Autism Awareness Day: ಮಕ್ಕಳನ್ನ ಕಾಡುವ ಆಟಿಸಂ ಸಮಸ್ಯೆ ದೂರವಾಗಿಸಲು ಫೋಷಕರಿಂದ ಬೇಕು ವಿಶೇಷ ಕಾಳಜಿ; ಏನಿದು ಸ್ವಲೀನತೆ?
World Autism Awareness Day 2024: ಆಟಿಸಂ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 2 ರಂದು ವಿಶ್ವ ಆಟಿಸಂ ದಿನವನ್ನಾಗಿ ಆಚರಿಸಲಾಗುತ್ತಿದೆ. ಸ್ವಲೀನತೆಯ ಬಗ್ಗೆ ಅರಿವು, ಈ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶವಾಗಿದೆ.
ಬೆಂಗಳೂರು: ಪ್ರತಿ ವರ್ಷ ಏಪ್ರಿಲ್ 2 ರಂದು ವಿಶ್ವ ಆಟಿಸಂ ಜಾಗೃತಿ ದಿನವನ್ನು (World Autism Awareness Day 2024) ಆಚರಿಸಲಾಗುತ್ತದೆ. ಮಕ್ಕಳಲ್ಲಿ ಕಂಡುಬರುವ ಆಟಿಸಂ ಸಮಸ್ಯೆಯ ಬಗ್ಗೆ ಪೋಷಕರು ಜಾಗೃತರಾಗಬೇಕು, ಈ ಸಮಸ್ಯೆ ಇರುವ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವುದು ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಆಟಿಸಂ ಜಾಗೃತಿ ದಿನವನ್ನ ಆಚರಿಸಲಾಗುತ್ತದೆ.
ಏನಿದು ಆಟಿಸಂ ಅಂತ ಕರೆಯುವ ಸ್ವಲೀನತೆ?
ಮಗು ನೋಡಲು ಎಲ್ಲಾ ಮಕ್ಕಳಂತೆ ಕಂಡುಬಂದರೂ, ಕೆಲವು ವಿಶೇಷ ವರ್ತನೆಗಳನ್ನು ಹೊಂದಿರುತ್ತದೆ. ಒಂದು ವೇಳೆ ಮಗುವಿಗೆ ಆಟಿಸಂ ಸಮಸ್ಯೆಯಿದ್ದರೆ ಮಗು ಆರು ತಿಂಗಳಿದ್ದಾಗಲೇ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದಾದ ಬಳಿಕ ಮೂರು ಅಥವಾ ನಾಲ್ಕನೇ ವರ್ಷದಲ್ಲಿ ಕಾಯಿಲೆಯ ಸ್ಪಷ್ಟ ಲಕ್ಷಣಗಳು ಪೋಷಕರ ಗಮನಕ್ಕೆ ಬರುತ್ತದೆ.
ಆಟಿಸಂ ಎಂಬುದು ಮಗುವೊಂದು ಬಾಲ್ಯಾವಸ್ಥೆಯಲ್ಲಿ ಅನುಭವಿಸುವ ವಿಕಲತೆಯಾಗಿದೆ. ನರಕ್ಕೆ ಸಂಬಂಧಿಸಿದ ಸಮಸ್ಯೆ ಇದಾಗಿದ್ದು, ಇದರಿಂದ ಮಕ್ಕಳು ಬಾಲ್ಯದಲ್ಲೇ ಆಟಿಸಂಗೆ (ಸ್ವಲೀನತೆ) ಒಳಗಾಗುತ್ತಾರೆ. ಪ್ರಪಂಚದ ಅರಿವಿಲ್ಲದೆ ಮಗುವೊಂದು ತನ್ನಷ್ಟೆ ತಾನೇ ವರ್ತಿಸುವುದನ್ನು ಆಟಿಸಂ ಎಂದು ಕರೆಯಲಾಗುತ್ತದೆ. ಆದರೆ ಇದು ಬುದ್ಧಿಮಾಂದ್ಯ ಸಮಸ್ಯೆಯಲ್ಲ, ಇದೊಂದು ನರಸಂಬಂಧಿ ಕಾಯಿಲೆ. ಈ ಸಮಸ್ಯೆಯು ಇಂದಿನ ದಿನಗಳಲ್ಲಿ ಅನೇಕ ಮಕ್ಕಳಲ್ಲಿ ಕಂಡುಬರುತ್ತಿದ್ದು, ಇದರ ಕುರಿತಾಗಿ ಪೋಷಕರು ಎಚ್ಚರ ವಹಿಸುವುದು ಅತ್ಯಗತ್ಯ ಎನ್ನುತ್ತಾರೆ ಬೆಂಗಳೂರಿನ ಕಿಂಡರ್ ಆಸ್ಪತ್ರೆಯ ಮನ: ಶಾಸ್ತ್ರಜ್ಞರಾದ ಡಾ. ಅಭಿಷೇಕ್ ಪಸಾರಿ.
ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ASD) ಎಂದ ಕೂಡಲೇ ವಿಚಿತ್ರವಾಗಿ ನೋಡುವ ಜನಸಾಮಾನ್ಯರು ಇದ್ದಾರೆ. ಇಂದಿನ ದಿನಗಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಅಲ್ಲದೆ ಪೋಷಕರು ಈ ಸಮಸ್ಯೆಯ ಕುರಿತಾಗಿ ತಿಳಿಯಬೇಕಾಗಿರುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಏಕೆಂದರೆ ಬೇರೆ ಮಕ್ಕಳಂತೆಯೇ ಈ ಮಕ್ಕಳು ಕಂಡುಬಂದರೂ ಕೆಲವು ನಡವಳಿಕೆಗಳು ಭಿನ್ನವಾಗಿರುತ್ತವೆ. ಮಕ್ಕಳಲ್ಲಿ ನರ ಬೆಳವಣಿಗೆಯ ಅಸ್ವಸ್ಥತೆಯು ಕಂಡುಬಂದಲ್ಲಿ ಅದು ಸಾಮಾಜಿಕ ಸಂವಹನ ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ. ಸ್ವಲೀನತೆ ಹೊಂದಿರುವ ಪ್ರತಿ ಮಗು ವಿಭಿನ್ನವಾಗಿ ವರ್ತಿಸುತ್ತದೆ. ಅಂತಹ ಮಕ್ಕಳನ್ನು ನೋಡಿಕೊಳ್ಳಲು ಒಬ್ಬರು ಜೊತೆಯಿರಲೇಬೇಕು ಎಂದು ವೈದ್ಯ ಅಭಿಷೇಕ್ ಪಸಾರಿ ಸಲಹೆ ನೀಡಿದ್ದಾರೆ.