Women's heart health: ಮಹಿಳೆಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತ; ಜೀವನಶೈಲಿಯ ಸುಧಾರಣೆ ಬಹಳ ಅವಶ್ಯ
Women's heart health: ಪ್ರಪಂಚದಾದ್ಯಂತ ಹೃದಯಾಘಾತ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಮಹಿಳೆಯಲ್ಲಿ ಹೆಚ್ಚಾಗುತ್ತಿದೆ. ಹೃದಯ ತಜ್ಞರ ಪ್ರಕಾರ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವ ಮೂಲಕ ಹೃದಯ ಸಂಬಂಧಿ ಸಮಸ್ಯೆಗಳಿಂದ ದೂರ ಇರಬಹುದು.
ಭಾರತ ಸೇರಿದಂತೆ ಪ್ರಪಂಚದಾದ್ಯಂತ ಮಹಿಳೆಯರಲ್ಲಿ ಹೃದಯಾಘಾತ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳ ಪ್ರಮಾಣ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ, ಸ್ತನ ಕ್ಯಾನ್ಸರ್‌ಗೆ ಹೋಲಿಸಿದರೆ ಹೃದಯಾಘಾತ ಮತ್ತು ಹೃದಯ ಸ್ತಂಭನದಂತಹ ಕಾಯಿಲೆಗಳಿಂದ 10 ಪಟ್ಟು ಹೆಚ್ಚು ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಮಹಿಳೆಯರ ಹೃದಯದ ಆರೋಗ್ಯವನ್ನು ಹದಗೆಡಿಸುವ ಮತ್ತು ಹೆಚ್ಚು ಹೃದ್ರೋಗಕ್ಕೆ ಒಳಗಾಗುವಂತೆ ಮಾಡುವ ಹಲವಾರು ಅಂಶಗಳಿವೆ. ಹೃದಯಕ್ಕೆ ಹಾನಿಯಾಗುವ, ಕಂಡುಹಿಡಿಯಲು ಸಾಧ್ಯವಾಗದ ರಕ್ತದೊತ್ತಡ ಸಮಸ್ಯೆಯು ಮಹಿಳೆಯರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುವ ಕಾರಣಗಳಲ್ಲಿ ಒಂದಾಗಿದೆ.
ಆರಂಭಿಕ ಋತುಬಂಧ, ಪಿಸಿಓಎಸ್, ಗರ್ಭಾವಸ್ಥೆಯ ಮಧುಮೇಹ, ಪ್ರಸವಪೂರ್ವ ಹೆರಿಗೆಯು ಮಹಿಳೆಯರನ್ನು ಹೃದಯಾಘಾತದ ಅಪಾಯಕ್ಕೆ ಒಳಪಡಿಸುವ ಸಂತಾನೋತ್ಪತ್ತಿ ಅಂಶಗಳಲ್ಲಿ ಸೇರಿವೆ. ಅಧಿಕ ಕೊಲೆಸ್ಟ್ರಾಲ್, ಧೂಮಪಾನ, ಮಧುಮೇಹ, ಬೊಜ್ಜು, ಅಸಮರ್ಪಕ ಆಹಾರಕ್ರಮ, ಜಡ ಜೀವನಶೈಲಿ, ಒತ್ತಡ ಹಾಗೂ ಮಾನಸಿಕ ಸಮಸ್ಯೆಗಳೂ ಮಹಿಳೆಯರಿಗೆ ಹೃದಯ ಸಂಬಂಧಿ ಸಮಸ್ಯೆ ಉಂಟಾಗಲು ಕಾರಣವಿರಬಹುದು.
ಅಪಾಯಕಾರಿ ಅಂಶಗಳು
ಇಂಡಿಯನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, ಹೃದಯರಕ್ತನಾಳದ ಕಾಯಿಲೆ (CVD) ಭಾರತದಲ್ಲಿ ಶೇ 50ರಷ್ಟು ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ ಮತ್ತು ದೇಶದಲ್ಲಿ ಶೇ25 ರಷ್ಟು ಮಹಿಳೆಯರು ಈ ಕಾರಣದಿಂದ ಸಾವನ್ನಪ್ಪುತ್ತಿದ್ದಾರೆ.
ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವ ಮೂಲಕ ಮಹಿಳೆಯರು ಹೃದಯ ಸಂಬಂಧಿ ಸಮಸ್ಯೆಗಳಿಂದ ದೂರ ಇರಬಹುದು ಎನ್ನುತ್ತಾರೆ ಜೈಪುರದ ಸಿಕೆ ಬಿರ್ಲಾ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ. ರುದ್ರದೇವ್ ಪಾಂಡೆ.
ಪೋಷಕಾಂಶಗಳಿಂದ ಕೂಡಿರುವ ಆಹಾರ ಸೇವನೆ
ನಾರಿನಾಂಶ ಅಧಿಕವಿರುವ ಆಹಾರ ಪದಾರ್ಥಗಳು, ಹಣ್ಣು, ತರಕಾರಿ, ಧಾನ್ಯಗಳು, ಕಡಿಮೆ ಪ್ರಮಾಣದಲ್ಲಿ ಸ್ಯಾಚುರೇಟೆಡ್ ಹಾಗೂ ಟ್ರಾನ್ಸ್ ಆಹಾರಗಳ ಸೇವನೆಯಿಂದ ಹೃದಯ ಸಂಬಂಧಿ ಸಮಸ್ಯೆಗಳಿಂದ ದೂರ ಉಳಿಯಬಹುದು. ದೇಶದಲ್ಲಿ ಪ್ರಸ್ತುತ ಸಂಶೋಧನೆಯ ಅಂದಾಜಿನ ಪ್ರಕಾರ ಸಮತೋಲಿತ ಆಹಾರ ಸೇವನೆಯಿಂದ ಭಾರತೀಯ ಮಹಿಳೆಯರಲ್ಲಿ ಹೃದಯರಕ್ತನಾಳದ ಕಾಯಿಲೆಯ ಸಂಭವ ಕಡಿಮೆ ಇದೆ.
ನಿರಂತರ ವ್ಯಾಯಾಮ
ಭಾರತೀಯ ಮಹಿಳೆಯರು ತನ್ನ ಕುಟುಂಬದವರ ಬೇಕು, ಬೇಡಗಳನ್ನು ಗಮನಿಸುವ ನಡುವೆ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದು ಕಡಿಮೆ. ಆದರೆ ನಿರಂತರ ವ್ಯಾಯಾಮದ ಅಗತ್ಯ ಹೆಣ್ಣುಮಕ್ಕಳಿಗೆ ಬಹಳಷ್ಟಿದೆ. ನಿರಂತರ ವ್ಯಾಯಾಮದಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಇದರಿಂದ ಹೃದಯದ ತೊಂದರೆಗಳು ಕಡಿಮೆಯಾಗುತ್ತವೆ. ಅಲ್ಲದೇ ವ್ಯಾಯಾಮವು ತೂಕವನ್ನು ನಿಯಂತ್ರದಲ್ಲಿಡುವುದರಿಂದ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ವಾರದಲ್ಲಿ ಕನಿಷ್ಠ 150 ನಿಮಿಷಗಳ ಕಾಲ ಮಧ್ಯಮ ಮಟ್ಟದಲ್ಲಿ ಏರೋಬಿಕ್ ವ್ಯಾಯಾಮ ಮಾಡುವುದು ಅವಶ್ಯ ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಸಲಹೆ ನೀಡಿದೆ.
ಒತ್ತಡ ನಿಯಂತ್ರಣ
ಮಹಿಳೆಯರು ಹಾಗೂ ಪುರುಷರಲ್ಲಿ ಹೃದಯಾಘಾತದ ಸಮಸ್ಯೆ ಹೆಚ್ಚಾಗಲು ಅತಿಯಾದ ಒತ್ತಡವೂ ಪ್ರಮುಖ ಕಾರಣ. ಆದರೆ ಕೆಲವೊಮ್ಮೆ ಒತ್ತಡ ಕಡಿಮೆ ಮಾಡಿಕೊಳ್ಳುವ ತಂತ್ರವನ್ನು ಕಂಡುಹಿಡಿಯುವುದು ಕಷ್ಟವಾಗುತ್ತದೆ. ಆದರೆ ಇದು ಅನಿವಾರ್ಯ. ಇರುವ ಸಮಯದಲ್ಲೇ ಒತ್ತಡ ನಿಯಂತ್ರಣ ಮಾರ್ಗಗಳನ್ನು ಕಂಡುಕೊಳ್ಳಬೇಕು. ಮನಸ್ಸಿಗೆ ವಿಶ್ರಾಂತಿ ಸಿಗುವ ವ್ಯಾಯಾಮಗಳು, ಯೋಗ ಹಾಗೂ ಧ್ಯಾನದ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.
ಧೂಮಪಾನಕ್ಕೆ ಗುಡ್‌ಬಾಯ್ ಹೇಳಿ
ಹೃದಯದ ಆರೋಗ್ಯ ಸಮಸ್ಯೆಗೆ ಧೂಮಪಾನವೂ ಪ್ರಮುಖ ಕಾರಣ. ಅಲ್ಲದೇ ಇದರಿಂದ ಹಲವು ರೀತಿಯ ಇನ್ನಿತರ ಸಮಸ್ಯೆಗಳೂ ಕಾಣಿಸಬಹುದು. ಧೂಮಪಾನ ಮಾಡುವುದನ್ನು ನಿಲ್ಲಿಸುವುದರಿಂದ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.
ಮಧ್ಯಪಾನ ನಿಲ್ಲಿಸಿ
ಇತ್ತೀಚೆಗೆ ಮಧ್ಯಪಾನ ಮಾಡುವುದು ಫ್ಯಾಷನ್ ಎಂಬಂತಾಗಿದೆ. ಮಹಿಳೆಯರು ಮಧ್ಯಪಾನ ಮಾಡುವುದರಲ್ಲಿ ಹಿಂದೆ ಉಳಿದಿಲ್ಲ. ಆದರೆ ಮಧ್ಯಪಾನವು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಯಕೃತ್ತಿನ ಸಮಸ್ಯೆ, ಅತಿಯಾದ ರಕ್ತದೊತ್ತಡ ಅಲ್ಲದೆ ಕೆಲವೊಂದು ಕ್ಯಾನ್ಸರ್ ರೋಗಗಳಿಗೂ ಇದು ಕಾರಣವಾಗಬಹುದು. ಆ ಕಾರಣಕ್ಕೆ ಕುಡಿಯಲೇ ಬೇಕು ಎಂದಿದ್ದರೆ ಮಿತವಾಗಿ ಆಲ್ಕೋಹಾಲ್ ಸೇವನೆ ಮಾಡುವುದು ಉತ್ತಮ.
ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಮೇಲೆ ನಿಗಾ ಇರಲಿ
ಮಧುಮೇಹ, ಏರು ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಈ ಸಮಸ್ಯೆ ಇರುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವ ಸಂಭವ ಹೆಚ್ಚು. ಧ್ಯಾನ, ಸಮರ್ಪಕ ಆಹಾರ ಸೇವನೆ ಹಾಗೂ ನಿರಂತರ ತಪಾಸಣೆಯ ಮೂಲಕ ಇವುಗಳನ್ನು ನಿಯಂತ್ರಿಸಬಹುದು.
ವಿಭಾಗ