ಕನ್ನಡ ಸುದ್ದಿ  /  Lifestyle  /  World Kidney Day 2024 Second Thursday Of March Know The History Significance How To Keep Kidney Healthy Rst

World Kidney Day: ಮೂತ್ರಪಿಂಡದ ಬಗ್ಗೆ ಕಾಳಜಿ ಇರಲಿ, ನಿರ್ಲಕ್ಷ್ಯ ಸಲ್ಲ; ವಿಶ್ವ ಕಿಡ್ನಿ ದಿನದ ಇತಿಹಾಸ, ಆಚರಣೆಯ ಮಹತ್ವ ತಿಳಿಯಿರಿ

ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸಮಸ್ಯೆ ಹಾಗೂ ಕಿಡ್ನಿ ವೈಫಲ್ಯಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ. ಮೂತ್ರಪಿಂಡದ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಹಾಗೂ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಮಾರ್ಚ್‌ ತಿಂಗಳ ಎರಡನೇ ಗುರುವಾರ (ಮಾರ್ಚ್‌ 14) ವಿಶ್ವ ಕಿಡ್ನಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಆಚರಣೆಯ ಮಹತ್ವ ತಿಳಿಯಿರಿ.

ವಿಶ್ವ ಕಿಡ್ನಿ ದಿನದ ಇತಿಹಾಸ, ಮಹತ್ವ
ವಿಶ್ವ ಕಿಡ್ನಿ ದಿನದ ಇತಿಹಾಸ, ಮಹತ್ವ

ಮೂತ್ರಪಿಂಡಗಳು ಮನುಷ್ಯ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಇದು ದೇಹದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕಿ ಮನುಷ್ಯನ ಆರೋಗ್ಯ ರಕ್ಷಣೆಗೆ ನೆರವಾಗುತ್ತದೆ. ಮೂತ್ರ ಉತ್ಪಾದನೆಯ ಜೊತೆಗೆ ರಕ್ತದಲ್ಲಿನ ಹಲವು ಅಂಶಗಳ ಮಟ್ಟವನ್ನು ನಿಯಂತ್ರಿಸಲು ಕೂಡ ಸಹಕರಿಸುತ್ತದೆ. ದೇಹದ ಹಲವು ಕಾರ್ಯಗಳಿಗೆ ನೆರವಾಗುವ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರತಿಯೊಬ್ಬರೂ ಪ್ರಮುಖ ಪಾತ್ರ ವಹಿಸಬೇಕು. ನಿಯಮಿತವಾಗಿ ಕಿಡ್ನಿ ತಪಾಸಣೆಗೆ ಒಳಗಾಗುವ ಮೂಲಕ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಇತ್ತೀಚಿನ ಜೀವನಶೈಲಿ, ಆಹಾರಪದ್ಧತಿ ಸೇರಿದಂತೆ ಹಲವು ಕಾರಣಗಳಿಂದ ಜನರಲ್ಲಿ ಕಿಡ್ನಿ ಸಮಸ್ಯೆ ಹೆಚ್ಚುತ್ತಿದೆ. ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯು ಅಧಿಕವಾಗಿದೆ. ಮಧ್ಯಪಾನಿಗಳಲ್ಲಿ ಕಿಡ್ನಿ ಸಮಸ್ಯೆ ಹೆಚ್ಚು ಕಾಣಿಸಿದರೂ ಇತರರಲ್ಲೂ ಕಾಣಿಸುವುದಿಲ್ಲ ಅಂತೇನಿಲ್ಲ. ಮೂತ್ರಪಿಂಡದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಮಾರ್ಚ್‌ ತಿಂಗಳ ಎರಡನೇ ಗುರುವಾರ ವಿಶ್ವ ಕಿಡ್ನಿ ದಿನ ಅಥವಾ ವಿಶ್ವ ಮೂತ್ರಪಿಂಡದ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್‌ 14 ರಂದು ವಿಶ್ವ ಕಿಡ್ನಿ ದಿನವಿದೆ.

ಕಿಡ್ನಿಯ ಆರೋಗ್ಯ ಕಾಪಾಡಿಕೊಳ್ಳುವುದರ ಪ್ರಾಮುಖ್ಯ ಹಾಗೂ ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಮೀಸಲಿಡಲಾಗಿದೆ. ಮೂತ್ರಪಿಂಡದ ಕಾಯಿಲೆಗಳ ಪರಿಣಾಮವನ್ನು ತಗ್ಗಿಸಲು ಆರಂಭಿಕ ಹಂತದಲ್ಲೇ ಪತ್ತೆ ಮಾಡುವುದು ಹಾಗೂ ತಡೆಗಟ್ಟುವ ಕ್ರಮಗಳನ್ನು ಉತ್ತೇಜಿಸುವುದು ಈ ದಿನ ಆಚರಣೆಯ ಮುಖ್ಯ ಉದ್ದೇಶ.

ವಿಶ್ವ ಕಿಡ್ನಿ ದಿನದ ಇತಿಹಾಸ

2006ರಲ್ಲಿ ಮೊದಲ ಬಾರಿಗೆ ವಿಶ್ವ ಕಿಡ್ನಿ ದಿನವನ್ನು ʼನಿಮ್ಮ ಕಿಡ್ನಿಗಳು ಆರೋಗ್ಯವಾಗಿವೆಯೇ?ʼ ಎಂಬ ಅಡಿಬರಹದೊಂದಿಗೆ ಆರಂಭಿಸಲಾಯಿತು. ಇಂಟರ್‌ನ್ಯಾಷನಲ್ ಸೊಸೈಟಿ ಆಫ್ ನೆಫ್ರಾಲಜಿ (ಐಎಸ್ಎನ್) ಮತ್ತು ಇಂಟರ್‌ನ್ಯಾಷನಲ್ ಫೆಡರೇಶನ್ ಆಫ್ ಕಿಡ್ನಿ ಫೌಂಡೇಶನ್ಸ್ (ಐಎಫ್‌ಕೆಎಫ್) ಕಿಡ್ನಿ ಆರೋಗ್ಯದ ಮಹತ್ವದ ಬಗ್ಗೆ ಅರಿವು ಮೂಡಿಸುವ ಅಗತ್ಯವನ್ನು ಎತ್ತಿ ತೋರಿಸಲು ಹಾಗೂ ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿಯಂತ್ರಿಸುವ ಸಲುವಾಗಿ ಈ ದಿನದ ಆಚರಣೆಯನ್ನು ಜಾರಿಗೊಳಿಸಲಾಯಿತು. ಕಿಡ್ನಿ ವೈಫಲ್ಯ ಹಾಗೂ ಇದಕ್ಕೆ ಸಂಬಂಧಿಸಿದ ಗಂಭೀರ ಪರಿಣಾಮಗಳನ್ನ ತಗ್ಗಿಸಲು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು ಬಹಳ ಮುಖ್ಯು ಎಂಬುದನ್ನು ಇದು ಒತ್ತಿ ಹೇಳುತ್ತದೆ.

ವಿಶ್ವ ಮೂತ್ರಪಿಂಡ ದಿನದ ಮಹತ್ವ

ಮೂತ್ರಪಿಂಡಕ್ಕೆ ಸಂಬಂಧಿದ ಕಾಯಿಲೆಗಳಿಂದ ಜಗತ್ತು ಎದುರಿಸುತ್ತಿರುವ ಅಪಾಯ, ಆರಂಭಿಕ ಹಂತದ ಪತ್ತೆ ಹಾಗೂ ಚಿಕಿತ್ಸೆ ಅಗತ್ಯಗಳ ಬಗ್ಗೆ ಗಮನ ಸೆಳೆಯುವುದು ವಿಶ್ವ ಮೂತ್ರಪಿಂಡದ ದಿನದ ಆಚರಣೆಯ ಮಹತ್ವಗಳಲ್ಲಿ ಪ್ರಮುಖವಾದದ್ದು. ಮೂತ್ರಪಿಂಡದ ಆರೋಗ್ಯದ ಪ್ರಾಮುಖ್ಯದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ, ಕಿಡ್ನಿ ಆರೋಗ್ಯ ರಕ್ಷಣೆಯನ್ನು ಉತ್ತೇಜಿಸುವುದು, ಆರಂಭಿಕ ಪತ್ತೆಯ ಮೂಲಕ ರೋಗ ಉಲ್ಬಣವಾಗುವುದನ್ನು ತಡೆಯುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶಗಳಲ್ಲಿ ಒಂದು.

ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಅಗತ್ಯ ಹಾಗೂ ಇದರಿಂದ ಮೂತ್ರಪಿಂಡಕ್ಕೆ ಆಗುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವುದು ಕೂಡ ವಿಶ್ವ ಮೂತ್ರಪಿಂಡ ದಿನದ ಗುರಿಯಾಗಿದೆ.

ವಿಶ್ವ ಕಿಡ್ನಿ ದಿನದ ಆಚರಣೆ ಹೇಗೆ?

ಆರೋಗ್ಯ ತಪಾಸಣೆ, ಶೈಕ್ಷಣಿಕ ಕಾರ್ಯಕ್ರಮಗಳು, ನಿಧಿ ಸಂಗ್ರಹಣೆಯಂತಹ ಕಾರ್ಯಕ್ರಮಗಳು ಹಾಗೂ ವಿವಿಧ ಚಟುವಟಿಕೆಗಳ ಮೂಲಕ ಮೂತ್ರಪಿಂಡದ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಆ ಮೂಲಕ ಕಿಡ್ನಿ ಸಮಸ್ಯೆಯನ್ನು ತಡೆಗಟ್ಟಲು ಗಮನ ಹರಿಸಬೇಕು. ವಿಶ್ವ ಕಿಡ್ನಿ ದಿನವನ್ನು ಆಚರಿಸಲು, ಪ್ರಪಂಚದಾದ್ಯಂತ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಉಚಿತ ಆರೋಗ್ಯ ತಪಾಸಣೆ, ಶೈಕ್ಷಣಿಕ ಸೆಮಿನಾರ್‌ಗಳು, ಜಾಗೃತಿ ಅಭಿಯಾನಗಳನ್ನು ಕೂಡ ಹಮ್ಮಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮಗಳಿಗೆ ಹಾಜರಾಗುವ ಮೂಲಕ, ಮೂತ್ರಪಿಂಡದ ಆರೋಗ್ಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಮೂಲಕ ಮತ್ತು ತಮ್ಮ ಮೂತ್ರಪಿಂಡದ ಆರೋಗ್ಯವನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ವ್ಯಕ್ತಿಗಳು ಸಹ ದಿನದಲ್ಲಿ ಭಾಗವಹಿಸಬಹುದು.