ಉದ್ಯೋಗ ಬದುಕಿನ ನಿಮ್ಮ ಅನುಭವಗಳನ್ನ ದಾಖಲಿಸಿ ಪುಸ್ತಕ ಬರೆಯಲು ಶುರು ಮಾಡಿ, ಖಂಡಿತ ಅದು ಜನೋಪಯೋಗಿಯಾಗುತ್ತೆ; ಮಧು ವೈಎನ್‌ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಉದ್ಯೋಗ ಬದುಕಿನ ನಿಮ್ಮ ಅನುಭವಗಳನ್ನ ದಾಖಲಿಸಿ ಪುಸ್ತಕ ಬರೆಯಲು ಶುರು ಮಾಡಿ, ಖಂಡಿತ ಅದು ಜನೋಪಯೋಗಿಯಾಗುತ್ತೆ; ಮಧು ವೈಎನ್‌ ಬರಹ

ಉದ್ಯೋಗ ಬದುಕಿನ ನಿಮ್ಮ ಅನುಭವಗಳನ್ನ ದಾಖಲಿಸಿ ಪುಸ್ತಕ ಬರೆಯಲು ಶುರು ಮಾಡಿ, ಖಂಡಿತ ಅದು ಜನೋಪಯೋಗಿಯಾಗುತ್ತೆ; ಮಧು ವೈಎನ್‌ ಬರಹ

ಪ್ರತಿಯೊಬ್ಬರ ಔದ್ಯೋಗಿಕ ಬದುಕು ಅನುಭವಗಳ ಗುಚ್ಛ. ನಮ್ಮ ಉದ್ಯೋಗ ಬದುಕಿನಲ್ಲಿ ನಾವು ಸಾಕಷ್ಟು ಸವಾಲುಗಳನ್ನು ಎದುರಿಸಿರುತ್ತೇವೆ. ಪ್ರತಿ ದಿನವೂ ಹೊಸ ಹೊಸದನ್ನು ಕಲಿಯುತ್ತಿರುತ್ತೇವೆ. ನಮ್ಮ ಉದ್ಯೋಗ ಜೀವನದ ಅನುಭವಗಳನ್ನು ದಾಖಲಿಸಿ ಪುಸ್ತಕ ಬರೆಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ವಿವರಿಸಿದ್ದಾರೆ ಮಧು ವೈಎನ್‌.

ಮಧು ವೈಎನ್‌ ಬರಹ
ಮಧು ವೈಎನ್‌ ಬರಹ

ನಮ್ಮ ಬದುಕು ನಮಗೆ ಪ್ರತಿಯೊಂದು ಹಂತದಲ್ಲೂ ವಿಭಿನ್ನ ಅನುಭವಗಳನ್ನು ನೀಡುತ್ತದೆ. ಇದಕ್ಕೆ ಔದ್ಯೋಗಿಕ ಬದುಕು ಹೊರತಾಗಿಲ್ಲ. ತಮ್ಮ ತಮ್ಮ ಔದ್ಯೋಗಿಕ ಬದುಕಿನ ಬಗ್ಗೆ ತಿಳಿದುಕೊಳ್ಳಲು ಎಲ್ಲರಿಗೂ ಆಸೆ, ಆದರೆ ಕನ್ನಡದಲ್ಲಿ ಅದಕ್ಕೆ ಸಂಬಂಧಪಟ್ಟ ಪುಸ್ತಕ ಇರುವುದಿಲ್ಲ. ನಂತರ ಸಂದರ್ಭದಲ್ಲಿ ನಮ್ಮ ನಮ್ಮ ಉದ್ಯೋಗ ಕ್ಷೇತ್ರದ ಬಗ್ಗೆ ನಾವೇ ಬರೆಯಬೇಕು. ನಾವು ಯಾವುದೇ ಉದ್ಯೋಗದಲ್ಲಿ ಇರಲಿ ನಮ್ಮ ಕ್ಷೇತ್ರದ ದಟ್ಟ ಅನುಭವಗಳನ್ನು ದಾಖಲಿಸಿ ಪುಸ್ತಕ ಬರೆಯಬೇಕು. ಇದರಿಂದ ಸಾಕಷ್ಟ ಪ್ರಯೋಜನಗಳಿವೆ. ನಮ್ಮ ನಮ್ಮ ಕ್ಷೇತ್ರದ ಅನುಭವಗಳ ಬಗ್ಗೆ ಪುಸ್ತಕ ಬರೆಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ವಿವರಿಸಿದ್ದಾರೆ ಮಧು ವೈಎನ್‌.

ಮಧು ವೈಎನ್‌ ಬರಹ

ಇನ್ನೊಂದು ಕ್ರಾಂತಿಕಾರಿ ಐಡಿಯಾ ಹೇಳ್ತೇನೆ. ನಿಮ್ಮ ನಿಮ್ಮ ಔದ್ಯೋಗಿಕ ವಲಯದಿಂದ ಕನ್ನಡದಲ್ಲಿ ಪುಸ್ತಕಗಳೇ ಇಲ್ಲದಿದ್ದಲ್ಲಿ, ಕಡಿಮೆ‌ ಇದ್ದಲ್ಲಿ, ಗುಣಮಟ್ಟದವು ಇರದಿದ್ದಲ್ಲಿ- ನಿಮಗಿದು ಸದಾವಕಾಶ. ಸಿವಿಲ್ ಎಂಜಿನಿಯರ್, ಎಲೆಕ್ಟ್ರಿಕ್ ಎಂಜಿನಿಯರ್, ಡರ್ಮಟಾಲಜಿಸ್ಟ್, ಆರ್ಕಿಯಾಲಜಿಸ್ಟ್, ನರ್ಸ್, ಸೆಕ್ಯೂರಿಟಿ, ಕಾಂಪೌಂಡರ್, ಪೇದೆ, ರಿಸೆಪ್ಷನಿಸ್ಟ್, ಮೇಡ್- ಏನೇ ಇರಿ... ಕನ್ನಡ ಬರಹ ಗೊತ್ತಿದ್ದಲ್ಲಿ ಇಂದೇ ಕೂತು ಒಂದು ಪುಸ್ತಕ ಬರೆಯಿರಿ. ನಿಮ್ಮ ಔದ್ಯೋಗಿಕ ತಾಂತ್ರಿಕತೆಯ ಬಗ್ಗೆ, ಅದರಲ್ಲಿನ‌ ಜ್ಞಾನದ ಬಗ್ಗೆ, ಕಷ್ಟನಷ್ಟಗಳ ಬಗ್ಗೆ, ಅದರೊಂದಿಗೆ ನಿಮ್ಮ ಕೌಟುಂಬಿಕ ಜೀವನ ಹೇಗೆ ಹೆಣಗುತ್ತಿದೆ/ಹೊಂದಿಕೊಳ್ಳುತ್ತಿದೆ ಎಂಬುದರ ಬಗ್ಗೆ ಬರೆಯರಿ.

ಈ ಮೂಲಕ-

1. ನೀವು ನಿಮ್ಮ ‌ವಲಯದ ಟೆಕ್ನಿಕಾಲಿಟಿಗಳನ್ನು ಸಾರ್ವಜನಿಕರಿಗೆ ಎಜುಕೇಟ್ ಮಾಡ್ತಿರ್ತೀರಿ. ಅದನ್ನು ಓದಿ ನಾಳೆ ಜನ ನಿಮ್ಮಾಫೀಸಿಗೆ ಬಂದಾಗ ಅವರಿಗೊಂದಷ್ಟು ಪೂರ್ವತಯಾರಿ ಆಗಿರ್ತದೆ. ತಲೆ ತಿನ್ನಲ್ಲ.

2. ನಿಮ್ಮ ಔದ್ಯೋಗಿಕ ಕಷ್ಟಗಳನ್ನು ಓದಿ ನಾಳೆ ಜನ‌ ನಿಮ್ಮೊಂದಿಗೆ ಇನ್ನಷ್ಟು ಸಂಯಮ‌ ಸಹಾನುಭೂತಿಯಿಂದ ವರ್ತಿಸುತ್ತಾರೆ. ದುರುಗುಟ್ಟಲ್ಲ.

3. ನಿಮ್ಮ ಕಷ್ಟ ಸುಖಗಳು ಇತರರಿಗೆ ಪರಿಚಯವಾದಾಗ ಬಹುಶಃ ನಾಳೆ ಓಟ್ ಹಾಕುವಾಗ ಅವರು ತಮ್ಮ ಮತದಲ್ಲಿ ನಿಮ್ಮನ್ನೂ ಪರಿಗಣಿಸ್ತಾರೆ. ಸರ್ವತೋಮುಖ ಒಮ್ಮತ ಮೂಡುತ್ತದೆ.

4. ಕನ್ನಡದಲ್ಲಿನ‌ ಸಂಪನ್ಮೂಲ ವೃದ್ಧಿಸುತ್ತದೆ. ಕನ್ನಡಿಗರಿಗೆ ಸಹಾಯವಾಗುತ್ತದೆ.

5. ನೀವು ಎಲ್ಲರಲ್ಲಿ ಎಲ್ಲರೂ ನಿಮ್ಮಲ್ಲಿ ಒಂದಾಗುತ್ತಾರೆ.

ನೀವು ಸಿನಿಮಾ ತೆಗೆಯಕ್ಕಾಗಲ್ಲ, ಬೀದಿಲಿ ನಿಂತು ಜನರನ್ನು ನಿಲ್ಲಿಸಿ ಚಳವಳಿ ಮಾಡಕ್ಕಾಗಲ್ಲ. ರಾಜಕಾರಣಿಗಳತ್ರ ಸುಳಿಯಲಂತೂ ಸಾಧ್ಯವೇ ಇಲ್ಲ.

ಆದರೆ ನೀವೊಂದು ದಟ್ಟ ಅನುಭವಗಳ ಪುಸ್ತಕ ಬರೆಯಬಹುದು. ಅದು ಜನೋಪಯೋಗಿಯಾಗಬಹುದು.

ನವೆಂಬರ್ 25ರಂದು ಮಧು ಈ ಪೋಸ್ಟ್ ಹಾಕಿದ್ದರು. ಇವರ ಪೋಸ್ಟ್‌ಗೆ ನೂರಕ್ಕೂ ಹೆಚ್ಚು ಮಂದಿ ಲೈಕ್ಸ್ ಮಾಡಿದ್ದರೆ, 5 ಮಂದಿ ಶೇರ್ ಮಾಡಿದ್ದಾರೆ. 23 ಜನ ಕಾಮೆಂಟ್ ಮಾಡಿದ್ದಾರೆ. ಹಲವರು ಇದು ಒಳ್ಳೆ ಐಡಿಯಾ ಎಂದು ಮಧು ಅವರ ಆಲೋಚನೆಗೆ ಬಹುಪರಾಕ್ ಹೇಳಿದ್ದಾರೆ.

ಮಧು ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು

‘ಅತ್ಯುತ್ತಮ ಸಲಹೆ. ಧನ್ಯವಾದಗಳು. ಈ ನಿಟ್ಟಿನಲ್ಲಿ, ಮಾರಾಟಗಾರರು ಮತ್ತು ಕಟ್ಟಕಡೆಯ ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡು, ಆಂತರಿಕ ಬಳಕೆಗಾಗಿ ಸೌರತಂತ್ರಜ್ಞಾನದ ಸುಮಾರು 45 ಉತ್ಪನ್ನಗಳನ್ನು ಕುರಿತು ಒಂದು ಸಣ್ಣ ಕೈಪಿಡಿಯನ್ನು ತಯಾರಿಸಿದ್ದೇನೆ‘ ಎಂದು ಕರಿಸ್ವಾಮಿ ಕೆಂಚಣ್ಣ ಎನ್ನುವವರು ಕಾಮೆಂಟ್ ಮಾಡಿದ್ದಾರೆ.

‘ನಾನು BPO ಸೆಕ್ಟರ್‌ನಲ್ಲಿ ಕೆಲಸ ಮಾಡೋದು.. ಇದರ ಬಗ್ಗೆ ತುಂಬಾನೇ ಗೊತ್ತಿದೆ.. ಅದರಲ್ಲೂ ಕನ್ನಡದ ಪ್ರತಿನಿಧಿಗಳು ಸಾಕಷ್ಟು ಕಡೆಗೆ ಇಲ್ಲ... ಇದರ ಬಗ್ಗೆ ಬರಿಯೋಕೆ ನಾನು ಖಂಡಿತಾ ಪ್ರಯತ್ನ ಮಾಡುವೆ.. ಧನ್ಯವಾದಗಳು ನಿಮ್ಮ ಸಲಹೆಗೆ‘ ಎಂದು ಸಂಚಾರಿ ಪ್ರಕಾಶ್ ಅವರು ಕಾಮೆಂಟ್ ಹಾಕಿದ್ದಾರೆ.

‘ಈ ರೀತಿಯ ಮಾತುಗಳನ್ನು ದೇಜಗೌ ಯಾವಾಗಲೂ ಹೇಳುತ್ತಿದ್ದರು. ನಿಮಗೆ ಕನ್ನಡದಲ್ಲಿ ಹೇಳಲಿಕ್ಕೆ ಆಗದೇ ಹೋದರೆ ನಿಮಗೆ ಕನ್ನಡ ಬರುವುದಿಲ್ಲ‌ ಅಂತ ಅಲ್ಲ, ನಿಮಗೆ ನಿಮ್ಮ ವೃತ್ತಿಯ ವಿಷಯ ಗೊತ್ತಿಲ್ಲಾಂತ !!‘ ವೆಂಕಟರಾಜು ಕೃಷ್ಣಮೂರ್ತಿ ಅವರು ಕಾಮೆಂಟ್ ಮಾಡುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಎಂಥ‌ ದಟ್ಟ ಅನುಭವದ ಪುಸ್ತಕ ಬರೆದರೂ‌‌ ಎಷ್ಟು ಜನರನ್ನು ತಲುಪುತ್ತದೆ ? ಸಾವಿರ‌ ಪ್ರತಿಗಳು ಮಾರಾಟ‌‌ ಆಗೋದಿಲ್ಲ...ನೂರ ಇನ್ನೂರು ಜನರನ್ನು ತಲುಪಲಿಕ್ಕೆ ಇಷ್ಟೆಲ್ಲ ಕಷ್ಟ ಪಡಬೇಕಾ ...ಬೆಟ್ಡ ಅಗೆದು‌ ಇಲಿ ಹಿಡ್ದಂಗಾಗಲ್ವ‘ ಎಂದು ಅನಿಲ್ ಚಟ್ನಳ್ಳಿ ಎನ್ನುವವರು ಕಾಮೆಂಟ್ ಮೂಲಕ ಪ್ರಶ್ನೆ ಕೇಳಿದ್ದಕ್ಕೆ ಉತ್ತರಿಸಿದ ಮಧು ‘ಕತೆ ಕಾವ್ಯ ಅದದೇ ಓದೀ ಓದೀ ಹಂಗನ್ಸುತ್ತೆ. ನಾನ್ ಫಿಕ್ಷನ್ನು ಪುಸ್ತಕಗಳು ಹೆಂಗೆ ಹೋಗ್ತವೆ ಹೇಳಕ್ಕೆ ಬರಲ್ಲ. ಅತಿ ಹೆಚ್ಚು ಮಾರಾಟ ಆಗ್ತಿರೋದು ಅವೇ. ಜೀವನದಲ್ಲಿ ಮೊದಲ ಪುಸ್ತಕ ಬರಿತಿದ್ದರೆ ಅದು ಬೆಟ್ಟ ಅಗೆದಂಗೆ ಅಂತ ಅನಿಸಲ್ಲ. ಖುಷಿಯಾಗಿರುತ್ತೆ ಪ್ರಯಾಣ‘ ಎಂದು ಉತ್ತರಿಸಿದ್ದಾರೆ.

Whats_app_banner