ನಾಳೆ ವಿಶ್ವ ರಕ್ತದಾನಿಗಳ ದಿನ...ಈ ವಿಶೇಷ ದಿನದ ಮಹತ್ವ, ರಕ್ತದಾನದ ಲಾಭಗಳ ಬಗ್ಗೆ ಒಂದಿಷ್ಟು ಮಾಹಿತಿ
ವೈದ್ಯರು ಹೇಳುವ ಪ್ರಕಾರ ಪ್ರತಿ ಆರೋಗ್ಯವಂತ ಮನುಷ್ಯನ ದೇಹದಲ್ಲಿ 5 ಲೀಟರ್ ರಕ್ತ ಇರಬೇಕು. ಆದರೆ ಬಹಳಷ್ಟು ಜನರು ರಕ್ತದ ಕೊರತೆಯನ್ನು ಎದುರಿಸುತ್ತಿದ್ದಾರೆ. ಗರ್ಭಧಾರಣೆ, ಹೆರಿಗೆ ಅಥವಾ ರಕ್ತಸ್ರಾವದಿಂದ ಬಳಲುತ್ತಿರುವ ಮಹಿಳೆಯರ ಪರಿಣಾಮಕಾರಿ ನಿರ್ವಹಣೆಗೆ ರಕ್ತ ಬಹಳ ಅಗತ್ಯವಾಗಿದೆ.
ರಕ್ತದಾನವನ್ನು ಮಹಾದಾನ ಎನ್ನಲಾಗುತ್ತದೆ. ಪ್ರತಿಯೊಂದು ಜೀವಿಗೂ ರಕ್ತ ಬಹಳ ಅವಶ್ಯಕ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ನಾಳೆ ವಿಶ್ವ ರಕ್ತದಾನಿಗಳ ದಿನ. ರಕ್ತದ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸುವ ಅಂಗವಾಗಿ ಪ್ರತಿ ವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.
ವಿಶ್ವ ರಕ್ತದಾನಿಗಳ ದಿನದಂದು ರಾಷ್ಟ್ರೀಯ ಮತ್ತು ಸ್ಥಳೀಯ ಅಭಿಯಾನಗಳನ್ನು ಬಲಪಡಿಸುವ ಮೂಲಕ ಸ್ವಯಂಪ್ರೇರಿತ ರಕ್ತದಾನಿಗಳ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದು ಹಾಗೂ ಇದನ್ನು ಎಲ್ಲೆಡೆ ವಿಸ್ತರಿಸುವ ಕೆಲಸ ನಡೆಯಲಿದೆ. ರಕ್ತದಾನವನ್ನು ಉತ್ತೇಜಿಸುವುದು, ರಕ್ತದಾನ ಮಾಡುವ ಮೂಲಕ ಜೀವಗಳನ್ನು ಉಳಿಸಲು ಜನರನ್ನು ಪ್ರೇರೇಪಿಸುವುದು ಈ ವಿಶೇಷ ದಿನದ ಪ್ರಮುಖ ಉದ್ದೇಶವಾಗಿದೆ. ಅಮೂಲ್ಯ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಬಹಳ ಅವಶ್ಯಕ. ರಕ್ತದಾನ ಮಾಡುವುದರಿಂದ ಬಹಳ ಪ್ರಯೋಜನಗಳಿವೆ. ನ್ಯಾಷನಲ್ ಬ್ಲಡ್ ಟ್ರಾನ್ಸ್‌ಫ್ಯೂಷನ್ ಕೌನ್ಸಿಲ್ ಪ್ರಕಾರ ಪ್ರತಿ ಆರೋಗ್ಯವಂತರು ರಕ್ತದಾನ ಮಾಡಬಹುದು. ಪುರುಷರು ಪ್ರತಿ ಮೂರು ತಿಂಗಳಿಗೊಮ್ಮೆ ಮತ್ತು ಮಹಿಳೆಯರು ಪ್ರತಿ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ.
ರಕ್ತದ ಮಹತ್ವ
ವೈದ್ಯರು ಹೇಳುವ ಪ್ರಕಾರ ಪ್ರತಿ ಆರೋಗ್ಯವಂತ ಮನುಷ್ಯನ ದೇಹದಲ್ಲಿ 5 ಲೀಟರ್ ರಕ್ತ ಇರಬೇಕು. ಆದರೆ ಬಹಳಷ್ಟು ಜನರು ರಕ್ತದ ಕೊರತೆಯನ್ನು ಎದುರಿಸುತ್ತಿದ್ದಾರೆ. ಗರ್ಭಧಾರಣೆ, ಹೆರಿಗೆ ಅಥವಾ ರಕ್ತಸ್ರಾವದಿಂದ ಬಳಲುತ್ತಿರುವ ಮಹಿಳೆಯರ ಪರಿಣಾಮಕಾರಿ ನಿರ್ವಹಣೆಗೆ ರಕ್ತ ಬಹಳ ಅಗತ್ಯವಾಗಿದೆ. ಅಪೌಷ್ಟಿಕತೆ ಹಾಗೂ ತೀವ್ರ ರಕ್ತಹೀನತೆಯಿಂದ ಬಳಲುತ್ತಿರುವ ಮಕ್ಕಳು, ಹಿಮೋಗ್ಲೋಬಿನ್ ಹಾಗೂ ರೋಗ ನಿರೋಧಕ ಕೊರತೆಯಿಂದ ಬಳಲುತ್ತಿರುವವರಿಗೆ, ಅಪಘಾತ, ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳು ಸೇರಿದಂತೆ ನಾನಾ ಸಂದರ್ಭಗಳಲ್ಲಿ ಬಹಳಷ್ಟು ಮಂದಿಗೆ ರಕ್ತ ಬಹಳ ಅತ್ಯಗತ್ಯವಾಗಿದೆ. ಆದರೆ ಇಂದು ಅಗತ್ಯ ಇರುವ ಎಲ್ಲರಿಗೂ ರಕ್ತ ದೊರೆಯುತ್ತಿಲ್ಲ. ಮಧ್ಯಮ ಮತ್ತು ಹಿಂದುಳಿದ ರಾಷ್ಟ್ರಗಳಲ್ಲಿ ರಕ್ತದ ಕೊರತೆ ಬಹಳ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಆರೋಗ್ಯ ಇಲಾಖೆಯ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಕೋಟಿ ಯೂನಿಟ್ ರಕ್ತ ಬೇಕಾಗುತ್ತದೆ. ಅದರೆ ಸದ್ಯಕ್ಕೆ ದೊರೆಯುತ್ತಿರುವುದು 2.5 ಕೋಟಿ ಯೂನಿಟ್ ರಕ್ತ ಮಾತ್ರ. ಆದ್ದರಿಂದ ಆರೋಗ್ಯ ಇಲಾಖೆಯು ಆಗ್ಗಾಗ್ಗೆ ರಕ್ತದಾನದ ಮಹತ್ವದ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಲು ಪ್ರಯತ್ನಿಸುತ್ತಿದೆ.
ವಿಶ್ವ ರಕ್ತದಾನಿಗಳ ದಿನದ ಹಿನ್ನೆಲೆ
ವಿಶ್ವ ಆರೋಗ್ಯ ಸಂಸ್ಥೆಯು 2014 ರಲ್ಲಿ ವಿಶ್ವ ರಕ್ತದಾನಿಗಳ ದಿನವನ್ನು ಘೋಷಿಸಿತು. ಜೂನ್ 14 ರಂದು ಕಾರ್ಲ್ ಸ್ಟೈನರ್ ಅವರ ಜನ್ಮದಿನವಾಗಿದ್ದು ಆ ದಿನವನ್ನು ಪ್ರತಿ ವರ್ಷ ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಕಾರ್ಲ್ ಸ್ಟೈನರ್ ಆಸ್ಟ್ರಿಯಾ ಮೂಲದ ವೈದ್ಯರಾಗಿದ್ದು ಮನುಷ್ಯನ ರಕ್ತದ ಪ್ರಕಾರಗಳನ್ನು ವರ್ಗೀಕರಿಸುವ ಕಾರ್ಯಕ್ಕಾಗಿ 1930 ರಲ್ಲಿ ವೈದ್ಯಕೀಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದರು. ಈ ರಕ್ತದ ಪ್ರಕಾರಗಳ ಸಂಶೋಧನೆ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನು ಉಂಟು ಮಾಡಿತು. ಒಂದೇ ಬ್ಲಡ್ ಗ್ರೂಪ್ ಹೊಂದಿರುವ ಜನರ ನಡುವೆ ರಕ್ತದ ವರ್ಗಾವಣೆಗೆ ಕಾರಣವಾಯ್ತು. ಆದ್ದರಿಂದ ಪ್ರತಿ ವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಿದರೆ, ಭಾರತದಲ್ಲಿ ಅಕ್ಟೋಬರ್ 1 ರಂದು ರಾಷ್ಟ್ರೀಯ ರಕ್ತದಾನ ದಿನವನ್ನಾಗಿ ಆಚರಿಸಲಾಗುತ್ತದೆ.
ರಕ್ತದಾನದಿಂದಾಗುವ ಪ್ರಯೋಜನಗಳು
ರಕ್ತದಾನ ಮಾಡುವುದರಿಂದ ನಮ್ಮ ದೇಹದಲ್ಲಿ ರಕ್ತ ಕಡಿಮೆಯಾಗುತ್ತದೆ ಎಂಬುದು ತಪ್ಪು ಕಲ್ಪನೆ. ರಕ್ತದಾನ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ರಕ್ತದಾನ ಮಾಡುವುದರಿಂದ ಹೃದಯಾಘಾತ ಹಾಗೂ ಕ್ಯಾನ್ಸರ್ನಂತ ಕಾಯಿಲೆಗಳು ಕಾಡುವ ಸಾಧ್ಯತೆ ಬಹಳ ಕಡಿಮೆ. ರಕ್ತದಾನ ಮಾಡುವವರು, ಮಾಡದವರಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ರಕ್ತದಾನ ಮಾಡುವುದರಿಂದ ನಮ್ಮ ದೇಹದಲ್ಲಿ ಹೊಸ ರಕ್ತ ರಚನೆಯಾಗುತ್ತದೆ.
ವಿಭಾಗ