ಋತುಚಕ್ರದ ಸಮಯದಲ್ಲಿ ಅರ್ಧ ಗಂಟೆ ಓಡಿ; ದೈಹಿಕ, ಮಾನಸಿಕ ಒತ್ತಡದಿಂದ ಹೊರ ಬರಲು ಇದು ಸಹಾಯ ಮಾಡುತ್ತದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಋತುಚಕ್ರದ ಸಮಯದಲ್ಲಿ ಅರ್ಧ ಗಂಟೆ ಓಡಿ; ದೈಹಿಕ, ಮಾನಸಿಕ ಒತ್ತಡದಿಂದ ಹೊರ ಬರಲು ಇದು ಸಹಾಯ ಮಾಡುತ್ತದೆ

ಋತುಚಕ್ರದ ಸಮಯದಲ್ಲಿ ಅರ್ಧ ಗಂಟೆ ಓಡಿ; ದೈಹಿಕ, ಮಾನಸಿಕ ಒತ್ತಡದಿಂದ ಹೊರ ಬರಲು ಇದು ಸಹಾಯ ಮಾಡುತ್ತದೆ

ತಜ್ಞರ ಪ್ರಕಾರ, ಋತುಚಕ್ರದ ಸಮಯದಲ್ಲಿ ಅರ್ಧ ಗಂಟೆ ಓಡುವುದರಿಂದ ಹಲವು ಪ್ರಯೋಜನಗಳಿವೆ. ಇದು ನೋವು, ಒತ್ತಡ ನಿವಾರಿಸುತ್ತದೆ. ಋತುಚಕ್ರದ ಸಮಯದಲ್ಲಿ ಓಡುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ. (ಬರಹ: ಅರ್ಚನಾ ವಿ. ಭಟ್‌)

ಋತುಚಕ್ರದ ಸಮಯದಲ್ಲಿ ಅರ್ಧ ಗಂಟೆ ಓಡಿ; ದೈಹಿಕ, ಮಾನಸಿಕ ಒತ್ತಡದಿಂದ ಹೊರ ಬರಲು ಇದು ಸಹಾಯ ಮಾಡುತ್ತದೆ
ಋತುಚಕ್ರದ ಸಮಯದಲ್ಲಿ ಅರ್ಧ ಗಂಟೆ ಓಡಿ; ದೈಹಿಕ, ಮಾನಸಿಕ ಒತ್ತಡದಿಂದ ಹೊರ ಬರಲು ಇದು ಸಹಾಯ ಮಾಡುತ್ತದೆ

ಬಹಳಷ್ಟು ಮಹಿಳೆಯರು ಋತುಚಕ್ರದ ಸಮಯದಲ್ಲಿ ನೋವು, ಕಿರಿಕಿರಿ, ಒತ್ತಡವನ್ನು ಅನುಭವಿಸುತ್ತಾರೆ. ಇದಕ್ಕೆ ಕಾರಣ ಆ ಸಮಯದಲ್ಲಿ, ಮಹಿಳೆಯ ದೇಹವು ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿಗೆ ಒಳಗಾಗುತ್ತದೆ. ಮುಟ್ಟಿನ ಸಮಯದಲ್ಲಿ ಸಂಭವಿಸುವ ಈ ಬದಲಾವಣೆಗಳನ್ನು ಪ್ರೀ ಮೆನ್ಸುವಲ್ ಸಿಂಡೋಮ್ ಎಂದು ಕರೆಯಲಾಗುತ್ತದೆ. ಇದು ಮನೋಭಾವದ ಬದಲಾವಣೆಗಳು, ಆಯಾಸ, ಹೊಟ್ಟೆನೋವು, ದೌರ್ಬಲ್ಯ, ತಲೆನೋವು ಮತ್ತು ಸ್ತನದ ನೋವು ಮುಂತಾದ ಲಕ್ಷಣಗಳನ್ನು ಒಳಗೊಂಡಿದೆ. ಆದ್ದರಿಂದ ಕೆಲವು ಮಹಿಳೆಯರು ಈ ಸಮಯದಲ್ಲಿ ವಿಶ್ರಾಂತಿ ಪಡೆಯಲು ಇಷ್ಟಪಡುತ್ತಾರೆ. ಕೆಲವರು ದೇಹವನ್ನು ಕ್ರಿಯಾಶೀಲವಾಗಿಡಲು ಲಘು ವ್ಯಾಯಾಮ ಮಾಡುತ್ತಾರೆ.

ಋತುಚಕ್ರದ ಸಮಯದಲ್ಲಿ ಓಟಕ್ಕೆ ಅವಕಾಶವಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಪ್ರಶ್ನೆ ನಿಮ್ಮ ಮನಸ್ಸಿಗೂ ಹಲವು ಬಾರಿ ಬಂದಿರಬಹುದು. ಆದರೆ, ನಿಮ್ಮ ಋತುಚಕ್ರದ ಸಮಯದಲ್ಲೂ ನೀವು ಸುಮಾರು ಅರ್ಧ ಗಂಟೆಯ ಓಟವನ್ನು ಮಾಡಬಹುದು ಎಂದರೆ ನಿಮಗೆ ಆಶ್ಚರ್ಯವಾಗಬಹುದು ಅಲ್ಲವೇ? ತಜ್ಞರ ಪ್ರಕಾರ, ಋತುಚಕ್ರದ ಸಮಯದಲ್ಲಿ ಅರ್ಧ ಗಂಟೆ ಓಡುವುದರಿಂದ ದೇಹವು ವಿಶ್ರಾಂತಿ ಪಡೆಯಲು ಸಹಾಯವಾಗುತ್ತದೆ. ಅದು ನೋವನ್ನು ನಿವಾರಿಸುತ್ತದೆ. ದೈಹಿಕ, ಮಾನಸಿಕ ಒತ್ತಡದಿಂದ ಹೊರ ಬರಲು ಇದು ಸಹಾಯ ಮಾಡುತ್ತದೆ. ಹಾಗಾದರೆ ಋತುಚಕ್ರದ ಸಮಯದಲ್ಲಿ ಓಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಋತುಚಕ್ರದ ಸಮಯದಲ್ಲಿ ಓಡುವುದರಿಂದ ಸಿಗುವ ಪ್ರಯೋಜನಗಳು

  1. ನೋವು ಮತ್ತು ಸೆಳೆತದಿಂದ ಪರಿಹಾರ

ಋತುಚಕ್ರದ ಸಮಯದಲ್ಲಿ ಓಡುವುದರಿಂದ ದೇಹದಲ್ಲಿ ಎಂಡಾರ್ಫಿನ್ ಹಾರ್ಮೋನುಗಳು (ಸಂತೋಷದ ಹಾರ್ಮೋನುಗಳು) ಬಿಡುಗಡೆಯಾಗುತ್ತವೆ. ಇವು ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಸೆಳೆತ, ಹೊಟ್ಟೆ ನೋವು ಮತ್ತು ಮನಸ್ಥಿತಿಯಲ್ಲಿನ ಬದಲಾವಣೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ರಕ್ತ ಪರಿಚಲನೆಯಲ್ಲಿ ಸುಧಾರಣೆ

ಋತುಚಕ್ರದ ಸಮಯದಲ್ಲಿ ಓಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಶ್ರೋಣಿಯ ಪ್ರದೇಶದಲ್ಲಿ ಅನುಭವಿಸುವ ಬಿಗಿತ ಮತ್ತು ಉಬ್ಬುವಿಕೆಯನ್ನು ನಿವಾರಿಸುತ್ತದೆ.

3. ಮನಸ್ಥಿತಿ ಬದಲಾವಣೆಗಳ ನಿಯಂತ್ರಣ

ಮುಟ್ಟಿನ ಸಮಯದಲ್ಲಿ ಲಘು ಓಟ ಅಥವಾ ಜಾಗಿಂಗ್ ಒತ್ತಡದ ಹಾರ್ಮೋನ್ (ಕಾರ್ಟಿಸೋಲ್) ಅನ್ನು ಕಡಿಮೆ ಮಾಡುತ್ತದೆ. ಇದು ಕಿರಿಕಿರಿ ಮತ್ತು ಮನಸ್ಥಿತಿಯ ಬದಲಾವಣೆಗಳನ್ನು ನಿಯಂತ್ರಿಸುತ್ತದೆ.

4. ತೂಕ ನಿಯಂತ್ರಣ

ಋತುಚಕ್ರದ ಸಮಯದಲ್ಲಿ ದೇಹದ ಕೆಲವೆಡೆ ಊತ, ನೀರು ಸೇರಿಕೊಳ್ಳುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಓಡುವುದು ಅಥವಾ ವ್ಯಾಯಾಮ ಮಾಡುವುದರಿಂದ ಕ್ಯಾಲೊರಿಗಳನ್ನು ಸುಡಲು ಸಹಾಯವಾಗುತ್ತದೆ. ಆದಾಗ್ಯೂ, ನಿಮಗೆ ತುಂಬಾ ನೋವು ಅಥವಾ ಅಸ್ವಸ್ಥತೆ ಅನಿಸಿದರೆ, ಓಡುವುದನ್ನು ನಿಲ್ಲಿಸಿ.

ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯಕ

ಋತುಚಕ್ರದ ಸಮಯದಲ್ಲಿ ಆಯಾಸ ಮತ್ತು ದೌರ್ಬಲ್ಯವು ತುಂಬಾ ಸಾಮಾನ್ಯ ಸಮಸ್ಯೆಗಳಾಗಿವೆ. ಆದರೆ ಈ ಸಮಯದಲ್ಲಿ ಓಡುವುದರಿಂದ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚಾಗುತ್ತದೆ. ಇದು ಆಲಸ್ಯವನ್ನು ಕಡಿಮೆ ಮಾಡುತ್ತದೆ.

ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ

- ದೇಹವು ನಿರ್ಜಲೀಕರಣಗೊಂಡಿದ್ದರೆ ಓಡುವುದನ್ನು ತಪ್ಪಿಸಿ.

- ನಿಮ್ಮ ಋತುಚಕ್ರದ ಸಮಯದಲ್ಲಿ ನಿರಂತರವಾಗಿ ಓಡುವುದನ್ನು ತಪ್ಪಿಸಿ .

- ನಿಮ್ಮ ಮುಟ್ಟಿನ ಸಮಯದಲ್ಲಿ ತುಂಬಾ ವೇಗವಾಗಿ ಓಡಬೇಡಿ.

- ನಿಮಗೆ ತೀವ್ರವಾದ ಮುಟ್ಟಿನ ನೋವು ಇದ್ದರೆ ಓಡಬೇಡಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)

Priyanka Gowda

eMail