Women Depression: ಮಹಿಳೆಯರು ಹವ್ಯಾಸಗಳನ್ನು ಬೆಳೆಸಿಕೊಳ್ಳಿ; ಖಿನ್ನತೆ ಒತ್ತಡ ದೂರವಾಗುತ್ತದೆ
ಮನೆ ಕೆಲಸ, ಮಕ್ಕಳ ಕೆಲಸ ಮತ್ತು ಆಫೀಸ್ ಕೆಲಸ ಎಂದು ಮಹಿಳೆಯರು ಸದಾ ನೂರೆಂಟು ಕಾರ್ಯಗಳಲ್ಲಿ ತೊಡಗಿಸಿಕೊಂಡು ಸದಾ ಬ್ಯುಸಿ ಆಗಿರುತ್ತಾರೆ. ಹೀಗೆ ಬ್ಯುಸಿಯಾದಾಗ ಅವರಿಗೆ ಖಿನ್ನತೆ, ಒತ್ತಡಗಳು ಉಂಟಾಗುತ್ತವೆ.

ಮಹಿಳೆ ಹಲವು ರೀತಿಯಲ್ಲಿ ಮನೆಯಲ್ಲಿ, ಕಚೇರಿಯಲ್ಲಿ ಸದಾ ಕೆಲಸದಲ್ಲಿ ಬ್ಯುಸಿಯಾಗಿರುವುದು ಸಾಮಾನ್ಯ. ಮನೆಯಲ್ಲಿದ್ದರೆ ಮನೆಯ ಕೆಲಸ, ಆಫೀಸ್‌ನಲ್ಲಿದ್ದರೆ ಆಫೀಸ್ ಕೆಲಸ ಜತೆಗೆ, ಮಕ್ಕಳು ಇದ್ದರಂತೂ ಅವರದ್ದೇ ನೂರಾರು ರಗಳೆಗಳು ಇರುತ್ತವೆ. ಅವೆಲ್ಲವನ್ನೂ ಮಹಿಳೆ ಸರಿದೂಗಿಸಿಕೊಂಡು, ಸುಸ್ತಾದರೂ ತೋರಿಸದೆ ಸಾಗುತ್ತಿರುತ್ತಾಳೆ. ಆದರೆ ನಿರಂತರ ಈ ರೀತಿಯ ಒತ್ತಡಕ್ಕೆ ಸಿಲುಕಿದರೆ, ಅದರಿಂದ ಮಾನಸಿಕವಾಗಿ ಹಲವು ಸಮಸ್ಯೆಗಳು ಬರುವ ಸಾಧ್ಯತೆಯಿದೆ.
ಮಹಿಳೆಯರು ಒತ್ತಡ ಮತ್ತು ಮಾನಸಿಕ ಕಿರಿಕಿರಿಯಿಂದ ಎದುರಿಸುವ ಸಮಸ್ಯೆಗಳು ಯಾವುವು? ಅದರಿಂದ ಹೊರಬರುವುದು ಹೇಗೆ ಎನ್ನುವ ಕುರಿತು ಮನಶಾಸ್ತ್ರಜ್ಞೆ ಡಾ. ಸ್ಮಿತಾ ಶ್ರೀವಾಸ್ತವ ಅವರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.
ಸಂತೋಷವಾಗಿರಲು ಕಲಿಯಿರಿ
ಸದಾ ಕಿರಿಕಿರಿಯಿಂದ ಕೂಡಿರುವ ಮನಸ್ಸಿಗೆ ಸಂತೋಷವಾಗುವ ಯಾವುದೇ ಕೆಲಸವಾದರೂ ಸರಿ, ಅದನ್ನು ಮಹಿಳೆಯರು ಮಾಡಬೇಕು. ಅದರಿಂದ ಅವರ ಮನಸ್ಸಿಗೆ ಸಂತೋಷ, ನೆಮ್ಮದಿ ದೊರೆಯುತ್ತದೆ ಎಂದಾದರೆ, ಅದಕ್ಕೆ ಸಮಯ ಕೊಡಬೇಕು. ಆ ಮೂಲಕ ಖುಷಿಯಿಂದ ಸಮಯ ಕಳೆಯಬೇಕು ಎಂದು ಡಾ. ಸ್ಮಿತಾ ಹೇಳುತ್ತಾರೆ.
ಹವ್ಯಾಸ, ಅಭ್ಯಾಸ ರೂಢಿಸಿಕೊಳ್ಳಿ
ಮನಸ್ಸು ಸದಾ ಉಲ್ಲಾಸದಿಂದ ಕೂಡಿರಬೇಕು ಎಂದರೆ ನಮ್ಮ ದೇಹದಲ್ಲಿ ಖುಷಿಯ ಹಾರ್ಮೋನ್‌ಗಳು ಹೆಚ್ಚಾಗಬೇಕು. ಆಗ ಮಾತ್ರ ಸಂತೋಷವಾಗಿರಲು ಸಾಧ್ಯ. ಅದಕ್ಕಾಗಿ ಕೆಲವೊಂದು ಹವ್ಯಾಸ, ಅಭ್ಯಾಸಗಳನ್ನು ನಾವು ರೂಢಿಸಿಕೊಳ್ಳಬೇಕು.
ಯಾವ ರೀತಿಯ ಹವ್ಯಾಸ
ಪುಸ್ತಕ ಓದುವುದು, ಸಿನಿಮಾ ವೀಕ್ಷಣೆ, ಸಂಗೀತ ಕೇಳುವುದು ಇವೆಲ್ಲ ಸಾಮಾನ್ಯವಾಗಿ ಇರುವಂತಹ ಹವ್ಯಾಸಗಳು. ಅದರ ಜತೆಗೆ ಪೇಟಿಂಗ್, ಕಸೂತಿ, ಹೊಸ ರುಚಿ, ಗಾರ್ಡನಿಂಗ್, ಸಂಗೀತ ಪರಿಕರ ನುಡಿಸುವುದು, ಟೈಲರಿಂಗ್ ಹೀಗೆ ಕೆಲವು ಹವ್ಯಾಸಗಳನ್ನು ರೂಢಿಸಿಕೊಳ್ಳಬಹುದು. ಅದರಿಂದ, ನಮ್ಮ ಮನಸ್ಸು ಕೂಡ ಉಲ್ಲಾಸವಾಗುತ್ತದೆ. ಜತೆಗೆ ನಮಗೆ ಖುಷಿ ಕೊಡುವ ಕೆಲಸವನ್ನು ಮಾಡುವುದರಿಂದ, ಒತ್ತಡ, ಆತಂಕ ದೂರಾಗುತ್ತದೆ.
ಅಭ್ಯಾಸ ಮಾಡಿಕೊಂಡರೆ ಸುಗಮ
ಕೆಲವೊಮ್ಮೆ ಹವ್ಯಾಸಗಳನ್ನು ನಾವು ಬಾಲ್ಯದಲ್ಲಿ ರೂಢಿಸಿಕೊಂಡಿರುತ್ತೇವೆ, ಆದರೆ ಸಮಯ ಕಳೆದಂತೆ ಅದರಲ್ಲಿ ನಿರಾಸಕ್ತಿ ಹೊಂದುತ್ತೇವೆ. ಜತೆಗೆ ಕೆಲಸದ ಒತ್ತಡ, ಮನೆಕೆಲಸ ಎಂದು ಅದರಲ್ಲೇ ಕಳೆದುಹೋಗುತ್ತೇವೆ. ಅಂತಹ ಸಂದರ್ಭದಲ್ಲಿ ನಾವು ಪರಿಸ್ಥಿತಿಯನ್ನು ದೂಷಿಸುವ ಬದಲು, ದಿನವೂ ಸ್ವಲ್ಪ ಸಮಯ ಹವ್ಯಾಸಕ್ಕೆ ವಿನಿಯೋಗಿಸಿಕೊಂಡು, ಅಭ್ಯಾಸ ಮಾಡಿದರೆ ಸಾಕಾಗುತ್ತದೆ.
ನಿಮಗಾಗಿ ಸಮಯ ಕೊಡಿ
ಮಹಿಳೆಯರು ಒತ್ತಡ ಕಡಿಮೆ ಮಾಡಲು, ಹವ್ಯಾಸ, ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಉತ್ತಮ. ಹೆಚ್ಚಿನ ಖರ್ಚಿಲ್ಲದೇ, ಸರಳ ಹವ್ಯಾಸ ರೂಢಿಸಿಕೊಂಡರೂ, ಅದರಿಂದ ಮಾನಸಿಕ ನೆಮ್ಮದಿ, ಸಂತೋಷ ದೊರೆಯುತ್ತದೆ. ಆದರೆ ಸದಾ ಒತ್ತಡದ ಜೀವನ ನಡೆಸಿದರೆ, ಅದರಿಂದ ಖಿನ್ನತೆ ಆವರಿಸಬಹುದು. ಅಂತಹ ಪರಿಸ್ಥಿರಿ ಎದುರಾಗುವ ಮೊದಲೇ ಅದಕ್ಕೆ ಆಸ್ಪದ ಕೊಡದಿರುವುದೇ ಉತ್ತಮ.
ಹವ್ಯಾಸದಿಂದ ಆದಾಯವೂ ತರಬಹುದು
ಕೆಲವೊಂದು ಹವ್ಯಾಸಗಳನ್ನು ನಾವು ರೂಢಿಸಿಕೊಂಡರೆ, ಅದರಲ್ಲಿ ನೆಮ್ಮದಿ, ಸಂತೋಷ ಕಾಣುವ ಜತೆಗೇ, ಆದಾಯವೂ ತರಬಹುದು. ನಿಮಗೆ ಚೆನ್ನಾಗಿ ಟೈಲರಿಂಗ್ ಬರುತ್ತದೆ ಎಂದಾದರೆ, ಅದನ್ನೇ ಹವ್ಯಾಸವಾಗಿ ಆರಿಸಿಕೊಳ್ಳಿ, ಅದಕ್ಕಾಗಿ ನಿಮ್ಮ ಬಿಡುವಿನ ವೇಳೆ ಮೀಸಲಿಡಿ. ಬೇಕಾದರೆ ಟೈಲರಿಂಗ್ ಕ್ಲಾಸ್ ಹೋಗಿ ಪರಿಪೂರ್ಣತೆ ಸಾಧಿಸಿಕೊಳ್ಳಿ, ನಂತರ ಬಿಡುವಿನ ವೇಳೆಯಲ್ಲಿ ಟೈಲರಿಂಗ್ ಮಾಡಿದರೆ, ಕಸೂತಿ ಹಾಕಿದರೆ ಅದರಿಂದ ತಕ್ಕಮಟ್ಟಿನ ಆದಾಯ ಗಳಿಸಬಹುದು. ಮನಸ್ಸಿಗೂ ಖುಷಿ ಇರುತ್ತದೆ. ಅದೇ ರೀತಿಯಲ್ಲಿ ಮಕ್ಕಳಿಗೆ ಸಂಗೀತ, ಪೇಟಿಂಗ್, ಡ್ಯಾನ್ಸ್ ಹೇಳಿಕೊಡುವ ಮೂಲಕವೂ ನಿಮ್ಮ ಹವ್ಯಾಸವನ್ನು ಇನ್ನಷ್ಟು ಉಲ್ಲಾಸದಾಯಕವಾಗಿರಿಸಬಹುದು.
