World Liver Day 2023: ಕಣ್ಣು, ಮುಖ ಹಾಗೂ ಚರ್ಮದ ಈ ಲಕ್ಷಣಗಳು ಯಕೃತ್ತಿನಲ್ಲಿ ಕೊಬ್ಬು ಸಂಗ್ರಹವಾಗಿರುವುದನ್ನು ಸೂಚಿಸಬಹುದು; ಎಚ್ಚರವಿರಲಿ-world liver day 2023 health liver health signs of fatty liver on your face eyes and skin april 19 rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  World Liver Day 2023: ಕಣ್ಣು, ಮುಖ ಹಾಗೂ ಚರ್ಮದ ಈ ಲಕ್ಷಣಗಳು ಯಕೃತ್ತಿನಲ್ಲಿ ಕೊಬ್ಬು ಸಂಗ್ರಹವಾಗಿರುವುದನ್ನು ಸೂಚಿಸಬಹುದು; ಎಚ್ಚರವಿರಲಿ

World Liver Day 2023: ಕಣ್ಣು, ಮುಖ ಹಾಗೂ ಚರ್ಮದ ಈ ಲಕ್ಷಣಗಳು ಯಕೃತ್ತಿನಲ್ಲಿ ಕೊಬ್ಬು ಸಂಗ್ರಹವಾಗಿರುವುದನ್ನು ಸೂಚಿಸಬಹುದು; ಎಚ್ಚರವಿರಲಿ

World Liver Day April 19: ಯಕೃತ್ತಿನ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಏಪ್ರಿಲ್‌ 19 ರಂದು ವಿಶ್ವ ಯಕೃತ್ತಿನ ದಿನವನ್ನು ಆಚರಿಸಲಾಗುತ್ತದೆ. ಕಣ್ಣು, ಚರ್ಮ ಹಾಗೂ ಮುಖದಲ್ಲಿ ಗೋಚರವಾಗುವ ಈ ಕೆಲವು ಲಕ್ಷಣಗಳು ಯಕೃತ್ತಿನಲ್ಲಿ ಕೊಬ್ಬು ಸಂಗ್ರಹವಾಗಿರುವುದನ್ನು ಸೂಚಿಸಬಹುದು. ಈ ಸಂಕೇತಗಳು ಕಾಣಿಸಿದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಯಕೃತ್ತಿನ ಕೊಬ್ಬಿನ ಲಕ್ಷಣ
ಯಕೃತ್ತಿನ ಕೊಬ್ಬಿನ ಲಕ್ಷಣ

ಯಕೃತ್ತಿನ ಆರೋಗ್ಯದ ಮಹತ್ವ ಹಾಗೂ ಆರೋಗ್ಯಕರ ಯಕೃತ್ತನ್ನು ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಏಪ್ರಿಲ್‌ 19ರಂದು ವಿಶ್ವ ಯಕೃತ್ತಿನ ದಿನವನ್ನು ಆಚರಿಸಲಾಗುತ್ತದೆ.

ಪಿತ್ತಜನಕಾಂಗ ಅಥವಾ ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗಳು ಆರಂಭದಲ್ಲಿ ಯಾವುದೇ ರೋಗಲಕ್ಷಣಗಳನ್ನು ಹೊಂದಿರದೇ ಇದ್ದರೂ ನಂತರ ಗಂಭೀರ ಸ್ವರೂಪ ತಾಳುತ್ತವೆ. ಹೆಪಟೈಟಿಸ್‌ ಎ, ಹೆಪಟೈಟಿಸ್ ಬಿ, ಲಿವರ್‌ ಸಿರೋಸಿಸ್‌, ಯಕೃತ್ತಿನ ಕ್ಯಾನ್ಸರ್‌, ನಾನ್‌ ಆಲ್ಕೋಹಾಲಿಕ್‌ ಫ್ಯಾಟಿ ಲಿವರ್‌ (ಎನ್‌ಎಎಫ್‌ಎಲ್‌ಡಿ) ನಂತಹ ಕಾಯಿಲೆಗಳು ಇತ್ತೀಚೆಗೆ ಹಿಂದೆಂದಿಗಿಂತಲೂ ಹೆಚ್ಚು ಜನರನ್ನು ಬಾಧಿಸುತ್ತಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, 1990 ರಿಂದ 2017ರ ನಡುವೆ ಯಕೃತ್ತಿನ ಕ್ಯಾನ್ಸರ್‌ ಪ್ರಕರಣಗಳಲ್ಲಿ ಶೇ 100ರಷ್ಟು ಹೆಚ್ಚಳವಾಗಿದೆ. ಅದರಲ್ಲಿ ಮೂರನೇ ಎರಡರಷ್ಟು ವೈರಲ್‌ ಹೆಪಟೈಟಿಸ್‌ಗೆ ಕಾರಣವಾಗಿದೆ ಹಾಗೂ ಶೇ 16ರಷ್ಟು ಎನ್‌ಎಎಫ್‌ಎಲ್‌ಡಿ ಸೇರಿದಂತೆ ಕಾರಣಗಳನ್ನು ಗುರುತಿಸಲಾಗದ ಸಮಸ್ಯೆಗಳಾಗಿವೆ.

ಎನ್‌ಎಎಫ್‌ಎಲ್‌ಡಿ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯು ಕೋವಿಡ್‌ - 19ಗೆ ಸಮಾನವಾದ ಆಧುನಿಕ ಸಾಂಕ್ರಾಮಿಕವಲ್ಲದ ರೋಗವಾಗಿದೆ. ಆಧುನಿಕ ಜಡಜೀವನಶೈಲಿ ಹಾಗೂ ಅಸಮರ್ಪಕ ಆಹಾರ ಪದ್ಧತಿಗಳು ಇದಕ್ಕೆ ಪ್ರಮುಖ ಕಾರಣವಾಗಿದೆ. ಆದರೆ ದುರಾದೃಷ್ಟವಶಾತ್‌ ರೋಗದ ಆರಂಭಿಕ ಹಂತಗಳಲ್ಲಿ ಮುಖ, ಚರ್ಮ ಅಥವಾ ಕಣ್ಣುಗಳಲ್ಲಿ ಯಾವುದೇ ಹೆಚ್ಚಿನ ರೋಗಲಕ್ಷಣಗಳು ಗೋಚರವಾಗುವುದಿಲ್ಲ. ರೋಗಲಕ್ಷಣಗಳು ಕಾಣಿಸುವ ಹೊತ್ತಿಗೆ ಗಂಭೀರ ಸಮಸ್ಯೆಯಾಗಿ ಮಾರ್ಪಟ್ಟಿರುತ್ತದೆʼ ಎನ್ನುತ್ತಾರೆ ಪುಣೆಯ ರೂಬಿಹಾಲ್‌ ಕ್ಲಿನಿಕ್‌ ವೈದ್ಯರಾದ ಡಾ. ವಿನಿಶ್‌ ಶಾ.

ʼಯಕೃತ್ತಿನಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾದ ಎಲ್ಲರಲ್ಲೂ ಮುಖ, ಕಣ್ಣು ಹಾಗೂ ಚರ್ಮದ ಮೇಲೆ ಲಕ್ಷಣಗಳು ಗೋಚರವಾಗುವುದಿಲ್ಲ. ಕೆಲವರಲ್ಲಿ ಮಾತ್ರ ಈ ಲಕ್ಷಣಗಳು ಗೋಚರವಾಗುತ್ತವೆ. ಕೆಲವರಲ್ಲಿ ಕತ್ತಿನ ಭಾಗ ಸಂಪೂರ್ಣ ಕಪ್ಪಾಗಿರುತ್ತದೆ. ಇದನ್ನು ಚರ್ಮದ ಸಮಸ್ಯೆ ಎಂದುಕೊಳ್ಳಬಹುದು. ಆದರೆ ಇದು ಇನ್ಸುಲಿನ್‌ ಪ್ರತಿರೋಧವನ್ನು ಸೂಚಿಸುತ್ತದೆ ಮತ್ತು ಯಕೃತ್ತಿನಲ್ಲಿ ಕೊಬ್ಬಿನಾಂಶ ಹೆಚ್ಚಾಗುವುದನ್ನು ಸೂಚಿಸಬಹುದು. ಅದೇ ರೀತಿ ಕಂಕುಳ ಅಥವಾ ತೊಡೆಸಂಧಿನಲ್ಲಿ ಕಪ್ಪಾಗುವುದು ಕೂಡ ಆ ವ್ಯಕ್ತಿಯ ಯಕೃತ್ತಿನಲ್ಲಿ ಕೊಬ್ಬಿನಾಂಶ ಹೆಚ್ಚಿದೆ ಎಂಬುದನ್ನು ಸೂಚಿಸಬಹುದುʼ ಎನ್ನುತ್ತಾರೆ ಮುಂಬೈನ ಸರ್‌ ಎಚ್‌ಎನ್‌ ರಿಯಲನ್ಸ್‌ ಫೌಂಡೇಶನ್‌ ಆಸ್ಪತ್ರೆಯ ನಿರ್ದೇಶಕ ಡಾ. ಆಕಾಶ್‌ ಶುಕ್ಲಾ.

ʼಇದರೊಂದಿಗೆ ಮುಖ ಅಥವಾ ದೇಹದ ಇತರ ಭಾಗಗಳಲ್ಲಿ ಅತಿಯಾಗಿ ಚರ್ಮ ದಪ್ಪವಾಗಿರುವುದು ಅಥವಾ ದುಂಡುಮುಖದಂತಿದ್ದರೆ ಆ ವ್ಯಕ್ತಿಯು ಯಕೃತ್ತಿನ ಕೊಬ್ಬನ್ನು ಹೊಂದಿರುವ ಸಾಧ್ಯತೆ ಇದೆ. ಕಣ್ಣುಗಳು, ಮುಖ ಮತ್ತು ಚರ್ಮದ ಕೆಲವು ಭಾಗಗಳಲ್ಲಿ ಬಿಳಿ ಗೆರೆ ಉಂಟಾಗುವುದು ಕೂಡ ಯಕೃತ್ತಿನಲ್ಲಿ ಕೊಬ್ಬಿನಾಂಶ ಹೆಚ್ಚುವ ಕಾರಣವಾಗಿರಬಹುದು. ಆ ಕಾರಣದಿಂದ ದೇಹದಲ್ಲಿ ಈ ಸಂಕೇತಗಳನ್ನು ಹೊಂದಿರುವವರು ಮಧುಮೇಹ, ಕೊಲೆಸ್ಟ್ರಾಲ್‌, ಹೃದ್ರೋಗ ಮತ್ತು ಯಕೃತ್ತಿನ ಕೊಬ್ಬಿನ ಪರೀಕ್ಷೆ ಮಾಡಿಸಬೇಕುʼ ಎನ್ನುತ್ತಾರೆ ಡಾ. ಶುಕ್ಲಾ.

ಯಕೃತ್ತಿನ ಕೊಬ್ಬಿನ ಲಕ್ಷಣಗಳು ಚರ್ಮ, ಕಣ್ಣು ಮತ್ತು ಮುಖದ ಮೇಲೆ ಈ ರೀತಿಯ ರೋಗಲಕ್ಷಣಗಳನ್ನು ಉಂಟು ಮಾಡಬಹುದು.

ಕಾಮಾಲೆ

ಕಾಮಾಲೆ ಎನ್ನುವುದು ಚರ್ಮ ಹಾಗೂ ಕಣ್ಣಿನ ಬಿಳಿ ಭಾಗವು ಹಳದಿ ಬಣ್ಣಕ್ಕೆ ತಿರುಗುವ ಕಾಯಿಲೆಯಾಗಿದೆ. ಯಕೃತ್ತಿಗೆ ರಕ್ತದಿಂದ ಬಿಲಿರುಬಿನ್ ಅನ್ನು ತೊಡೆದುಹಾಕಲು ಸಾಧ್ಯವಾಗದಿದ್ದಾಗ ಇದು ಸಂಭವಿಸುತ್ತದೆ. ಹಳೆಯ ಕೆಂಪು ರಕ್ತ ಕಣಗಳು ವಿಭಜನೆಯಾದಾಗ, ಬಿಲಿರುಬಿನ್ ತ್ಯಾಜ್ಯ ಉತ್ಪನ್ನವಾಗಿ ಉತ್ಪತ್ತಿಯಾಗುತ್ತದೆ. ಯಕೃತ್ತು ಆರೋಗ್ಯವಂತ ಜನರಲ್ಲಿ ಬಿಲಿರುಬಿನ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಪಿತ್ತರಸದಲ್ಲಿ ಅದನ್ನು ಹೊರ ಹಾಕುತ್ತದೆ. ಯಕೃತ್ತು ಹಾನಿಗೊಳಗಾದಾಗ, ಬಿಲಿರುಬಿನ್‌ ಅನ್ನು ನಿಭಾಯಿಸಲು ಸಾಧ್ಯವಾಗದಿದ್ದಾಗ ಕಾಮಾಲೆ ಕಾಣಿಸಬಹುದು.

ಸ್ಪೈಡರ್ ಆಂಜಿಯೋಮಾಸ್

ಸ್ಪೈಡರ್‌ ಆಂಜಿಯೋಮಾಸ್‌ ಎನ್ನುವುದು ಸಣ್ಣ, ಕೆಂಪು ಜೇಡದ ರೀತಿ ರಕ್ತನಾಳಗಳು ಮುಖ ಹಾಗೂ ಕತ್ತಿನ ಮೇಲೆ ಕಾಣಿಸಿಕೊಳ್ಳಬಹುದು. ದೇಹದಲ್ಲಿ ಈಸ್ಟೋಜೆನ್‌ ಮಟ್ಟದ ಹೆಚ್ಚಳದಿಂದ ಈ ಸಮಸ್ಯೆ ಉಂಟಾಗಬಹುದು. ಇದು ಯಕೃತ್ತಿನ ಕಾಯಿಲೆ ಇರುವವರಲ್ಲಿ ಸಾಮಾನ್ಯವಾಗಿದೆ. ಯಕೃತ್ತು ಹಾರ್ಮೋನ್‌ಗಳ ಚಯಾಪಚಯ ಕ್ರಿಯಗೆ ಕಾರಣವಾಗಿದೆ ಮತ್ತು ಅದು ಹಾನಿಗೊಳಗಾದಾಗ, ಈಸ್ಟೋಜೆನ್‌ ಮಟ್ಟವನ್ನು ಹೆಚ್ಚಿಸುತ್ತದೆ.

ಪಾಮರ್ ಎರಿಥೆಮಾ

ಪಾಮರ್ ಎರಿಥೆಮಾ ಎನ್ನುವುದು ಅಂಗೈಗಳು ಕೆಂಪು ಬಣ್ಣಕ್ಕೆ ತಿರುಗುವ ಸ್ಥಿತಿಯಾಗಿದೆ. ಇದು ಯಕೃತ್ತಿನ ಕಾಯಿಲೆಯ ಲಕ್ಷಣವಾಗಿರಬಹುದು. ಏಕೆಂದರೆ ಇದರಿಂದ ಅಂಗೈಗಳಿಗೆ ರಕ್ತದ ಹರಿವಿನ ಹೆಚ್ಚಳ ಉಂಟಾಗಬಹುದು. ಇದರ ಹಿಂದಿನ ನಿಖರವಾದ ಕಾರಣಗಳನ್ನು ಇನ್ನೂ ತಿಳಿಯಲಾಗಿಲ್ಲ.

ಕಣ್ಣಿನ ಕೆಳಗೆ ಕಪ್ಪಾಗುವುದು

ಕಣ್ಣಿನ ಕೆಳ ಭಾಗದಲ್ಲಿ ಕಪ್ಪಾಗುವುದು ಕೂಡ ಯಕೃತ್ತಿನಲ್ಲಿ ಕೊಬ್ಬು ಸಂಗ್ರಹಣೆಯಾಗಿರುವುದರ ಸಂಕೇತವಾಗಿರಬಹುದು. ಯಕೃತ್ತಿನ ಕಾರ್ಯ ಸಾಮರ್ಥ್ಯದ ಕೊರತೆಯು ಇದಕ್ಕೆ ಕಾರಣವಾಗಿರಬಹುದು. ಪಿತ್ತಜನಕಾಂಗವು ರಕ್ತದಿಂದ ವಿಷದ ಅಂಶವನ್ನು ಫಿಲ್ಟರ್‌ ಮಾಡುವ ಗುಣವನ್ನು ಹೊಂದಿದೆ. ಅದು ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದಾಗ ವಿಷ ಸಂಗ್ರಹಕ್ಕೆ ಕಾರಣವಾಗಬಹುದು ಮತ್ತು ಇದರಿಂದ ಕಣ್ಣಿನ ಸುತ್ತಲೂ ಕಪ್ಪಾಗಬಹುದು. ಇದರಿಂದ ಆಯಾಸ, ದೌರ್ಬಲ್ಯದಂತಹ ರೋಗಲಕ್ಷಣಗಳೂ ಕಾಣಿಸಬಹುದು.

ಮೊಡವೆ ಹಾಗೂ ಚರ್ಮದ ಸಮಸ್ಯೆಗಳು

ಕೆಲವೊಮ್ಮೆ ಮೊಡವೆ ಹಾಗೂ ಇತರ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಕೂಡ ಯಕೃತ್ತಿನ ಸಮಸ್ಯೆಗಳ ಲಕ್ಷಣವಾಗಿರಬಹುದು. ಯಕೃತ್ತು ದೇಹದಿಂದ ವಿಷವನ್ನು ಹೊರ ಹಾಕದೇ ಇದ್ದಾಗ ದೇಹದಲ್ಲಿ ವಿಷದ ಅಂಶ ತುಂಬುತ್ತದೆ. ಇದರಿಂದ ಚರ್ಮದ ಸಮಸ್ಯೆಗಳು ಉಂಟಾಗಬಹುದು.

mysore-dasara_Entry_Point