No Tobacco Day: ತಾಯಿ ಆರೋಗ್ಯಕ್ಕಷ್ಟೇ ಅಲ್ಲ ಮಗುವಿಗೂ ಅಪಾಯ ಧೂಮಪಾನ; ಸಂತಾನೋತ್ಪತ್ತಿ, ಗರ್ಭಧಾರಣೆಯ ಮೇಲೆ ಧೂಮಪಾನದ ಪರಿಣಾಮಗಳು ಹೀಗಿವೆ
Tobacco Effect on Reproductive Health, Pregnancy: ಮಹಿಳೆಯರು ಧೂಮಪಾನ ಮಾಡುವುದು ಅಥವಾ ತಂಬಾಕಿನ ಹೊಗೆಗೆ ಒಡ್ಡಿಕೊಳ್ಳುವುದರಿಂದ ಹಲವು ರೀತಿಯ ಸಂತಾನೋತ್ಪತ್ತಿ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು. ಇದು ಅಂಡಾಶಯಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೆ, ಗರ್ಭಧಾರಣೆಯ ಮೇಲೂ ಪರಿಣಾಮ ಬೀರಬಹುದು.
ತಂಬಾಕು ಹಾಗೂ ತಂಬಾಕಿನ ಉತ್ಪನ್ನಗಳ ಸೇವನೆಯು ವ್ಯಸನಿಗಳು ಹಾಗೂ ಧೂಮಪಾನದ ಹೊಗೆಯನ್ನು ಸೇವಿಸುವವರು ಇಬ್ಬರಿಗೂ ಅಪಾಯ. ಅಲ್ಲದೆ ಇದರಿಂದ ಮಾರಣಾಂತಿಕ ಪರಿಣಾಮಗಳು ಉಂಟಾಗಬಹುದು.
ಧೂಮಪಾನ ಮಾಡುವುದು ಅಥವಾ ಹೊಗೆ ಸೇವನೆಯು ಶ್ವಾಸಕೋಶಗಳು, ಹೃದಯ, ಗಂಟಲು ಮತ್ತು ಕುತ್ತಿಗೆಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಇದರೊಂದಿಗೆ ಕ್ಯಾನ್ಸರ್ ಗೆಡ್ಡೆಗಳು, ಹೃದಯರಕ್ತನಾಳದ ಕಾಯಿಲೆಗಳು, ಮಧುಮೇಹ ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಗಳಿಗೂ ಕಾರಣವಾಗುತ್ತದೆ. ಇಷ್ಟೇ ಅಲ್ಲದೆ, ಧೂಪಮಾನವು ಪುರುಷರು ಹಾಗೂ ಮಹಿಳೆಯರ ಸಂತಾನೋತ್ಪತ್ತಿ ಕ್ರಿಯೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ ಎನ್ನುತ್ತವೆ ಸಂಶೋಧನೆಗಳು.
ಮಹಿಳೆಯರುಲ್ಲಿ ಧೂಮಪಾನ ಮಾಡುವುದು ಅಥವಾ ಧೂಮಪಾನದ ಹೊಗೆಗೆ ಒಗ್ಗಿಕೊಳ್ಳುವುದರಿಂದ ಸಂತಾನೋತ್ಪತ್ತಿ ಅಂಗಗಳು ಹಾಗೂ ಅವುಗಳ ಕಾರ್ಯಚಟುವಟಿಕೆಗಳ ಮೇಲೆ ಹಾನಿಕಾರಣ ಪರಿಣಾಮವನ್ನು ಉಂಟುಮಾಡಬಹುದು. ಇದು ಅಂಡಾಶಯಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರೊಂದಿಗೆ ಗರ್ಭಧಾರಣೆಯ ಮೇಲೂ ಪರಿಣಾಮ ಬೀರಬಹುದು.
ವಿಶ್ವ ತಂಬಾಕು ರಹಿತ ದಿನವಾದ ಒಂದು ಮಹಿಳೆಯ ಅಂಡಾಶಯ ಹಾಗೂ ಗರ್ಭಾವಸ್ಥೆಯ ಮೇಲೆ ಧೂಮಪಾನದ ಪ್ರಭಾವಗಳೇನು ಎಂಬುದರ ಬಗ್ಗೆ ಇಲ್ಲಿದೆ ವಿವರ.
ಸ್ತ್ರೀ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಧೂಮಪಾನದ ಋಣಾತ್ಮಕ ಪರಿಣಾಮಗಳು
ಅಂಡಾಶಯದ ಮೇಲೆ ಪರಿಣಾಮ: ಧೂಮಪಾನವು ಅಂಡಾಶಯದ ಕಾರ್ಯಚಟುವಟಿಕೆಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಲು ಮುಂದೆ ಓದಿ.
ಹಾರ್ಮೋನುಗಳ ಅಸಮತೋಲನ
ಮನುಷ್ಯನ ದೇಹದಲ್ಲಿ ಒಂದು ಹಾರ್ಮೋನ್ ಬಿಡುಗಡೆಯು ಮತ್ತೊಂದು ಹಾರ್ಮೋನುಗಳ ಸ್ರವಿಸುವಿಕೆಯಿಂದ ನಿಯಂತ್ರಿಸಲ್ಪಡುತ್ತದೆ. ಸಿಗರೇಟ್‌ಗಳಂತಹ ತಂಬಾಕು ಉತ್ಪನ್ನಗಳಲ್ಲಿ ಕಂಡುಬರುವ ರಾಸಾಯನಿಕಗಳು ಸಂತಾನೋತ್ಪತ್ತಿ ಹಾರ್ಮೋನುಗಳಿಗೆ ಕಾರಣವಾದ ಗ್ರಂಥಿಗಳ ಕಾರ್ಯಗಳಿಗೆ ಅಡ್ಡಿಪಡಿಸುತ್ತವೆ. ಇದು ಥೈರಾಯ್ಡ್, ಹೈಪೋಥಾಲಮಸ್, ಪಿಟ್ಯುಟರಿ ಮತ್ತು ಮೂತ್ರಜನಕಾಂಗದ ಗ್ರಂಥಿಗಳನ್ನು ಒಳಗೊಂಡಿದೆ. ಈ ಅಡ್ಡಿಯು ಮಹಿಳೆಯರಲ್ಲಿ ಕಾರ್ಟಿಸೋಲ್ ಮತ್ತು ಪುರುಷ ಹಾರ್ಮೋನ್, ಟೆಸ್ಟೋಸ್ಟೆರಾನ್ ಎಂಬ ಒತ್ತಡದ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಕಾರ್ಟಿಸೋಲ್ ಹಾಗೂ ಟೆಸ್ಟೋಸ್ಟೆರಾನ್ ಹೆಚ್ಚಳದಿಂದ ಬಂಜೆತನದ ಸಮಸ್ಯೆ ಉಂಟಾಗಬಹುದು. ಇದರೊಂದಿಗೆ ಈಸ್ಟ್ರೊಜೆನ್, ಪ್ರೊಜೆಸ್ಟರಾನ್, ಆಂಟಿ-ಮುಲ್ಲೆರಿಯನ್ ಹಾರ್ಮೋನ್ (AMH), ಮತ್ತು ಪ್ರೊಲ್ಯಾಕ್ಟಿನ್ ನಂತಹ ಹಾರ್ಮೋನುಗಳು ಪ್ರಮಾಣದಲ್ಲಿ ಕಡಿಮೆಯಾಗುತ್ತವೆ.
ಅಂಡಾಶಯ ಮತ್ತು ಮುಟ್ಟು
ಧೂಮಪಾನದಿಂದ ಉಂಟಾಗುವ ಹಾರ್ಮೋನುಗಳ ಅಸಮತೋಲನವು ಅಂಡಾಶಯ ಮತ್ತು ಋತುಚಕ್ರದ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದನ್ನು ಹಲವು ಅಧ್ಯಯನಗಳು ತಿಳಿಸಿವೆ. ಉದಾಹರಣೆಗೆ ಮಹಿಳೆಯರಲ್ಲಿ ಹೆಚ್ಚಿದ ಟೆಸ್ಟೋಸ್ಟೆರಾನ್ ಮಟ್ಟವು ಪಾಲಿಸಿಸ್ಟಿಕ್ ಓವರಿ ಸಿಂಡ್ರೊಮ್‌ಗೆ ಸಂಬಂಧಿಸಿದೆ. ಇದು ಅಂಡಾತ್ಪತ್ತಿ ಹಾಗೂ ಮುಟ್ಟಿನ ತೊಂದರೆಗಳಿಗೆ ಕಾರಣವಾಗಬಹುದು. ಕಡಿಮೆ ಪ್ರಮಾಣದಲ್ಲಿ ಈಸ್ಟ್ರೋಜೆನ್ ಹಾಗೂ ಪ್ರೊಜೆಸೆರಾನ್ ಅನಿಯಮಿತ ಋತುಚಕ್ರಕ್ಕೆ ಕಾರಣವಾಗುತ್ತದೆ.
ಋತುಬಂಧ
ಋತುಬಂಧವು ಋತುಚಕ್ರದ ಸಂಪೂರ್ಣ ನಿಲುಗಡೆಯನ್ನು ಸೂಚಿಸುತ್ತದೆ. ಸಾಮಾನ್ಯವಾಗಿ 40 ರಿಂದ 50 ವರ್ಷ ವಯಸ್ಸಿನ ಮಹಿಳೆಯರಲ್ಲಿ ಋತುಬಂಧ ಕಾಣಿಸುತ್ತದೆ. ಇದು ಅಂಡೋತ್ಪತ್ತಿ ಮೊಟ್ಟೆಗಳ ಸವಕಳಿಯನ್ನು ಸೂಚಿಸುತ್ತದೆ. ಧೂಮಪಾನವು ಅಂಡಾಶಯದಲ್ಲಿನ ಮೊಟ್ಟೆಗಳಿಗೆ ಹಾನಿಯಾಗುವ ಪ್ರಮಾಣವನ್ನು ವೇಗಗೊಳಿಸುತ್ತದೆ ಮತ್ತು ಅವುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ, ಅಲ್ಲದೆ ಆರಂಭಿಕ ಋತುಬಂಧಕ್ಕೂ ಇದು ಕಾರಣವಾಗಬಹುದು.
ಗರ್ಭಾವಸ್ಥೆಯ ಮೇಲೆ ಧೂಮಪಾನದ ಪರಿಣಾಮ
ಧೂಮಪಾನವು ಗರ್ಭಧಾರಣೆಯ ಆರಂಭದ ಹಂತಗಳು ಮತ್ತು ಗರ್ಭಧಾರಣೆಯ ಮೇಲೆ ಪರಿಣಾಮ ಬೀರುತ್ತದೆ.
ಗರ್ಭಾವಸ್ಥೆಯ ತೊಡಕುಗಳು
ಧೂಮಪಾನ ಮಾಡುವ ಮಹಿಳೆಯರಲ್ಲಿ ಗರ್ಭಾವಸ್ಥೆಗೆ ಸಂಬಂಧಿಸಿ ಹಲವು ಸಮಸ್ಯೆಗಳು ಎದುರಾಗಬಹುದು. ಅಪಸ್ಥಾನೀಯ ಗರ್ಭಧಾರಣೆ, ಗರ್ಭಪಾತ, ಅಸಹಜ ಗರ್ಭಪಾತದಂತಹ ಅನಾಹುತಗಳು ಎದುರಾಗಬಹುದು.
ಭ್ರೂಣದ ಬೆಳವಣಿಗೆ
ಧೂಮಪಾನ ಮಾಡುವಾಗ ಉತ್ಪತ್ತಿಯಾಗುವ ಇಂಗಾಲದ ಮೊನಾಕ್ಸೈಡ್ ಕೇಂದ್ರ ನರಮಂಡಲಕ್ಕೆ ಹಾನಿಯುನ್ನುಂಟು ಮಾಡಬಹುದು. ಅಲ್ಲದೆ ಇದು ಗರ್ಭಾಶಯದಲ್ಲಿನ ಮಗುವನ ಬೆಳವಣಿಗೆಯ ಕುಂಠಿತಕ್ಕೂ ಕಾರಣವಾಗಬಹುದು. ಇದರಿಂದ ನಿರ್ಬಂಧಿತ ಬೆಳವಣಿಗೆ ಮತ್ತು ಅಕಾಲಿಕ ಜನನದ ಸಂಭವವೂ ಹೆಚ್ಚು. ಇದಲ್ಲದೆ, ಗರ್ಭಾವಸ್ಥೆಯಲ್ಲಿ ಧೂಮಪಾನವು ಶ್ವಾಸಕೋಶಗಳು ಮತ್ತು ಮೆದುಳಿನ ಅಂಗಾಂಶಗಳಿಗೆ ಹಾನಿಯನ್ನುಂಟುಮಾಡುತ್ತದೆ.
ಅನುವಂಶಿಕ ವೈಪರೀತ್ಯಗಳು ಮತ್ತು ಜನನ ದೋಷ
ಅಂಡಾಶಯದ ಮೊಟ್ಟೆಯಲ್ಲಿನ ಗುಣಮಟ್ಟದ ಮೇಲೆ ಧೂಮಪಾನದ ಋಣಾತ್ಮಕ ಪರಿಣಾಮವು ಡೌನ್ ಸಿಂಡ್ರೋಮ್, ಟರ್ನರ್ ಸಿಂಡ್ರೋಮ್ ಮತ್ತು ಕ್ಲೈನ್‌ಫೆಲ್ವರ್ ಸಿಂಡ್ರೋಮ್‌ನಂತಹ ಅನುವಂಶಿಕ ಅಸಹಜತೆಗೆ ಕಾರಣವಾಗಬಹುದು. ಧೂಮಪಾನ ಮಾಡುವ ಮಹಿಳೆಯರಿಗೆ ಹುಟ್ಟುವ ಮಕ್ಕಳಲ್ಲಿ ಸೀಳು ತುಟಿ ಅಥವಾ ಸೀಳು ಅಂಗುಳ ಸಮಸ್ಯೆ ಹೆಚ್ಚಿರಬಹುದು.
ಮಗು ಜನನದ ನಂತರದ ತೊಡಕುಗಳು
ಧೂಮಪಾನ ಮಾಡುವ ಮಹಿಳೆಯರಿಗೆ ಜನಿಸಿದ ಮಕ್ಕಳು ಕಡಿಮೆ ತೂಕ ಹೊಂದಿರುತ್ತಾರೆ. ಸ್ಥೂಲಕಾಯ, ಮಧುಮೇಹ, ಅಸ್ತಮಾ ಮತ್ತು ಹೃದಯರಕ್ತನಾಳದ ಕಾಯಿಲೆಗಳು ಸೇರಿದಂತೆ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬಹುದು.
ಧೂಮಪಾನ ಮಾಡುವುದರಿಂದ ಮಹಿಳೆಯರ ಆರೋಗ್ಯ ಮತ್ತು ಅವರಿಗೆ ಹುಟ್ಟುವ ಮಕ್ಕಳ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಮಹಿಳೆಯರ ದೈಹಿಕ ಹಾಗೂ ಮಾನಸಿಕ ಕ್ಷೇಮಕ್ಕಾಗಿ ಧೂಮಪಾನ ತ್ಯಜಿಸುವುದು ಬಹಳ ಅವಶ್ಯ.
ವಿಭಾಗ