ಕನ್ನಡ ಸುದ್ದಿ  /  Lifestyle  /  Womens Day 2024 How To Empower Women Celebration Of Women Hood 10 Ways To Empower Women Rst

Womens Days 2024: ಮಹಿಳೆಯರ ದಿನವನ್ನು ಸಂಭ್ರಮಿಸುವ ಮುನ್ನ ಅವರನ್ನು ಸ್ವಾವಲಂಬಿಯನ್ನಾಗಿಸಿ, ಈ 10 ಮಾರ್ಗ ಅನುಸರಿಸಿ

ಪ್ರತಿವರ್ಷ ಮಾರ್ಚ್‌ 8 ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಮಹಿಳೆಯರ ಅಸ್ತಿತ್ವವನ್ನು ಸಂಭ್ರಮಿಸುವ ದಿನವಿದು. ಈ ದಿನದ ಸಂದರ್ಭ ಹೆಣ್ಣುಮಕ್ಕಳ ಸ್ವಾವಲಂಬನೆಗೂ ಒತ್ತು ನೀಡಿ. ಆ ಮೂಲಕ ಸಮಾಜದಲ್ಲಿ ಅವರ ಸ್ಥಾನಮಾನವನ್ನು ಭದ್ರಗೊಳಿಸಿ. ಹೆಣ್ಣುಮಕ್ಕಳನ್ನು ಸ್ವಾವಲಂಬಿಯನ್ನಾಗಿರುವ ದಾರಿಗಳು ಹೀಗಿವೆ.

ಮಹಿಳೆಯರ ದಿನವನ್ನು ಸಂಭ್ರಮಿಸುವ ಮುನ್ನ ಅವರನ್ನು ಸ್ವಾವಲಂಬಿಯನ್ನಾಗಿಸಿ, ಈ 10 ಮಾರ್ಗ ಅನುಸರಿಸಿ
ಮಹಿಳೆಯರ ದಿನವನ್ನು ಸಂಭ್ರಮಿಸುವ ಮುನ್ನ ಅವರನ್ನು ಸ್ವಾವಲಂಬಿಯನ್ನಾಗಿಸಿ, ಈ 10 ಮಾರ್ಗ ಅನುಸರಿಸಿ

ಮಹಿಳಾ ಸಬಲೀಕರಣದ ವಿಚಾರ ಬಂದಾಗಲೆಲ್ಲಾ ಹೆಣ್ಣುಮಕ್ಕಳು ಸ್ವಾವಲಂಬಿಯಾಗಿರುವುದು ಎಷ್ಟು ಮುಖ್ಯ ಎಂಬ ವಿಚಾರವೂ ಮುನ್ನೆಲೆಗೆ ಬರುತ್ತದೆ. ಇಂದಿನ ಕಾಲಘಟ್ಟದಲ್ಲಿ ಮಹಿಳೆಯರು ಸ್ವಾವಲಂಬಿಯಾಗಿರುವುದು ಖಂಡಿತ ಅವಶ್ಯ. ಸ್ವಾವಲಂಬಿಯಾಗಿರುವುದರಿಂದ ಬದುಕನ್ನ ಎದುರಿಸುವ ಧೈರ್ಯ ಕಲಿಯಬಹುದು. ತಮ್ಮ ಹಕ್ಕು-ಬಾಧ್ಯತೆಗಳ ಬಗ್ಗೆ ತಿಳಿವಳಿಕೆ ಮೂಡಿಸಿಕೊಳ್ಳಬಹುದು. ಇದೆಲ್ಲದರ ಜೊತೆಗೆ ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವುದರಿಂದ, ಎದುರಾಗುವ ಎಲ್ಲಾ ಕಷ್ಟಗಳಲ್ಲೂ ಧೈರ್ಯದಿಂದ ಮುನ್ನುಗ್ಗುವ ಗುಣ ಅವಳಲ್ಲಿ ಬೆಳೆಯುತ್ತದೆ. ಹೆಣ್ಣುಮಕ್ಕಳಿಗೆ ಸ್ವಾವಲಂಬನೆ ಎಂಬುದು ಮನೆಯಿಂದಲೇ ಆರಂಭವಾಗಬೇಕು. ಆಗ ಆಕೆಯ ಭವಿಷ್ಯವೂ ಉತ್ತಮವಾಗಿರುತ್ತದೆ. ಮಹಿಳೆಯನ್ನು ಸ್ವಾವಲಂಬಿಯಾಗಿಸುವಲ್ಲಿ ಮನೆ, ಕಚೇರಿ, ಸಮಾಜ ಈ ಎಲ್ಲದರ ಪಾತ್ರವೂ ಮುಖ್ಯ. ಹೆಣ್ಣುಮಕ್ಕಳನ್ನು ಸ್ವಾವಲಂಬಿಯನ್ನಾಗಿಸಲು ಇಲ್ಲಿದೆ ಒಂದಿಷ್ಟು ಮಾರ್ಗಗಳು.

ಸ್ವಾಭಿಮಾನ ಹೆಚ್ಚಿಸಿ

ಸಶಕ್ತ ಮಹಿಳೆಯರು ಇತರರನ್ನು ಸಬಲೀಕರಣಗೊಳಿಸುವ ಮಾರ್ಗದಲ್ಲಿ ನಡೆಯುತ್ತಾರೆ. ಅದಕ್ಕಾಗಿ ನಿಮ್ಮ ಸುತ್ತಲಿರುವ ಮಹಿಳೆಯರನ್ನು ಪ್ರೋತ್ಸಾಹಿಸಿ ಹಾಗೂ ಅವರನ್ನು ಬಲಶಾಲಿಗಳನ್ನಾಗಿ ಮಾಡಿ. ನಿಮ್ಮ ಸ್ನೇಹಿತೆಯರು ಹಾಗೂ ಮನೆಯ ಹೆಣ್ಣುಮಕ್ಕಳನ್ನು ಧೈರ್ಯವಾಗಿ ಮಾತನಾಡುವಂತೆ ಪ್ರೇರೇಪಿಸಿ. ಅವರ ಅಭಿಪ್ರಾಯಗಳಿಗೆ ಬೆಲೆ ಇದೆ ಎಂಬುದನ್ನು ಖಚಿತಪಡಿಸಿ, ಇದರಿಂದ ಅವರು ಧೈರ್ಯವಾಗಿ ಮಾತನಾಡುತ್ತಾರೆ, ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ನಿಮಗೆ ಮಗಳಿದ್ದರೆ ಚಿಕ್ಕ ವಯಸ್ಸಿನಿಂದಲೇ ಅವಳಲ್ಲಿ ಸ್ವಯಂ ಅಭಿವ್ಯಕ್ತಿ ಮೂಡುವಂತೆ ಮಾಡಿ. ಚಿಕ್ಕ ವಯಸ್ಸಿನಿಂದಲೇ ಮಗಳ ಆಸೆ ಕನಸುಗಳನ್ನು ಪ್ರೋತ್ಸಾಹಿಸುತ್ತಾ ಬನ್ನಿ, ಅವಳ ಆಸೆ ಕನಸುಗಳಿಗೆ ರೆಕ್ಕೆ ಮೂಡಿಸಿ ಹಾರಲು ಬಿಡಿ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಶಿಕ್ಷಣ ಹೀಗೆ ಎಲ್ಲಾ ವಿಚಾರಗಳನ್ನೂ ಅವಳ ಆಸೆಯನ್ನು ಬೆಂಬಲಿಸಿ.

ಮುಕ್ತವಾಗಿ ಪ್ರಾಮಾಣಿಕರಾಗಿರಿ

ನಿಮ್ಮ ಗೆಳತಿ ಅಥವಾ ತಂಗಿ, ತಾಯಿ ಯಾರೇ ಆಗಿರಲಿ ಅವರೊಂದಿಗೆ ಪ್ರಮಾಣಿಕರಾಗಿರುವುದು ತುಂಬಾ ಅವಶ್ಯ. ಅವರ ಪಾಸಿಟಿವ್‌ ಹಾಗೂ ನೆಗೆಟಿವ್‌ಗಳನ್ನು ನೇರವಾಗಿ ಹೇಳಿ. ಅವರಿಗೆ ಅರ್ಥ ಮಾಡಿಸಿ. ಪ್ರಪಂಚದಲ್ಲಿ ಹೆಣ್ಣುಮಕ್ಕಳ ಸುಧಾರಣೆಗಾಗಿ ಧ್ವನಿ ಎತ್ತಿದವರ ಉದಾಹರಣೆ ನೀಡಿ ನೀನು ಅವರಂತೆ ಆಗಬೇಕು ಎಂದು ಅವರನ್ನು ಪ್ರೋತ್ಸಾಹಿಸಿ. ಅಂತಹವರ ಕಥೆಯನ್ನು ಹೇಳಿ ಅವರಂತೆ ಆಗಲು ಪ್ರೇರೇಪಿಸಿ. ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಪ್ರಾಮಾಣಿಕವಾಗಿ ತಿಳಿಸುವುದರಿಂದ ಅವರಲ್ಲಿರುವ ನೆಗೆಟಿವ್‌ ಅಂಶಗಳು ಅವರಿಗೆ ಅರಿವಾಗಿ, ತಮ್ಮನ್ನು ತಾವು ಬದಲಿಸಿಕೊಳ್ಳುತ್ತಾರೆ. ಇದು ಕೂಡ ಸ್ವಾವಲಂಬಿಯನ್ನಾಗಿಸುವ ಮಾರ್ಗದಲ್ಲಿ ಒಂದು.

ಮಹಿಳಾ ಸಹೋದ್ಯೋಗಿಗಳಿಗೆ ಸಹಕಾರ ನೀಡಿ

ಹಿಂದಿನಿಂದಲೂ ಉದ್ಯೋಗಕ್ಷೇತ್ರಗಳಲ್ಲಿ ಮಹಿಳೆಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅದು ಇಂದಿಗೂ ಮುಂದುವರಿದಿದೆ. ಆದರೆ ನೀವು ನಿಮ್ಮ ಸಹೋದ್ಯೋಗಿ ಜೊತೆ ಉತ್ತಮ ಸ್ನೇಹಿತನಾಗಿ ಅವರನ್ನು ನಿಮ್ಮೊಂದಿಗೆ ಮುಂದೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿ. ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತು ಅದಕ್ಕೆ ಸ್ಪಂದಿಸಿ, ಆ ಮೂಲಕ ಹೆಣ್ಣುಮಕ್ಕಳು ಸ್ವಾವಲಂಬಿ ಎನ್ನಿಸಿಕೊಳ್ಳಲು ಸಹಕಾರ ನೀಡಿ.

ಉದಾಹರಣೆಗಳೊಂದಿಗೆ ಮುನ್ನಡೆಯಲು ಸಹಾಯ ಮಾಡಿ

ಇದು ಮಹಿಳೆಯರನ್ನು ಸಬಲೀಕರಣಗೊಳಿಸಲು ಇರುವ ಪ್ರಮುಖ ದಾರಿಗಳಲ್ಲಿ ಒಂದು. ಹೆಣ್ಣುಮಕ್ಕಳು ರೋಲ್‌ ಮಾಡೆಲ್‌ಗಳಿಂದ ಸ್ಫೂರ್ತಿ ಪಡೆಯುತ್ತಾರೆ. ಹಾಗಾಗಿ ಬೇರೆಯವರ ಉದಾಹರಣೆಯನ್ನು ನೀಡಿ ಅವರಂತೆ ಬೆಳೆಯಲು ಪ್ರೋತ್ಸಾಹಿಸಿ. ಅವರಲ್ಲಿ ಆಸೆಗಳನ್ನು ಕೇಳಿ, ಅದನ್ನು ಸಕಾರಗೊಳಿಸಿಕೊಳ್ಳಲು ಅವರಿಗೆ ನೆರವಾಗಿ.

ಮಾರ್ಗದರ್ಶಕರಾಗಿ

ನೀವು ನಿಮ್ಮ ಜೀವನದ ಯಾವುದೇ ಮಹಿಳೆಯನ್ನು ಸ್ವಾವಲಂಬಿಯನ್ನಾಗಿಸಲು ಮೊದಲು ಅವರಿಗೆ ಮಾರ್ಗದರ್ಶಕರಾಗಿ. ಮಾರ್ಗದರ್ಶನದ ಮೂಲಕ ಪ್ರೇರೇಪಿಸುವ ಕೆಲಸ ಮಾಡಬಹುದು. ಮಹಿಳಾ ಸಬಲೀಕರಣ ಚಟುವಟಿಕೆಗಳಲ್ಲಿ ಅವರನ್ನು ಭಾಗವಹಿಸುವಂತೆ ಮಾಡಿ.

ಸ್ವಂತ ಉದ್ಯಮ ನಡೆಸಲು ಪ್ರೋತ್ಸಾಹಿಸಿ

ಮಹಿಳೆ ಸ್ವಾವಲಂಬಿಯಾಗಲು ಸ್ವಂತ ಉದ್ಯಮವು ಸಾಕಷ್ಟು ನೆರವಾಗುತ್ತದೆ. ಇದರಿಂದ ಆಕೆ ಧೈರ್ಯ, ವ್ಯವಹಾರ ಜ್ಞಾನ, ಮಾತಿನ ಚಾಕಚಕ್ಯತೆ ಎಲ್ಲವನ್ನೂ ಕಲಿಯುತ್ತಾಳೆ.

ಆಕೆಯಲ್ಲಿರುವ ಸಾಮರ್ಥ್ಯವನ್ನು ಪರಿಚಯಿಸಿ

ಹಲವು ಹೆಣ್ಣುಮಕ್ಕಳಿಗೆ ಅವರಲ್ಲಿರುವ ಸಾಮರ್ಥ್ಯದ ಬಗ್ಗೆ ಅವರಿಗೆ ಅರಿವು ಇರುವುದಿಲ್ಲ. ಹಾಗಾಗಿ ಎಲ್ಲೋ ಒಂದು ಕಡೆ ಬೂದಿ ಮುಚ್ಚಿದ ಕೆಂಡದಂತೆ ಇರುತ್ತಾರೆ. ಅಂತವರಿಗೆ ಅವರ ಸಾಮರ್ಥ್ಯದ ಪರಿಚಯ ಮಾಡಿಸಿ, ಮುಂದೆ ತರುವುದು ಬಹಳ ಮುಖ್ಯವಾಗುತ್ತದೆ.

ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ

ಹೆಣ್ಣುಮಕ್ಕಳನ್ನು ಸ್ವಾವಲಂಬಿಯನ್ನಾಗಿಸುವ ಪ್ರಮುಖ ಅಸ್ತ್ರವೆಂದರೆ ಅನ್ಯಾಯದ ವಿರುದ್ಧ ಹೋರಾಡುವಂತೆ ಮಾಡುವುದು. ಅದಕ್ಕಾಗಿ ನಾವು ಆಕೆಯ ಬೆನ್ನ ಹಿಂದೆ ನಿಲ್ಲಬೇಕು. ಮಹಿಳಾ ಹಕ್ಕುಗಳಿಗಾಗಿ ಪ್ರೋತ್ಸಾಹ ನೀಡಲು ಸಹಕರಿಸಬೇಕು.

ಹೊಸ ಅಮ್ಮನಿಗೆ ಹೊಂದಿಕೊಳ್ಳಲು ಸಮಯ ನೀಡಿ

ಹಲವು ಕಂಪನಿಗಳಲ್ಲಿ ಮಗುವಾದ ತಕ್ಷಣ ಹೆಣ್ಣುಮಕ್ಕಳು ಕೆಲಸ ಬಿಡುತ್ತಾರೆ. ಇದಕ್ಕೆ ಕಾರಣ ತನ್ನಿಂದ ಎರಡನ್ನೂ ಮ್ಯಾನೇಜ್‌ ಮಾಡಲು ಸಾಧ್ಯವಾಗುವುದಿಲ್ಲ ಎಂಬುದು. ಮೆಟರ್ನಿಟಿ ರಜೆಗಳು ಇದ್ದರೂ ಅದನ್ನು ಮುಗಿಸಿ ಕೆಲಸಕ್ಕೆ ಬರುವ ತಾಯಿಗೆ ಕಂಪನಿ ಹಾಗೂ ಸಹೋದ್ಯೋಗಿಗಳು ಒಂದಿಷ್ಟು ಸಹಕಾರ ನೀಡಬೇಕು. ಆಗ ಮಾತ್ರ ಆಕೆ ಸ್ವಾವಲಂಬಿಯಾಗಿ ಯೋಚನೆ ಮಾಡಲು ಸಾಧ್ಯ, ಅಲ್ಲದೆ ಉದ್ಯೋಗರಂಗದಲ್ಲಿ ಆಕೆ ಮುಂದುವರಿಯಲು ಸಾಧ್ಯ.

ಮೆಚ್ಚುಗೆ ಸೂಚಿಸಿ

ನಿಮ್ಮ ಬದುಕಿನಲ್ಲಿ ಇರುವ ಹೆಣ್ಣುಮಕ್ಕಳನ್ನು ಸ್ವಾಲವಂಬಿಗಳನ್ನಾಗಿಸಲು ಮೊದಲು ಅವರು ಮಾಡಿದ ಕೆಲಸಗಳಿಗೆ ಮೆಚ್ಚುಗೆ ಸೂಚಿಸಿ. ಅವರ ಮಾಡಿದ ತಪ್ಪುಗಳನ್ನೇ ಆಡಿಕೊಂಡು ಇರುವ ಕೆಲಸ ಮಾಡಬೇಡಿ. ಅವರ ಚಿಕ್ಕ ಪುಟ್ಟ ಕೆಲಸಗಳಿಗೆ ಮೆಚ್ಚುಗೆ ಸೂಚಿಸಿ, ಇನ್ನಷ್ಟು ಮುಂದುವರಿಯುವಂತೆ ಮಾಡಿ. ಅವರಲ್ಲಿನ ಆತ್ಮವಿಶ್ವಾಸ ಕುಗ್ಗಿಸಬೇಡಿ.

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ