ಭಾರತದಲ್ಲಿ ಹೆಚ್ಚುತ್ತಿದೆ ಸ್ತನ ಗಾತ್ರ ಕುಗ್ಗಿಸುವ ಶಸ್ತ್ರಚಿಕಿತ್ಸೆ; ಆ ನಿರ್ಧಾರಕ್ಕೆ ಬರುವ ಮುನ್ನ ಈ ಅಂಶಗಳು ಗಮನದಲ್ಲಿರಲಿ
ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಸ್ತನ ಕಸಿ ಶಸ್ತ್ರಚಿಕಿತ್ಸೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಮಹಿಳೆಯ ದೈಹಿಕ ಹಾಗೂ ಭಾವನಾತ್ಮಕ ಯೋಗಕ್ಷೇಮದ ಮೇಲೆ ಗಂಭೀರ ಪರಿಣಾಮ ಬೀರಬಲ್ಲ ಶಸ್ತ್ರಚಿಕಿತ್ಸೆಯ ನಿರ್ಧಾರಕ್ಕೆ ಬರುವುದಕ್ಕೂ ಮುನ್ನ ಮಹಿಳೆಯರು ಈ ಅಂಶಗಳನ್ನು ಅರಿತುಕೊಳ್ಳುವುದು ಮುಖ್ಯ.
ಮೆಮೊಪ್ಲಾಸ್ಟಿ (Reduction Mammoplasty) ಅಥವಾ ಸ್ತನ ಗಾತ್ರ ಕುಗ್ಗಿಸುವ ಶಸ್ತ್ರಚಿಕಿತ್ಸೆ (Breast Reduction Surgery) ಇತ್ತೀಚಿಗೆ ಪ್ರಚಲಿತದಲ್ಲಿರುವ ವಿಚಾರ. ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಸ್ತನ ಗಾತ್ರ ಕುಗ್ಗಿಸುವ ಮೆಮೊಪ್ಲಾಸ್ಟಿ ಶಸ್ತ್ರಚಿಕಿತ್ಸೆಯಲ್ಲಿ ಗಣನೀಯ ಏರಿಕೆ ಕಂಡಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಮಹಿಳೆಯರು ತಮ್ಮ ಸ್ತನದ ಗಾತ್ರದಿಂದ ಬೇಸರಗೊಂಡು ಅದನ್ನು ಕುಗ್ಗಿಸುವ ಸಲುವಾಗಿ ಶಸ್ತ್ರಚಿಕಿತ್ಸೆಯ ಮೊರೆ ಹೋಗುತ್ತಿದ್ದಾರೆ. ಇದು ಆಕೆಯ ದೈಹಿಕ ಹಾಗೂ ಭಾವನಾತ್ಮಕ ಯೋಗಕ್ಷೇಮದ ಮೇಲೆ ಗಂಭೀರ ಪರಿಣಾಮವನ್ನು ಬೀರಬಲ್ಲ ನಿರ್ಧಾರ. ಸ್ತನದ ಗಾತ್ರ ಕುಗ್ಗಿಸುವ ಅಥವಾ ಹಿಗ್ಗಿಸುವಂಥ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನ ಕೆಲವೊಂದು ಅಂಶಗಳನ್ನು ಸ್ತ್ರೀಯರು ಪರಿಗಣಿಸಬೇಕಾಗುತ್ತದೆ.
ದೈಹಿಕ ಅಸ್ವಸ್ಥತೆ ಹಾಗೂ ನೋವು
ಮಹಿಳೆಯು ಸ್ತನ ಗಾತ್ರ ಕುಗ್ಗಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಲು ಮುಖ್ಯ ಕಾರಣವೆಂದರೆ, ದೈಹಿಕವಾಗಿ ಅಸ್ವಸ್ಥರಾಗಿರುವುದು. ದೊಡ್ಡ ಸ್ತನಗಳಿಂದ ಉಂಟಾಗುತ್ತಿರುವ ಅತಿಯಾಗಿ ನೋವಿನಿಂದ ಪಾರಾಗಲು ಹೆಣ್ಮಕ್ಕಳು ಇಂಥಾ ನಿರ್ಧಾರಕ್ಕೆ ಬರುತ್ತಿದ್ದಾರೆ. ಓಪನ್ ಆರ್ಥೋಪೆಡಿಕ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ದೊಡ್ಡ ಗಾತ್ರದ ಸ್ತನಗಳು ಬೆನ್ನುಮೂಳೆಗೆ ಹಾನಿಯುಂಟು ಮಾಡಬಹುದು. ನಿರಂತರ ಯಾತನೆ ಅನುಭವಿಸಿ ನೊಂದ ಮಹಿಳೆಯರು, ಇಂಥಾ ಸಮಸ್ಯೆಗಳಿಂದ ಪಾರಾಗಲು ಅಂತಿಮವಾಗಿ ಶಸ್ತ್ರಚಿಕಿತ್ಸೆಯ ಮೊರೆ ಹೋಗುತ್ತಾರೆ.
ನಿತ್ಯ ಜೀವನಶೈಲಿಯಲ್ಲಿ ಸಂಕಷ್ಟ
ದೀರ್ಘಕಾಲದ ಕುತ್ತಿಗೆ, ಬೆನ್ನು ಅಥವಾ ಭುಜದ ನೋವಿನಿಂದ ಬಳಲುತ್ತಿದ್ದರೆ ಅಥವಾ ಸ್ತನದ ಕೆಳಭಾಗದಲ್ಲಿ ಚರ್ಮಕ್ಕೆ ಹಾನಿಯುಂಟಾಗುತ್ತಿರುವುದು ಗಮನಕ್ಕೆ ಬಂದಾಗ, ಮಹಿಳೆಯರು ಶಸ್ತ್ರಚಿಕಿತ್ಸೆಯ ನಿರ್ಧಾರಕ್ಕೆ ಬರಬಹುದು. ಸ್ತನದ ಗಾತ್ರವು ದೊಡ್ಡದಿದ್ದರೆ ಸಕ್ರಿಯ ಜೀವನ ಶೈಲಿಯಲ್ಲಿ ಅಥವಾ ದಿನನಿತ್ಯದ ಸಾಕಷ್ಟು ಚಟುವಟಿಕೆಗಳಲ್ಲಿ ಭಾರಿ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ. ಬಹುತೇಕರು ದಿನನಿತ್ಯದ ಚಟುವಟಿಕೆಗಳನ್ನು ಆನಂದಿಸುವಲ್ಲಿ ಖುಷಿಗಿಂತ ಜಾಸ್ತಿ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿ ಸಂಕಷ್ಟ ಅನುಭವಿಸುತ್ತಾರೆ. ಇಂಥಾ ಸಂದರ್ಭದಲ್ಲಿ ಅನೇಕರು ಚಿಕಿತ್ಸೆ ಮಾಡಿಸಿಕೊಳ್ಳುವ ಕಠಿಣ ನಿರ್ಧಾರಕ್ಕೆ ಬರುತ್ತಾರೆ.
ಇದನ್ನೂ ಓದಿ | Summer Drinks: ಬೇಸಿಗೆಗೆ ಪುನರ್‌ಪುಳಿ ಜ್ಯೂಸ್, ಕೂಲ್ ಜತೆಗೆ ಆರೋಗ್ಯಕರ, ಹೇಗೆ ತಯಾರಿಸೋದು? photos
ಭಾವನಾತ್ಮಕ ಮತ್ತು ಮಾನಸಿಕ ಪರಿಣಾಮ
ದೊಡ್ಡ ಗಾತ್ರದ ಸ್ತನಗಳನ್ನು ಹೊಂದಿರುವವರು ಸಾಮಾನ್ಯವಾಗಿ ಮಾನಸಿಕವಾಗಿ ಈ ವಿಚಾರವಾಗಿ ಕುಗ್ಗಿರುತ್ತಾರೆ. ತಮ್ಮಿಷ್ಟದ ಬಟ್ಟೆಗಳನ್ನು ಧರಿಸಲಾಗದೆ, ದೊಡ್ಡ ಗಾತ್ರದ ಬಟ್ಟೆಗಳನ್ನು ಇಷ್ಟವಿಲ್ಲದಿದ್ದರೂ ಧರಿಸಬೇಕಾಗುತ್ತದೆ. ತಮ್ಮ ದೇಹದ ವಿಚಾರವಾಗಿ ಹೊರಗಡೆ ಓಡಾಡುವಾಗ ನಗುಮುಖ ಮರೆತು ಆತ್ಮ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಇದರಿಂದ ಅನೇಕ ಮಹಿಳೆಯರು ಗುಣಮಟ್ಟದ ಜೀವನ ನಡೆಸಲಾಗದೆ ಒದ್ದಾಡುತ್ತಾರೆ. ಇಂಥಾ ಸಂದರ್ಭದಲ್ಲಿಯೂ ಶಸ್ತ್ರಚಿಕಿತ್ಸೆಗೆ ಒಳಗಾಗುವ ನಿರ್ಧಾರಕ್ಕೆ ಬರುವವರು ಹೆಚ್ಚು.
ಸ್ತನ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಂಕಲ್ಪಕ್ಕೆ ಬರುವ ಮುನ್ನ ಏನು ಮಾಡಬೇಕು?
ತಜ್ಞರನ್ನು ಸಂಪರ್ಕಿಸಿ
ಸ್ತನದ ಗಾತ್ರ ಕುಗ್ಗಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ನಿರ್ಧರಿಸಿದ ಬೆನ್ನಲ್ಲೇ, ಮೊದಲು ಸೂಕ್ತ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಬೇಕು. ಶಸ್ತ್ರಚಿಕಿತ್ಸೆಗೆ ಒಳಗಾಗುವ ನಿರ್ಧಾರ ಕೈಗೊಂಡಿರುವುದು ಸರಿಯೇ ತಪ್ಪೇ ಎಂಬುವುದನ್ನು ಅವರು ವಿಮರ್ಷಿಸುತ್ತಾರೆ. ಅಲ್ಲದೇ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಹಾಗೂ ಅದಾದ ಬಳಿಕ ಆಗಬಹುದಾದ ಸಾಕಷ್ಟು ಬದಲಾವಣೆಗಳ ಕುರಿತು ಮುಕ್ತವಾಗಿ ಸಮಾಲೋಚನೆ ನಡೆಸುತ್ತಾರೆ.
ತೂಕ ಮತ್ತು ಅರೋಗ್ಯ
ಸ್ಥಿರವಾದ ತೂಕ ಹಾಗೂ ಆರೋಗ್ಯ ಹೊಂದಿರುವುದು ಬಹಳ ಮುಖ್ಯವಾಗಿದೆ. ತೂಕದಲ್ಲಿ ಗಮನಾರ್ಹ ಏರಿಳಿತಗಳು ಶಸ್ತ್ರಚಿಕಿತ್ಸೆಯ ಫಲಿತಾಂಶಗಳ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಸ್ತನ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನ ನಿಮ್ಮ ಆರೋಗ್ಯ ಹಾಗೂ ತೂಕದ ಕುರಿತು ಕಾಳಜಿ ವಹಿಸುವುದು ತುಂಬಾ ಮುಖ್ಯವಾಗಿದೆ.
ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡುವ ಸಮಯ
ಸ್ತನ ಶಸ್ತ್ರಚಿಕಿತ್ಸೆಯು ಮಹಿಳೆಯ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ್ದಾಗಿದೆ. ಒಂದು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಚೇತರಿಕೆಗಾಗಿ ಸಾಕಷ್ಟು ಅವಧಿ ಬೇಕಾಗುತ್ತದೆ. ದಿನಗಳು ಮಾತ್ರವಲ್ಲದೆ ವಾರಗಟ್ಟಲೆ ಹೆಚ್ಚು ಶ್ರಮದಾಯಕ ಚಟುವಟಿಕೆಗಳಿಂದ ದೂರ ಉಳಿಯಬೇಕಾಗುತ್ತದೆ. ಅಲ್ಲದೆ ವೈದ್ಯರು ಹೇಳಿದಂತೆಯೇ ಆರೈಕೆ ಮಾಡಿಸಿಕೊಳ್ಳಬೇಕಾಗುತ್ತದೆ. ಇದಕ್ಕೆಲ್ಲಾ ಸಿದ್ಧರಾದ ಮೇಲೆ ಮುಂದುವರೆಯಬೇಕು.
ಸ್ತನದ ಶಸ್ತ್ರಚಿಕಿತ್ಸೆಗೆ ಸೂಕ್ತ ಸಮಯವನ್ನು ಆಯ್ಕೆ ಮಾಡಿಕೊಳ್ಳುವುದು ಒಬ್ಬ ಮಹಿಳೆಯಿಂದ ಮತ್ತೊಬ್ಬರಿಗೆ ಬದಲಾಗುತ್ತದೆ. ಅವರವರ ಭಾವನಾತ್ಮಕ ಯೋಗಕ್ಷೇಮ, ದೈಹಿಕ ಆರೋಗ್ಯ ಸ್ಥಿತಿ, ಮಾನಸಿಕ ಆರೋಗ್ಯ ಹೀಗೆ ಪ್ರತಿಯೊಂದನ್ನು ಪರಿಗಣನೆಗೆ ತೆಗೆದುಕೊಂಡು ಶಸ್ತ್ರಚಿಕಿತ್ಸೆಗೆ ಸಮಯ ನಿಗದಿಪಡಿಸುವುದು ಒಳ್ಳೆಯದು. ಅಲ್ಲದೆ ಸೂಕ್ತ ಹಾಗೂ ನುರಿತ ತಜ್ಞರನ್ನೇ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಿಕೊಳ್ಳುವುದು ತುಂಬಾ ಮುಖ್ಯ. ವೈದ್ಯರ ಭೇಟಿಗೆ ಹೋಗುವುದಕ್ಕೂ ಮುನ್ನ ಈ ವಿಷಯವನ್ನು 10 ಬಾರಿ ಯೋಚಿಸಿ. ನಿಮ್ಮವರೊಂದಿಗೆ ಚರ್ಚಿಸಿ. ಮನೆಯವರ ಸಲಹೆಯೊಂದಿಗೆ ಶಸ್ತ್ರಚಿಕಿತ್ಸೆಯ ನಂತರದ ದಿನಗಳಿಗೆ ಸೂಕ್ತ ವ್ಯವಸ್ಥೆಯೊಂದಿಗೆ ಅಂತಿಮ ನಿರ್ಧಾರಕ್ಕೆ ಬನ್ನಿ.