ವಿಶ್ವ ಅಸ್ತಮಾ ದಿನ 2025: ಅಸ್ತಮಾದ 6 ವಿಧಗಳು, ಅವುಗಳ ರೋಗಲಕ್ಷಣಗಳು, ಚಿಕಿತ್ಸೆಯ ಬಗ್ಗೆ ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  ವಿಶ್ವ ಅಸ್ತಮಾ ದಿನ 2025: ಅಸ್ತಮಾದ 6 ವಿಧಗಳು, ಅವುಗಳ ರೋಗಲಕ್ಷಣಗಳು, ಚಿಕಿತ್ಸೆಯ ಬಗ್ಗೆ ಇಲ್ಲಿದೆ ಮಾಹಿತಿ

ವಿಶ್ವ ಅಸ್ತಮಾ ದಿನ 2025: ಅಸ್ತಮಾದ 6 ವಿಧಗಳು, ಅವುಗಳ ರೋಗಲಕ್ಷಣಗಳು, ಚಿಕಿತ್ಸೆಯ ಬಗ್ಗೆ ಇಲ್ಲಿದೆ ಮಾಹಿತಿ

ಅಸ್ತಮಾ ಎಂಬುದು ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ಇದು ಮಕ್ಕಳಿಂದ ದೊಡ್ಡವವರೆಗೆ ಹಲವರನ್ನ ಬಾಧಿಸುತ್ತದೆ. ವಿಶ್ವ ಅಸ್ತಮಾ ದಿನವಾದ ಇಂದು ಅಸ್ತಮಾದ 6 ವಿಧಗಳ ಬಗ್ಗೆ ತಿಳಿಯೋಣ.

ವಿಶ್ವ ಅಸ್ತಮಾ ದಿನ 2025
ವಿಶ್ವ ಅಸ್ತಮಾ ದಿನ 2025

ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಹಲವರು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅತಿಯಾದ ವಾಯುಮಾಲಿನ್ಯ, ಧೂಳು ಅಸ್ತಮಾ ಹೆಚ್ಚಲು ಪ್ರಮುಖ ಕಾರಣವಾಗಿದೆ. ಅಸ್ತಮಾ ಎನ್ನುವುದು ದೀರ್ಘಕಾಲ ಕಾಡುವ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಯಾಗಿದೆ. ಅಸ್ತಮಾ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಮೇ 6 ರಂದು ವಿಶ್ವ ಅಸ್ತಮಾ ದಿನವನ್ನು ಆಚರಿಸಲಾಗುತ್ತದೆ.

ಅಸ್ತಮಾವು ಅನುವಂಶೀಯ ಕಾರಣದಿಂದ ಹಾಗೂ ಅಲರ್ಜಿ, ವಾಯುಮಾಲಿನ್ಯ ಹಾಗೂ ಉಸಿರಾಟದ ಸೋಂಕು ಮುಂತಾದ ಕಾರಣಗಳಿಂದ ಕಾಣಿಸಿಕೊಳ್ಳುತ್ತದೆ. ಧೂಳು, ಪರಾಗ ಅಥವಾ ಒತ್ತಡದಿಂದಾಗಿ ಆಸ್ತಮಾ ಪ್ರಚೋದಿಸಲ್ಪಟ್ಟಾಗ ಉಸಿರಿನ ನಾಳಗಳು ಸಂಕುಚಿತವಾಗುತ್ತವೆ. ಇದು ಉಬ್ಬಸ, ಕೆಮ್ಮು, ಉಸಿರಾಟದ ತೊಂದರೆ ಮತ್ತು ಎದೆ ಬಿಗಿತದಂತಹ ಲಕ್ಷಣಗಳಿಗೆ ಕಾರಣವಾಗುತ್ತದೆ. ಇದಕ್ಕೆ ಚಿಕಿತ್ಸೆ ನೀಡದೇ ಬಿಟ್ಟರೆ ಇದು ನಮ್ಮ ದೈನಂದಿನ ಜೀವನ ಹಾಗೂ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ.

ವಿಶ್ವ ಅಸ್ತಮಾ ದಿನವಾದ ಇಂದು (ಮೇ 6) ಅಸ್ತಮಾದ 6 ವಿಧಗಳು ಯಾವುವು, ಅವುಗಳ ಗುಣಲಕ್ಷಣಗಳೇನು, ಪರಿಣಾಮಗಳೇನು ಎಂಬುದನ್ನು ತಿಳಿಯೋಣ.

ಅಲರ್ಜಿಕ್ ಆಸ್ತಮಾ

‌ಈ ವಿಧದ ಅಸ್ತಮಾದಲ್ಲಿ ಕೆಲವು ಅಲರ್ಜಿನ್‌ಗಳು ಅಂದರೆ ಅಲರ್ಜಿ ಉಂಟು ಮಾಡುವ ಅಂಶಗಳು ಅಸ್ತಮಾ ಎದುರಾಗಲು ಕಾರಣವಾಗುತ್ತವೆ. ವ್ಯಕ್ತಿಯ ಅಲರ್ಜಿನ್‌ಗೆ ಒಡ್ಡಿಕೊಂಡಾಗಲೆಲ್ಲಾ ವಾಯುಮಾರ್ಗಗಳು ಬಿಗಿಯಾಗಿ ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ. ಧೂಳಿ ಕಣಗಳು, ವಾಯುಮಾಲಿನ್ಯ ಮುಂತಾದವು ಅಲರ್ಜಿಗೆ ಕಾರಣವಾಗಬಹುದು. ಉಸಿರಾಟದ ತೊಂದರೆ, ಉಬ್ಬಸ, ಕೆಮ್ಮು, ಎದೆಯ ಬಿಗಿತ, ಕಣ್ಣುಗಳಲ್ಲಿ ತುರಿಕೆ ಇತ್ಯಾದಿ ಈ ವಿಧದ ಅಸ್ತಮಾದ ಲಕ್ಷಣಗಳಾಗಿವೆ.

ಅಲರ್ಜಿಯಲ್ಲದ ಅಸ್ತಮಾ

ಈ ವಿಧದ ಅಸ್ತಮಾವು ಅಲರ್ಜಿನ್‌ಗಳಲ್ಲದ ಇತರ ಬಾಹ್ಯ ಅಂಶಗಳಿಂದ ಉಂಟಾಗುತ್ತದೆ. ಉಸಿರಾಟದ ಸೋಂಕುಗಳು, ಒತ್ತಡ, ಹಾರ್ಮೋನುಗಳ ಅಸಹಜತೆ ಇದಕ್ಕೆ ಕಾರಣವಾಗಬಹುದು. ಇದರ ರೋಗಲಕ್ಷಣಗಳು ಸಾಮಾನ್ಯವಾಗಿ ಅಲರ್ಜಿನ್‌ನ ರೋಗಲಕ್ಷಣಗಳಂತೆಯೇ ಇರುತ್ತವೆ. ಆದರೆ ಈ ವಿಧದ ಅಸ್ತಮಾಕ್ಕೆ ಚಿಕಿತ್ಸೆ ನೀಡುವುದು ಕಷ್ಟ. ಇದು ಪ್ರಾಥಮಿಕವಾಗಿ ಔಷಧಿಗಳ ಮೇಲೆ ಕೇಂದ್ರೀಕರಿಸುತ್ತದೆ.

ವ್ಯಾಯಾಮ ಪ್ರೇರಿತ ಅಸ್ತಮಾ

ಅತಿಯಾದ ಅಥವಾ ಕಠಿಣ ದೈಹಿಕ ಚಟುವಟಿಕೆಗಳು ಅಥವಾ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುವುದು, ಕ್ಲೋರಿನೇಟೆಡ್ ಈಜುಕೊಳಗಳಲ್ಲಿ 5-8 ನಿಮಿಷಗಳು ಕಳೆಯುವುದು, ಕೆಲವು ಮೈಲುಗಳ ದೂರ ಓಡುವುದು ಇಂತಹ ಸಂದರ್ಭಗಳಲ್ಲಿ ವಾಯುಮಾರ್ಗ ಕಿರಿದಾಗುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ವ್ಯಾಯಾಮ-ಪ್ರೇರಿತ ಬ್ರಾಂಕೋಕನ್ಸ್ಟ್ರಿಕ್ಷನ್ ಎಂದೂ ಕರೆಯುತ್ತಾರೆ.

ಔದ್ಯೋಗಿಕ ಅಸ್ತಮಾ

ಇದು ಕೆಲಸ ಅಥವಾ ವೃತ್ತಿ ನಿಭಾಯಿಸುವ ಸ್ಥಳದಲ್ಲಿ ಇರುವ ಕಂಡುಬರುವ ವಸ್ತುಗಳಿಂದ ಉಂಟಾಗುತ್ತದೆ. ವಾಯುಮಾರ್ಗದಲ್ಲಿ ಸಮಸ್ಯೆ ಇರುವವರು, ಸೂಕ್ಷ್ಮ ವಾಯುಮಾರ್ಗ ಹೊಂದಿರುವವರು ಈ ವಸ್ತುಗಳಿಗೆ ಒಡ್ಡಿಕೊಂಡಾಗ ಆಸ್ತಮಾ ದಾಳಿಗೆ ಒಳಗಾಗುತ್ತಾರೆ. ಬೇಕರ್‌ಗಳು, ರೈತರು, ಗಿರಣಿಗಾರರು, ಡಿಟರ್ಜೆಂಟ್ ತಯಾರಕರು, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಜನರಲ್ಲಿ ಈ ವಿಧದ ಅಸ್ತಮಾ ಕಾಡುವುದು ಜಾಸ್ತಿ. ಇದ ರೋಗಲಕ್ಷಣಗಳು ಅಲರ್ಜಿಕ್ ಅಸ್ತಮಾದಂತೆಯೇ ಇರುತ್ತವೆ.

ಸೀಸನಲ್ ಅಸ್ತಮಾ

ಹವಾಮಾನದಲ್ಲಿನ ವ್ಯತ್ಯಾಸಗಳು ಮತ್ತು ಪರಾಗದಂತಹ ಋತುಮಾನದ ಅಲರ್ಜಿನ್‌ಗಳಿಂದಾಗಿ ಇದು ಸಂಭವಿಸುತ್ತದೆ.ಹವಾಮಾನ ಅಥವಾ ಋತುಮಾನದ ಬದಲಾವಣೆಗಳ ಸಮಯದಲ್ಲಿ ಆಸ್ತಮಾ ಇರುವ ವ್ಯಕ್ತಿಯು ರೋಗಲಕ್ಷಣಗಳಲ್ಲಿ ಹೆಚ್ಚಳವನ್ನು ಗಮನಿಸಿದರೆ ಅವರಿಗೆ ಋತುಮಾನದ ಆಸ್ತಮಾ ಇದೆ ಎಂದು ಸೂಚಿಸಬಹುದು. ಲಕ್ಷಣಗಳು ಅಲರ್ಜಿಕ್ ಅಸ್ತಮಾದಂತೆಯೇ ಇರುತ್ತವೆ.

ಅಸ್ತಮಾ-ಸಿಒಪಿಡಿ ಓವರ್‌ಲ್ಯಾಪ್ ಸಿಂಡ್ರೋಮ್ (ACOS)

ಅಸ್ತಮಾ ಮತ್ತು ಸಿಒಪಿಡಿ (ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ) ಈ ಎರಡರ ಕಾರಣದಿಂದ ಉಂಟಾಗುತ್ತದೆ. ಇವೆರಡೂ ಅತಿಕ್ರಮಿಸುವ ಲಕ್ಷಣಗಳನ್ನು ಹೊಂದಿವೆ ಮತ್ತು ಒಟ್ಟಿಗೆ ಇದನ್ನು ಆಸ್ತಮಾ-COPD ಓವರ್‌ಲ್ಯಾಪ್ ಸಿಂಡ್ರೋಮ್ (ACOS) ಎಂದು ಕರೆಯಲಾಗುತ್ತದೆ. ಈ ಎರಡೂ ಸಾಮಾನ್ಯವಾಗಿ ಒಂದೇ ರೀತಿಯ ಲಕ್ಷಣಗಳನ್ನು ಹೊಂದಿರುತ್ತವೆ. ಆದರೆ ಚಿಕಿತ್ಸೆಯ ವಿಚಾರಕ್ಕೆ ಬಂದಾಗ ಇನ್ಹೇಲ್ ಮಾಡಿದ ಕಾರ್ಟಿಕೊಸ್ಟೆರಾಯ್ಡ್‌ಗಳನ್ನು ಆಸ್ತಮಾ ರೋಗಿಗಳಿಗೆ ನೀಡಲಾಗುತ್ತದೆ ಮತ್ತು ಇನ್ಹೇಲ್ ಮಾಡಿದ ಬ್ರಾಂಕೋಡಿಲೇಟರ್‌ಗಳನ್ನು COPD ರೋಗಿಗಳಿಗೆ ನೀಡಲಾಗುತ್ತದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.