ಕನ್ನಡ ಸುದ್ದಿ  /  Lifestyle  /  World Dosa Day 2024 Food Left Over Dosa Recipe Variety Dosa Recipe From Leftover Rice In Home Best Breakfast Recipes Rst

World Dosa Day: ಅನ್ನ ಮಿಕ್ಕಿದೆ ಅಂತ ಎಸಿಯೋಕೆ ಹೋಗ್ಬೇಡಿ, ಇದ್ರಿಂದ ಎಷ್ಟೆಲ್ಲಾ ವೆರೈಟಿ ದೋಸೆ ಮಾಡ್ಬಹುದು ನೋಡಿ

ಮನೇಲಿ ಅನ್ನ ಮಾಡಿದ್ದು ಮಿಕ್ಕಿದಾಗ, ಎಸಿಯೋಕು ಮನಸ್ಸು ಬರೊಲ್ಲ, ಹಾಗಂತ ತಿನ್ನೋಕು ಆಗೋಲ್ಲ. ಈ ಎರಡೂ ಮಾಡ್ಬೇಡಿ, ಇದ್ರಿಂದ ರುಚಿ ರುಚಿಯಾಗಿ ದೋಸೆ ಮಾಡ್ಕೊಂಡ್‌ ತಿನ್ನಿ. ಮಿಕ್ಕಿದ ಅನ್ನದಿಂದ ಎಷ್ಟೆಲ್ಲಾ ವೆರೈಟಿ ದೋಸೆ ಮಾಡಬಹುದು ನೋಡಿ.

ಮಿಕ್ಕಿರುವ ಅನ್ನದಿಂದ ತಯಾರಿಸಬಹುದಾದ ದೋಸೆಗಳು
ಮಿಕ್ಕಿರುವ ಅನ್ನದಿಂದ ತಯಾರಿಸಬಹುದಾದ ದೋಸೆಗಳು

ಅಡುಗೆ ಮಾಡೋರಿಗೆ, ಬಗೆ ಬಗೆಯ ಅಡುಗೆ ಮಾಡೋದು ಒಂದು ಚಿಂತೆಯಾದ್ರೆ, ಮಾಡಿದ ಅಡುಗೆ ಮಿಕ್ಕಿದ್ರೆ ಏನ್‌ ಮಾಡೋದಪ್ಪಾ ಅನ್ನೋದು ಇನ್ನೊಂದು ಚಿಂತೆ. ಅಳತೆಗೆ ಸರಿಯಾಗಿ ಮಾಡೋಕೆ ಎಲ್ರಿಗೂ ಬರೋಲ್ಲ, ಅದೂ ಒಂಥರಾ ಕಲೆ ಬಿಡಿ. ನಮ್ಮೆಲ್ಲರ ಮನೆಯಲ್ಲೂ ಪ್ರತಿದಿನ ಅನ್ನ ಮಿಕ್ಕೋದು ಸಹಜ. ಕಡಿಮೆ ಮಾಡಿದ್ರೆ ಎಲ್ಲಿ ಎಲಿಗ್ರೂ ಅರ್ಧ ಹೊಟ್ಟೆ ಆಗುತ್ತೋ ಅನ್ನೋ ಚಿಂತೆ ಕಾಡುತ್ತೆ. ಜಾಸ್ತಿ ಮಾಡಿದಾಗ ಅಯ್ಯೋ ಎಸಿಬೇಕಲ್ಲ ಅನ್ನೋ ಬೇಸರ ಕಾಡುತ್ತೆ. ಆದರೆ ಖಂಡಿತ ಇನ್ನು ಮುಂದೆ ಮಿಕ್ಕಿದ ಅನ್ನವನ್ನು ಎಸಿಬೇಡಿ.

ಮಿಕ್ಕಿರುವ ಅನ್ನದಿಂದ ವೆರೈಟಿ ದೋಸೆ ಮಾಡಿ ತಿನ್ನಬಹುದು. ಇನ್ನೇನು ವಿಶ್ವ ದೋಸೆ ದಿನ ಹತ್ತಿರದಲ್ಲೇ ಇದೆ. ಪ್ರತಿವರ್ಷ ಮಾರ್ಚ್‌ 3ಕ್ಕೆ ವಿಶ್ವ ದೋಸೆ ಆಚರಿಸಲಾಗುತ್ತೆ, ನೀವೂ ದೋಸೆ ಪ್ರಿಯರಾಗಿದ್ರೆ, ಮಿಕ್ಕಿರೋ ಅನ್ನದಿಂದ ಮಾಡೋ ಈ ದೋಸೆಗಳು ನಿಮಗೆ ಇಷ್ಟ ಆಗ್ದೆ ಇರೋಕೆ ಸಾಧ್ಯನೇ ಇಲ್ಲ ಬಿಡಿ. ಇದ್ರಿಂದ ಎಷ್ಟೆಲ್ಲಾ ದೋಸೆ ಮಾಡಬಹುದು, ಹೇಗೆ ಮಾಡೋದು ಅನ್ನೋದನ್ನ ನೀವೂ ಕಲಿಯಿರಿ.

ಉಳಿದ ಅನ್ನದ ದೋಸೆ ವಿಧಾನ 1

ಬೇಕಾಗುವ ಸಾಮಗ್ರಿಗಳು: ಅನ್ನ - 2 ಕಪ್‌, ರವೆ - 1/2 ಕಪ್‌, ಮೊಸರು - 1/2 ಕಪ್‌, ಜೀರಿಗೆ - 1 ಚಮಚ, ಉಪ್ಪು - ರುಚಿಗೆ, ಎಣ್ಣೆ - ಸ್ವಲ್ಪ

ತಯಾರಿಸುವ ವಿಧಾನ: ಅನ್ನ, ರವೆ, ಮೊಸರು ಈ ಎಲ್ಲವನ್ನೂ ಮಿಕ್ಸಿ ಜಾರಿನಲ್ಲಿ ನುಣ್ಣಗೆ ರುಚಿಕೊಳ್ಳಿ. ನಂತರ ಈ ಹಿಟ್ಟಿಗೆ ಜೀರಿಗೆ ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿ ಹುದುಗಲು ಬಿಡಿ. 6 ಗಂಟೆಗಳ ಕಾಲ ಹುದುಗಿದ ನಂತರ ತವಾ ಬಿಸಿ ಮಾಡಿ ಎಣ್ಣೆ ಸವರಿ. ಅದರ ಮೇಲೆ ಸೆಟ್‌ ದೋಸೆ ಆಕಾರದಲ್ಲಿ ದೋಸೆ ಹಾಕಿ. ಈ ದೋಸೆಯನ್ನು ತೆಳುವಾಗಿ ಮಾಡಲು ಹೋಗಬೇಡಿ. ಇದನ್ನು ಟೊಮೆಟೊ ಚಟ್ನಿ ಜೊತೆ ತಿನ್ನಲು ಸಖತ್‌ ಆಗಿರುತ್ತೆ.

ಓಡುದೋಸೆ

ಕರಾವಳಿ ಭಾಗದಲ್ಲಿ ವಿಶೇಷವಾಗಿ ತಯಾರಿಸುವ ಓಡುದೋಸೆಗೆ ಅನ್ನ ಬೇಕೇಬೇಕು. ಇದು ಸಖತ್‌ ಟೇಸ್ಟಿ ದೋಸೆಯು ಹೌದು. ಇದಕ್ಕೆಂದೇ ವಿಶೇಷ ಕಾವಲಿ ಇರುತ್ತದೆ, ನೀವು ಅಪ್ಪಂ ತವಾದ ಮೇಲೂ ಓಡು ದೋಸೆ ಮಾಡಬಹುದು.

ಬೇಕಾಗುವ ಸಾಮಗ್ರಿಗಳು: ಅಕ್ಕಿ - 2 ಕಪ್‌, ಮಿಕ್ಕಿರುವ ಅನ್ನ - ಮುಕ್ಕಾಲು ಕಪ್‌, ತೆಂಗಿನತುರಿ - 1/2 ಕಪ್‌, ಉಪ್ಪು - ರುಚಿಗೆ

ತಯಾರಿಸುವ ವಿಧಾನ: ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಯಾವುದೇ ಕಾರಣಕ್ಕೂ ಅತಿಯಾಗಿ ನೀರು ಸೇರಿಸಬೇಡಿ. ಈ ಹಿಟ್ಟು ದಪ್ಪವಾಗಿರಬೇಕು. ರುಬ್ಬಿಕೊಂಡ ಹಿಟ್ಟನ್ನು ಪಾತ್ರೆಯೊಂದಕ್ಕೆ ಹಾಕಿ ಬೇಕಿದ್ದರೆ ಯೀಸ್ಟ್‌ ಸೇರಿಸಿ ಹುದುಗಲು ಬಿಡಿ. ಇದನ್ನು ಐದಾರು ಗಂಟೆಯ ನಂತರ ತವಾದ ಮೇಲೆ ದಪ್ಪಗೆ ಹರಡಿ. ಈ ದೋಸೆ ದಪ್ಪಗೇ ಇರಬೇಕು. ಇದರ ರುಚಿ ಮಾತ್ರ ಅದ್ಭುತ, ಇದನ್ನು ತೆಂಗಿನಕಾಯಿ ಚಟ್ನಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ಉಳಿದ ಅನ್ನದ ಸೆಟ್‌ ದೋಸಾ

ಮಿಕ್ಕಿದ ಅನ್ನದಿಂದ ತಯಾರಿಸುವ ಸೆಟ್‌ ದೋಸಾ ಸಖತ್‌ ಸಾಫ್ಟ್‌ ಹಾಗೂ ರುಚಿಯಾಗಿರುತ್ತದೆ. ನೀವು ಡಿಫ್ರೆಂಟಾಗಿ ಸೆಟ್‌ ದೋಸೆ ತಿನ್ಬೇಕು ಅಂತಿದ್ರೆ ಇದನ್ನು ಟ್ರೈ ಮಾಡಬಹುದು.

ಬೇಕಾಗುವ ಸಾಮಗ್ರಿಗಳು: ಅಕ್ಕಿ - 2ಕಪ್‌, ಉದ್ದಿನಬೇಳೆ -1 ಕಪ್‌, ಮಿಕ್ಕಿರುವ ಅನ್ನ- 1 ಕಪ್‌, ಉಪ್ಪು ರುಚಿಗೆ, ಮೆಂತ್ಯೆಕಾಳು ಸ್ವಲ್ಪ, ಎಣ್ಣೆ - ದೋಸೆ ಕಾಯಿಸಲು

ತಯಾರಿಸುವ ವಿಧಾನ: ಅಕ್ಕಿ ಹಾಗೂ ಉದ್ದಿನಬೇಳೆ, ಮೆಂತ್ಯವನ್ನು ಐದಾರು ಗಂಟೆಗಳ ಕಾಲ ನೆನೆಹಾಕಿ. ನಂತರ ಇದನ್ನು ನುಣ್ಣಗೆ ರುಬ್ಬಿಕೊಳ್ಳಿ. ಇನ್ನೊಂದು ಜಾರಿನಲ್ಲಿ ಅನ್ನಕ್ಕೆ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ಎರಡನ್ನೂ ಒಂದು ಪಾತ್ರೆಯಲ್ಲಿ ಮಿಕ್ಸ್‌ ಮಾಡಿ. ಇದಕ್ಕೆ ಉಷ್ಪ ಸೇರಿಸಿ ಹುದುಗಲು ಬಿಡಿ. ಮರುದಿನ ದೋಸೆ ಮಾಡಿ. ತುಪ್ಪ ಸವರಿದ್ರೆ ಇನ್ನಷ್ಟು ರುಚಿ ಸಿಗೋದು ಪಕ್ಕಾ. ಈ ಥರ ಸೆಟ್‌ ದೋಸೆ ಮಾಡಿದ್ರೆ ಎಲ್ರೂ ಕೇಳಿ ಹಾಕಿಕೊಂಡು ತಿನ್ನೋದ್ರಲ್ಲಿ ಅನುಮಾನ ಬೇಡ.

ಮಿಕ್ಕಿದ ಅನ್ನದ ದೋಸೆ ವಿಧಾನ 2

ಬೇಕಾಗುವ ಸಾಮಗ್ರಿಗಳು: ಮಿಕ್ಕಿರುವ ಅನ್ನ- 2 ಕಪ್‌, ರವೆ - 1 ಕಪ್‌, ಅವಲಕ್ಕಿ - 1/2 ಕಪ್‌, ಮೊಸರು - 1/2 ಕಪ್‌, ಈರುಳ್ಳಿ - 1, ಕ್ಯಾರೆಟ್‌ ತುರಿ - ಸ್ವಲ್ಪ, ಕರಿಬೇವು - ಸ್ವಲ್ಪ, ಉಪ್ಪು - ರುಚಿಗೆ, ತುಪ್ಪು ಅಥವಾ ಎಣ್ಣೆ

ತಯಾರಿಸುವ ವಿಧಾನ: ಅವಲಕ್ಕಿಯನ್ನು ಸ್ವಲ್ಪ ಹೊತ್ತು ನೆನೆಸಿಕೊಳ್ಳಿ. ನಂತರ ಅನ್ನ, ರವೆ, ಅವಲಕ್ಕಿ, ಮೊಸರು, ಸ್ವಲ್ಪ ನೀರು ಹಾಗೂ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈ ಹಿಟ್ಟನ್ನು ರಾತ್ರಿಯಿಡಿ ಹುದುಗಲು ಬಿಡಿ. ಮರುದಿನ ಈರುಳ್ಳಿ ಹಾಗೂ ಕರಿಬೇವನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ, ಕ್ಯಾರೆಟ್‌ ತುರಿದಿಟ್ಟುಕೊಳ್ಳಿ. ಈ ಎಲ್ಲವನ್ನೂ ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ತವಾದ ಮೇಲೆ ದೋಸೆ ಹಿಟ್ಟು ಹರಡಿ, ಅದರ ಮೇಲೆ ಈರುಳ್ಳಿ, ಕ್ಯಾರೆಟ್‌ ಮಿಶ್ರಣ ಹಚ್ಚಿ. ಚೆನ್ನಾಗಿ ಎರಡೂ ಕಡೆ ಕಾಯಿಸಿ. ಯಾವುದೇ ಕಾರಣಕ್ಕೂ ತೆಳುವಾಗಿ ಹರಡಬೇಡಿ. ಈ ನಿಮ್ಮ ಮುಂದೆ ರುಚಿಯಾದ ದೋಸೆ ತಿನ್ನಲು ಸಿದ್ಧ.

ನೋಡಿದ್ರಲ್ಲಾ, ಮಿಕ್ಕಿರೋ ಅನ್ನದಿಂದ ಎಷ್ಟೆಲ್ಲಾ ವೆರೈಟಿ ದೋಸೆ ಮಾಡಬಹುದು ಅಂತ, ಇನ್‌ ಮೇಲೆ ಮನೇಲಿ ಅನ್ನ ಮಿಕ್ಕಿದೆ ಅಂತ ಚಿಂತೆ ಮಾಡ್ಬೇಡಿ. ಅದ್ರಿಂದ ಈ ಡಿಫ್ರೆಂಟ್‌ ವೆರೈಟಿ ದೋಸೆ ಮಾಡಿ. ಇದನ್ನು ಮಕ್ಕಳು ಇಷ್ಟಪಟ್ಟು ತಿನ್ನೋದ್ರಲ್ಲಿ ಡೌಟೇ ಬೇಡ.

(This copy first appeared in Hindustan Times Kannada website. To read more like this please logon to kannada.hindustantimes.com)