ಮುಟ್ಟೆಂದರೆ ಮೈಲಿಗೆ, ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಇದೆ ಮೂಢ ಆಚರಣೆ: ಋತುಚಕ್ರದ ನೈರ್ಮಲ್ಯದ ಬಗ್ಗೆ ಬೇಕಿದೆ ಜಾಗೃತಿ
ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಬಹುತೇಕ ಕಡೆಗಳಲ್ಲಿ ಮುಟ್ಟಾದ ಹೆಣ್ಣುಮಗಳು ಮನೆಯಿಂದ ಹೊರಗಿರುವ ಪದ್ಧತಿ ಇದೆ. ಮುಟ್ಟೆಂದರೆ ಮೈಲಿಗೆ ಎಂಬಂತೆ ನೋಡಲಾಗುತ್ತದೆ. ಮುಟ್ಟಿನ ಬಗ್ಗೆ ಹೆಣ್ಮಕ್ಕಳಿಗೆ ಶಿಕ್ಷಣ ನೀಡುವುದಿಲ್ಲ.ಶೇ. 52ರಷ್ಟು ಗ್ರಾಮೀಣ ಭಾಗದ ಮಹಿಳೆಯರು ಋತುಚಕ್ರದ ನೈರ್ಮಲ್ಯ ವಿಧಾನಗಳನ್ನು ಬಳಸುವುದಿಲ್ಲ ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ.
ಮುಟ್ಟು ಅಥವಾ ಋತುಚಕ್ರವು ಪ್ರತಿಯೊಬ್ಬ ಮಹಿಳೆಗೂ ನೈಸರ್ಗಿಕ ಪ್ರಕ್ರಿಯೆಯಾಗಿದೆ. ಆದರೆ, ಭಾರತದ ಹಲವೆಡೆ ಮುಟ್ಟಿನ ಮತ್ತು ಋತುಚಕ್ರದ ಆಚರಣೆಗಳಲ್ಲಿ ಹಲವಾರು ಮೂಢನಂಬಿಕೆಗಳು ಇಂದಿಗೂ ಇವೆ. ಸಾಮಾಜಿಕ-ಸಾಂಸ್ಕೃತಿಕ ನಿರ್ಬಂಧ, ನಿಷೇಧಗಳಿವೆ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಬಹುತೇಕ ಕಡೆಗಳಲ್ಲಿ ಮುಟ್ಟಾದ ಹೆಣ್ಣುಮಗಳು ಮನೆಯಿಂದ ಹೊರಗಿರುವ ಪದ್ಧತಿ ಇದೆ. ಮುಟ್ಟೆಂದರೆ ಮೈಲಿಗೆ ಎಂಬಂತೆ ನೋಡಲಾಗುತ್ತದೆ. ಮುಟ್ಟಿನ ಬಗ್ಗೆ ಹೆಣ್ಮಕ್ಕಳಿಗೆ ಶಿಕ್ಷಣ ನೀಡುವುದಿಲ್ಲ. ಇಂದು ಶಾಲೆಗಳಲ್ಲಿ ಈ ಬಗ್ಗೆ ಶಿಕ್ಷಣ ನೀಡುತ್ತಿರಬಹುದು. ಆದರೂ, ಇಂದಿಗೂ ಹೆಣ್ಮಕ್ಕಳು ಈ ವಿಚಾರದಲ್ಲಿ ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಮುಖ್ಯವಾಗಿ ಮುಟ್ಟಿನ ಸಂದರ್ಭದಲ್ಲಿ ನೈರ್ಮಲ್ಯ ವಿಧಾನಗಳನ್ನು ಅನುಸರಿಸುವುದಿಲ್ಲ. ಈ ಬಗ್ಗೆ ಗ್ರಾಮೀಣ ಭಾಗದ ಹೆಚ್ಚಿನ ಮಹಿಳೆಯರಿಗೆ ಮಾಹಿತಿಯಿಲ್ಲ. 2015-16ರಲ್ಲಿ ನಡೆಸಲಾದ ಎನ್ಎಫ್ಎಚ್ಎಸ್ ಅಧ್ಯಯನದ ಪ್ರಕಾರ, ಶೇ. 52ರಷ್ಟು ಗ್ರಾಮೀಣ ಭಾಗದ ಭಾರತೀಯ ಮಹಿಳೆಯರು ನೈರ್ಮಲ್ಯ ವಿಧಾನಗಳನ್ನು ಬಳಸುವುದಿಲ್ಲ. ತಮ್ಮ ಮುಟ್ಟಿನ ಅವಧಿಯಲ್ಲಿ ಮುಟ್ಟಿನ ರಕ್ಷಣೆಗಾಗಿ ಬಟ್ಟೆಯನ್ನು ಬಳಸುತ್ತಾರೆ.
ಋತುಮತಿಯಾದ ಕೂಡಲೆ ಶಾಲೆ ಮೊಟಕು
ಎನ್ಎಫ್ಎಚ್ಎಸ್ ವರದಿಯ ಪ್ರಕಾರ, ಋತುಮತಿಯಾದ ಕೂಡಲೇ ಅಥವಾ ಮೊದಲ ಮುಟ್ಟಿನ ಸಂದರ್ಭದಲ್ಲಿ ಸುಮಾರು 23 ಮಿಲಿಯನ್ ಹುಡುಗಿಯರು ಶಾಲೆ ತೊರೆಯುತ್ತಾರೆ ಎಂದು ತಿಳಿದು ಬಂದಿದೆ. 15 ರಿಂದ 24 ವರ್ಷ ವಯಸ್ಸಿನ ಸುಮಾರು ಶೇ. 50 ರಷ್ಟು ಮಹಿಳೆಯರು ಇನ್ನೂ ಕೂಡ ಮುಟ್ಟಿನ ರಕ್ಷಣೆಗಾಗಿ ಬಟ್ಟೆಗಳನ್ನೇ ಬಳಸುತ್ತಾರೆ ಎಂದು ಹೇಳಲಾಗಿದೆ. ಇತ್ತೀಚಿನ UNICEF ಅಧ್ಯಯನದ ಪ್ರಕಾರ, ಭಾರತದಲ್ಲಿ ಶೇ. 71 ರಷ್ಟು ಹದಿಹರೆಯದ ಹುಡುಗಿಯರು ತಮ್ಮ ಮೊದಲ ಮುಟ್ಟು ಆಗುವವರೆಗೆ ಅದರ ಬಗ್ಗೆ ಮಾಹಿತಿಯೇ ತಿಳಿದಿರುವುದಿಲ್ಲ. ದೊಡ್ಡ ನಗರಗಳಲ್ಲಿ ಹಾಗೂ ಶಿಕ್ಷಣ ಪಡೆದ ಹೆಚ್ಚಿನ ಮಹಿಳೆಯರು ಪ್ಯಾಡ್‌ಗಳು, ಟ್ಯಾಂಪೂನ್‌ಗಳು ಮತ್ತು ಮುಟ್ಟಿನ ಕಪ್‌ಗಳಂತಹ ಆಧುನಿಕ ಮುಟ್ಟಿನ ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ. ಆದರೆ, ಗ್ರಾಮೀಣ ಭಾರತದಲ್ಲಿ ವಾಸ್ತವವು ತುಂಬಾ ವಿಭಿನ್ನವಾಗಿದೆ.
ಮುಟ್ಟಿನ ನೈರ್ಮಲ್ಯವನ್ನು ನಿರ್ಲಕ್ಷಿಸಿ ಹೊಲಗಳಲ್ಲಿ ಕೆಲಸ ಮಾಡುತ್ತಾರೆ
ಮೂಲಭೂತ ಅವಶ್ಯಕತೆಗಳ ಕೊರತೆಯಿದ್ದರೂ ಈ ಮಹಿಳೆಯರು ತಮ್ಮ ಪೀರಿಯಡ್ಸ್ ಅಥವಾ ಮುಟ್ಟನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದು ಅಚ್ಚರಿ ಪಡಬೇಕಾದ ವಿಷಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಮಹಿಳೆಯರು ಮುಟ್ಟಿನ ರಕ್ತದ ಹರಿವನ್ನು ಹೀರಿಕೊಳ್ಳಲು ನೈರ್ಮಲ್ಯ ಉತ್ಪನ್ನಗಳನ್ನು ಬಳಸುವುದಿಲ್ಲ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾರತವು ಅತ್ಯಂತ ಕೆಟ್ಟ ಪರಿಸ್ಥಿತಿಗಳನ್ನು ಹೊಂದಿದೆ. ಹುಡುಗಿಯರಿಗೆ ತಮ್ಮ ಮೊದಲ ಮುಟ್ಟಿನ ಬಗ್ಗೆ ತಿಳಿದಿರುವುದಿಲ್ಲ. ಅಲ್ಲದೆ ಮುಟ್ಟಾದ ಹೆಣ್ಮಕ್ಕಳಿಗೆ ಸಾಂಸ್ಕೃತಿಕ ನಿಷೇಧಗಳಿವೆ. ನೈರ್ಮಲ್ಯ ಅಭ್ಯಾಸಗಳ ಕೊರತೆಯು ಮುಟ್ಟಿನ ಮಹಿಳೆಯರಲ್ಲಿ ಸೋಂಕು, ಅಸ್ವಸ್ಥತೆ ಮತ್ತು ಇತರ ಪ್ರತಿಕೂಲ ಆರೋಗ್ಯ ಪರಿಣಾಮಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯ
ಕಳಪೆ ಮುಟ್ಟಿನ ನೈರ್ಮಲ್ಯವು ಭವಿಷ್ಯದಲ್ಲಿ ಬಂಜೆತನ ಮತ್ತು ಇತರೆ ಸಮಸ್ಯೆಗೆ ಕಾರಣವಾಗಬಹುದು. ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯ ಮಹಿಳೆಯರ ಮತ್ತು ಹದಿಹರೆಯದ ಹುಡುಗಿಯರ ಯೋಗಕ್ಷೇಮ ಮತ್ತು ಸಬಲೀಕರಣಕ್ಕೆ ನಿರ್ಣಾಯಕವಾಗಿದೆ. ನಗರ ಪ್ರದೇಶಗಳಲ್ಲಿರುವ ಹದಿಹರೆಯದ ಹುಡುಗಿಯರು ತಮ್ಮ ಮುಟ್ಟಿನ ತಿಂಗಳ ಬಗ್ಗೆ ಹೆಚ್ಚು ಜಾಗೃತರಾಗಿರುವ ಕಾರಣ ಗ್ರಾಮೀಣ ಪ್ರದೇಶಗಳಿಗಿಂತ ಗಮನಾರ್ಹವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ.
ಇನ್ನು ಮುಖ್ಯವಾಗಿ ಗ್ರಾಮೀಣ ನಿವಾಸಿಗಳು ಪ್ಯಾಡ್‌ಗಳನ್ನು ಪಾವತಿಸಲು ಹೆಣಗಾಡುತ್ತಾರೆ. ಏಕೆಂದರೆ ಅವರಿಗೆ ಆದಾಯದ ಸ್ಥಿರ ಮೂಲವಿಲ್ಲ. ಮುಟ್ಟಿನ ಸಮಯದಲ್ಲಿ ಸ್ನಾನ ಮಾಡುವುದು ಅನಾರೋಗ್ಯಕರ ಎಂದು ಅನೇಕ ಮಹಿಳೆಯರು ನಂಬಿದ್ದರು. ಅಲ್ಲದೆ ತಂಪಾದ ಆಹಾರ ತಿನ್ನುವುದರಿಂದ ಸಮಸ್ಯೆಯಾಗುತ್ತದೆ ಎಂಬ ಮೂಢನಂಬಿಕೆ ಹಳ್ಳಿಗಳ ಮುಗ್ಧ ಮಹಿಳೆಯರಿಗಿದೆ. ಅಲ್ಲದೆ, ಮುಟ್ಟಿನ ಸಂದರ್ಭದಲ್ಲಿ ಶುದ್ಧ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸಬೇಕು. ಆದರೆ, ಗ್ರಾಮೀಣ ಭಾಗದ ಅದೆಷ್ಟೋ ಹೆಣ್ಮಕ್ಕಳು ಅಶುದ್ಧ ಬಟ್ಟೆಗಳನ್ನು ಧರಿಸುತ್ತಾರೆ. ಅಷ್ಟೇ ಅಲ್ಲದೆ, ಸುಲಭವಾಗಿ ಸಿಗುವ ದಿನಪತ್ರಿಕೆಗಳು, ಒಣಗಿದ ಎಲೆಗಳು, ಹಳೆ ಬಟ್ಟೆಗಳನ್ನು ಬಳಸುತ್ತಾರೆ. ಇದರಿಂದ ಹಲವಾರು ರೀತಿಯೆ ಕಾಯಿಲೆಗಳು ವಕ್ಕರಿಸಬಹುದು. ಮುಟ್ಟಿನ ಸಂದರ್ಭದಲ್ಲಿ ನೈರ್ಮಲ್ಯ ಕಾಪಾಡುವುದು ಬಹಳ ಮುಖ್ಯ.