ಕನ್ನಡ ಸುದ್ದಿ  /  ಜೀವನಶೈಲಿ  /  Blood Donors Day: ರಕ್ತದಾನದ ಬಗೆಗಿರುವ 5 ತಪ್ಪುಕಲ್ಪನೆಗಳು, ರಕ್ತದಾನ ಮಾಡುವ ಪ್ರಯೋಜನದ ಕುರಿತು ತಿಳಿಯಲೇಬೇಕಾದ ಮಾಹಿತಿಯಿದು

Blood Donors Day: ರಕ್ತದಾನದ ಬಗೆಗಿರುವ 5 ತಪ್ಪುಕಲ್ಪನೆಗಳು, ರಕ್ತದಾನ ಮಾಡುವ ಪ್ರಯೋಜನದ ಕುರಿತು ತಿಳಿಯಲೇಬೇಕಾದ ಮಾಹಿತಿಯಿದು

ರಕ್ತದಾನ ಮಹಾದಾನ ಎಂಬ ಮಾತಿದೆ. ರಕ್ತದಾನ ಮಾಡುವುದರಿಂದ ಒಂದು ಜೀವವನ್ನು ಉಳಿಸಬಹುದು ಮಾತ್ರವಲ್ಲ, ಇದರಿಂದ ನಮ್ಮ ದೇಹಕ್ಕೂ ಸಾಕಷ್ಟು ಪ್ರಯೋಜನಗಳಿವೆ. ಆದರೆ ರಕ್ತದಾನ ಮಾಡುವ ಬಗ್ಗೆ ಕೆಲವು ತಪ್ಪುಕಲ್ಪನೆಗಳಿವೆ. ಅಂತಹ ತಪ್ಪುಕಲ್ಪನೆಗಳು ಯಾವುದು, ರಕ್ತದಾನದಿಂದಾಗುವ ನಮ್ಮ ದೇಹಕ್ಕಾಗುವ ಲಾಭದ ಬಗ್ಗೆ ಇಲ್ಲಿದೆ ಮಾಹಿತಿ.

ರಕ್ತದಾನದ ಬಗೆಗಿರುವ ತಪ್ಪುಕಲ್ಪನೆಗಳು, ರಕ್ತದಾನ ಮಾಡುವುದರಿಂದಾಗುವ ಲಾಭದ ಬಗ್ಗೆ ತಿಳಿಯಲೇಬೇಕಾದ ಮಾಹಿತಿಯಿದು
ರಕ್ತದಾನದ ಬಗೆಗಿರುವ ತಪ್ಪುಕಲ್ಪನೆಗಳು, ರಕ್ತದಾನ ಮಾಡುವುದರಿಂದಾಗುವ ಲಾಭದ ಬಗ್ಗೆ ತಿಳಿಯಲೇಬೇಕಾದ ಮಾಹಿತಿಯಿದು

ಪ್ರಪಂಚದಾದ್ಯಂತ ಪ್ರತಿವರ್ಷ ಜೂನ್‌ 14 ಅನ್ನು ವಿಶ್ವ ರಕ್ತದಾನಿಗಳ ದಿನ ಎಂದು ಆಚರಿಸಲಾಗುತ್ತದೆ. ಈ ದಿನವು ರಕ್ತದಾನದ ಬಗ್ಗೆ ಅರಿವು ಮೂಡಿಸುವುದು ಹಾಗೂ ರಕ್ತದಾನದ ಮಹತ್ವವನ್ನು ತಿಳಿಸುವ ದಿನವಾಗಿದೆ. ಈ ದಿನದಂದು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುವವರನ್ನು ಗೌರವಿಸಲಾಗುತ್ತದೆ. ಅಲ್ಲದೇ ಸುರಕ್ಷಿತ ರಕ್ತ ಹಾಗೂ ರಕ್ತದ ಉತ್ಪನ್ನಗಳ ಅಗತ್ಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ರಕ್ತದಾನದ ಪ್ರಾಥಮಿಕ ಗುರಿ ಒಂದು ಜೀವವನ್ನು ಉಳಿಸುವುದೇ ಆದರೂ ರಕ್ತದಾನ ಮಾಡುವುದರಿಂದ ರಕ್ತದಾನಿಗಳಿಗೂ ಸಾಕಷ್ಟು ಪ್ರಯೋಜನಗಳಿವೆ.

ಈ ವರ್ಷ ನಾವು ವಿಶ್ವ ರಕ್ತದಾನಿಗಳ ದಿನದ 20ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ಇದು ರಕ್ತದಾನದ ಬಗೆಗಿನ ಮಹತ್ವದ ಸಂದೇಶವನ್ನು ಜಗತ್ತಿಗೆ ಸಾರುವ ದಿನ. ಮಾತ್ರವಲ್ಲ ಭವಿಷ್ಯದ ದೃಷ್ಟಿಯಿಂದ ರಕ್ತದಾನದ ಬಗ್ಗೆ ಅರಿವು ಮೂಡಿಸುವ ದಿನವೂ ಆಗಿದೆ. ಅದೇನೆ ಇದ್ದರೂ ರಕ್ತದಾನ ಮಾಡುವ ವಿಚಾರದಲ್ಲಿ ಕೆಲವರಿಗೆ ಹಲವು ತಪ್ಪುಕಲ್ಪನೆಗಳಿವೆ. ಅಂತಹ ಪ್ರಮುಖ 5 ತಪ್ಪುಕಲ್ಪನೆಗಳ ಬಗ್ಗೆ ಇಲ್ಲಿದೆ ವಿವರ.

ರಕ್ತದಾನದ ಕುರಿತು 5 ತಪ್ಪುಕಲ್ಪನೆಗಳಿವು 

ಮಿಥ್ಯ-1: ರಕ್ತದಾನ ಮಾಡುವುದರಿಂದ ಎಚ್‌ಐವಿ ಸೇರಿದಂತೆ ಇತರ ಸೋಂಕು ಹರಡುತ್ತದೆ

ಟ್ರೆಂಡಿಂಗ್​ ಸುದ್ದಿ

ಸತ್ಯ: ರಕ್ತದಾನ ಮಾಡುವಾಗ ಬಳಸುವ ಸೂಚಿಯನ್ನು ಯಾವುದೇ ಕಾರಣಕ್ಕೂ ಒಬ್ಬರಿಗೆ ಬಳಸಿದ್ದನ್ನು ಮತ್ತೊಬ್ಬರಿಗೆ ಬಳಸುವಂತಿಲ್ಲ. ರಕ್ತದಾನ ಮಾಡ ಬಯಸುವ ವ್ಯಕ್ತಿಯಲ್ಲಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಹಾಗೂ ಸೋಂಕಿನ ಸೂಚನೆ ಇದ್ದರೆ ಅವರ ರಕ್ತವನ್ನು ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ. ದಾನ ಮಾಡಿದ ರಕ್ತವನ್ನು ಇತರರಿಗೆ ನೀಡುವ ಮೊದಲು ಎಚ್‌ಐವಿ, ಹೆಪಟೈಟಿಸ್ ಬಿ ಮತ್ತು ಸಿ, ಸಿಫಿಲಿಸ್ ಮತ್ತು ಇತರವುಗಳನ್ನು ಒಳಗೊಂಡಿರುವ ವಿವಿಧ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿ ವ್ಯಾಪಕ ಪರೀಕ್ಷೆ ನಡೆಸಲಾಗುತ್ತದೆ. ಈ ಅಂಶಗಳನ್ನೂ ಪರೀಕ್ಷಿಸಿದ ನಂತರವಷ್ಟೇ ಬೇರೆಯವರಿಗೆ ನೀಡಲಾಗುತ್ತದೆ.

ಮಿಥ್ಯ -2: ರಕ್ತದಾನವು ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ

ಸತ್ಯ: ರಕ್ತದಾನ ಮಾಡುವ ಪ್ರಕ್ರಿಯೆಯು ಪ್ರಾಥಮಿಕವಾಗಿ ಕೆಂಪು ರಕ್ತ ಕಣಗಳ ಹೊರತೆಗೆಯುವಿಕೆಯನ್ನು ಒಳಗೊಂಡಿರುತ್ತದೆ, ಇದು ಕೆಲವೇ ದಿನಗಳಲ್ಲಿ ದೇಹದಿಂದ ಮರುಪೂರಣಗೊಳ್ಳುತ್ತದೆ. ರಕ್ತದಾನದ ನಂತರ ಬಿಳಿ ರಕ್ತ ಕಣಗಳ ಮಟ್ಟವು ಸಾಮಾನ್ಯ ಸ್ಥಿತಿಗೆ ಮರಳಲು ಕೆಲವು ವಾರಗಳನ್ನು ತೆಗೆದುಕೊಳ್ಳಬಹುದು. ಬಿಳಿ ರಕ್ತ ಕಣಗಳಲ್ಲಿನ ಈ ತಾತ್ಕಾಲಿಕ ಇಳಿಕೆಯು ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯವನ್ನು ಗಮನಾರ್ಹವಾಗಿ ದುರ್ಬಲಗೊಳಿಸುವುದಿಲ್ಲ. ಹಾಗಾಗಿ ರಕ್ತದಾನ ಮಾಡುವುದರಿಂದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಮಿಥ್ಯ -3: ಯಾವುದೇ ಔಷಧಿ ಸೇವಿಸುವವರು ರಕ್ತದಾನ ಮಾಡುವಂತಿಲ್ಲ

ಸತ್ಯ: ಪ್ರತಿನಿತ್ಯ ಯಾವುದೋ ಅನಾರೋಗ್ಯಕ್ಕೆ ಸಂಬಂಧಿಸಿದ ಔಷಧಿ ಸೇವಿಸುವವರು ರಕ್ತದಾನ ಮಾಡುವಂತಿಲ್ಲ ಎಂಬುದು ತಪ್ಪುಕಲ್ಪನೆ. ರಕ್ತದಾನ ಮಾಡುವ ಅರ್ಹತೆಯು ಔಷಧಿಗಳನ್ನು ಸೂಚಿಸಿದ ಸ್ಥಿತಿಯನ್ನು ಅವಲಂಬಿಸಿರುತ್ತದೆ. ರೋಗಿ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದು, ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದ್ದರೆ, ಅಂತಹ ವ್ಯಕ್ತಿಗಳು ರಕ್ತದಾನ ಮಾಡಬಹುದು. ಆದರೆ ಕೆಲವು ವ್ಯಕ್ತಿಗಳಿಗೆ ಔಷಧಿ ತೆಗೆದಕೊಂಡ ನಂತರ ಒಂದಿಷ್ಟು ಸಮಯ ಕಾದು ನಂತರ ರಕ್ತ ಕೊಡಬೇಕಾಗಬಹುದು.

ಮಿಥ್ಯ -4: ಟ್ಯಾಟೂ ಅಥವಾ ಹಚ್ಚೆ ಇರುವವರು ರಕ್ತದಾನ ಮಾಡುವಂತಿಲ್ಲ

ಸತ್ಯ: ಟ್ಯಾಟೂ ಹಾಕಿಸಿಕೊಂಡ ನಂತರ ರಕ್ತದಾನ ಮಾಡಲು ವ್ಯಕ್ತಿಗಳು 3 ತಿಂಗಳ ಕಾಲ ಕಾಯಬೇಕಾಗುತ್ತದೆ. ಆದರೆ ಸರ್ಕಾರಿ ಪರವಾನಿಗೆ ಹೊಂದಿರುವ ಟ್ಯಾಟೂ ಮಳಿಗೆಯಿಂದ ಟ್ಯಾಟೂ ಹಾಕಿಸಿದ್ದರೆ, ಅಂತಹ ವ್ಯಕ್ತಿಗಳ ರಕ್ತದಾನ ಮಾಡಲು ಕಾಯಬೇಕಿಲ್ಲ. ಇನ್ನು ಟ್ಯಾಟೂ ಹಾಕಿಸುವಾಗ ಒಂದೇ ರಾಶಿ ಚುಚ್ಚಿ ಎಸೆಯುವ ಸಾಧನವಾಗಿದ್ದರೆ, ಖಂಡಿತ ಯಾವಾಗ ಬೇಕಾದರೂ ರಕ್ತ ಕೊಡಬಹುದು. ಮರುಬಳಕೆ ಟ್ಯಾಟೂ ಗನ್‌ ಅಥವಾ ಇತರ ಸಾಧನ ಬಳಸಿದ್ದರೆ ಅಂತಹ ವ್ಯಕ್ತಿಗಳು ರಕ್ತಕೊಡಲು 3 ತಿಂಗಳು ಕಾಯಬೇಕು.

ಮಿಥ್ಯ - 5: ಮಹಿಳೆಯರು ರಕ್ತ ಕೊಡುವಂತಿಲ್ಲ

ಸತ್ಯ: ಮಹಿಳೆಯರು ರಕ್ತದಾನ ಮಾಡಲು ಸಂಪೂರ್ಣವಾಗಿ ಸಮರ್ಥರಾಗಿದ್ದಾರೆ. ಹಿಮೊಗ್ಲೋಬಿನ್‌ ಮಟ್ಟ ಕಡಿಮೆ ಇರುವುದು ಹಾಗೂ ರಕ್ತಹೀನತೆಯಿಂದ ಬಳಲುತ್ತಿರುವವರು ರಕ್ತದಾನ ಮಾಡುವಂತಿಲ್ಲ. ಒಬ್ಬ ದಾನಿಯು ರಕ್ತವನ್ನು ನೀಡಲು ಪ್ರತಿ ಡೆಸಿಲೀಟರ್‌ಗೆ 12.5 ಗ್ರಾಂ ಹಿಮೋಗ್ಲೋಬಿನ್ ಹೊಂದಿರಬೇಕು. ಇದಕ್ಕಿಂತ ಕಡಿಮೆ ಇದ್ದರೆ ರಕ್ತದಾನ ಮಾಡುವಂತಿಲ್ಲ.

ರಕ್ತದಾನ ಮಾಡುವುದರಿಂದಾಗುವ ಅದ್ಭುತ ಪ್ರಯೋಜನಗಳು

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ನಿಯಮಿತ ರಕ್ತದಾನವು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ. ರಕ್ತದಾನವು ನಿಮ್ಮ ರಕ್ತದ ಹೆಪ್ಪುಗಟ್ಟುವುದನ್ನು ಕಡಿಮೆ ಮಾಡುತ್ತದೆ, ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತ ಅತಿಯಾಗಿ ಹೆಪ್ಪುಗಟ್ಟಿದ್ದರೆ ರಕ್ತನಾಳಗಳಿಗೆ ಹಾನಿಯಾಗಬಹುದು, ಇದರಿಂದ ಪ್ಲೇಕ್ ರಚನೆ ಮತ್ತು ಹೃದಯರಕ್ತನಾಳದ ತೊಂದರೆಗಳಿಗೆ ಕಾರಣವಾಗುತ್ತದೆ. ರಕ್ತದಾನ ಮಾಡುವುದರಿಂದ ರಕ್ತದ ಹರಿವು ಸರಾಗವಾಗಿ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ದೇಹಕ್ಕೆ ಹಾನಿ ಮಾಡುವ ಕಬ್ಬಿಣಾಂಶವನ್ನು ಕಡಿಮೆ ಮಾಡುತ್ತದೆ: ರಕ್ತದಲ್ಲಿನ ಕಬ್ಬಿಣಾಂಶ ಅಧಿಕವಾದರೆ ಹಿಮೋಕ್ರೊಮಾಟೋಸಿಸ್ ಎಂಬ ಸ್ಥಿತಿಗೆ ಕಾರಣವಾಗಬಹುದು. ಇದು ಯಕೃತ್ತು ಮತ್ತು ಹೃದಯದ ಅಂಗಗಳಿಗೆ ಹಾನಿಯನ್ನುಂಟುಮಾಡುತ್ತದೆ. ನಿಯಮಿತ ರಕ್ತದಾನವು ಹೆಚ್ಚುವರಿ ಕಬ್ಬಿಣಾಂಶ ಶೇಖರಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಒಟ್ಟಾರೆ ಉತ್ತಮ ಆರೋಗ್ಯವನ್ನು ಉತ್ತೇಜಿಸುತ್ತದೆ. ಆನುವಂಶಿಕ ಹಿಮೋಕ್ರೊಮಾಟೋಸಿಸ್ ಅಥವಾ ಕಬ್ಬಿಣಾಂಶ ಹೆಚ್ಚಿರುವ ವ್ಯಕ್ತಿಗಳಿಗೆ ಇದು ಪ್ರಯೋಜನಕಾರಿಯಾಗಿದೆ.

ಹೊಸ ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ: ರಕ್ತದಾನ ಮಾಡಿದಾಗ, ದೇಹವು ರಕ್ತದ ನಷ್ಟವನ್ನು ಪುನಃ ತುಂಬಿಸಲು ಕೆಲಸ ಮಾಡುತ್ತದೆ. ಈ ಪ್ರಕ್ರಿಯೆಯು ಹೊಸ ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ರಕ್ತ ಕಣಗಳನ್ನು ಆರೋಗ್ಯಕರವಾಗಿ ಮತ್ತು ಕ್ರಿಯಾತ್ಮಕವಾಗಿ ಇರಿಸುತ್ತದೆ. ಈ ಪುನರುತ್ಪಾದನೆಯು ಹೊಸ ಕೋಶಗಳನ್ನು ಉತ್ಪಾದಿಸುವ ನಿಮ್ಮ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಅಗತ್ಯ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ನಿಮ್ಮ ದೇಹದ ಸಾಮರ್ಥ್ಯವನ್ನು ಕಾಪಾಡಿಕೊಳ್ಳುತ್ತದೆ.

ಉಚಿತ ಆರೋಗ್ಯ ತಪಾಸಣೆಯನ್ನು ಒದಗಿಸುತ್ತದೆ: ರಕ್ತದಾನ ಮಾಡುವ ಮೊದಲು, ದಾನಿಗಳ ನಾಡಿಮಿಡಿತ, ರಕ್ತದೊತ್ತಡ, ದೇಹದ ಉಷ್ಣತೆ ಮತ್ತು ಹಿಮೋಗ್ಲೋಬಿನ್ ಮಟ್ಟವನ್ನು ಪರೀಕ್ಷಿಸುವ ಮೂಲಭೂತ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಈ ಪರೀಕ್ಷೆಗಳು ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಒಳನೋಟ ಸಿಗುವಂತೆ ಮಾಡುತ್ತದೆ. ಯಾವುದೇ ಆರೋಗ್ಯ ಸಮಸ್ಯೆಗಳ ಆರಂಭಿಕ ಪತ್ತೆಯನ್ನು ಗುರುತಿಸಿ ವೈದ್ಯರ ಬಳಿ ಸಲಹೆ ಪಡೆಯಲು ನಿಮಗೆ ನೆರವಾಗುತ್ತದೆ.

ಮಾನಸಿಕ ಯೋಗಕ್ಷೇಮವನ್ನು ಸುಧಾರಿಸುತ್ತದೆ: ರಕ್ತದಾನ ಮಾಡುವುದರಿಂದ ಕೇವಲ ದೈಹಿಕ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ಪ್ರಯೋಜನವಿದೆ. ಪರಹಿತಚಿಂತನೆಯ ಕ್ರಿಯೆಗಳು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಭಾವನಾತ್ಮಕ ಯೋಗಕ್ಷೇಮವನ್ನು ಸುಧಾರಿಸುತ್ತದೆ. ಜೀವನದ ಮೇಲೆ ಹೆಚ್ಚು ಸಕಾರಾತ್ಮಕ ಭಾವ ಮೂಡಲು ಕಾರಣವಾಗುತ್ತದೆ.

ರಕ್ತದಾನದ ಬಗ್ಗೆ ಇರುವ ತಪ್ಪುಕಲ್ಪನೆಗಳು ಹಾಗೂ ಪ್ರಯೋಜನಗಳ ಬಗ್ಗೆ ತಿಳಿದುಕೊಂಡ್ರಿ ಅಲ್ವಾ, ಇನ್ನಾದರೂ ರಕ್ತದಾನ ಮಾಡಿ, ನೀವು ಮಾಡುವ ರಕ್ತದಾನವು ಒಂದು ಜೀವವನ್ನು ಉಳಿಸುವ ಅಮೂಲ್ಯ ಕೆಲಸವನ್ನು ಮಾಡುತ್ತದೆ ನೆನಪಿರಲಿ.