟಿನ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ದಾಲ್ಚಿನ್ನಿ ಚಹಾ: ದಾಲ್ಚಿನ್ನಿ ಚಹಾವು ಮುಟ್ಟಿನ ಸೆಳೆತವನ್ನು ನಿವಾರಿಸಲು ಸಹಾಯ ಮಾಡುತ್ತದೆ, ದಾಲ್ಚಿನ್ನಿಯು ಆಂಟಿಸ್ಪಾಸ್ಮೊಡಿಕ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಉರಿಯೂತ ಮತ್ತು ಸ್ನಾಯುವಿನ ಸಂಕೋಚನವನ್ನು ಕಡಿಮೆ ಮಾಡುತ್ತದೆ.
ವಿಭಾಗ