ಕನ್ನಡ ಸುದ್ದಿ  /  Lifestyle  /  World Bipolar Day 2023: Suffering From Bipolar Disorder? See If These Tips Can Be Useful

World Bipolar Day 2023: ಬೈಪೋಲಾರ್‌ ಡಿಸಾರ್ಡರ್‌ ಕಾಡುತ್ತಿದೆಯೇ? ಈ ಸಲಹೆಗಳನ್ನು ಪಾಲಿಸಿ

ಪ್ರತಿ ವರ್ಷ ಮಾರ್ಚ್‌ 30ರಂದು ಬೈಪೋಲಾರ್‌ ಡಿಸಾರ್ಡರ್‌ ದಿನವನ್ನು ಆಚರಿಸಲಾಗುತ್ತದೆ. ಇದೊಂದು ಮಾನಸಿಕ ಸಮಸ್ಯೆಯಾಗಿದ್ದು, ಖಿನ್ನತೆ ಹಾಗೂ ಉನ್ಮಾದ ಈ ಕಾಯಿಲೆಯ ಅಂಶಗಳಾಗಿವೆ.

ಬೈಪೊಲಾರ್‌ ಡಿಸಾರ್ಡರ್‌
ಬೈಪೊಲಾರ್‌ ಡಿಸಾರ್ಡರ್‌

ಇಂದು ವಿಶ್ವ ಬೈಪೋಲಾರ್‌ ದಿನ. ಮೆದುಳಿನ ಅಸ್ವಸ್ಥತೆಯು ನಮ್ಮ ಮನಸ್ಥಿತಿ ಬದಲಾವಣೆಗೆ ಕಾರಣವಾಗುತ್ತದೆ. ಖಿನ್ನತೆ ಹಾಗೂ ಉನ್ಮಾದ ಈ ಎರಡೂ ಬೈಪೋಲಾರ್‌ ಡಿಸಾರ್ಡರ್‌ನ ಅಂಶಗಳಾಗಿವೆ; ಅವು ಹಂತವಾಗಿ ಕಾಣಿಸಿಕೊಳ್ಳುತ್ತವೆ. ಒಂದು ಹಂತದಲ್ಲಿ ವ್ಯಕ್ತಿಯ ಮಾನಸಿಕ ಸ್ಥಿತಿ ಮಂದಗತಿಯಲ್ಲಿದ್ದರೆ, ಇನ್ನೊಂದು ಹಂತದಲ್ಲಿ ಆ ವ್ಯಕ್ತಿ ತೀರಾ ಚುರುಕಾದ ಮನೋಭಾವವನ್ನು ಹೊಂದಿರುತ್ತಾನೆ. ಉನ್ಮಾದ ಸ್ಥಿತಿಯಲ್ಲಿದ್ದಾಗ ವ್ಯಕ್ತಿಯು ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣವಾಗಬಹುದು ಮತ್ತು ಖಿನ್ನತೆ ಮನೋಭಾವವಿದ್ದಾಗ ಆ ವ್ಯಕ್ತಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟವಾಗಬಹುದು. ಬೈಪೋಲಾರ್ ಡಿಸಾರ್ಡರ್ ಹೊಂದಿರುವ ಜನರು ಔಷಧಿ ಮತ್ತು ಚಿಕಿತ್ಸೆಯ ಸಹಾಯದಿಂದ ಸಾಮಾನ್ಯ ಜೀವನವನ್ನು ನಡೆಸಬಹುದು.

ಅದಾಗ್ಯೂ ಸಾಮಾನ್ಯ ಜೀವನಶೈಲಿಯನ್ನು ಅನುಸರಿಸುವುದು ಮುಖ್ಯವಾಗುತ್ತದೆ ಮತ್ತು ಪ್ರಚೋದಕಗಳನ್ನು ತಪ್ಪಿಸಬೇಕಾಗುತ್ತದೆ. ಒತ್ತಡ, ಅನಿಯಮಿತ ನಿದ್ರೆಯ ಮಾದರಿ, ಡ್ರಗ್ಸ್‌, ಮದ್ಯಪಾನ ಸೇವನೆ ಈ ಎಲ್ಲವೂ ಮನಸ್ಸಿನ ಚಂಚಲತೆಗೆ ಕಾರಣವಾಗಬಹುದು. ಈ ಅಸ್ವಸ್ಥತೆಯು ರಾಸಾಯನಿಕ ಅಸಮತೋಲನ ಅಥವಾ ಅನಿಯಂತ್ರಿತ ಮೆದುಳಿನ ಚಟುವಟಿಕೆಯ ಕಾರಣದಿಂದ ಉಂಟಾಗುತ್ತದೆ ಎಂದು ನಂಬಲಾಗಿದೆ.

ಹಾಗಾದರೆ ಬೈಪೋಲಾರ್‌ ಡಿಸಾರ್ಡರ್‌ ಕಾರಣದಿಂದ ಚಿತ್ತ ಚಂಚಲವಾಗುವುದನ್ನು ತಡೆಯಲು ಏನು ಮಾಡಬೇಕು? ಇಲ್ಲಿದೆ ಕೆಲವು ಟಿಪ್ಸ್‌.

ಪೌಷ್ಟಿಕ ಆಹಾರ ಸೇವನೆ

ಸಂಸ್ಕರಿತ ಆಹಾರ ಪದಾರ್ಥಗಳ ಸೇವನೆಗೆ ಕಡಿವಾಣ ಹಾಕಿ ನಿಮ್ಮ ಆಹಾರ ಕ್ರಮದ ಮೇಲೆ ಗಮನ ಹರಿಸಿ. ನಿಮ್ಮ ಮನಸ್ಸಿನ ಸಮತೋಲನಕ್ಕೆ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವುದು ಅಗತ್ಯ. ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವಿಸುವುದರಿಂದ ಸಕ್ಕರೆಯ ಪ್ರಮಾಣದಲ್ಲಿ ಏರಿಕೆಯಾಗಿ ಭಾವನಾತ್ಮ ಬದಲಾವಣೆಗೆ ಕಾರಣವಾಗಬಹುದು. ಕಡಿಮೆ ಪ್ರಮಾಣದಲ್ಲಿ ತಿನ್ನುವುದರಿಂದ ದೇಹದಲ್ಲಿ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಇದರಿಂದ ಮನಸ್ಸು ಚಂಚಲಗೊಳ್ಳುವುದನ್ನು ತಪ್ಪಿಸಬಹುದು.

ದಿನಚರಿಗೆ ಒಗ್ಗಿಕೊಳ್ಳಿ

ಬೈಪೋಲಾರ್‌ ಡಿಸಾರ್ಡರ್‌ ಕಾರಣದಿಂದ ನಿದ್ದೆಗೆ ತೊಂದರೆಯಾಗಬಹುದು. ಇದು ಪ್ರಚೋದಕವಾಗಿ ಮನಸ್ಸು ಚಂಚಲವಾಗಬಹುದು. ನಿಯಮಿತ ನಿದ್ರಾ ವೇಳಾಪಟ್ಟಿಯನ್ನು ರಚಿಸಿ ಹಾಗೂ ಸಾಧ್ಯವಾದಷ್ಟು ಅದಕ್ಕೆ ಒಗ್ಗಿಕೊಳ್ಳಿ. ಇದು ನಿಮ್ಮ ಮನಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಅದನ್ನು ನಿರ್ವಹಿಸಲು ಸುಲಭವಾಗುತ್ತದೆ.

ಒತ್ತಡ ನಿರ್ವಹಣೆ ತಂತ್ರಗಳನ್ನು ಅಭ್ಯಾಸ ಮಾಡಿ

ಒತ್ತಡವು ಮನಸ್ಥಿತಿಯ ಬದಲಾವಣೆಗಳಿಗೆ ಸಾಮಾನ್ಯ ಪ್ರಚೋದಕವಾಗಿದೆ. ಒತ್ತಡವನ್ನು ನಿರ್ವಹಿಸಲು ವ್ಯಾಯಾಮ, ಧ್ಯಾನ, ಅಥವಾ ಯೋಗದಂತಹ ಆರೋಗ್ಯಕರ ಮಾರ್ಗಗಳನ್ನು ಕಂಡುಕೊಳ್ಳಿ. ಈ ಚಟುವಟಿಕೆಗಳು ನಿಮಗೆ ಒತ್ತಡವನ್ನು ಕಡಿಮೆ ಮಾಡಲು ಮತ್ತು ಕೇಂದ್ರಿತವಾಗಿರಲು ಸಹಾಯ ಮಾಡುತ್ತದೆ.

ವೈದ್ಯರ ಸೂಚನೆಯಂತೆ ಔಷಧಿ ಸೇವಿಸಿ

ಬೈಪೋಲಾರ್‌ ಡಿಸಾರ್ಡರ್‌ ಹೊಂದಿರುವ ವ್ಯಕ್ತಿಗಳಿಗೆ ಔಷಧಿ ಅತ್ಯಗತ್ಯವಾಗಿದೆ. ವೈದ್ಯರ ಸೂಚನೆಯನ್ನು ಎಚ್ಚರಿಕೆಯಿಂದ ಪಾಲಿಸಿ ಮತ್ತು ಅವರು ಸೂಚಿಸಿದಂತೆ ಔಷಧಿಗಳನ್ನು ಸೇವಿಸಿ. ಯಾವುದೇ ಕಾರಣಕ್ಕೂ ವೈದ್ಯರ ಸೂಚನೆ ಇಲ್ಲದೆ ಔಷಧಿ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಡಿ. ಇದರಿಂದ ಪುನಃ ಸಮಸ್ಯೆ ಕಾಣಿಸಬಹುದು.

ರೋಗಲಕ್ಷಣಗಳನ್ನು ಟ್ರ್ಯಾಕ್ ಮಾಡಿ

ನಿಮ್ಮ ರೋಗಲಕ್ಷಣಗಳನ್ನು ಪತ್ತೆಹಚ್ಚಲು ಮತ್ತು ಮಾದರಿಗಳನ್ನು ಗುರುತಿಸಲು ಮೂಡ್ ಜರ್ನಲ್ ಅನ್ನು ಇರಿಸಿಕೊಳ್ಳಿ. ಇದರಿಂದ ನಿಮ್ಮ ಮಾನಸಿಕ ಸ್ಥಿತಿಯ ಬಗ್ಗೆ ನಿಮಗೂ ಹಾಗೂ ವೈದ್ಯರಿಗೆ ಇಬ್ಬರಿಗೂ ತಿಳಿದುಕೊಳ್ಳಲು ಸಹಾಯವಾಗುತ್ತದೆ.

ಬೈಪೋಲಾರ್‌ ಡಿಸಾರ್ಡರ್‌ ಸಮಸ್ಯೆ ಇರಿಸಿಕೊಂಡು ಬದುಕುವುದು ನಿಜಕ್ಕೂ ಕಷ್ಟ. ಆದರೆ ನಿಮ್ಮ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಕಾರ ನೀಡುವರಿದ್ದರೆ ಇದರಿಂದ ಬೇಗನೆ ಹೊರ ಬರಬಹುದು. ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರ ಜೊತೆ ಇದರ ಬಗ್ಗೆ ಹೇಳಿಕೊಳ್ಳಿ. ಬೈಪೋಲಾರ್‌ ಡಿಸಾರ್ಡರ್‌ಗೆ ಸಹಾಯ ಮಾಡುವ ಗುಂಪು ತಜ್ಞರೊಂದಿಗೆ ಸಂಪರ್ಕ ಬೆಳೆಸಿಕೊಳ್ಳಿ.

ಮಾದಕ ವ್ಯಸನಗಳಿಂದ ದೂರವಿರಿ

ಮಾದಕ ವ್ಯಸನಗಳು ಮೂಡ್‌ ಸ್ವಿಂಗ್‌ ಅಥವಾ ಮನಸ್ಸಿನ ಚಂಚಲತೆಯನ್ನು ಹೆಚ್ಚಿಸಬಹುದು. ನೀವು ಬೈಪೋಲಾರ್‌ ಡಿಸಾರ್ಡರ್‌ನಿಂದ ಬಳಲುತ್ತಿದ್ದರೆ ಮಾದಕ ವ್ಯಸನಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಅವಶ್ಯ.

ಪ್ರಚೋದಕಗಳನ್ನು ಗುರುತಿಸಿ

ಬೈಪೋಲಾರ್‌ ಡಿಸಾರ್ಡರ್‌ನಿಂದ ಬಳಲುತ್ತಿರುವವರಿಗೆ ಕೆಲವೊಂದು ನಿರ್ದಿಷ್ಟ ಸಂದರ್ಭ ಹಾಗೂ ಘಟನೆಗಳು ಪ್ರಚೋದನೆಯನ್ನು ನೀಡಬಹುದು. ಹಾಗಿದ್ದಾಗ ಅಂತಹ ಸಂಬಂಧ ಅಥವಾ ದಿನಚರಿಯಿಂದ ದೂರ ಉಳಿಯುವುದು ಮುಖ್ಯವಾಗುತ್ತದೆ. ನಿಮ್ಮನ್ನು ಪ್ರಚೋದಿಸುತ್ತಿರುವ ಅಂಶ ಯಾವುದು ಎಂದು ಕಂಡುಕೊಂಡು ಅದನ್ನು ನಿರ್ವಹಿಸಲು ಕಲಿಯಿರಿ.

ಬೈಪೋಲಾರ್‌ ಡಿಸಾರ್ಡರ್‌ ಅನ್ನು ನಿರ್ವಹಿಸುವುದು ನಿರಂತರ ಪ್ರಕ್ರಿಯೆಯಾಗಿದೆ. ಅದಕ್ಕೆ ತಾಳ್ಮೆ ಹಾಗೂ ಸಮರ್ಪಣಾ ಭಾವ ಅಗತ್ಯ. ಸರಿಯಾದ ಚಿಕಿತ್ಸೆ ಹಾಗೂ ಬೆಂಬಲದೊಂದಿಗೆ ಸಾರ್ಥಕ ಜೀವನ ನಡೆಸಲು ಸಾಧ್ಯ.

ವಿಭಾಗ