World Cancer Day: ವಿಶ್ವ ಕ್ಯಾನ್ಸರ್ ದಿನ ಯಾವಾಗ, ಈ ದಿನಾಚರಣೆಯ ಉದ್ದೇಶವೇನು; ಈ ದಿನದ ಇತಿಹಾಸ, ಮಹತ್ವ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  World Cancer Day: ವಿಶ್ವ ಕ್ಯಾನ್ಸರ್ ದಿನ ಯಾವಾಗ, ಈ ದಿನಾಚರಣೆಯ ಉದ್ದೇಶವೇನು; ಈ ದಿನದ ಇತಿಹಾಸ, ಮಹತ್ವ ಹೀಗಿದೆ

World Cancer Day: ವಿಶ್ವ ಕ್ಯಾನ್ಸರ್ ದಿನ ಯಾವಾಗ, ಈ ದಿನಾಚರಣೆಯ ಉದ್ದೇಶವೇನು; ಈ ದಿನದ ಇತಿಹಾಸ, ಮಹತ್ವ ಹೀಗಿದೆ

ಜಗತ್ತನ್ನು ಕಾಡುತ್ತಿರುವ ಮಾರಕ ರೋಗ ಕ್ಯಾನ್ಸರ್‌. ಜಾಗತಿಕ ಮಟ್ಟದಲ್ಲಿ ಕ್ಯಾನ್ಸರ್‌ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿವೆ. ಕ್ಯಾನ್ಸರ್‌ನಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವದ ಬಗ್ಗೆ ಮಾಹಿತಿ.

ವಿಶ್ವ ಕ್ಯಾನ್ಸರ್ ದಿನ 2025
ವಿಶ್ವ ಕ್ಯಾನ್ಸರ್ ದಿನ 2025 (PC: Canva)

ಕ್ಯಾನ್ಸರ್ ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಮಾರಕ ರೋಗ, ಗೊತ್ತೇ ಆಗದಂತೆ ದೇಹದಲ್ಲಿ ಬೆಳೆದು ನಂತರ ಮಾರಣಾಂತಿಕವಾಗುತ್ತದೆ. ಯಾವುದೇ ಕ್ಯಾನ್ಸರ್ ಆದರೂ ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ಪಡೆಯುವುದರಿಂದ ಪ್ರಾಣಾಪಾಯದ ಸಂಭವ ಕಡಿಮೆ. ಆದರೆ ಕೆಲವು ಕ್ಯಾನ್ಸರ್‌ಗಳನ್ನು ಕೊನೆ ಹಂತಕ್ಕೆ ತಲುಪುವವರೆಗೂ ಗುರುತಿಸಲು ಸಾಧ್ಯವಾಗುವುದೇ ಇಲ್ಲ. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿ, ಜನರಲ್ಲಿ ತಿಳುವಳಿಕೆ ಬರುವಂತೆ ಮಾಡಲು ಹಾಗೂ ಕ್ಯಾನ್ಸರ್ ರೋಗಿಯ ಕಾಳಜಿ ಬಗ್ಗೆ ಮನೆಯವರು ಹಾಗೂ ಆಪ್ತರಲ್ಲಿ ಅರಿವು ಮೂಡಿಸುವ ಸಲುವಾಗಿ  ಪ್ರತಿ ವರ್ಷ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ.

ಹಾಗಾದರೆ ವಿಶ್ವ ಕ್ಯಾನ್ಸರ್ ದಿನ ಯಾವಾಗ, ಈ ದಿನವನ್ನು ಆಚರಿಸುವ ಉದ್ದೇಶವೇನು, ಈ ದಿನಾಚರಣೆಯ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.

ವಿಶ್ವ ಕ್ಯಾನ್ಸರ್ ದಿನ

ಪ್ರತಿ ವರ್ಷ ಫೆಬ್ರುವರಿ 4ಕ್ಕೆ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಮಂಗಳವಾರ ವಿಶ್ವ ಕ್ಯಾನ್ಸರ್ ದಿನಾಚರಣೆ ಇದೆ. ಇದು ಜಾಗತಿಕ ಮಟ್ಟದಲ್ಲಿ ಹಲವು ದೇಶಗಳು ಆಚರಿಸುವ ದಿನವಾಗಿದೆ. 

ವಿಶ್ವ ಕ್ಯಾನ್ಸರ್ ದಿನದ ಇತಿಹಾಸ

1999 ಫೆಬ್ರವರಿ 4 ರಂದು ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಕ್ಯಾನ್ಸರ್ ವಿರುದ್ಧದ ಶೃಂಗಸಭೆಯ ಸಂದರ್ಭದಲ್ಲಿ ವಿಶ್ವ ಕ್ಯಾನ್ಸರ್ ದಿನದ ಆಚರಣೆ ಬಗ್ಗೆ ಘೋಷಣೆ ಮಾಡಲಾಯಿತು. ಮುಂದಿನ ವರ್ಷ ಅಂದರೆ 2000 ಫೆಬ್ರವರಿ 4 ರಂದು, ಹೊಸ ಸಹಸ್ರಮಾನದ ಕ್ಯಾನ್ಸರ್ ವಿರುದ್ಧದ ವಿಶ್ವ ಶೃಂಗಸಭೆಯ ಸಂದರ್ಭ ಕ್ಯಾನ್ಸರ್ ವಿರುದ್ಧದ ಚಾರ್ಟರ್‌ಗೆ ಸಹಿ ಹಾಕಲಾಯಿತು. ಅಲ್ಲದೇ ಅಂದಿನಿಂದ ಫೆಬ್ರುವರಿ 4 ಅನ್ನು ವಿಶ್ವ ಕ್ಯಾನ್ಸರ್ ದಿನ ಎಂದು ಅಧಿಕೃತವಾಗಿ ಘೋಷಿಸಲಾಯಿತು. ಈ ಚಾರ್ಟರ್ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಜಾಗತಿಕ ಸಹಯೋಗದ ಅಗತ್ಯವನ್ನು ಒತ್ತಿ ಹೇಳುತ್ತದೆ ಮತ್ತು ಕ್ಯಾನ್ಸರ್ ಆರೈಕೆ, ಸಂಶೋಧನೆ ಮತ್ತು ಚಿಕಿತ್ಸೆಯ ಪ್ರಗತಿಗಳಂತಹ ವಿಚಾರಗಳ ಮೇಲೆ ಗಮನ ಹರಿಸುವಂತೆ ಮಾಡುತ್ತದೆ. 

ವಿಶ್ವ ಕ್ಯಾನ್ಸರ್ ದಿನದ ಮಹತ್ವ

ವಿಶ್ವ ಕ್ಯಾನ್ಸರ್ ದಿನವು ಎಲ್ಲಾ ವಿವಿಧ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಪ್ರಮುಖ ಜಾಗತಿಕ ವೇದಿಕೆಯಾಗಿದ್ದು, ಸಾವುಗಳನ್ನು ಕಡಿಮೆ ಮಾಡಲು ಕ್ಯಾನ್ಸರ್‌ ತಡೆಗಟ್ಟುವಿಕೆ, ಆರಂಭಿಕ ಗುರುತಿಸುವಿಕೆ ಮತ್ತು ಪರಿಣಾಮಕಾರಿ ಚಿಕಿತ್ಸೆಯನ್ನು ಪ್ರತಿಪಾದಿಸುತ್ತದೆ. ಇದು ವ್ಯಕ್ತಿಗಳು, ಸರ್ಕಾರಗಳು ಮತ್ತು ಸಂಸ್ಥೆಗಳು ಪ್ರಪಂಚದಾದ್ಯಂತದ ವ್ಯಕ್ತಿಗಳು, ಕುಟುಂಬಗಳು ಮತ್ತು ಸಮುದಾಯಗಳ ಮೇಲೆ ಕ್ಯಾನ್ಸರ್‌ನ ಪ್ರಭಾವವನ್ನು ಕಡಿಮೆ ಮಾಡಲು ಒಟ್ಟಾಗಿ ಕೆಲಸ ಮಾಡುವಂತೆ ನೆನಪಿಸುತ್ತದೆ. 

ವಿಶ್ವ ಕ್ಯಾನ್ಸರ್ ದಿನ 2025ರ ಥೀಮ್

2025 ರ ವಿಶ್ವ ಕ್ಯಾನ್ಸರ್ ದಿನದ ಧ್ಯೇಯವಾಕ್ಯ "ಯುನೈಟೆಡ್ ಬೈ ಯುನಿಕ್" ಎಂಬುದಾಗಿದೆ. ಇದು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ರೋಗಿ-ಕೇಂದ್ರಿತ ಆರೈಕೆಯ ಮಹತ್ವವನ್ನು ಒತ್ತಿಹೇಳುತ್ತದೆ. ಈ ವಿಷಯವು 2025 ರಿಂದ 2027 ರವರೆಗೆ ನಡೆಯುವ ಮೂರು ವರ್ಷಗಳ ಅಭಿಯಾನದ ಭಾಗವಾಗಿದ್ದು, ಇದು ಕ್ಯಾನ್ಸರ್ ರೋಗಿಗಳು, ಬದುಕುಳಿದವರು ಮತ್ತು ಆರೈಕೆದಾರರ ವೈಯಕ್ತಿಕ ಪ್ರಯಾಣಗಳನ್ನು ಎತ್ತಿ ತೋರಿಸುತ್ತದೆ. ಈ ಯೋಜನೆಯು ಕ್ಯಾನ್ಸರ್ ಆರೈಕೆಯಲ್ಲಿ ಸಹಾನುಭೂತಿ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ ಮತ್ತು ಅದೇ ಸಮಯದಲ್ಲಿ ಹೆಚ್ಚು ವೈಯಕ್ತಿಕ ಚಿಕಿತ್ಸಾ ತಂತ್ರಗಳನ್ನು ಪ್ರತಿಪಾದಿಸುತ್ತದೆ. 

ಕ್ಯಾನ್ಸರ್ ಮಾರಕ ರೋಗ ನಿಜ ಆದರೆ ಅದು ಖಂಡಿತ ಗುಣಪಡಿಸಲಾಗದ ಕಾಯಿಲೆಯಲ್ಲ. ಕ್ಯಾನ್ಸರ್ ರೋಗಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ. ಆರಂಭಿಕ ಹಂತದಲ್ಲೇ ಇದನ್ನು ಗುರುತಿಸಿ ಚಿಕಿತ್ಸೆ ಪಡೆಯಿರಿ. ಯಾವುದೇ ಕ್ಯಾನ್ಸರ್ ರೋಗಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದಿರಿ. 

Whats_app_banner