ಪರಿಸರ ದಿನವನ್ನು ಶಾಲೆಯಲ್ಲಿ ವಿಶೇಷವಾಗಿ ಆಚರಿಸಬೇಕಾ? ವಿದ್ಯಾರ್ಥಿಗಳು, ಶಿಕ್ಷಕರಿಗಾಗಿ ಈ 10 ಐಡಿಯಾಗಳು
ಕನ್ನಡ ಸುದ್ದಿ  /  ಜೀವನಶೈಲಿ  /  ಪರಿಸರ ದಿನವನ್ನು ಶಾಲೆಯಲ್ಲಿ ವಿಶೇಷವಾಗಿ ಆಚರಿಸಬೇಕಾ? ವಿದ್ಯಾರ್ಥಿಗಳು, ಶಿಕ್ಷಕರಿಗಾಗಿ ಈ 10 ಐಡಿಯಾಗಳು

ಪರಿಸರ ದಿನವನ್ನು ಶಾಲೆಯಲ್ಲಿ ವಿಶೇಷವಾಗಿ ಆಚರಿಸಬೇಕಾ? ವಿದ್ಯಾರ್ಥಿಗಳು, ಶಿಕ್ಷಕರಿಗಾಗಿ ಈ 10 ಐಡಿಯಾಗಳು

ಜೂನ್ 5 ವಿಶ್ವ ಪರಿಸರ ದಿನ. ಈ ವರ್ಷ ಪರಿಸರ ದಿನವನ್ನು ವಿಶೇಷವಾಗಿ ಆಚರಿಸಬೇಕು ಅಂತಿದ್ದೀರಾ, ಮಕ್ಕಳು ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ವಿಭಿನ್ನವಾಗಿ ಆಚರಿಸಲು ಇಲ್ಲಿದೆ 10 ಐಡಿಯಾಗಳು, ನಿಮ್ಮ ಶಾಲೆಯಲ್ಲಿ ನೀವು ಟ್ರೈ ಮಾಡಿ.

ಶಾಲೆಯಲ್ಲಿ ಪರಿಸರ ದಿನವನ್ನು ವಿಶೇಷವಾಗಿ ಆಚರಿಸಬೇಕಾ, ವಿದ್ಯಾರ್ಥಿಗಳಿಗಾಗಿ ಈ 10 ಐಡಿಯಾಗಳು
ಶಾಲೆಯಲ್ಲಿ ಪರಿಸರ ದಿನವನ್ನು ವಿಶೇಷವಾಗಿ ಆಚರಿಸಬೇಕಾ, ವಿದ್ಯಾರ್ಥಿಗಳಿಗಾಗಿ ಈ 10 ಐಡಿಯಾಗಳು (PC: Canva)

ಕಾಡಿನ ನಾಶ, ಜಲ ಮಾಲಿನ್ಯ, ಅತಿಯಾದ ಪ್ಲಾಸ್ಟಿಕ್ ಬಳಕೆ, ಹವಾಮಾನ ವೈಪರೀತ್ಯ ಮುಂತಾದವುಗಳ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಪರಿಸರವನ್ನು ಉಳಿಸಿ, ಬೆಳೆಸುವ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ಹೊತ್ತಿನಲ್ಲಿ ಪರಿಸರ ಉಳಿಸುವುದು ಬಹಳ ಅವಶ್ಯವಾಗಿರುವ ಕಾರಣ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ. ಅದರಲ್ಲೂ ಶಿಕ್ಷಣ ಸಂಸ್ಥೆಗಳಲ್ಲಿ ಬಹಳ ಅರ್ಥಪೂರ್ಣವಾಗಿ ಪರಿಸರ ದಿನವನ್ನು ಆಚರಿಸುವ ಮೂಲಕ ಪರಿಸರ ಉಳಿಸಿ, ಬೆಳಸುವ ಕೆಲಸವನ್ನು ಮಾಡಬಹುದು.

ಆ ಮೂಲಕ ಯುವ ಮನಸ್ಸುಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಬಹುದು ಹಾಗೂ ಪರಿಸರ ಉಳಿಸುವ ಅವಶ್ಯವನ್ನು ಅವರಿಗೆ ಅರ್ಥ ಮಾಡಿಸಬಹುದು. ಶಾಲೆಗಳಲ್ಲಿ ವಿಶ್ವ ಪರಿಸರ ದಿನವನ್ನು ಬಹಳ ವಿಭಿನ್ನವಾಗಿ ಆಚರಿಸುತ್ತಾರೆ. ಈ ದಿನದಂದು ಮಕ್ಕಳನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ವಿಭಿನ್ನವಾಗಿ ಆಚರಿಸಬೇಕು ಅಂತಿದ್ದರೆ ನಿಮಗಾಗಿ ಈ ಐಡಿಯಾಗಳು.

ಗಿಡ ನೆಡುವುದು

ಬೆಳೆಯವ ಪೈರು ಮೊಳಕೆಯಲ್ಲೇ ಎನ್ನುವಂತೆ ಬಾಲ್ಯದಿಂದಲೂ ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಅದಕ್ಕಾಗಿ ವಿಶ್ವ ಪರಿಸರದ ದಿನದ ಅಂಗವಾಗಿ ಶಾಲೆಯಲ್ಲಿ ಗಿಡ ನೆಡುವ ಚಟುವಟಿಕೆಯನ್ನು ಮಾಡಬಹುದು. ಇದು ಎಲ್ಲಾ ಕಡೆಯಲ್ಲೂ ನಡೆಸುವ ಚಟುವಟಿಕೆಯಾದರೂ ಇದರ ಪರಿಣಾಮ ನಿಜಕ್ಕೂ ಮಹತ್ವದ್ದು. ಶಾಲೆಯಲ್ಲಿ ಮಕ್ಕಳನ್ನು ಒಂದೊಂದು ಗುಂಪಾಗಿ ಮಾಡಿ ಅವರ ಗುಂಪಿಗೆ ಒಂದು ಗಿಡ ನೆಡುವ ಟಾಸ್ಕ್ ನೀಡಬೇಕು, ಮಾತ್ರವಲ್ಲ ನಂತರ ಗಿಡ ಆರೈಕೆಯೂ ಆ ತಂಡದ್ದೇ ಆಗಿರುತ್ತದೆ. ಇದರಿಂದ ಮಕ್ಕಳು ಗಿಡಕ್ಕೆ ನೀರು ಹಾಕುವುದು ಸೇರಿದಂತೆ ಗಿಡದ ಆರೈಕೆಗೆ ಹೆಚ್ಚಿನ ಗಮನ ನೀಡುತ್ತಾರೆ. ಯಾರ ಗಿಡ ಚೆನ್ನಾಗಿ ಬೆಳೆಯುತ್ತದೆ ಎಂಬ ಸ್ಪರ್ಧೆಯನ್ನು ಕೂಡ ನಡೆಸಬಹುದು.

ಪೋಸ್ಟರ್ ಮಾಡುವುದು, ಸ್ಲೋಗನ್ ಬರೆಯುವ ಸ್ಪರ್ಧೆ

ವಿಶ್ವ ಪರಿಸರ ದಿನದ ಅಂಗವಾಗಿ ಮಕ್ಕಳ ಕೌಶಲವನ್ನು ಪರೀಕ್ಷೆ ಮಾಡಲು ಪೋಸ್ಟರ್ ಮಾಡುವುದು ಹಾಗೂ ಸ್ಲೋಗನ್ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಬಹುದು. ಪರಿಸರ ರಕ್ಷಿಸಿ, ಜೀವ ಉಳಿಸಿ, ನಮ್ಮ ಶಕ್ತಿ ನಮ್ಮ ಭೂಮಿ ಇಂತಹ ಥೀಮ್‌ಗಳನ್ನು ನೀಡುವ ಮೂಲಕ ವಿಶ್ವ ಪರಿಸರ ದಿನವನ್ನು ವಿಭಿನ್ನವಾಗಿ ಆಚರಿಸಬಹುದು.

ರಸಪ್ರಶ್ನೆ ಸ್ಪರ್ಧೆ

ವಿಶ್ವ ಪರಿಸರ ದಿನಕ್ಕೆ ಸಂಬಂಧಿಸಿದಂತೆ ಮೋಜು ಹಾಗೂ ಶಿಕ್ಷಣ ನೀಡುವ ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಬಹುದು. ಪರಿಸರಕ್ಕೆ ಸಂಬಂಧಿಸಿದ ವಿಚಾರಗಳು, ನವೀಕರಿಸಬಹುದಾದ ಇಂಧನ, ವನ್ಯಜೀವಿ ಸಂರಕ್ಷಣೆ ಮುಂತಾದ ವಿಷಯಗಳ ಮೇಲೆ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಬಹುದು.

ವಿಶ್ವ ಪರಿಸರ ದಿನಕ್ಕಾಗಿ ಪ್ರಬಂಧ, ಭಾಷಣ ಸ್ಪರ್ಧೆ

ವಿಶ್ವ ಪರಿಸರ ದಿನದ ಅಂಗವಾಗಿ ಭಾಷಣ, ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಬಹುದು. ಆ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರಾಸಕ್ತಿ ಎಷ್ಟಿದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೇ ಈ ಮೂಲಕ ಮಕ್ಕಳಿಗೆ ‍ಪ್ರಕೃತಿ, ವಿಶ್ವ ಪರಿಸರದ ದಿನದ ಬಗ್ಗೆ ತಿಳಿದುಕೊಳ್ಳಲು ನೆರವಾಗಬಹುದು.

ಪರಿಸರದ ವಿಷಯದ ಮೇಲೆ ಛದ್ಮವೇಷ

ವಿಶ್ವ ಪರಿಸರ ದಿನದ ಅಂಗವಾಗಿ ಪರಿಸರ ವಿಷಯದ ಮೇಲೆ ಛದ್ಮವೇಷ ಸ್ಪರ್ಧೆ ಏರ್ಪಡಿಸಬಹುದು, ಅದಕ್ಕೂ ಕೆಲವೊಂದು ಪರಿಸರಕ್ಕೆ ಸಂಬಂಧಿಸಿದ ಥೀಮ್‌ಗಳನ್ನು ನೀಡಬಹುದು. ಆ ಥೀಮ್‌ಗಳ ಆಧಾರದ ಮೇಲೆ ವಿದ್ಯಾರ್ಥಿಗಳು ವೇಷ ಹಾಕಬಹುದು.

ಪ್ರಹಸನ

ವಿಶ್ವ ಪರಿಸರ ದಿನಕ್ಕೆ ಸಂಬಂಧಿಸಿದಂತೆ ಪ್ರಹಸನ ಏರ್ಪಡಿಸಬಹುದು. ಪರಿಸರ ಉಳಿಸುವುದು, ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ಪ್ರಹಸನಗಳನ್ನು ಏರ್ಪಡಿಸಬಹುದು. ಪರಿಸರಕ್ಕೆ ಸಂಬಂಧಿಸಿದ ಸಂದೇಶ ಇರುವ ಪ್ರಹಸನದ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಬಹುದು.

ಶಾಲೆಯ ಸುತ್ತಲೂ ಸ್ವಚ್ಛತೆ

ಶಾಲೆಯ ಸುತ್ತಲೂ ಸ್ವಚ್ಛತೆ ಮಾಡುವುದು ಕೂಡ ‍ಪರಿಸರ ದಿನದ ಚಟುವಟಿಕೆಯಾಗಿಸಬಹುದು. ಶಾಲೆಯ ಸುತ್ತಲೂ ಇರುವ ಪ್ಲಾಸ್ಟಿಕ್‌ಗಳನ್ನು ಸ್ವಚ್ಛ ಮಾಡುವುದು, ಇದನ್ನು ವಿಲೇವಾರಿ ಮಾಡುವುದು ಇಂತಹ ಕೆಲಸದ ಮೂಲಕ ಸುತ್ತಲಿನ ಪರಿಸರವನ್ನು ಸ್ವಚ್ಛ ಮಾಡಬಹುದು.

ನೇಚರ್ ವಾಕ್

ವಿಶ್ವ ಪರಿಸರದ ದಿನದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ನೇಚರ್ ವಾಕ್ ನಡೆಸಬಹುದು. ಪಾರ್ಕ್‌ನಂತಹ ಸ್ಥಳವನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಬಹುದು. ಮರ–ಗಿಡಗಳು, ಪಕ್ಷಿ ಮುಂತಾದ ನೈಸರ್ಗಿಕ ಅಂಶಗಳ ಜೊತೆ ಮಕ್ಕಳು ಸಮಯ ಕಳೆಯುವಂತೆ ಮಾಡಬಹುದು. ಇದರಿಂದ ಮಕ್ಕಳು ಪರಿಸರದ ಜೊತೆ ಬೆರೆಯುವಂತೆ ಮಾಡಬಹುದು.

ಸೈನ್ಸ್ ಎಕ್ಸಿಬಿಷನ್‌

ಪರಿಸರ ಹಾಗೂ ವಿಜ್ಞಾನ ಎರಡನ್ನೂ ಒಟ್ಟಾಗಿಸುವ ಸೈನ್ಸ್ ಎಕ್ಸಿಬಿಷನ್ ಏರ್ಪಡಿಸಬಹುದು. ಆ ಮೂಲಕ ವಿಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರ ಮಾಡುವ ಜೊತೆಗೆ ಪರಿಸರವನ್ನು ಹೇಗೆ ಉಳಿಸುವುದು ಎನ್ನುವ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬಹುದು.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.