Womens Day 2024: ಮನೆ- ಕಚೇರಿ ಕೆಲಸ ಎರಡನ್ನೂ ಬ್ಯಾಲೆನ್ಸ್ ಮಾಡೋದು ಕಷ್ಟ ಅನ್ನೋ ಹೆಣ್ಮಕ್ಕಳಿಗೆ ಇಲ್ಲಿದೆ ಒಂದಿಷ್ಟು ಸಲಹೆ
ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳಿಗಿರುವ ಬಹು ದೊಡ್ಡ ಸವಾಲು ಮನೆ ಹಾಗೂ ವೃತ್ತಿ ಈ ಎರಡನ್ನೂ ನಿಭಾಯಿಸುವುದು. ವೃತ್ತಿ ಬದುಕನ್ನು ಸಂಭಾಳಿಸುವ ಜೊತೆಗೆ ಸಂಬಂಧದಲ್ಲೂ ಸಾಮರಸ್ಯ ಕಾಪಾಡಿಕೊಳ್ಳುವುದು ಸುಲಭವಲ್ಲ. ವರ್ಕ್-ಲೈಫ್ ಎರಡನ್ನೂ ಸಮನಾಗಿ ಬ್ಯಾಲೆನ್ಸ್ ಮಾಡೋದು ಹೇಗೆ ಎನ್ನುವುದಕ್ಕೆ ಹೆಣ್ಣುಮಕ್ಕಳಿಗೆ ಇಲ್ಲಿದೆ ಒಂದಿಷ್ಟು ಸಲಹೆ.
ʼಗಂಡ, ಮನೆ, ಮಕ್ಕಳು ಜೊತೆಗೆ ಈ ಕೆಲಸ ಈ ಎಲ್ಲವನ್ನೂ ಮ್ಯಾನೇಜ್ ಮಾಡೋ ಹೊತ್ತಿಗೆ ನಂಗಂತೂ ಸಾಕ್ ಸಾಕಾಗಿರುತ್ತೆ. ಇದಕ್ಕೆಲ್ಲಾ ಅಂತ್ಯ ಯಾವಾಗಪ್ಪ ಅಂತ ಎಷ್ಟೋ ಸಲ ಅಂದ್ಕೋತಿನಿ, ಹೆಣ್ಣುಮಕ್ಕಳಿಗೆ ಇಂದೊಂಥರ ಶಾಪ ಇರ್ಬೇಕುʼ ಅಂತೆಲ್ಲಾ ಹಲವು ಮಹಿಳೆಯರು ಗೋಳು ತೋಡಿಕೊಳ್ಳುವುದನ್ನು ನೀವು ನೋಡ್ತೀರಿ. ಇತ್ತೀಚಿನ ದಿನಗಳಲ್ಲಿ ವರ್ಕ್ ಹಾಗೂ ಲೈಫ್ ಬ್ಯಾಲೆನ್ಸ್ ಮಾಡೋದು ಹೆಣ್ಣುಮಕ್ಕಳಿಗೆ ಸವಾಲಾಗಿರುವುದು ಸುಳ್ಳಲ್ಲ.
ಹೆಣ್ಣುಮಕ್ಕಳು ಎದುರಿಸುತ್ತಿರುವ ಹಲವು ಸವಾಲುಗಳಲ್ಲಿ ವೃತ್ತಿ ಹಾಗೂ ವೈಯಕ್ತಿಕ ಬದುಕನ್ನು ನಿರ್ವಹಿಸುವುದು ಕೂಡ ಸೇರಿದೆ. ಇಂದಿನ ಕಾಲಘಟ್ಟದಲ್ಲಿ ಇಬ್ಬರೂ ದುಡಿದರಷ್ಟೇ ಕುಟುಂಬ ನಿರ್ವಹಣೆ ಸಾಧ್ಯ. ಅಲ್ಲದೇ ಸ್ವಾವಲಂಬನೆಯ ದೃಷ್ಟಿಯಿಂದಲೂ ಹೆಣ್ಣು ಹೊರಗಡೆ ದುಡಿಯುವುದು ಅವಶ್ಯ ಎಂಬ ಸ್ಥಿತಿ ಎದುರಾಗಿದೆ. ಆದರೆ ಮನೆ ಹಾಗೂ ಕಚೇರಿ ಕೆಲಸ ಎಂದು ಬಂದಾಗ ಎರಡನ್ನೂ ಸಂಭಾಳಿಸುವುದು ನಿಜಕ್ಕೂ ಹೆಣ್ಣುಮಕ್ಕಳಿಗೆ ಸವಾಲು. ವೃತ್ತಿ ಜೀವನದಲ್ಲೂ ಯಶಸ್ಸು ಸಾಧಿಸುವ ಜೊತೆ ಜೊತೆಗೆ ಮನೆ, ಸಂಸಾರ, ಗಂಡ-ಮಕ್ಕಳನ್ನು ನಿರ್ವಹಿಸುತ್ತಾ, ಸಂಬಂಧದಲ್ಲೂ ವೈಮನಸ್ಸು ಬಾರದಂತೆ ನೋಡಿಕೊಳ್ಳಬೇಕಾಗುತ್ತದೆ. ಇದರೊಂದಿಗೆ ಸ್ವಯಂ ಆರೈಕೆ ಹಾಗೂ ವೈಯಕ್ತಿಕ ಯೋಗಕ್ಷೇಮದ ಮೇಲೂ ಗಮನ ಹರಿಸಬೇಕು. ಸಮಯ ಹಾಗೂ ಶಕ್ತಿಯನ್ನು ಪ್ರಜ್ಞಾಪೂರ್ವಕವಾಗಿ ನಿರ್ವಹಿಸುವ ಕಲೆ ಹೆಣ್ಣುಮಕ್ಕಳಿಗೆ ತಿಳಿದಿರುತ್ತದೆ, ಆದರೂ ಕೆಲವೊಮ್ಮೆ ಈ ಎರಡನ್ನೂ ನಿಭಾಯಿಸೋದು ಕಷ್ಟ ಅನ್ನಿಸೋದು ಸುಳ್ಳಲ್ಲ. ಅಂತಹ ಹೆಣ್ಣುಮಕ್ಕಳಿಗೆ ಇಲ್ಲಿದೆ ಸಲಹೆ.
ಬೌಂಡರಿ ನಿರ್ಮಿಸಿಕೊಳ್ಳಿ
ವೈಯಕ್ತಿಕ ಬದುಕು ಹಾಗೂ ಕೆಲಸದ ನಡುವೆ ಬೌಂಡರಿ ಇರಲಿ. ಕೆಲಸದ ಅವಧಿಯಲ್ಲಿ ಮನೆ-ಸಂಸಾರ ವಿಚಾರ ತರಲೇಬೇಡಿ. ಕೆಲಸ ಮುಗಿದ ಮೇಲೆ ಯಾವುದೇ ಕಾರಣಕ್ಕೂ ಕಚೇರಿ ವಿಚಾರಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಎಲ್ಲದ್ದಕ್ಕೂ ಫುಲ್‌ಸ್ಟಾಪ್ ಹಾಕಿ ಮನೆ-ಮಕ್ಕಳು, ಸಂಸಾರ ಈ ವಿಚಾರದ ಬಗ್ಗಷ್ಟೇ ಯೋಚಿಸಿ. ಇದು ವೃತ್ತಿ ಹಾಗೂ ಸಂಸಾರದ ವಿಚಾರದಲ್ಲಿ ಸಾಮರಸ್ಯ ಸಾಧಿಸಲು ಬಹಳ ಅವಶ್ಯ.
ಸರಿಯಾಗಿ ಪ್ಲಾನ್ ಮಾಡಿ
ವೈಯಕ್ತಿಕ ಬದುಕು ಹಾಗೂ ಕಚೇರಿ ಕೆಲಸ ಈ ಎರಡ ವಿಚಾರದಲ್ಲೂ ಪ್ಲಾನ್ ಮಾಡುವುದು ಬಹಳ ಅವಶ್ಯ. ನೀವು ಪ್ಲಾನ್ ಮಾಡುವುದರಿಂದ ಎರಡನ್ನೂ ಸಮರ್ಥವಾಗಿ ನಿಭಾಯಿಸಬಹುದು. ಮನೆ ಕೆಲಸಗಳಿಗೆ ಒಂದು ವಾರ ಮುಂಚೆ ಅಡುಗೆ ಏನು ಮಾಡಬೇಕು, ಬಟ್ಟೆ ಎಂದು ವಾಶ್ ಮಾಡುವುದು, ಮನೆ ಕ್ಲೀನಿಂಗ್ ಯಾವ ಎಂದು ಪ್ಲಾನ್ ಮಾಡಿಕೊಳ್ಳಿ. ಕಚೇರಿ ಕೆಲಸದಲ್ಲಿ ಪ್ಲಾನ್ ಮಾಡಲು ಸಾಧ್ಯವಾಗದೇ ಇದ್ದರೆ ನಿರ್ದಿಷ್ಟ ಹೊತ್ತಿನಲ್ಲಿ ಇಂಥದ್ದನ್ನು ಮುಗಿಸಬೇಕು ಎನ್ನುವ ಛಲ ಇರಲಿ.
ಸಮಯ ನಿರ್ವಹಣೆ
ವೃತ್ತಿ ಹಾಗೂ ಮನೆ ಎರಡನ್ನೂ ನಿಭಾಯಿಸುವ ವಿಚಾರ ಬಂದಾಗ ಸಮಯ ನಿರ್ವಹಣೆಗೂ ಬಹಳ ಮುಖ್ಯವಾಗುತ್ತದೆ. ನಿಮ್ಮ ಆದ್ಯತೆ ಯಾವುದಕ್ಕೆ ಎಷ್ಟು ಕೊಡಬೇಕು ಎಂಬುದು ನಿಮಗೆ ಸ್ಪಷ್ಟ ಅರಿವಿರಬೇಕು. ಕೆಲಸ ಜವಾಬ್ದಾರಿಗಳಿಗೆ ಸಮಯ ಮೀಸಲಿರಿಸಿದಷ್ಟೇ ಕುಟುಂಬದೊಂದಿಗೆ ಸಮಯ ಕಳೆಯುವುದು, ನಿಮ್ಮ ಹವ್ಯಾಸಗಳನ್ನು ಮುಂದುವರಿಸುವುದು, ವೈಯಕ್ತಿಕ ಗುರಿಗಳತ್ತ ಗಮನ ನೀಡುವುದು ಕೂಡ ಬಹಳ ಮುಖ್ಯವಾಗುತ್ತದೆ.
ಒತ್ತಡ ನಿಭಾಯಿಸಿ
ಮನೆಗೆಲಸ ಹಾಗೂ ಕಚೇರಿ ಕೆಲಸ ಎಂದು ಬಂದಾಗ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಾಕಷ್ಟು ಒತ್ತಡ ಉಂಟಾಗುವುದು ಸಹಜ. ಆಗ ಬೇಡವೆಂದರೂ ಎರಡಲ್ಲೂ ನೆಮ್ಮದಿ ಕೆಡುತ್ತದೆ. ಅದಕ್ಕಾಗಿ ನೀವು ಒತ್ತಡ ನಿರ್ವಹಣೆಯನ್ನು ಕಲಿಯಬೇಕು. ಯೋಗ, ಧಾನ್ಯದಂತಹ ಅಭ್ಯಾಸಕ್ಕೂ ಸಮಯ ನೀಡಬೇಕು. ಕೆಲಸದ ಒತ್ತಡ ನಿಭಾಯಿಸಲು ಪೇಟಿಂಗ್ ಮಾಡುವುದು, ಹಾಡು ಕೇಳುವುದು, ಇಂತಹ ವೈಯಕ್ತಿಕ ವಿಚಾರಗಳತ್ತಲೂ ಗಮನ ಹರಿಸಬೇಕು.
ಹೊಂದಿಕೊಳ್ಳುವ ಗುಣ
ಕೆಲಸದ ಬದ್ಧತೆಗಳಿಗೆ ಧಕ್ಕೆಯಾಗದಂತೆ ಅನಿರೀಕ್ಷಿತ ಸಂದರ್ಭಗಳು ಹಾಗೂ ವೈಯಕ್ತಿಕ ಅಗತ್ಯಗಳಿಗೆ ಸರಿ ಹೊಂದಿಕೊಂಡು ಪರಿಸ್ಥಿತಿಯನ್ನು ನಿಭಾಯಿಸುವುದು ಮುಖ್ಯವಾಗುತ್ತದೆ. ಮನೆ ಹಾಗೂ ಕಚೇರಿ ಕೆಲಸದ ವೇಳಾಪಟ್ಟಿಗೆ ನಿಮ್ಮನ್ನು ಹೊಂದಿಸಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು.
ವೃತಿ ಹಾಗೂ ಸಂಸಾರದ ನಡುವೆ ಸಮತೋಲ ಏಕೆ ಬೇಕು?
ಹೆಣ್ಣಾಗಲಿ ಗಂಡಾಗಲಿ ವೃತ್ತಿ ಹಾಗೂ ವೈಯಕ್ತಿಕ ಬದುಕಿನ ನಡುವೆ ಸಮತೋಲನ ಇಲ್ಲದಿದ್ದರೆ ಎರಡೂ ಕಡೆ ತೊಂದರೆ ಅನುಭವಿಸಬೇಕಾಗುತ್ತದೆ. ಅಲ್ಲದೆ ಇದರಿಂದ ಅಲ್ಲಿಯೂ ಇಲ್ಲ, ಇಲ್ಲಿಯೂ ಸಲ್ಲ ಎಂಬ ಪರಿಸ್ಥಿತಿ ಎದುರಾಗುತ್ತದೆ. ಎರಡನ್ನೂ ಸಮತೋಲನದಲ್ಲಿ ಇರಿಸಿಕೊಂಡಾಗ ಮಾತ್ರ ನೆಮ್ಮದಿ, ಸಂತೋಷದಿಂದ ಇರಲು ಸಾಧ್ಯ. ಇಲ್ಲದಿದ್ದರೆ ನೀವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಎರಡೂ ರೀತಿಯಲ್ಲಿ ಕುಗ್ಗಬಹುದು. ವಿಶ್ರಾಂತಿ ಎಂಬುದು ದೇಹಕಷ್ಟೇ ಅಲ್ಲ ಮನಸ್ಸಿಗೂ ಮುಖ್ಯ. ಹೆಚ್ಚಿನ ಮಹಿಳೆಯರು ತಮ್ಮ ಕೆಲಸದ ಒತ್ತಡವನ್ನು ಮನೆಯಲ್ಲಿ ಗಂಡ-ಮಕ್ಕಳು ಅಥವಾ ಮನೆಯವರ ಮೇಲೆ ತೋರಿಸುತ್ತಾರೆ. ಇದರಿಂದ ಅಲ್ಲಿಯೂ ಸಂಬಂಧ ಹದಗೆಡುತ್ತದೆ. ಇದು ಅಪಾಯ. ಎಂಟು ಗಂಟೆಗಳ ಕಚೇರಿ ಕೆಲಸ ಹೊರತು ಪಡಿಸಿ ಉಳಿದ ಸಮಯವನ್ನು ನೀವು ಕಡ್ಡಾಯವಾಗಿ ನಿಮ್ಮ ಮನೆಗೆಂದು ಮೀಸಲಿರಿಸಬೇಕು. ವರ್ಕ್‌ಹೋಲಿಕ್‌ಗಳು ತಮ್ಮ ವೈಯಕ್ತಿಕ ಜೀವನದ ಮೇಲೆ ಗಮನ ಹರಿಸುವುದಿಲ್ಲ, ಆದರೆ ಇದು ಖಂಡಿತ ಅಪಾಯ ಎನ್ನುವುದನ್ನು ಹಲವು ಅಧ್ಯಯನಗಳು ಸಾಬೀತು ಪಡಿಸಿವೆ. ಅಂತಹವರಲ್ಲಿ ಒತ್ತಡ ಕಾರಣದಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗಿರುತ್ತದೆ. ನಿಧಾನಕ್ಕೆ ಅವರ ಕೆಲಸದ ರೀತಿಯಲ್ಲೂ ಬದಲಾವಣೆಗಳಾಗುತ್ತವೆ. ಈ ಎಲ್ಲವನ್ನೂ ಎದುರಿಸಲು ಕಚೇರಿ ಹಾಗೂ ವೈಯಕ್ತಿಕ ಜೀವನವನ್ನು ಬ್ಯಾಲೆನ್ಸ್ ಮಾಡುವುದು ಬಹಳ ಮುಖ್ಯ ಎನ್ನಿಸುತ್ತದೆ.̈
(This copy first appeared in Hindustan Times Kannada website. To read more like this please logon to kannada.hindustantimes.com)
ವಿಭಾಗ