World Hepatitis Day: ಹೆಪಟೈಟಿಸ್ ಬಿ, ಸಿ; ಇವುಗಳಲ್ಲಿ ಯಾವುದು ಹೆಚ್ಚು ಅಪಾಯಕಾರಿ; ರೋಗಲಕ್ಷಣಗಳು, ತಡೆಗಟ್ಟುವ ಮಾರ್ಗಗಳ ಕುರಿತು ಸಲಹೆ
ಹೆಪಟೈಟಿಸ್ ಸಿಗೆ ಹೋಲಿಸಿದರೆ ಹೆಪಟೈಸಿಸ್ ಬಿ ಸೋಂಕು ಪ್ರಪಂಚದಾದ್ಯಂತ ಹೆಚ್ಚು ಸಾಮಾನ್ಯವಾಗಿದೆ. ಇದು ಹೆಪಟೈಟಿಸ್ ಸಿಗಿಂತ 5 ರಿಂದ 10 ಪಟ್ಟು ಸಾಂಕ್ರಾಮಿಕವಾಗಿದೆ. ಹಾಗಾದರೆ ಹೆಪಟೈಸಿಸ್ ಬಿ ಹಾಗೂ ಸಿ ಇವುಗಳಲ್ಲಿ ಯಾವುದು ಹೆಚ್ಚು ಅಪಾಯಕಾರಿ, ಇವುಗಳ ರೋಗಲಕ್ಷಣಗಳು, ಮುನ್ನೆಚ್ಚರಿಕಾ ಕ್ರಮಗಳ ಕುರಿತ ವಿವರ ಇಲ್ಲಿದೆ.

ಹೆಪಟೈಟಿಸ್ ಎನ್ನುವುದು ಯಕೃತ್ತಿನ ಉರಿಯೂತಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ. ಇವುಗಳು ಪ್ರಕಾರವನ್ನು ಅವಲಂಬಿಸಿ ಸೌಮ್ಯ ಹಾಗೂ ತೀವ್ರತರದ ರೋಗಲಕ್ಷಣಗಳನ್ನು ಇದು ಉಂಟು ಮಾಡಬಹುದು. ಇವುಗಳಲ್ಲಿ ಹೆಪಟೈಟಿಸ್ ಎ, ಬಿ, ಸಿ ಡಿ ಮತ್ತು ಇ ಎಂಬ ಐದು ವಿಧಗಳಿವೆ. ಈ ಎಲ್ಲವೂ ಭಿನ್ನವಾಗಿದ್ದು, ಭಿನ್ನವಾದ ರೋಗಲಕ್ಷಣಗಳನ್ನು ಹೊಂದಿವೆ ಮತ್ತು ಇದರಲ್ಲಿ ಕೆಲವು ಬಹಳ ಅಪಾಯಕಾರಿಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ದೀರ್ಘಕಾಲದ ಕಾಯಿಲೆಯಾಗಿದೆ. ಇವು ಶಾಶ್ವತ ಹಾನಿ ಮತ್ತು ಸಾವಿಗೆ ಕಾರಣವಾಗಬಹುದು.
ಹೊಟ್ಟೆಯ ಮೇಲ್ಭಾಗದಲ್ಲಿ ನೋವು, ಜ್ವರ, ವಾಕರಿಕೆ, ವಾಂತಿ, ದೌರ್ಬಲ್ಯ, ಹಸಿವಿನ ಕೊರತೆ, ಕಾಮಾಲೆ ಇವು ಹೆಪಟೈಟಿಸ್‌ನ ಲಕ್ಷಣಗಳಗಾಗಿವೆ. ಪ್ರಪಂಚದಾದ್ಯಂತ ಸುಮಾರು 354 ಮಿಲಿಯನ್ ಜನರು ಹೆಪಟೈಟಿಸ್ ಬಿ ಅಥವಾ ಸಿ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಹೆಪಟೈಟಿಸ್ ಬಿ
ಇದು ಒಂದು ರೀತಿಯ ವೈರಲ್ ಸೋಂಕಾಗಿದ್ದು ತೀವ್ರ ಮತ್ತು ದೀರ್ಘಕಾಲದ ಯಕೃತ್ತಿನ ಸಮಸ್ಯೆಯನ್ನು ಉಂಟು ಮಾಡಬಹುದು. ಇದು ಸಿರೋಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಕಾರಣ ಮಾರಣಾಂತಿಕವಾಗಬಹುದು. ರಕ್ತ, ಲಾಲಾರಸ, ಯೋನಿ ದ್ರವ ಮತ್ತು ವೀರ್ಯದಂತಹ ದೇಹ ದ್ರವಗಳಿಂದ ಈ ಸೋಂಕು ಹರಡಬಹುದು. ನವಜಾತ ಶಿಶುಗಳಿಗೆ ಜನನ ಸಮಯದಲ್ಲಿ ಸೋಂಕಿನಿಂದ ರಕ್ಷಿಸಲು ಈ ಲಸಿಕೆಯನ್ನು ನೀಡಲಾಗುತ್ತದೆ.
ಹೆಪಟೈಟಿಸ್ ಸಿ
ಈ ವೈರಸ್ ರಕ್ತದಿಂದ ಹರಡುವ ವೈರಸ್ ಆಗಿದೆ. ರಕ್ತ ವರ್ಗಾವಣೆ, ವೈದ್ಯಕೀಯ ಉಪಕರಣಗಳ ಅಸಮರ್ಪಕ ಮರುಬಳಕೆ ವಿಶೇಷವಾಗಿ ಸಿರಿಂಜ್ ಮತ್ತು ಸೂಜಿಗಳು, ಇಂಜೆಕ್ಷನ್ ಪರಿಕರಗಳ ಹಂಚಿಕೆಯ ಮೂಲಕ ಇದು ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಇದು ಸೋಂಕಿತ ತಾಯಿಯಿಂದ ಮಗುವಿಗೆ ಮತ್ತು ಕೆಲವೊಮ್ಮೆ ಲೈಂಗಿಕ ಸಂಪರ್ಕದಿಂದಲೂ ಹರಡಬಹುದು.
ಹೆಪಟೈಟಿಸ್ ಬಿ, ಸಿ ನಡುವಿನ ವ್ಯತ್ಯಾಸ; ಯಾವುದು ಹೆಚ್ಚು ಅಪಾಯಕಾರಿ
ಹೆಪಟೈಟಿಸ್ ಬಿ ಮತ್ತು ಸಿ ಎರಡೂ ವೈರಲ್ ಸೋಂಕುಗಳಾಗಿದ್ದು, ಅವು ಲೈಂಗಿಕ ಸಂಪರ್ಕ ಮತ್ತು ಸೋಂಕಿತ ವ್ಯಕ್ತಿಯ ದೇಹದ ದ್ರವಗಳಿಂದ ಹರಡುತ್ತದೆ. ಇದರ ನಿವಾರಣೆಗೆ ಲಸಿಕೆ ಇದ್ದರೂ ಕೂಡ ಹೆಪಟೈಟಿಸ್ ಸಿ ಗೆ ಹೋಲಿಸಿದರೆ ಹೆಪಟೈಸಿಸ್ ಬಿ ಸೋಂಕು ವಿಶ್ವದಾದ್ಯಂತ ಹೆಚ್ಚು ಸಾಮಾನ್ಯವಾಗಿದೆ. ಹೆಪಟೈಟಿಸ್ ಬಿ ವೈರಸ್ ಹೆಪಟೈಟಿಸ್ ಸಿ ಗಿಂತ ಸರಿಸುಮಾರು 5-10 ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದೆ. ಹೆಪಟೈಟಿಸ್ ಬಿ ಹಲವು ಬಾರಿ ಯಾವುದೇ ಔಷಧಿಗಳಿಲ್ಲದೇ ಸರಿ ಹೊಂದುತ್ತದೆ, ಆದರೆ ಇದು ದೀರ್ಘ ಸಮಯದವರೆಗೆ ಕಾಣಿಸಿಕೊಂಡರೆ ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಹೆಪಟೈಟಿಸ್ ಸಿ ರೋಗವು ಆರಂಭಿಕ ಹಂತಗಳಲ್ಲಿ ಪತ್ತೆಯಾದರೆ ಆಂಟಿವೈರಲ್ ಮಾತ್ರೆಗಳಿಂದ ಗುಣಪಡಿಸಬಹುದು. ಈ ಎರಡೂ ವೈರಸ್‌ಗಳು ದೀರ್ಘಾವಧಿಯಲ್ಲಿ ಯಕೃತ್ತಿನ ಹಾನಿ, ಸಿರೋಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್‌ಗೆ ಕಾರಣವಾಗಬಹುದುʼ ಎನ್ನುತ್ತಾರೆ ಗುರುಗ್ರಾಮದ ಸಿಕೆ ಬಿರ್ಲಾ ಆಸ್ಪತ್ರೆಯ ಆಂತರಿಕ ಔಷಧ ವಿಭಾಗದ ವೈದ್ಯ ಡಾ. ತುಷಾರ್ ತಯಾಲ್.
ಹೆಪಟೈಟಿಸ್‌ನ ಸಾಮಾನ್ಯ ರೋಗ ಲಕ್ಷಣಗಳು
* ಸುಸ್ತು ಹಾಗೂ ಆಯಾಸ
* ವಾಕರಿಕೆ ಮತ್ತು ವಾಂತಿ
* ಹೊಟ್ಟೆಯ ಬಲಭಾಗದಲ್ಲಿ ನೋವು
* ಮಣ್ಣಿನ ಮಟ್ಟದ ಮಲ ವಿಸರ್ಜನೆ
* ಹಸಿವಾಗದಿರುವುದು
* ಜ್ವರ
* ಕಾಮಾಲೆ
* ದೇಹದಲ್ಲಿ ತುರಿಕೆ
ಮುನ್ನೆಚ್ಚರಿಕಾ ಕ್ರಮಗಳು
* ಅಪರಿಚಿತ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ ಮಾಡುವ ಮೊದಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಲೈಂಗಿಕ ಸಂಪರ್ಕದಿಂದ ಈ ಸಮಸ್ಯೆ ಹರಡುವ ಸಾಧ್ಯತೆ ಅಧಿಕ.
* ಒಬ್ಬರು ಬಳಸಿದ ಸೂಜಿಯನ್ನು ಇನ್ನೊಬ್ಬರಿಗೆ ಬಳಸಬೇಡಿ. ಬಳಸಿದ ಸೂಜಿಯನ್ನು ಎಸೆಯಿರಿ.
* ನೋಂದಾಯಿತ ವೈದ್ಯರು ಹಾಗೂ ಆಸ್ಪತ್ರೆಯಿಂದ ಮಾತ್ರ ಚಿಕಿತ್ಸೆ ಪಡೆಯಿರಿ.
* ರಕ್ತ ವರ್ಗಾವಣೆಯ ಅಗತ್ಯವಿದ್ದಲ್ಲಿ ಯಾವಾಗಲೂ ನೋಂದಾಯಿತ ರಕ್ತ ನಿಧಿಯಿಂದ ರಕ್ತವನ್ನು ಪಡೆಯಬೇಕು.
* ಕ್ಷೌರ ಮಾಡಿಸಿಕೊಳ್ಳುವ ಮೊದಲು ಉಪಕರಣಗಳನ್ನು ಪರಿಶೀಲಿಸಿ. ಬ್ಲೇಡ್‌ನಂತಹ ಉಪಕರಣಗಳನ್ನು ಹೊಸದಾಗಿ ಬಳಸಲು ಹೇಳಿ. ಇತರ ಪರಿಕರಗಳಿಗೆ ಸ್ಯಾನಿಟೈಸ್ ಮಾಡಲು ಹೇಳಿ.
* ನೋಂದಾಯಿತವಲ್ಲದ, ರಸ್ತೆ ಬದಿಯಲ್ಲಿ, ಜಾತ್ರೆಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುವುದನ್ನು ತಪ್ಪಿಸಿ.
* ಸೋಂಕಿನ ಸಾಧ್ಯತೆಯನ್ನು ತಡೆಗಟ್ಟಲು ಹೆಪಟೈಟಿಸ್ ಬಿ ಲಸಿಕೆಯನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕು.
* ಯಕೃತ್ತಿನ ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತವಾಗಿ ವ್ಯಾಯಾಮ ಮಾಡಿ.