ಕನ್ನಡ ಸುದ್ದಿ  /  Lifestyle  /  World Alzheimer's Day 2022: Theme, History & Significance

World alzheimer's day 2022: ಇಂದು ವಿಶ್ವ ಅಲ್ಝೈಮರ್ ದಿನ, ಮರೆವಿನ ರೋಗದ ಕುರಿತು ಮರೆಯದೇ ಓದಿ

ಸೆಪ್ಟೆಂಬರ್‌ 21ನ್ನು ವಿಶ್ವ ಅಲ್ಝೈಮರ್ ದಿನ ಎಂದು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವ, ಥೀಮ್‌ ಸೇರಿದಂತೆ ಪ್ರಮುಖ ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ.

World alzheimer's day 2022: ಇಂದು ವಿಶ್ವ ಅಲ್ಝೈಮರ್ ದಿನ, ಮರೆವಿನ ರೋಗದ ಕುರಿತು ಮಾಹಿತಿ
World alzheimer's day 2022: ಇಂದು ವಿಶ್ವ ಅಲ್ಝೈಮರ್ ದಿನ, ಮರೆವಿನ ರೋಗದ ಕುರಿತು ಮಾಹಿತಿ

ಮರೆವು ವರವೂ ಹೌದು, ಶಾಪವೂ ಹೌದು. ಜೀವನದ ಕೆಟ್ಟ ಕ್ಷಣಗಳು, ದುಃಖದ ಕ್ಷಣಗಳನ್ನು ನಿಧಾನವಾಗಿ ಮರೆತು ಸಹಜವಾಗಿ ಬದುಕಲು ಮರೆವು ವರವಾಗುತ್ತದೆ. ಆದರೆ, ಕೆಲವೊಮ್ಮೆ ಯಾವ ವಿಷಯವೂ ನೆನಪಿನಲ್ಲಿ ಉಳಿಯದೆ ಮರೆವು ಶಾಪವಾಗುತ್ತದೆ. ವಯಸ್ಸಾಗುತ್ತ ಹೋದಂತೆ ಮರೆವಿನ ಸಮಸ್ಯೆ ಹೆಚ್ಚುತ್ತ ಹೋಗುತ್ತದೆ. ಮರೆವಿನ ಕಾಯಿಲೆಯನ್ನು ಇಂಗ್ಲಿಷ್‌ನಲ್ಲಿ alzheimer ಎಂದು ಕರೆಯುತ್ತಾರೆ. ಇದೊಂದು ಜಗತ್ತಿನ ಪ್ರಮುಖ ಆರೋಗ್ಯ ತೊಂದರೆಯೂ ಹೌದು. ಇದಕ್ಕಾಗಿ ಸೆಪ್ಟೆಂಬರ್‌ 21ನ್ನು ವಿಶ್ವ ಅಲ್ಝೈಮರ್ ದಿನ ಎಂದು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವ, ಥೀಮ್‌ ಸೇರಿದಂತೆ ಪ್ರಮುಖ ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ.

ವಿಶ್ವ ವಿಶ್ವ ಅಲ್ಝೈಮರ್ ದಿನದ ಇತಿಹಾಸ

ಮರೆವಿನ ಕಾಯಿಲೆಗೆ ಹಲವು ಶತಮಾನಗಳ ಇತಿಹಾಸ ಇರಬಹುದು. ಆದರೆ, ಇಂತಹ ಪ್ರಕರಣವನ್ನು ಮೊದಲ ಬಾರಿಗೆ ಗುರುತಿಸಿದ್ದು ಜರ್ಮನ್‌ ಮನೋವೈದ್ಯರಾದ ಅಲೋಯಿಸ್‌ ಅಲ್ಝೈಮರ್. 50 ವರ್ಷ ವಯಸ್ಸಿನ ಮಹಿಳೆಯೊಬ್ಬರಲ್ಲಿ ಮೊದಲು ಈ ತೊಂದರೆ ಕಾಣಿಸಿಕೊಂಡಿತ್ತು. ಈ ಕಾಯಿಲೆ ಗುರುತಿಸಿದ ವೈದ್ಯರ ಹೆಸರನ್ನೇ ಇದಕ್ಕೆ ಇಡಲಾಯಿತು. ಮಹಿಳೆಯು 1906ರಲ್ಲಿ ಈ ಕಾಯಿಲೆಯಿಂದ ಮೃತಪಟ್ಟರು. ಇದರ ಕುರಿತು ಈ ವೈದ್ಯರು ಸಾರ್ವಜನಿಕವಾಗಿ ಮಾಹಿತಿ ನೀಡಿದರು. ಬಳಿಕ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದವು. ಈ ಕಾಯಿಲೆಯೂ ಬುದ್ದಿಮಾಂದ್ಯತೆಯ ಲಕ್ಷಣಗಳನ್ನೂ ಹೊಂದಿರುತ್ತದೆ.

ಅಲ್ಝೈಮರ್ ದಿನದ ಮಹತ್ವ

ಜನರಲ್ಲಿ ಮರೆವಿನ ಕಾಯಿಲೆಯ ಕುರಿತು ಜಾಗೃತಿ ಮೂಡಿಸುವುದು, ಇದರ ತೊಂದರೆಗಳು, ಅಪಾಯಗಳ ಕುರಿತು ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತದೆ. ಬುದ್ದಿಮಾಂದ್ಯತೆಯ ಬಗ್ಗೆ ತಪ್ಪು ಅಭಿಪ್ರಾಯಗಳೂ ಇದ್ದು, ಅದನ್ನೂ ಹೋಗಲಾಡಿಸಲು ಪ್ರಯತ್ನಿಸುತ್ತಾರೆ. ಅಲ್ಝೈಮರ್ ಅಂತಾರಾಷ್ಟ್ರೀಯ ಸಂಸ್ಥೆಯು ಪ್ರತಿವರ್ಷ ತನ್ನ ವಾರ್ಷಿಕ ವರದಿಗಳನ್ನು ಪ್ರಕಟಿಸುತ್ತದೆ. ನಮ್ಮ ದೇಶದಲ್ಲಿ 5.3 ದಶಲಕ್ಷ ಜನರು ಅಲ್ಝೈಮರ್ ತೊಂದರೆಯಿಂದ ಬಳಲುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಅಲ್ಝೈಮರ್ ಲಕ್ಷಣಗಳನ್ನು ಗುರುತಿಸಿದರೆ, ವೈದ್ಯರನ್ನು ಭೇಟಿಯಾದರೆ ಕಾಯಿಲೆಯ ಹಲವು ಪರಿಣಾಮಗಳನ್ನು ಕಡಿಮೆ ಮಾಡಬಹುದಾಗಿದೆ. ರೋಗಲಕ್ಷಣಗಳು ಕಂಡು ಬಂದ ಸಂದರ್ಭದಲ್ಲಿ ಸ್ಪೆಷಲಿಸದ್ಟ್‌ ಜೆರಿಯಾಟ್ರಿಕ್‌ ಸೈಕಿಯಾಟ್ರಿಸ್‌, ಜೆರಿಯಾಟ್ರಿಕ್‌ ಪಿಜಿಷಿಯನ್‌ ಅಥವಾ ನ್ಯೂರೊಲಜಿಸ್ಟ್‌ ಬಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಅಲ್ಝೈಮರ್‌ನಿಂದ ಸಾವು ಉಂಟಾಗಬಹುದು!

ಮರೆವಿನ ಕಾಯಿಲೆ ಹೆಚ್ಚಾದರೆ ಸಾವು ಕೂಡ ಉಂಟಾಗಬಹುದು. ಹೀಗಾಗಿ, ತೀವ್ರ ಹಂತದಲ್ಲಿ ನಿರ್ಲಕ್ಷ್ಯ ಸಲ್ಲದು.

ಈ ವರ್ಷದ ಥೀಮ್‌

ಈ ವರ್ಷ ನೋ ಡಿಮೋನ್ಶಿಯಾ, ನೋ ಅಲ್ಝೈಮರ್ಸ್‌ (Know dementia, know Alzheimer's.) ಎಂಬ ಥೀಮ್‌ನಡಿ ಈ ದಿನವನ್ನು ಆಚರಿಸಲಾಗುತ್ತದೆ.

ಅಲ್ಝೈಮರ್ ಕಾಯಿಲೆಯ ವಿವಿಧ ಹಂತಗಳು

ಅಲ್ಝೈಮರ್ ಕಾಯಿಲೆಯ ಗುಣಲಕ್ಷಣಗಗಳ ಆಧಾರದಲ್ಲಿ ನಾಲ್ಕು ಹಂತಗಳಾಗಿ ವಿಭಾಗಿಸಲಾಗಿದೆ. ಆರಂಭಿಕ, ಎರಡನೇ, ಮಧ್ಯಮ ಮತ್ತು ತೀವ್ರ ಹಂತದ ಮರೆವಿನ ಕಾಯಿಲೆ ಇರುತ್ತದೆ. - ಮೊದಲ ಹಂತದಲ್ಲಿ ಅಲ್ಝೈಮರ್ ಇರುವ ವ್ಯಕ್ತಿಗಳಲ್ಲಿ ಯಾವುದೇ ರೀತಿಯ ದೌರ್ಬಲ್ಯ ಕಂಡು ಬರುವುದಿಲ್ಲ. ಸಣ್ಣ ಪುಟ್ಟ ಮರೆವುಗಳು ಮಾತ್ರ ಇರುತ್ತದೆ.

- ಎರಡನೇ ಹಂತದಲ್ಲಿ ಮರೆವು ಸ್ವಲ್ಪ ಹೆಚ್ಚುತ್ತದೆ. ಎಲ್ಲಾದರೂ ಏನಾದರೂ ವಸ್ತುಗಳನ್ನು ಇಟ್ಟರೆ ಅದನ್ನು ತಕ್ಷಣ ಮರೆಯುವುದು ಇತ್ಯಾದಿ ಲಕ್ಷಣಗಳು ಇರುತ್ತವೆ. ಸ್ವಲ್ಪ ಕಷ್ಟಪಟ್ಟು ನೆನಪಿಸಿಕೊಂಡರೆ ಮರೆತ ವಿಷಯ ನೆನಪಾಗುತ್ತದೆ.

- ಮಧ್ಯಮ ಹಂತದಲ್ಲಿ ಮರೆವು ಇನ್ನಷ್ಟು ಹೆಚ್ಚುತ್ತದೆ. ಕೆಲವೊಮ್ಮೆ ಸಂಬಂಧಗಳನ್ನೇ ಮರೆಯುವಂತಹ ಪರಿಸ್ಥಿತಿ ಬರುತ್ತದೆ. ವ್ಯಕ್ತಿಗಳನ್ನು ಗುರುತಿಸಲು ಕಷ್ಟವಾಗುತ್ತದೆ. ಈ ಸಮಯದಲ್ಲಿ ವೈದ್ಯರನ್ನು ಕಾಣಲೇಬೇಕು.

- ತೀವ್ರ ಅಥವಾ ಕೊನೆಯ ಹಂತದಲ್ಲಿ ವ್ಯಕ್ತಿಯು ಮಾತನಾಡುವುದನ್ನೇ ಮರೆಯುತ್ತಾರೆ. ಖಿನ್ನತೆ, ಕರಳು ಸಂಬಂಧ ತೊಂದರೆ, ತೂಕ ಇಳಿಕೆ, ಆಹಾರ ಸೇವಿಸಲಾಗುವುದು ಇತ್ಯಾದಿ ಹಲವು ಆರೋಗ್ಯ ಸಮಸ್ಯೆಗಳನ್ನು ಇವರು ಎದುರಿಸುತ್ತಾರೆ.