ಕನ್ನಡ ಸುದ್ದಿ  /  Lifestyle  /  World Hypertension Day 2023 Date History And Significance Of The Day What Is Hypertension Health News In Kannada Rst

Hypertension Day 2023: ವಿಶ್ವ ಅಧಿಕ ರಕ್ತದೊತ್ತಡ ದಿನದ ಆಚರಣೆಯ ಇತಿಹಾಸ, ಮಹತ್ವದ ಕುರಿತ ಮಾಹಿತಿ ಇಲ್ಲಿದೆ

World Hypertension Day 2023: ಇಂದು ಹಲವರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಅಧಿಕ ರಕ್ತದೊತ್ತಡ ಕೂಡ ಒಂದು. ಜೀವನಶೈಲಿಯ ವ್ಯತ್ಯಾಸವು ಇದಕ್ಕೆ ಕಾರಣವಾಗಬಹುದು. ಈ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ 17 ರಂದು ಅಧಿಕ ರಕ್ತದೊತ್ತಡ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆಯ ಇತಿಹಾಸ, ಮಹತ್ವದ ಕುರಿತ ಲೇಖನ ಇಲ್ಲಿದೆ.

ವಿಶ್ವ ಅಧಿಕ ರಕ್ತದೊತ್ತಡ ದಿನ
ವಿಶ್ವ ಅಧಿಕ ರಕ್ತದೊತ್ತಡ ದಿನ

ದೇಹದ ಅಂಗಾಂಗಗಳಿಗೆ ಹೃದಯದಿಂದ ಅಪಧಮನಿಗಳ ಮೂಲಕ ಶುದ್ಧ ರಕ್ತವನ್ನು ಸಾಗಿಸುವ ಕ್ರಿಯೆ ನಡೆಯುತ್ತದೆ. ಹೃದಯದಲ್ಲಿ ಶುದ್ಧ ರಕ್ತವನ್ನು ಪಂಪ್‌ ಮಾಡಲು ಒಂದು ನಿಯಮಿತ ಮಿತಿಯಲ್ಲಿ ಒತ್ತಡ ಬೇಕಾಗುತ್ತದೆ. ಈ ಒತ್ತಡಕ್ಕೆ ರಕ್ತದೊತ್ತಡ ಎನ್ನುತ್ತೇವೆ. ಆದರೆ ಈ ಒತ್ತಡದ ಮಿತಿ ಜಾಸ್ತಿಯಾದಾಗ ಅಧಿಕ ರಕ್ತದೊತ್ತಡವಾಗುತ್ತದೆ. ಅಧಿಕ ರಕ್ತದೊತ್ತಡವು ಆರಂಭದಲ್ಲಿ ರೋಗಲಕ್ಷಣ ರಹಿತವಾಗಿರುತ್ತದೆ. ನಂತರದ ದಿನಗಳಲ್ಲಿ ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಅಧಿಕ ರಕ್ತದೊತ್ತಡ ಉಂಟಾಗಲು ಪ್ರಮುಖ ಕಾರಣಗಳು ಎಂದರೆ ಅಸಮರ್ಪಕ ಜೀವನಶೈಲಿ, ಗುಣಮಟ್ಟವಲ್ಲದ ಆಹಾರ ಸೇವನೆ ಹಾಗೂ ಜಡ ಜೀವನಶೈಲಿ. ಆದಾಗ್ಯೂ, ಅಧಿಕ ರಕ್ತದೊತ್ತಡವನ್ನು ಸರಿಯಾದ ಸಮಯಕ್ಕೆ ಗುರುತಿಸಿ ಪರಿಹರಿಸಿಕೊಳ್ಳದೇ ಇದ್ದರೆ, ಹೃದ್ರೋಗಗಳು ಅಥವಾ ಪಾರ್ಶ್ವವಾಯುವಿನಂತಹ ಗಂಭೀರ ಅಪಾಯಕ್ಕೆ ಕಾರಣವಾಗಬಹುದು. ಆ ಕಾರಣದಿಂದ ಈ ಸಮಸ್ಯೆಯ ಕುರಿತು ಜಾಗೃತಿ ಮೂಡಿಸಲು ಮತ್ತು ಸ್ಥಿತಿಯ ಗಂಭೀರತೆಯನ್ನು ಜನರಿಗೆ ಅರ್ಥಮಾಡಿಕೊಳ್ಳಲು, ಪ್ರಪಂಚದಾದ್ಯಂತ ಪ್ರತಿ ವರ್ಷ ವಿಶ್ವ ಅಧಿಕ ರಕ್ತದೊತ್ತಡ ದಿನವನ್ನು ಆಚರಿಸಲಾಗುತ್ತದೆ.

ಸಾಮಾನ್ಯವಾಗಿ ಅಧಿಕ ರಕ್ತದೊತ್ತಡವಿರುವ ರೋಗಿಗಳಲ್ಲಿ ಮಾಹಿತಿ ಹಾಗೂ ಜ್ಞಾನದ ಕೊರತೆಯಿಂದ ಗಂಭೀರ ಸಮಸ್ಯೆಗೆ ಕಾರಣವಾಗಬಹುದು. ವಿಶ್ವ ಅಧಿಕ ರಕ್ತದೊತ್ತಡ ದಿನವು ಅದನ್ನು ನಿವಾರಿಸುವ ಗುರಿಯನ್ನು ಹೊಂದಿದೆ.

ಇಂದು ವಿಶ್ವ ಹೈಪರ್‌ಟೆನ್ಷನ್‌ ಡೇ ಅಥವಾ ವಿಶ್ವ ಅಧಿಕ ರಕ್ತದೊತ್ತಡ ದಿನ. ಪ್ರಸ್ತುತ ಜೀವನಶೈಲಿಗೆ ಸಂಬಂಧಿಸಿದ ರೋಗಗಳಲ್ಲಿ ಪ್ರಮುಖ ಸ್ಥಾನದಲ್ಲಿರುವ ಅಧಿಕ ರಕ್ತದೊತ್ತಡ ಸಮಸ್ಯೆಯ ಕುರಿತ ಜನರಲ್ಲಿ ಜಾಗೃತಿ ಮೂಡಿಸಿ, ಈ ಕುರಿತು ಕಾಳಜಿ ಹೊಂದುವ ಉದ್ದೇಶದಿಂದ ಪ್ರತಿವರ್ಷ ಮೇ 17 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಹಾಗೂ ಆಚರಣೆಯ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.

ಇತಿಹಾಸ

ವರ್ಲ್ಡ್‌ ಟೈಪರ್‌ಟೆನ್ಷನ್‌ ಲೀಗ್‌ ಎಂಬುದು ಅಧಿಕ ರಕ್ತದೊತ್ತಡ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಹಾಗೂ ಇದರ ಮೇಲೆ ಕೆಲಸ ಮಾಡುವ ಸಂಸ್ಥೆಯಾಗಿದೆ. ಈ ಲೀಗ್‌ ಪ್ರಪಂಚದ 85 ದೇಶಗಳ ಒಕ್ಕೂಟವಾಗಿದೆ. 2005 ಮೇ 14ರಂದು ವರ್ಲ್ಡ್‌ ಟೈಪರ್‌ಟೆನ್ಷನ್‌ ಲೀಗ್‌ ಅಧಿಕ ರಕ್ತದೊತ್ತಡ ದಿನವನ್ನು ಪರಿಚಯಿಸಿತು. 2006ರಿಂದ ಪ್ರತಿವರ್ಷ ಮೇ 17 ರಂದು ಅಧಿಕ ರಕ್ತದೊತ್ತಡ ದಿನವನ್ನು ಆಚರಿಸಲಾಗುತ್ತದೆ.

ಮಹತ್ವ

ಈ ವರ್ಷ ಅಧಿಕ ರಕ್ತದೊತ್ತಡ ದಿನದ ಥೀಮ್‌ ಅಥವಾ ಪರಿಕಲ್ಪನೆ ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸಿ, ಹೆಚ್ಚು ಕಾಲ ಬದುಕಿ ಎಂಬುದಾಗಿದೆ.

ಜನರಲ್ಲಿ ಅಧಿಕ ರಕ್ತದೊತ್ತಡದ ಕುರಿತ ಅರಿವಿನ ಕೊರತೆ ಪರಿಸ್ಥಿತಿಯ ಗಂಭೀರತೆಗೆ ಕಾರಣವಾಗಬಹುದು. ಆ ಕಾರಣಕ್ಕೆ ಇದನ್ನು ನಿಯಂತ್ರಿಸುವುದು ಬಹಳ ಮುಖ್ಯ. ರಕ್ತದೊತ್ತಡ ನಿಯಂತ್ರಣದಲ್ಲಿದ್ದಾಗ ದೇಹದ ಮೇಲೆ ಇತರ ದೀರ್ಘಕಾಲದ ಕಾಯಿಲೆಗಳ ಅಪಾಯವು ಗಮನಾರ್ಹವಾಗಿ ಕಡಿಮೆಯಾಗುತ್ತದೆ.

ಅಧಿಕ ರಕ್ತದೊತ್ತಡದಿಂದ ತಲೆನೋವು, ವಾಕರಿಕೆ, ವಾಂತಿ, ತಲೆತಿರುಗುವಿಕೆ ಮತ್ತು ಉಸಿರಾಟದ ಸಮಸ್ಯೆಗಳು ಉಂಟಾಗಬಹುದು.

ಈ ದಿನವು ಅಧಿಕ ರಕ್ತದೊತ್ತಡ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶವನ್ನು ಹೊಂದಿದೆ. ಇದರೊಂದಿಗೆ ಈ ಕುರಿತು ಸಹಾಯ ಮಾಡಲು ಲೀಗ್‌ಗಳು ಸಹಕರಿಸುತ್ತವೆ.

ಈ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಚಿಕಿತ್ಸಾ ವಿಧಾನಗಳ ಬಗ್ಗೆ ತಿಳಿಸುವುದು ದಿನದ ಮುಖ್ಯ ಉದ್ದೇಶವಾಗಿದೆ. ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಈ ದಿನ ಸಾಬೀತು ಪಡಿಸುತ್ತದೆ.

ಅಮೆರಿಕದ ವೈದ್ಯಕೀಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಒಬ್ಬ ಮನುಷ್ಯನಿಗೆ ಬಿಪಿ ಅಥವಾ ಬ್ಲಡ್‌ ಪ್ರೆಷರ್‌ 130/80 ಅಥವಾ ಇದಕ್ಕಿಂತ ಹೆಚ್ಚಿದ್ದರೆ ಅದಯ ಅಧಿಕ ರಕ್ತದೊತ್ತಡ ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ.

ನಮ್ಮ ಆಹಾರ ಹಾಗೂ ಜೀವನಶೈಲಿಯ ಬದಲಾವಣೆಗಳಿಂದ ಇದನ್ನು ನಿವಾರಿಸಬಹುದು.