ಗರ್ಭಾವಸ್ಥೆಯಲ್ಲಿ ಹೊಕ್ಕುಳಿಗೆ ಎಣ್ಣೆ ಹಚ್ಚುವುದು ಒಳ್ಳೆಯದೇ; ಯಾವ ತೈಲ ಉತ್ತಮ, ಇಲ್ಲಿದೆ ಮಾಹಿತಿ
ಗರ್ಭಾವಸ್ಥೆಯಲ್ಲಿ ಮಹಿಳೆಯರು ಬಹಳಷ್ಟು ವಿಷಯಗಳ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ.ಹೊಕ್ಕುಳಿಗೆ ಎಣ್ಣೆಯಿಂದ ಮಸಾಜ್ ಮಾಡುವುದು ಉತ್ತಮ ಎಂದು ಕೆಲವರು ಹೇಳಿದ್ರೆ, ಇನ್ನೂ ಕೆಲವರು ಇದನ್ನು ಒಪ್ಪುವುದಿಲ್ಲ. ಹಾಗಿದ್ರೆ ಯಾವುದು ಸರಿ?ಇಲ್ಲಿದೆ ಮಾಹಿತಿ.

ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಗೆ ಅತ್ಯಂತ ಆನಂದದಾಯಕ ವಿಷಯಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬ ಮಹಿಳೆಯೂ ಎಲ್ಲಾ ರೀತಿಯಲ್ಲಿ ತಾಯಿಯಾಗಲು ಪ್ರಯತ್ನಪಡುತ್ತಾಳೆ. ಇದಕ್ಕಾಗಿ, ಅವಳು ಅನೇಕ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಎದುರಿಸುತ್ತಾಳೆ. ಗರ್ಭಾವಸ್ಥೆಯಲ್ಲಿ, ಮಹಿಳೆಯ ದೇಹದಲ್ಲಿ ಹಾರ್ಮೋನುಗಳ ಬದಲಾವಣೆಯಿಂದಾಗಿ ಸಾಕಷ್ಟು ದೈಹಿಕ ಬದಲಾವಣೆಗಳು ನಡೆಯುತ್ತವೆ. ಕೆಲವೊಮ್ಮೆ ಈ ಬದಲಾವಣೆಗಳು ಗರ್ಭಧಾರಣೆಯ ಪ್ರಯಾಣವನ್ನು ಹೆಚ್ಚು ಕಷ್ಟಕರವಾಗಿಸುತ್ತದೆ. ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಳ ಮತ್ತು ಹಾರ್ಮೋನುಗಳ ಪ್ರಭಾವದಿಂದಾಗಿ, ಮಹಿಳೆಯರ ನರಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದು ಕಾಲುಗಳ ನೋವಿಗೂ ಕಾರಣವಾಗುತ್ತದೆ. ಬೆನ್ನು ನೋವಿನಂತಹ ಸಮಸ್ಯೆಗಳಿರುವುದು ಸಾಮಾನ್ಯ.
ಈ ಅಸ್ವಸ್ಥತೆಯನ್ನು ಕಡಿಮೆ ಮಾಡಲು, ಮೊದಲ ತ್ರೈಮಾಸಿಕದ ನಂತರ ಹೊಕ್ಕುಳಿಗೆ ಎಣ್ಣೆಯಿಂದ ಮಸಾಜ್ ಮಾಡುವುದು ಸುರಕ್ಷಿತ ಮತ್ತು ತುಂಬಾ ಪ್ರಯೋಜನಕಾರಿ ಎಂದು ಅನೇಕ ಜನರು ಭಾವಿಸುತ್ತಾರೆ. ಆದರೆ ಕೆಲವರು ಇದನ್ನು ಒಪ್ಪುವುದಿಲ್ಲ. ಗರ್ಭಾವಸ್ಥೆಯಲ್ಲಿ ವಿಶೇಷವಾಗಿ ಹೊಕ್ಕುಳಿಗೆ ಎಣ್ಣೆಯನ್ನು ಹಚ್ಚುವುದು ಒಳ್ಳೆಯದೇ? ಇದಕ್ಕಾಗಿ ತೆಗೆದುಕೊಳ್ಳಬೇಕಾದ ಪ್ರಯೋಜನಗಳು ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಗರ್ಭಾವಸ್ಥೆಯಲ್ಲಿ ಹೊಕ್ಕುಳಿಗೆ ಎಣ್ಣೆಯನ್ನು ಹಚ್ಚುವುದು ಒಳ್ಳೆಯದೇ?
ವರದಿಗಳ ಪ್ರಕಾರ, ಗರ್ಭಾವಸ್ಥೆಯಲ್ಲಿ ಹೊಕ್ಕುಳಿಗೆ ಮತ್ತು ಅದರ ಸುತ್ತಲೂ ಎಣ್ಣೆಯನ್ನು ಹಚ್ಚುವುದು ಸೂಕ್ತ. ಇದು ಸಾಂಪ್ರದಾಯಿಕ ಪದ್ಧತಿಯಾಗಿದೆ. ಇದನ್ನು ಮಾಡುವುದರಿಂದ ಸಂತಾನೋತ್ಪತ್ತಿ ಆರೋಗ್ಯ ಮತ್ತು ಸ್ಟ್ರೆಚ್ ಮಾರ್ಕ್ಸ್ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಇದಲ್ಲದೆ, ಈ ವಿಧಾನವು ಚರ್ಮಕ್ಕೆ ತೇವಾಂಶವನ್ನು ಒದಗಿಸುತ್ತದೆ. ಆದರೆ, ಇದಕ್ಕಾಗಿ ಸೂಕ್ತವಾದ ಎಣ್ಣೆಯನ್ನು ಆಯ್ಕೆ ಮಾಡುವುದು ಮತ್ತು ಅದನ್ನು ಸರಿಯಾಗಿ ಹಚ್ಚುವುದು ಬಹಳ ಮುಖ್ಯ.
ಗರ್ಭಾವಸ್ಥೆಯಲ್ಲಿ ಹೊಕ್ಕುಳಿಗೆ ಎಣ್ಣೆ ಹಚ್ಚುವುದರಿಂದ ಪ್ರಯೋಜನ
ಗರ್ಭಾವಸ್ಥೆಯಲ್ಲಿ ಹೊಕ್ಕುಳಿಗೆ ಎಣ್ಣೆ ಹಚ್ಚಲು ಅನೇಕ ನೈಸರ್ಗಿಕ ತೈಲಗಳು ಲಭ್ಯವಿದೆ. ಆದರೆ, ಅಗತ್ಯಗಳು ಮತ್ತು ಚರ್ಮದ ಪ್ರಕಾರವನ್ನು ಅವಲಂಬಿಸಿ ಸರಿಯಾದ ಎಣ್ಣೆಯನ್ನು ಆಯ್ಕೆ ಮಾಡುವುದು ಮುಖ್ಯ. ಯಾವೆಲ್ಲಾ ಎಣ್ಣೆಯನ್ನು ಹಚ್ಚಬಹುದು ಮತ್ತು ಅವುಗಳ ಪ್ರಯೋಜನಗಳೇನು ಎಂಬುದು ಇಲ್ಲಿದೆ.
ಬಾದಾಮಿ ಎಣ್ಣೆ: ಬಾದಾಮಿ ಎಣ್ಣೆ ಹಗುರವಾಗಿದ್ದು, ಚರ್ಮಕ್ಕೆ ಸುಲಭವಾಗಿ ಹೀರಲ್ಪಡುತ್ತದೆ. ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ಚರ್ಮವನ್ನು ಮೃದುವಾಗಿಡಲು, ತೇವಾಂಶವನ್ನು ಉಳಿಸಿಕೊಳ್ಳಲು ಮತ್ತು ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರ ಶಮನಕಾರಿ ಗುಣಗಳು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.
ತೆಂಗಿನೆಣ್ಣೆ: ತೆಂಗಿನ ಎಣ್ಣೆಯಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದು ಚರ್ಮಕ್ಕೆ ಸಾಕಷ್ಟು ತೇವಾಂಶವನ್ನು ಒದಗಿಸುತ್ತದೆ ಮತ್ತು ಶುಷ್ಕತೆಯಿಂದ ಕಾಪಾಡುತ್ತದೆ. ತೆಂಗಿನ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳಿವೆ. ಇದು ಚರ್ಮದ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಚರ್ಮವನ್ನು ಮೃದುವಾಗಿ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಆಲಿವ್ ಎಣ್ಣೆ: ಈ ಎಣ್ಣೆಯಲ್ಲಿ ಒಲಿಕ್ ಆಮ್ಲ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ಚರ್ಮಕ್ಕೆ ಪೋಷಣೆಯನ್ನು ನೀಡುತ್ತದೆ ಮತ್ತು ಮೃದುವಾಗಿಡಲು ಸಹಾಯ ಮಾಡುತ್ತದೆ. ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಸಹ ಇದು ಉಪಯುಕ್ತವಾಗಿದೆ.
ಹರಳೆಣ್ಣೆ: ಸಾಮಾನ್ಯವಾಗಿ ಹರಳೆಣ್ಣೆಯನ್ನು ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳಿಗೆ ಬಳಸಲಾಗುತ್ತದೆ. ಹೊಕ್ಕುಳಿಗೆ ಹಚ್ಚಿದಾಗ ಹೊಟ್ಟೆ ನೋವು, ಊತ ಮತ್ತು ಸೆಳೆತವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಕೆಲವರು ನಂಬುತ್ತಾರೆ. ಆದರೆ, ಗರ್ಭಾವಸ್ಥೆಯಲ್ಲಿ ಇದರ ಬಳಕೆಯ ಬಗ್ಗೆ ವೈದ್ಯರ ಸಲಹೆ ಪಡೆಯುವುದು ಮುಖ್ಯ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ).

