World Hearing Day: ಕೇಳದವರಿಗೆ ಧ್ವನಿಯಾಗಿ, ಕೇಳಿಸಿಕೊಳ್ಳಲು ನೆರವಾಗಿ; ವಿಶ್ವ ಶ್ರವಣ ದಿನದ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  World Hearing Day: ಕೇಳದವರಿಗೆ ಧ್ವನಿಯಾಗಿ, ಕೇಳಿಸಿಕೊಳ್ಳಲು ನೆರವಾಗಿ; ವಿಶ್ವ ಶ್ರವಣ ದಿನದ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ

World Hearing Day: ಕೇಳದವರಿಗೆ ಧ್ವನಿಯಾಗಿ, ಕೇಳಿಸಿಕೊಳ್ಳಲು ನೆರವಾಗಿ; ವಿಶ್ವ ಶ್ರವಣ ದಿನದ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ

ಪ್ರಪಂಚದಾದ್ಯಂತ ಹಲವರು ಶ್ರವಣ ದೋಷ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಇದು ಅವರಿಗೆ ಸಂವಹನ ತೊಂದರೆಯನ್ನೂಉಂಟು ಮಾಡುತ್ತಿದೆ. ಶ್ರವಣ ದೋಷ ಇರುವವರಿಗೆ ಸೂಕ್ತ ಚಿಕಿತ್ಸೆ ನೀಡುವ ಹಾಗೂ ಅವರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ.

ವಿಶ್ವ ಶ್ರವಣ ದಿನದ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ
ವಿಶ್ವ ಶ್ರವಣ ದಿನದ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ

ಪ್ರಚಂಚವೆಲ್ಲಾ ನಿಶಬ್ದವಾಗಿದ್ದರೆ ಎಷ್ಟು ಚೆನ್ನ ಎಂದು ಒಮ್ಮೊಮ್ಮೆ ಅನ್ನಿಸುವುದುಂಟು, ಆದರೆ ಇದು ಪ್ರಪಂಚದ ಸದ್ದನ್ನೆಲ್ಲಾ ಕೇಳುವ ನಮಗಷ್ಟೇ ಚೆಂದ. ಆದರೆ ಶ್ರವಣ ದೋಷದ ಸಮಸ್ಯೆಯಿರುವವರಿಗೆ ಆ ನಿಶಬ್ದವೇ ಭಯಂಕರ ಭೀಕರ ಅನ್ನಿಸುತ್ತದೆ. ಒಮ್ಮೆಯಾದರೂ ನಾವು ಎಲ್ಲವನ್ನೂ ಕಿವಿಗೊಟ್ಟು ಆಲಿಸಬೇಕು ಎಂಬ ಬಯಕೆ ಅವರಲ್ಲಿರುತ್ತದೆ. ಈ ಶ್ರವಣ ದೋಷ ಇರುವವರಿಗೆ ಚಿಕಿತ್ಸೆ ದೊರಕಿಸುವ ಹಾಗೂ ಅವರಿಗೂ ಎಲ್ಲರಂತೆ ಧ್ವನಿ ಕೇಳುವಂತೆ ಮಾಡಲು ಉತ್ತೇಜಿಸುವ ದಿನವೇ ವಿಶ್ವ ಶ್ರವಣ ದಿನ.

ಪ್ರತಿವರ್ಷ ಮಾರ್ಚ್‌ 3ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ. ಶ್ರವಣ ದೋಷದ ಬಗ್ಗೆ ಜಾಗೃತಿ ಮೂಡಿಸುವುದು, ಶ್ರವಣದ ಆರೈಕೆಯನ್ನು ಉತ್ತೇಜಿಸುವುದು ಹಾಗೂ ಶ್ರವಣ ದೋಷ ಹಾಗೂ ಸಂಬಂಧಿತ ಸಮಸ್ಯೆಗಳಿಗೆ ಕ್ರಮ ಕೈಗೊಳ್ಳಲು ಒತ್ತಾಯಿಸಲು ಜಾಗತಿಕ ಮಟ್ಟದಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಇತರ ಸಹ ಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿವರ್ಷ ವಿಶ್ವ ಶ್ರವಣ ದಿನವನ್ನು ಆಚರಿಸುತ್ತದೆ.

ಕಿವಿ ಹಾಗೂ ಶ್ರವಣ ಸಮಸ್ಯೆಯು ನಮ್ಮ ಸಮಾಜದಲ್ಲಿ ಕಂಡುಬರುವ ಪ್ರಮುಖ ಸಮಸ್ಯೆಗಳಾಗಿದೆ. ಹಲವರಿಗೆ ಹುಟ್ಟಿನಿಂದಲೇ ಶ್ರವಣ ದೋಷ ಇರುತ್ತದೆ, ಇದರಿಂದ ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆ ಇರುವ ಶೇ 60ರಷ್ಟು ಮಂದಿಗೆ ಆರಂಭಿಕ ಹಂತದಲ್ಲೇ ರೋಗನಿರ್ಣಯ ಹಾಗೂ ಚಿಕಿತ್ಸೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ. ಆರಂಭಿಕ ಹಂತದಲ್ಲೇ ತರಬೇತಿ ಹಾಗೂ ಸಾಮರ್ಥ್ಯ ವೃದ್ಧಿಯ ಮೂಲಕ ಶ್ರವಣ ಸಮಸ್ಯೆಯನ್ನು ಬಗೆಹರಿಸಬಹುದು.

ವಿಶ್ವ ಶ್ರವಣ ದಿನದಂದು ವಿಶ್ವ ಆರೋಗ್ಯ ಸಂಸ್ಥೆಯು ʼಕಿವಿ ಮತ್ತು ಶ್ರವಣ ಪ್ರಾಥಮಿಕ ಆರೈಕೆ ತರಬೇತಿ ಕೈಪಿಡಿʼ ಎಂಬ ಹೊಸ ತರಬೇತಿ ಕೈಪಿಡಿಯನ್ನು ಬಿಡುಗಡೆ ಮಾಡುತ್ತದೆ. ಈ ಕೈಪಿಡಿಯಲ್ಲಿ ತರಬೇತುದಾರರಿಗೆ ಸೂಕ್ತ ಮಾಹಿತಿಯನ್ನೂ ಸೇರಿಸಲಾಗುತ್ತದೆ.

ವಿಶ್ವ ಶ್ರವಣ ದಿನ 2024ರ ಥೀಮ್‌

ಪ್ರತಿ ವರ್ಷ ವಿಶ್ವ ಶ್ರವಣ ದಿನಕ್ಕೆ ಒಂದೊಂದು ಥೀಮ್‌ ಆಯ್ಕೆ ಮಾಡುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಈ ವರ್ಷ ʼಮನಸ್ಥಿತಿಯ ಬದಲಾವಣೆ; ಕಿವಿ ಹಾಗೂ ಶ್ರವಣದ ಆರೈಕೆಯನ್ನು ಎಲ್ಲರಿಗೂ ದಕ್ಕುವಂತೆ ಮಾಡೋಣʼ ಎಂಬುದಾಗಿದೆ.

ವಿಶ್ವ ಶ್ರವಣ ದಿನದ ಇತಿಹಾಸ

2007 ರಲ್ಲಿ ಮೊದಲ ಬಾರಿ ವಿಶ್ವ ಶ್ರವಣ ದಿನದ ಆಚರಣೆಯನ್ನು ಆರಂಭಿಸಲಾಯಿತು. ಆರಂಭದಲ್ಲಿ ಇದನ್ನು ಅಂತರರಾಷ್ಟ್ರೀಯ ಕಿವಿಯ ಆರೈಕೆ ದಿನ ಎಂದು ಕರೆಯಲಾಗುತ್ತಿತ್ತು. 2016ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ವಿಶ್ವ ಶ್ರವಣ ದಿನ ಎಂದು ಘೋಷಿಸಿತು. ಅಂದಿನಿಂದ ಪ್ರತಿ ವರ್ಷ ಮಾರ್ಚ್‌ 3 ರಂದು ವಿಶ್ವ ಶ್ರವಣ ದಿನ ಆಚರಿಸಲಾಗುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸಂವಹನ ಮಾನವನ ಮೂಲಭೂತ ಹಕ್ಕು. ಆದರೆ ಶ್ರವಣ ದೋಷದ ಕಾರಣ ಸಂವಹನ ಸಮಸ್ಯೆಯಾಗುತ್ತದೆ, ಹಾಗಾಗಿ ಶ್ರವಣ ದೋಷ ಹೊಂದಿರುವವರ ಸಮಸ್ಯೆಯನ್ನು ಪರಿಹರಿಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಶ್ರವಣ ದಿನದ ಮಹತ್ವ

ವಿಶ್ವ ಶ್ರವಣ ದಿನವು ಕಿವಿ ಹಾಗೂ ಕೇಳುವ ಸಮಸ್ಯೆ ಇರುವವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂಬುದನ್ನು ಒತ್ತಿ ಹೇಳುತ್ತದೆ. ಕೇಳಿಸಿಕೊಳ್ಳುವ ಸಮಸ್ಯೆ ಇರುವವರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಆಚರಣೆಯ ಉದ್ದೇಶಗಳಲ್ಲಿ ಒಂದು. ಶ್ರವಣ ದೋಷದ ಸಮಸ್ಯೆಯನ್ನು ಹೀಗೆ ಬಿಟ್ಟರೆ 2025ರ ವೇಳಗೆ ಶ್ರವಣ ದೋಷಕ್ಕೆ ಚಿಕಿತ್ಸೆ ಅನಿವಾರ್ಯ ಇರುವವರ ಸಂಖ್ಯೆ 70 ಕೋಟಿಗೆ ಏರಿಕೆಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಶ್ರವಣ ದೋಷ ಇರುವ ಶೇ 80 ರಷ್ಟು ಮಂದಿ ಸೂಕ್ತ ಪರೀಕ್ಷೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿಲ್ಲ, ಇದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯಗಳನ್ನು ಎದುರಿಸುವ ಸಾಧ್ಯತೆ ಇದೆ. 

ಕೇಳಿಸಿಕೊಳ್ಳುವ ಸಮಸ್ಯೆ ಇರುವವರಿಗೆ ಧ್ವನಿಯಾಗಿ ಅವರಿಗೆ ಕೇಳಿಸಿಕೊಳ್ಳಲು ನೆರವಾಗುವುದು ನಮ್ಮೆಲ್ಲರ ಕರ್ತವ್ಯ. ಶ್ರವಣ ದೋಷ ಇರುವವರನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ನೆರವಾಗಲು ಸರ್ಕಾರಗಳು ಕೈಜೋಡಿಸಬೇಕು. ಆ ಮೂಲಕ ಪ್ರಪಂಚದ ಧ್ವನಿಯನ್ನು ಕೇಳಲು ಅವರಿಗೆ ನೆರವಾಗಬೇಕು. 

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner