World Cancer Day: ಕ್ಯಾನ್ಸರ್ ಬಗ್ಗೆ ಬೇಡ ನಿರ್ಲಕ್ಷ್ಯ, ಇರಲಿ ಕಾಳಜಿ; ಅಪಾಯದಿಂದ ಪಾರಾಗಲು ಇಂದೇ ಜೀವನಶೈಲಿಯಲ್ಲಿ ಈ ಬದಲಾವಣೆ ತನ್ನಿ
ಕನ್ನಡ ಸುದ್ದಿ  /  ಜೀವನಶೈಲಿ  /  World Cancer Day: ಕ್ಯಾನ್ಸರ್ ಬಗ್ಗೆ ಬೇಡ ನಿರ್ಲಕ್ಷ್ಯ, ಇರಲಿ ಕಾಳಜಿ; ಅಪಾಯದಿಂದ ಪಾರಾಗಲು ಇಂದೇ ಜೀವನಶೈಲಿಯಲ್ಲಿ ಈ ಬದಲಾವಣೆ ತನ್ನಿ

World Cancer Day: ಕ್ಯಾನ್ಸರ್ ಬಗ್ಗೆ ಬೇಡ ನಿರ್ಲಕ್ಷ್ಯ, ಇರಲಿ ಕಾಳಜಿ; ಅಪಾಯದಿಂದ ಪಾರಾಗಲು ಇಂದೇ ಜೀವನಶೈಲಿಯಲ್ಲಿ ಈ ಬದಲಾವಣೆ ತನ್ನಿ

ಜಾಗತಿಕ ಮಟ್ಟದಲ್ಲಿ ಹಲವರನ್ನು ಕಾಡುತ್ತಿರುವ ಮಾರಕ ರೋಗ ಕ್ಯಾನ್ಸರ್‌. ಈ ಮಾರಣಾಂತಿಕ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಫೆಬ್ರುವರಿ 4 ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಕ್ಯಾನ್ಸರ್ ಬಗ್ಗೆ ಎಂದಿಗೂ ನಿರ್ಲಕ್ಷ್ಯ ಮಾಡಬಾರದು, ಅಪಾಯದಿಂದ ಪಾರಾಗಲು ಜೀವನಶೈಲಿಯಲ್ಲಿ ಈ ಕೆಲವು ಬದಲಾವಣೆಗಳನ್ನು ತನ್ನಿ.

ಕ್ಯಾನ್ಸರ್ ಎದುರಿಸಲು ಜೀವನಶೈಲಿ ಹೇಗಿರಬೇಕು
ಕ್ಯಾನ್ಸರ್ ಎದುರಿಸಲು ಜೀವನಶೈಲಿ ಹೇಗಿರಬೇಕು (PC: Canva)

ಪ್ರತಿ ವರ್ಷ ಫೆಬ್ರುವರಿ 4 ರಂದು ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಗುತ್ತದೆ. ಈ ದಿನವು ಕ್ಯಾನ್ಸರ್ ತಡೆಗಟ್ಟುವಿಕೆ, ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ವಿಶ್ವ ಕ್ಯಾನ್ಸರ್ ದಿನವು ಜಗತ್ತಿನಾದ್ಯಂತ ವ್ಯಕ್ತಿಗಳು, ಸಮುದಾಯ ಮತ್ತು ಸಂಸ್ಥೆಗಳನ್ನು ಒಗ್ಗೂಡಿಸಿ ಕ್ಯಾನ್ಸರ್‌ನಿಂದ ಎದುರಾಗುವ ಸವಾಲುಗಳನ್ನು ಎತ್ತಿ ತೋರಿಸುತ್ತದೆ ಮತ್ತು ಅದನ್ನು ಎದುರಿಸಲು ಕ್ರಮಗಳನ್ನು ಪ್ರೇರೇಪಿಸುತ್ತದೆ.

ಕ್ಯಾನ್ಸರ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಕ್ಯಾನ್ಸರ್‌ಗೆ ತುತ್ತಾದ ರೋಗಿಗಳು ಹಾಗೂ ಕುಟುಂಬದವರನ್ನು ಬೆಂಬಲಿಸಲು ವಿಶ್ವದಾದ್ಯಂತ ಕಾರ್ಯಕ್ರಮಗಳು, ಅಭಿಯಾನಗಳು ಹಾಗೂ ಚಟುವಟಿಕೆಗಳನ್ನು ಆಯೋಜಿಸುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶ. 

ಕ್ಯಾನ್ಸರ್ ತಡೆಗಟ್ಟುವಿಕೆ; ಅಪಾಯ ಕಡಿಮೆ ಮಾಡಲು ಸಲಹೆ ‌

ವಿಶ್ವ ಆರೋಗ್ಯ ಸಂಸ್ಥೆಯು ಜೀವನಶೈಲಿಯಲ್ಲಿ ಈ ಕೆಲವು ಬದಲಾವಣೆಗಳನ್ನು ತಪ್ಪದೇ ಅನುಸರಿಸುವ ಮೂಲಕ ಶೇ 30 ರಿಂದ 50 ರಷ್ಟು ಕ್ಯಾನ್ಸರ್ ಅಪಾಯವನ್ನು ತಡೆಗಟ್ಟಲು ಸಾಧ್ಯವಿದೆ ಎಂಬುದನ್ನು ನಿರೂಪಿಸಿದೆ. ಹಾಗಾದರೆ ಕ್ಯಾನ್ಸರ್ ಅಪಾಯವನ್ನು ದೂರ ಮಾಡಲು ಜೀವನಶೈಲಿಯಲ್ಲಿ ತರಬೇಕಾದ ಬದಲಾವಣೆಗಳು ಯಾವುವು ನೋಡಿ.

1. ತಂಬಾಕು ತ್ಯಜಿಸಿ

ತಂಬಾಕು ಸೇವನೆಯು ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ತುಂಬಾಕು ಸೇವನೆಯು ವಿವಿಧ ರೀತಿಯ ಕ್ಯಾನ್ಸರ್‌ಗೆ ಕಾರಣವಾಗಬಹುದು. ನೀವು ಧೂಮಪಾನ ಮಾಡುತ್ತಿದ್ದರೆ ಇಂದೇ ಈ ಅಭ್ಯಾಸಕ್ಕೆ ಗುಡ್‌ಬೈ ಹೇಳಿ. ಧೂಮಪಾನ ಮಾಡುವುದು ಮಾತ್ರವಲ್ಲ, ಇದರ ಹೊಗೆಗೆ ಒಡ್ಡಿಕೊಳ್ಳುವುದು ಕೂಡ ಅಪಾಯಕಾರಿ. ಧೂಮಪಾನದ ಹೊಗೆಗೆ ಒಡ್ಡಿಕೊಳ್ಳುವುದರಿಂದಲೂ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಹಾಗಾಗಿ ಧೂಮಪಾನ ಹಾಗೂ ತಾಂಬಾಕಿನಿಂದ ಸಾಧ್ಯವಾದಷ್ಟು ದೂರವಿರಬೇಕು. 

2. ಸಮತೋಲಿತ ಆಹಾರ ಸೇವಿಸಿ

ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನ ಅಂಶ ಇರುವ ಆಹಾರ ಸೇವನೆಯ ಮೇಲೆ ಗಮನಹರಿಸಿ. ಸಂಸ್ಕರಿಸಿದ ಆಹಾರಗಳು, ರೆಡ್‌ಮೀಟ್‌ ಮತ್ತು ಸಕ್ಕರೆ ಪಾನೀಯಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ಆರೋಗ್ಯಕರ, ಸಮತೋಲಿತ ಆಹಾರವು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಮತ್ತು ಇತರ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

3. ನಿಯಮಿತ ತಪಾಸಣೆ ಮಾಡಿಸಿ

ಕ್ಯಾನ್ಸರ್ ಅನ್ನು ಪರಿಣಾಮಕಾರಿಯಾಗಿ ಎದುರಿಸಲು ಆರಂಭಿಕ ಪತ್ತೆ ಬಹಳ ಮುಖ್ಯವಾಗುತ್ತದೆ. ಆರಂಭದಲ್ಲಿ ಕ್ಯಾನ್ಸರ್ ಪತ್ತೆ ಹಚ್ಚುವುದರಿಂದ ಪ್ರಾಣಾಪಾಯದಿಂದ ದೂರಾಗಲು ಸಾಧ್ಯವಿದೆ. ನಿಯಮಿತ ತಪಾಸಣೆಗಳು ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆ ಪಡೆಯಲು ನೆರವಾಗುತ್ತವೆ. 

4. ಲಸಿಕೆ ಹಾಕಿಸಿ

ಲಸಿಕೆಗಳು ಕೆಲವು ರೀತಿಯ ಕ್ಯಾನ್ಸರ್‌ಗಳನ್ನು ತಡೆಗಟ್ಟಲು ಸಹಾಯ ಮಾಡುತ್ತವೆ. ಉದಾಹರಣೆಗೆ ಗರ್ಭಕಂಠ ಮತ್ತು ಇತರ ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡಲು HPV ಲಸಿಕೆ ನೆರವಾಗುತ್ತದೆ. ಹೆಪಟೈಟಿಸ್ ಬಿ ಲಸಿಕೆಯಿಂದ ಯಕೃತ್ತಿನ ಕ್ಯಾನ್ಸರ್‌ನಿಂದ ರಕ್ಷಿಸಿಕೊಳ್ಳುವ ಸಾಧ್ಯತೆ ಇದೆ. 

5. ದೈಹಿಕವಾಗಿ ಸಕ್ರಿಯರಾಗಿರಿ

ಸ್ಥೂಲಕಾಯ ಅಥವಾ ಬೊಜ್ಜು ವಿವಿಧ ರೀತಿಯ ಕ್ಯಾನ್ಸರ್‌ಗೆ ಸಂಬಂಧಿಸಿದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರ ಮತ್ತು ನಿಯಮಿತ ದೈಹಿಕ ಚಟುವಟಿಕೆಯನ್ನು ಗುರಿಯಾಗಿರಿಸಿಕೊಳ್ಳಿ. ನಿರಂತರ ದೈಹಿಕ ಚಟುವಟಿಕೆಯು ಕ್ಯಾನ್ಸರ್ ಸೇರಿದಂತೆ ಹಲವು ರೀತಿಯ ಅಪಾಯಗಳಿಂದ ದೇಹವನ್ನು ರಕ್ಷಿಸುತ್ತದೆ. 

ಜೀವನಶೈಲಿಯಲ್ಲಿ ಈ ಕೆಲವು ಸರಳ ಬದಲಾವಣೆಗಳನ್ನು ತರುವುದರಿಂದ ಕ್ಯಾನ್ಸರ್ ಅಪಾಯವನ್ನು ಎದುರಿಸಲು ಸಾಧ್ಯವಿದೆ. ಕ್ಯಾನ್ಸರ್ ಬಗ್ಗೆ ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಜೀವನಶೈಲಿಯಲ್ಲಿ ಬದಲಾವಣೆಗಳನ್ನು ತರುವ ಮೂಲಕ ಅಪಾಯದಿಂದ ದೂರಾಗಲು ಸಾಧ್ಯವಿದೆ. 

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner