World Dosa Day: ಮಾರ್ಚ್ 3ಕ್ಕೆ ವಿಶ್ವ ದೋಸೆ ದಿನ; ವರ್ಷದಲ್ಲಿ ಬರೋಬ್ಬರಿ 29 ಮಿಲಿಯನ್ ದೋಸೆ ಡೆಲಿವರಿ, ಮಾಹಿತಿ ಬಹಿರಂಗಪಡಿಸಿದ ಸ್ವಿಗ್ಗಿ
World Dosa Day 2024: ಮೊದಲೆಲ್ಲಾ ದಕ್ಷಿಣ ಭಾರತದವರ ಫೇವರೆಟ್ ತಿಂಡಿ ಆಗಿದ್ದ ದೋಸೆಯನ್ನು ಈಗ ಉತ್ತರ ಭಾರತದವರೂ ಇಷ್ಟಪಟ್ಟು ತಿನ್ನುತ್ತಾರೆ. ವಿದೇಶಗಳಲ್ಲಿ ಕೂಡಾ ದೋಸೆ ಹೆಚ್ಚು ಸೇಲ್ ಆಗುತ್ತದೆ. ಮಾರ್ಚ್ 3 ವಿಶ್ವ ದೋಸೆ ದಿನ. ಕಳೆದ ಫೆಬ್ರವರಿಯಿಂದ ಇದುವರೆಗೂ 29 ಮಿ. ದೋಸೆ ಡೆಲಿವರಿ ಮಾಡಿರುವುದಾಗಿ ಸ್ವಿಗ್ಗಿ ಮಾಹಿತಿ ಹಂಚಿಕೊಂಡಿದೆ.
ವಿಶ್ವ ದೋಸೆ ದಿನ 2024: ಇಶಾಂತ್ ಎಂಬ ಭೋಜನ ಪ್ರಿಯ ಒಮ್ಮೆ ಹೆಸರಾಂತ ಹೋಟೆಲ್‌ಗೆ ಹೋಗಿ ಇಂದು ತಿಂಡಿಗೆ ಏನು ತಿನ್ನೋದು ಅಂತ ಯೋಚಿಸುತ್ತಾ ಮೆನು ನೋಡುತ್ತಾರೆ. ಕಡಿಮೆ ಬೆಲೆಯ, ಹೆಚ್ಚು ಬೆಲೆಯ ನೂರಾರು ತಿಂಡಿಗಳು ಅಲ್ಲಿರುತ್ತದೆ. ಕೊನೆಗೆ ಆರ್ಡರ್ ತೆಗೆದುಕೊಳ್ಳುವವರು ಇಶಾಂತ್ ಬಳಿ ಬಂದು ಏನು ಬೇಕು ಸರ್ ಎಂದು ಕೇಳಿದಾಗ ಇಶಾಂತ್ ಹೇಳಿದ್ದು ಒಂದು ಮಸಾಲೆ ದೋಸೆ ಕೊಡಿ ಅಂತ.
ಖುಷಿಯಿಂದ ಮಸಾಲೆ ದೋಸೆ ಸವಿದ ಇಶಾಂತ್, ತಿಂಡಿ ಮುಗಿದ ಬಳಿಕ, ಇನ್ಮುಂದೆ ಹೋಟೆಲ್‌ಗೆ ಬಂದಾಗ ಬೇರೆ ಏನಾದರೂ ಟ್ರೈ ಮಾಡಬೇಕು ಎಂದುಕೊಳ್ಳುತ್ತಾರೆ. ಒಂದು ವಾರದ ಬಳಿಕ ಇಶಾಂತ್ ಮತ್ತೊಂದು ಹೋಟೆಲ್‌ಗೆ ಹೋಗುತ್ತಾರೆ. ಅಲ್ಲೂ ಇದೇ ಕಥೆ, ಒಂದೈದು ನಿಮಿಷ ಮೆನು ನೋಡಿದ ನಂತರ ಅವರ ಮನಸ್ಸು ಹೇಳಿದ್ದು ಮಸಾಲೆ ದೋಸೆ ಆರ್ಡರ್ ಮಾಡು ಅಂತ. ಅದನ್ನು ತಿಂದ ಬಳಿಕ ಮತ್ತೊಂದು ಈರುಳ್ಳಿ ದೋಸೆ. ನಿಮಗೆ ಈ ವಿಚಾರ ನಗು ತರಿಸಿದರೂ ಇದು ಸತ್ಯ. ಇದು ಇಶಾಂತ್ ಒಬ್ಬರ ಕಥೆ ಅಲ್ಲ. ದೋಸೆ ಇಷ್ಟ ಪಡುವ ಎಲ್ಲರೂ ಮಾಡುವುದು ಹೀಗೆ. ಏಕೆಂದರೆ ಆ ದೋಸೆಯ ರುಚಿಗೆ, ಅದರಲ್ಲೂ ಮಸಾಲೆ ದೋಸೆ ರುಚಿಗೆ ಫಿದಾ ಆಗದವರೇ ಇಲ್ಲ. ಅದು ನಾಲಗೆಯನ್ನು ಅಷ್ಟು ಸೆಳೆಯುತ್ತದೆ.
ಮಾರ್ಚ್ 3ಕ್ಕೆ ವಿಶ್ವ ದೋಸೆ ದಿನ
ಅಂದ ಹಾಗೆ ಮಾರ್ಚ್ 3 ವಿಶ್ವ ದೋಸೆ ದಿನ. ವಿಶ್ವಾದ್ಯಂತ ಪ್ರತಿ ದಿನ ಲಕ್ಷಾಂತರ ದೋಸೆ ಮಾರಾಟವಾಗುತ್ತದೆ. ಬೆಳಗಿನ ಉಪಹಾರಕ್ಕೆ, ಸಂಜೆ ಸ್ನಾಕ್ಸ್‌ಗೆ ಹೆಚ್ಚಿನ ಜನರು ದೋಸೆಯನ್ನೇ ಆರ್ಡರ್ ಮಾಡುತ್ತಾರೆ. ಖ್ಯಾತ ಫುಡ್ ಡೆಲಿವರಿ ಸಂಸ್ಥೆ ಬಹಿರಂಗಪಡಿಸಿದ ಮಾಹಿತಿಯೊಂದರ ಪ್ರಕಾರ ಸ್ವಿಗ್ಗಿ, ಕಳೆದ ವರ್ಷ ಬರೋಬ್ಬರಿ 25 ಮಿಲಿಯನ್ ದೋಸೆಯನ್ನು ಡೆಲಿವರಿ ಕೊಟ್ಟಿದೆಯಂತೆ.
ಸ್ವಿಗ್ಗಿ, ಪ್ರತಿ ವರ್ಷ ಮಾರ್ಚ್ 3 ರಂದು ದೋಸೆ ದಿನದಂದು ಸಮೀಕ್ಷೆ ನಡೆಸುತ್ತದೆ. ಇದರ ಪ್ರಕಾರ, ಕಳೆದ ವರ್ಷ ಫೆಬ್ರವರಿ 25 ರಿಂದ ಈ ವರ್ಷದ ಫೆಬ್ರವರಿ 25 ರವರೆಗೆ ಒಟ್ಟು 29 ಮಿಲಿಯನ್ ದೋಸೆಗಳನ್ನು ವಿತರಿಸಲಾಗಿದೆಯಂತೆ. ದೇಶಾದ್ಯಂತ ಬೆಳಗಿನ ಉಪಾಹಾರಕ್ಕೆ ಪ್ರತಿ ನಿಮಿಷಕ್ಕೆ ಸರಾಸರಿ 122 ದೋಸೆಗಳನ್ನು ಆರ್ಡರ್ ಮಾಡಲಾಗುತ್ತದೆ. ಇದರಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದ್ದರೆ, ಹೈದರಾಬಾದ್ ಮತ್ತು ಚೆನ್ನೈ ನಂತರದ ಸ್ಥಾನಗಳಲ್ಲಿವೆ.
ಕೊಯಂಬತ್ತೂರಿನ ದೋಸೆ ಚಾಂಪಿಯನ್
ಹೈದರಾಬಾದ್‌ನಲ್ಲಿ ಜನರು ಸ್ನಾಕ್ ಟೈಮ್‌ನಲ್ಲಿ ಹೆಚ್ಚು ದೋಸೆಗಳನ್ನೇ ಅರ್ಡರ್ ಮಾಡಿದ್ದಾರೆ. ಕೊಯಮತ್ತೂರಿನಗ್ರಾಹಕರೊಬ್ಬರು ವರ್ಷದಲ್ಲಿ 447 ಪ್ಲೇಟ್ ದೋಸೆಗಳನ್ನು ಆರ್ಡರ್ ಮಾಡಿ ದೇಶದ ದೋಸೆ ಚಾಂಪಿಯನ್ ಆಗಿದ್ದಾರೆ. ಮತ್ತೊಂದೆಡೆ, ಪರಾಠಗಳನ್ನು ಇಷ್ಟಪಡುವ ಚಂಡೀಗಢದ ಜನರು ಕೂಡಾ ದೋಸೆಯನ್ನು ತಮ್ಮ ನೆಚ್ಚಿನ ತಿಂಡಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಮಸಾಲೆ ದೋಸೆಯು ಒಂದು ವರ್ಷದ ಅವಧಿಯಲ್ಲಿ ರಂಜಾನ್, ಕ್ರಿಕೆಟ್ ವರ್ಲ್ಡ್ ಕಪ್, ಐಪಿಎಲ್ ಹಾಗೂ ಇನ್ನಿತರ ಸಮಯದಲ್ಲಿ ಹೆಚ್ಚು ಆರ್ಡರ್ ಮಾಡಿದ ಎರಡನೇ ಭಕ್ಷ್ಯವಾಗಿದೆ. ನವರಾತ್ರಿ ಸಮಯದಲ್ಲಿ ಕೂಡಾ ದೋಸೆಯೇ ಮೊದಲ ಸ್ಥಾನದಲ್ಲಿತ್ತು. ಇದರಲ್ಲಿ ಮಸಾಲೆ ದೋಸೆ ಮೊದಲ ಸ್ಥಾನ ಪಡೆದಿದೆ. ಪ್ಲೇನ್ ದೋಸೆ, ಸೆಟ್ ದೋಸೆ, ಈರುಳ್ಳಿ ದೋಸೆ, ಬೆಣ್ಣೆ ಮಸಾಲೆ ದೋಸೆ ನಂತರದ ಸ್ಥಾನದಲ್ಲಿವೆ.
ವಿಭಾಗ