ಇಂದು ವಿಶ್ವ ಆರೋಗ್ಯ ದಿನ; ಆರೋಗ್ಯವೇ ಭಾಗ್ಯ ಎನ್ನುವ ಪದ ಹಿಂದೆಂದಿಗಿಂತ ಹೆಚ್ಚಿನ ಮೌಲ್ಯ ಪಡೆದುಕೊಂಡಿದೆ; ರಂಗಸ್ವಾಮಿ ಮೂಕನಹಳ್ಳಿ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಇಂದು ವಿಶ್ವ ಆರೋಗ್ಯ ದಿನ; ಆರೋಗ್ಯವೇ ಭಾಗ್ಯ ಎನ್ನುವ ಪದ ಹಿಂದೆಂದಿಗಿಂತ ಹೆಚ್ಚಿನ ಮೌಲ್ಯ ಪಡೆದುಕೊಂಡಿದೆ; ರಂಗಸ್ವಾಮಿ ಮೂಕನಹಳ್ಳಿ ಬರಹ

ಇಂದು ವಿಶ್ವ ಆರೋಗ್ಯ ದಿನ; ಆರೋಗ್ಯವೇ ಭಾಗ್ಯ ಎನ್ನುವ ಪದ ಹಿಂದೆಂದಿಗಿಂತ ಹೆಚ್ಚಿನ ಮೌಲ್ಯ ಪಡೆದುಕೊಂಡಿದೆ; ರಂಗಸ್ವಾಮಿ ಮೂಕನಹಳ್ಳಿ ಬರಹ

World Health Day 2024: ಹೋಮಿಯೋಪತಿ, ಅಲೋಪತಿ, ಆಯುರ್ವೇದದಲ್ಲಿ ಯಾವುದು ಬೆಸ್ಟ್? ವಿಶ್ವ ಆರೋಗ್ಯ ದಿನದ ನಿಮಿತ್ತ ವೈದ್ಯಕೀಯ ಕ್ಷೇತ್ರದಲ್ಲಾಗಿರುವ ಬದಲಾವಣೆಗಳ ಬಗ್ಗೆ ರಂಗಸ್ವಾಮಿ ಮೂಕನಹಳ್ಳಿ ಅವರು ಬರೆದಿದ್ದಾರೆ.

ಪ್ರತಿ ವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ
ಪ್ರತಿ ವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ

ಇಂದು ವಿಶ್ವ ಆರೋಗ್ಯ ದಿನವಂತೆ ! ಪ್ರತಿ ದಿನವೂ ಆರೋಗ್ಯ ದಿನ ಎನ್ನುವುದನ್ನು ನಾವು ಅರಿತಾಗ ಇಂದಿನ ದಿನಕ್ಕೂ ಒಂದರ್ಥ ಬರುತ್ತದೆ. ಆರೋಗ್ಯವೇ ಭಾಗ್ಯ ಎನ್ನುವ ಪದ ಹಿಂದಿಗಿಂತ ಇಂದು ಹೆಚ್ಚಿನ ಮೌಲ್ಯವನ್ನು ಪಡೆದುಕೊಂಡಿದೆ. ಆದರೆ ಹಿಂದೆ ವೈದ್ಯೋ ನಾರಾಯಣೋ ಹರಿ ಎನ್ನುತ್ತಿದ್ದ ಜಾಗದಲ್ಲಿ ಯಮಧರ್ಮನ ಹಿರಿಯ ಸಹೋದರ ನೀ ವೈದ್ಯ ಎನ್ನುವಂತಾಗಿತ್ತು ಮಾತ್ರ ಅರಗಿಸುಕೊಳ್ಳಲು ಸ್ವಲ್ಪ ಕಷ್ಟ . ಎಲ್ಲವೂ ವ್ಯಾಪಾರೀಕರಣವಾಗಿರುವ ಇಂದಿನ ಕಾಲಘಟ್ಟದಲ್ಲಿ ವೈದ್ಯರನ್ನು ಮಾತ್ರ ಸೇವೆಗೆ ಸೀಮಿತ ಮಾಡುವುದು ಯಾವ ನ್ಯಾಯ . ಇದು ಅವರಿಗೂ ಗೊತ್ತಾಗಿದೆ ಹೀಗಾಗಿ ಅವರಾಡುವ ಮಾತುಗಳಲ್ಲಿ ಅದನ್ನು ಕಾಣಬಹುದು. ಹಿಂದೆ ' ಭಯಪಡುವುದು ಬೇಡ , ವಾಸಿಯಾಗುತ್ತದೆ. ದೇವರಿದ್ದಾನೆ .., ನಂಬಿಕೆಯಿರಲಿ .., ಕೈಲಾದ ಪ್ರಯತ್ನ ಮಾಡುವೆ' ಇತ್ಯಾದಿ ಮಾತುಗಳನ್ನು ಹೇಳುತ್ತಿದ್ದ ಅದೇ ವೈದ್ಯರು ರೋಗಿಯನ್ನು ನೋಡಿದ ತಕ್ಷಣ , ಇನ್ಸೂರೆನ್ಸ್ ಇದೆ ಎಂದು ತಿಳಿದ ಮರುಗಳಿಗೆ ' ಏನು ನಿಮಗಿನ್ನೂ ಹಾರ್ಟ್ ಅಟ್ಯಾಕ್ ಆಗಿಲ್ಲವಾ ? ನಿನ್ನೆಯೇ ಆಗಿರಬೇಕಿತ್ತು ...., ನೀವು ಲಕ್ಕಿ .., ಇರಲಿ ತಕ್ಷಣ ಅಡ್ಮಿಟ್ ಆಗಿ ನಾಳೆಯೇ ಓಪನ್ ಹಾರ್ಟ್ ಸರ್ಜರಿ ಮಾಡಿಬಿಡುತ್ತೇನೆ .., ಪ್ಯಾಕೇಜ್ .... ' ಎನ್ನುತ್ತಾರೆ . ಅಯ್ಯೋ ಡಾಕ್ಟ್ರೇ ನನಗೇನೂ ಆಗಿಲ್ಲ ಸ್ವಲ್ಪ ಪಲ್ಪುಟೇಷನ್ ಆಗಿತ್ತು ಅಷ್ಟೇ ಎನ್ನುವಾ ರೋಗಿಯ ಮಾತು ಪ್ಯಾಕೇಜ್ ಡೀಲ್ ಯೋಚಿಸುತ್ತಿರುವ ವೈದ್ಯನಿಗೆ ಕೇಳಿಸುವುದೇ ಇಲ್ಲ .

ಅಲ್ಲ ಕಣ್ರೀ ನೀವೇ ಯೋಚಿಸಿ ನೋಡಿ ರಿಯಲ್ ಎಸ್ಟೇಟ್ ಬೆಲೆ ಗಗನವನ್ನೂ ಸೀಳಿಕೊಂಡು ಮೇಲೊಗಿದೆ. ಜಾಗ , ಕಟ್ಟಡ , ಆಧುನಿಕ ಪರಿಕರಗಳು , ಸ್ಟಾಫ್ , ಉನ್ನತ ವಿದ್ಯಾಭ್ಯಾಸಕ್ಕೆ ಹಾಕಿದ ಬಂಡವಾಳ ಎಲ್ಲವನ್ನೂ ಲೆಕ್ಕಹಾಕಿದರೆ ಸಾಧಾರಣ ಮಟ್ಟದ ನರ್ಸಿಂಗ್ ಹೋಂ ತೆಗೆಯುವುದಕ್ಕೆ ೧೦ ಕೋಟಿ ಬೇಕು ! ಮತ್ತೆ ವೈದ್ಯರು ನಾರಾಯಣೋ ಹರಿ ಆಗಿರಬೇಕು ಎಂದು ನಾವು ಬಯಸುವುದು ತಪ್ಪಾಗುವುದಿಲ್ಲವೇ ? ಸಾಧಾರಣ ಕ್ಲಿನಿಕ್ ಇಟ್ಟು ಕೊಂಡು , ಜನರಿಗೆ ವೈದ್ಯಕೀಯ ಲಾಭಿಗಳ ಬಗ್ಗೆ ಅರಿವು ಮೂಡಿಸುತ್ತ,ಅವರನ್ನು ಸುಲಿಯದೆ ಅವರ ಜ್ಞಾನ ಹೆಚ್ಚಿಸುವ ಕೆಲಸ ಮಾಡುವ ಡಾ .ರಾಜು ಅಂತವರನ್ನು ಇತರ ವೈದ್ಯರೇ 'ಅವನು ಸರಿ ಇಲ್ಲ ' ಎನ್ನುವ ಪಟ್ಟಿಗೆ ಸೇರಿಸುತ್ತಾರೆ.

ಮೈಸೂರಿನಲ್ಲಿ ಇದ್ದುದರಲ್ಲೇ ವೈದ್ಯರು ವಾಸಿ ಎನ್ನಬಹುದು. ಬೆಂಗಳೂರಿನ ವೈದ್ಯರಷ್ಟು ಇನ್ನು ನಮ್ಮೂರಿನ ವೈದ್ಯರು ಬುದ್ದಿವಂತರಲ್ಲ ನೋಡಿ ಅದಕ್ಕೆ ! ಅಂದ ಮಾತ್ರಕ್ಕೆ ಕಡಿಮೆಯೇನೂ ಇಲ್ಲ , ವಾಸಿ ಅಷ್ಟೇ . ಇನ್ನು ನೀವು ಕಾರ್ಪೊರೇಟ್ ಆಸ್ಪತ್ರೆಗಳಿಗೆ ಹೋದರೆ ಅಲ್ಲಿಗೆ ಮುಗಿಯಿತು ಯಾವ ಊರಾದರೂ ಸೇಮ್ !

ಅಯ್ಯೋ ಅಲೋಪತಿಯಲ್ಲಿ ಹೀಗೆ ಅವರು ಪಥ್ಯ ಹೇಳುವುದಿಲ್ಲ , ಖಾಯಿಲೆ ವಾಸಿ ಮಾಡುವುದಿಲ್ಲ ಗುಳಿಗೆ ನೀಡುತ್ತಾರೆ , ತಾತ್ಕಾಲಿಕ ಉಪಶಮನ ಮಾಡುತ್ತಾರೆ ಅಷ್ಟೇ , ನಾವು ಹಾಗಲ್ಲ ಎಂದು ತಮ್ಮ ಭುಜ ತಾವೇ ತಟ್ಟಿಕೊಳ್ಳುವ ಆಯುರ್ವೇದದ ಜನ ಅಲೋಪತಿಗಿಂತ ಡೇಂಜರಸ್ ! ಅಲೋಪತಿಯಷ್ಟೇ ಗುಳಿಗೆ ಅವರೂ ಕೊಡುತ್ತಾರೆ. ಕೆಮಿಕಲ್ ಇಲ್ಲ , ಸೈಡ್ ಎಫೆಕ್ಟ್ ಇಲ್ಲ ಕಣ್ರೀ , ನೀವು ಸೇಫು ಎಂದು ಅವರು ಕೀಳುವ ಶುಲ್ಕ ಅಲೋಪತಿಯವರನ್ನು ನಾಚಿಸಿ ಬಿಡುತ್ತದೆ. ಇನ್ನು ಸರ್ಜರಿ ಗಿರ್ಜರಿ ಅಂತ ಬಂದಾಗ ಕೈ ತಾರಮಯ್ಯ ಆಡಿಸಿ ಬಿಡುತ್ತಾರೆ ಹುಷಾರು , ಮತ್ತೆ ಮರಳಿ ಅಲೋಪತಿ ವೈದ್ಯರಿಗೆ ಶರಣು ಎನ್ನಬೇಕು. ಇನ್ನು ಪ್ಯಾಕೇಜ್ ಹೇಳುವಲ್ಲಿ ಕೂಡ ಆಯುರ್ವೇದ ವೈದ್ಯರು ಕಡಿಮೆಯಿಲ್ಲ , ನಾವು ಎಲ್ಲಾ ಇನ್ಸೂರೆನ್ಸ್ ಕಂಪನಿಗಳ ಜೊತೆ ಟೈ ಅಪ್ ಮಾಡಿಕೊಂಡಿದ್ದೇವೆ , ಕ್ಯಾಶ್ ಲೆಸ್ ಕೂಡ ಇದೆ ಅಂತ ಮಾತಿಗೆ ಶುರು ಮಾಡುತ್ತಾರೆ. ನೀವು , ನಿಮ್ಮ ಖಾಯಿಲೆ , ನೀವು ಗುಣಮುಖರಾಗುವುದು ಯಾವುದೂ ಯಾರಿಗೂ ಬೇಡ. ಅವರೆಲ್ಲರಿಗೂ ನೀವೊಬ್ಬ ಗ್ರಾಹಕ ಅಷ್ಟೇ . ಇದೆ ಸತ್ಯ .

ಇನ್ನು ಹೋಮಿಯೋಪತಿಯನ್ನು ಹೋಪೆಲೆಸ್ಸ್ಪತಿ ಎನ್ನಬಹುದು. ಯಾವ ರೋಗವಾದರೂ ಅದೇ ಬಿಳಿ ಗುಳಿಗೆ. ದೇವರ ಮೇಲೆ ಭಾರ ಹಾಕಿ ನುಂಗಬೇಕು. ಅವು ಕ್ಲಿನಿಕಲಿ ಟೆಸ್ಟೆಡ್ಡಾ ಅಲ್ಲವಾ ? ಅದರಲ್ಲಿ ಯಾವ ಅಂಶಗಳಿವೆ ? ಮುಕ್ಕಾಲು ಪಾಲು ವೈದ್ಯರಿಗೂ ಗೊತ್ತಿರುವುದಿಲ್ಲ. ನನ್ನ ಸಂಬಂಧಿಯೊಬ್ಬರು ಹೇಳಿದರು ಎಂದು ನನ್ನ ಪ್ಲೇಟ್ಲೆಟ್ ಸಮಸ್ಯೆಗೆ ಹೋಮಿಯೋ ವೈದ್ಯರನ್ನು ಕಾಣಲು ಹೋಗಿದ್ದೆ , ಆತ ಪ್ಲೇಟ್ಲೆಟ್ ಎಂದರೇನು , ಅವುಗಳ ಕಾರ್ಯವೇನು ಎಂದು ನಾನು ಹೋಗುವುದಕ್ಕೆ ಒಂದು ಗಂಟೆ ಮುಂಚೆ ಗೂಗೆಲ್ ಮಾಡಿಕೊಂಡು ಕುಳಿತ್ತಿದ್ದರು , ನನ್ನ ಪುಣ್ಯಕ್ಕೆ ಅದನ್ನು ಆತನೇ ಹೇಳಿ ನನ್ನ ಜೀವವನ್ನು ಉಳಿಸಿ ಪುಣ್ಯಕ್ಕೆ ಪಾತ್ರರಾದರು.

ಇರಲಿ , ಹೆಚ್ಚು ಲಂಬಿಸಲು ಹೋಗುವುದಿಲ್ಲ . ಸಾರಾಂಶ ಇಷ್ಟೇ ಅಲೋಪತಿ , ಹೋಮಿಯೋಪತಿ ಅಥವಾ ಆಯುರ್ವೇದ ಎಲ್ಲರಿಗೂ ಇಂದು ಟಾರ್ಗೆಟ್ ಇದೆ. ನೀವು ಆಸ್ಪತ್ರೆಯ ಬಾಗಿಲನ್ನು ಪ್ರವೇಶಿಸಿದ್ದೀರಿ ಎಂದರೆ ಅಂಗಡಿಯೊಳೆಗೆ ಕಾಲಿಟ್ಟ ಗ್ರಾಹಕನಂತೆ ! ಏನಾದರೂ ಒಂದು ವಸ್ತು ಮಾರಾಟ ಮಾಡದೆ ಬರಿಕೈಲಿ ಕಳಿಸುವುದಿಲ್ಲ . ಹೀಗಾಗಿ ನಿಮ್ಮ ಆರೋಗ್ಯ ನಿಮ್ಮ ಕೈಲಿದೆ . ಸಾಧ್ಯವಾದಷ್ಟೂ ವೈದ್ಯರಿಂದ ದೂರವಿರಿ .

ಹಿಂದೆಲ್ಲ 60 ರ ನಂತರ ಬದುಕಿದ್ದರೆ ಬೋನಸ್, 70 ರ ನಂತರ ಬದುಕಿದ್ದರೆ ಬೋನಸ್ ಎನ್ನುವ ಮಾತನ್ನು ಆಡುತ್ತಿದ್ದರು. ಈಗ ಬದುಕಿದಷ್ಟು ದಿನವೂ ಬೋನಸ್ ಎನ್ನುವ ಮಟ್ಟಿಗೆ ಬದಲಾಗಿದೆ. ವೈದ್ಯರು ಪ್ಯಾಕೇಜ್ ಡಿಸ್ಕಸ್ ಮಾಡಿದ ತಕ್ಷಣ ಅವರನ್ನು ಬಿಟ್ಟುಬಿಡಿ. ಸೆಕೆಂಡ್ ಒಪಿನಿಯನ್ ತೆಗೆದುಕೊಳ್ಳಿ . ಆದಷ್ಟು ನೀವು ನಂಬುವ ಬಂಧು ಅಥವಾ ಮಿತ್ರರನ್ನೇ ವೈದ್ಯರನ್ನಾಗಿ ಆಯ್ಕೆ ಮಾಡಿಕೊಳ್ಳಿ . ಪರಿಚಯವಿಲ್ಲದ ಹೊಸ ವೈದ್ಯನಿಗೆ ನಿಮ್ಮ ಬಗ್ಗೆ ಯಾವ ಫೀಲಿಂಗು ಇರುವುದಿಲ್ಲ . ಅವನ ಕಣ್ಣಿಗೆ ನೀವು ನಿಮ್ಮ ಇನ್ಸೂರೆನ್ಸ್ ಮೊತ್ತದ ಒಂದು ಸಂಖ್ಯೆ ಅಷ್ಟೇ . ಆರೋಗ್ಯವಾಗಿರಿ , ಖುಷಿಯಾಗಿರಿ , ತಿಂದುಂಡು ನೆಮ್ಮದಿಯಾಗಿರಿ . ಎಲ್ಲರೂ ಎಕ್ಸ್ಪೈರಿ ಡೇಟ್ ಜೊತೆಗೆ ಜನಿಸಿರುತ್ತೇವೆ. ವೈದ್ಯನಿಗೆ ಅದನ್ನು ಬದಲಿಸುವ ತಾಕತ್ತು ಖಂಡಿತ ಇಲ್ಲ. ಶುಭವಾಗಲಿ.