ಮಕ್ಕಳಲ್ಲಿ ಮಾರಣಾಂತಿಕ ಅಪಾಯಗಳನ್ನು ಹೆಚ್ಚಿಸುತ್ತಿದೆ ಬೊಜ್ಜಿನ ಸಮಸ್ಯೆ; ಮಗುವಿನ ತೂಕ ನಿಯಂತ್ರಣಕ್ಕೆ ಪೋಷಕರಿಗೆ ಸಲಹೆ-world obesity day 2024 over weight health problems in children healthy habits for kids to prevent childhood obesity rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳಲ್ಲಿ ಮಾರಣಾಂತಿಕ ಅಪಾಯಗಳನ್ನು ಹೆಚ್ಚಿಸುತ್ತಿದೆ ಬೊಜ್ಜಿನ ಸಮಸ್ಯೆ; ಮಗುವಿನ ತೂಕ ನಿಯಂತ್ರಣಕ್ಕೆ ಪೋಷಕರಿಗೆ ಸಲಹೆ

ಮಕ್ಕಳಲ್ಲಿ ಮಾರಣಾಂತಿಕ ಅಪಾಯಗಳನ್ನು ಹೆಚ್ಚಿಸುತ್ತಿದೆ ಬೊಜ್ಜಿನ ಸಮಸ್ಯೆ; ಮಗುವಿನ ತೂಕ ನಿಯಂತ್ರಣಕ್ಕೆ ಪೋಷಕರಿಗೆ ಸಲಹೆ

ಇತ್ತೀಚಿನ ದಿನಗಳಲ್ಲಿ ದೊಡ್ಡವರಲ್ಲಿ ಮಾತ್ರವಲ್ಲ, ಮಕ್ಕಳಲ್ಲೂ ಬೊಜ್ಜಿನ ಸಮಸ್ಯೆ ಹೆಚ್ಚು ಕಾಡುತ್ತಿದೆ. ನಿಮ್ಮ ಮಗು ಕೂಡ ಅತಿಯಾದ ತೂಕ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಖಂಡಿತ ನಿರ್ಲಕ್ಷ್ಯ ಮಾಡಬೇಡಿ. ಭವಿಷ್ಯದಲ್ಲಿ ಇದು ಮಾರಣಾಂತಿಕ ಸಮಸ್ಯೆಗೂ ಕಾರಣವಾಗಬಹುದು. ಈಗಲೇ ಎಚ್ಚೆತ್ತುಕೊಳ್ಳಿ, ಮಕ್ಕಳ ತೂಕ ಇಳಿಕೆಗೆ ಈ ಮಾರ್ಗ ಅನುಸರಿಸಿ.

ಮಕ್ಕಳಲ್ಲಿ ಮಾರಣಾಂತಿಕ ತೊಂದರೆ ತಂದೊಡ್ಡುತ್ತಿದೆ ಬೊಜ್ಜಿನ ಸಮಸ್ಯೆ
ಮಕ್ಕಳಲ್ಲಿ ಮಾರಣಾಂತಿಕ ತೊಂದರೆ ತಂದೊಡ್ಡುತ್ತಿದೆ ಬೊಜ್ಜಿನ ಸಮಸ್ಯೆ

ಪ್ರಪಂಚದಾದ್ಯಂತ ಹಲವು ಮಕ್ಕಳು ಅತಿ ತೂಕ ಅಥವಾ ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜಡ ಜೀವನಶೈಲಿ ಹಾಗೂ ಆಹಾರಕ್ರಮವು ಮಕ್ಕಳಲ್ಲಿ ತೂಕ ಹೆಚ್ಚಲು ಪ್ರಮುಖ ಕಾರಣವಾಗಿದೆ. ಈ ಅತಿಯಾದ ತೂಕವು ಹಲವು ರೀತಿಯ ಆರೋಗ್ಯ ಸಮಸ್ಯೆ ವೃದ್ಧಿಯಾಗಲೂ ಕಾರಣವಾಗುತ್ತಿದೆ. ವಿಶ್ವ ಬೊಜ್ಜು ದಿನವಾದ ಇಂದು (ಮಾ.4) ಮಕ್ಕಳಲ್ಲಿ ಹೆಚ್ಚಿದ ಬೊಜ್ಜಿನ ಸಮಸ್ಯೆಗೆ ಕಾರಣ, ಇದರಿಂದಾಗುವ ಪರಿಣಾಮ ಹಾಗೂ ತೂಕ ಇಳಿಕೆಯ ಕ್ರಮಗಳ ಬಗ್ಗೆ ಅರಿಯಿರಿ.

ವೈದ್ಯಕೀಯ ನಿಯತಕಾಲಿಕೆ ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಇತ್ತೀಚಿನ ವರದಿಯ ಪ್ರಕಾರ 1990 ರಿಂದ ಈಚೆಗೆ ಮಕ್ಕಳಲ್ಲಿ ಸ್ಥೂಲಕಾಯದ ಪ್ರಮಾಣ 4 ರಷ್ಟು ಹೆಚ್ಚಾಗಿದೆ ಎಂಬುದನ್ನು ತೋರಿಸುತ್ತದೆ. ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಲು ಅತಿಯಾದ ಸ್ಕ್ರೀನ್‌ ಟೈಮ್‌ ಹಾಗೂ ಜಂಕ್‌ ಫುಡ್‌ ಸೇವನೆಯು ಪ್ರಮುಖ ಕಾರಣವಾಗಿದೆ.

ಮಕ್ಕಳಲ್ಲಿ ಹೆಚ್ಚುತ್ತಿರುವ ತೂಕದ ಸಮಸ್ಯೆಯು ಅಂತಿಮವಾಗಿ ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್‌, ಕೀಲು ಸಮಸ್ಯೆ ಹಾಗೂ ಯಕೃತ್ತಿನ ಸಮಸ್ಯೆಗಳಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಬಾಲ್ಯದಿಂದಲೇ ಮಕ್ಕಳ ತೂಕ ಹೆಚ್ಚಳದ ಬಗ್ಗೆ ಪೋಷಕರು ಗಮನ ಹರಿಸದೇ ಇದ್ದರೆ, ಅದು ಅವರ ಜೀವಿತಾವಧಿಯ ಮೇಲೆ ಪರಿಣಾಮ ಬೀರಬಹುದು. ಟಿವಿ, ಮೊಬೈಲ್‌, ಕಂಪ್ಯೂಟರ್‌ ನೋಡುತ್ತಾ ತಡರಾತ್ರಿವರೆಗೆ ನಿದ್ದೆ ಮಾಡದೇ ಇರುವುದು, ಯಾವುದೇ ರೀತಿಯ ದೈಹಿಕ ಚಟುವಟಿಕೆಯಲ್ಲಿ ತೊಡಗದೇ ಇರುವುದು, ಹಣ್ಣು-ತರಕಾರಿ ಸೇವಿಸದೇ ಇರುವುದು ಚಿಕ್ಕ ಮಕ್ಕಳು ಹಾಗೂ ಹದಿಹರೆಯದವರಲ್ಲಿ ಸ್ಥೂಲಕಾಯದ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣವಾಗಿದೆ.

ಬಾಲ್ಯದಲ್ಲಿನ ಅಧಿಕ ತೂಕವು ಮಕ್ಕಳು ಹಾಗೂ ಹದಿಹರೆಯದವರ ಮೇಲೆ ಗಂಭೀರ ಪರಿಣಾಮ ಬೀರಬಹುದು. ಈ ಮಕ್ಕಳಲ್ಲಿ ಪ್ರೌಢಾವಸ್ಥೆಯಲ್ಲೂ ಅಧಿಕ ತೂಕ ಹೊಂದುವ ಸಾಧ್ಯತೆ ಹೆಚ್ಚು. ಸ್ಥೂಲಕಾಯದ ಪರಿಣಾಮದಿಂದ ಟೈಪ್‌-2 ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಅಧಿಕ ಕೊಲೆಸ್ಟ್ರಾಲ್‌ನಂತಹ ಹಲವಾರು ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಬಹುದು. ಜೊತೆಗೆ ಅವರು ರಕ್ತನಾಳದ ಕಾಯಿಲೆಗಳು, ಚಯಾಪಚಯ ಸಮಸ್ಯೆ, ಉಸಿರಾಟದ ತೊಂದರೆಗಳು, ಕೀಲುನೋವು, ಹಾರ್ಮೋನ್‌ ಸಮಸ್ಯೆ, ಕಡಿಮೆ ಜೀವಿತಾವಧಿಯಂತಹ ಹಲವು ಗಂಭೀರ ತೊಂದರೆಗಳು ಎದುರಾಗಬಹುದುʼ ಎಂದು ಫರಿದಾಬಾದ್‌ನ ಮರೆಂಗೂ ಏಷ್ಯಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಸಂಜೀವ್‌ ದತ್ತಾ ತಿಳಿಸಿದ್ದಾರೆ.

ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಉಂಟಾಗದಂತೆ ತಡೆಯುವುದು ಹೇಗೆ?

ಸಮತೋಲಿತ ಡಯೆಟ್‌: ಜಂಕ್‌ಫುಡ್‌ ಮತ್ತು ಸಿಹಿತಿಂಡಿಗಳು ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತದೆ. ಹಾಗಂತ ಇದು ನಾಲಿಗೆಗೆ ರುಚಿ ಬಿಟ್ಟರೆ, ಆರೋಗ್ಯಕ್ಕೆ ಎಂದಿಗೂ ಕಹಿಯೇ. ಇವುಗಳ ಸೇವನೆಯನ್ನು ನಿಯಂತ್ರಿಸುವ ಜೊತೆಗೆ ಪೋಷಕಾಂಶ ಭರಿತ ಆಹಾರ ತಿನ್ನಲು ಹಾಗೂ ಸಂಸ್ಕರಿಸಿದ ಆಹಾರದ ಬಳಕೆಯನ್ನು ಕಡಿಮೆ ಮಾಡಲು ಪೋಷಕರು ಮಕ್ಕಳಿಗೆ ಒತ್ತಾಯಿಸುವುದು ಅವಶ್ಯ ಹಾಗೂ ಇದು ಕಡ್ಡಾಯ ಕೂಡ. ತಾಜಾ ಹಣ್ಣುಗಳು, ತರಕಾರಿ, ಧಾನ್ಯಗಳು, ಲೀನ್‌ ಪ್ರೊಟೀನ್‌ಗಳ ಸೇವನೆಯು ದೇಹವನ್ನು ಚೆನ್ನಾಗಿ ಪೋಷಿಸುತ್ತದೆ. ಇದರಿಂದ ಜೀವನಶೈಲಿಯ ಸಮಸ್ಯೆ ಹಾಗೂ ಸ್ಥೂಲಕಾಯದ ಸಮಸ್ಯೆ ಕಡಿಮೆಯಾಗುತ್ತದೆ.

ಸಂಸ್ಕರಿಸಿದ ಆಹಾರಗಳಿಗೆ ನೋ ಹೇಳಿ: ಆರೋಗ್ಯಕರ ಆಹಾರಾಭ್ಯಾಸಗಳನ್ನು ಮಕ್ಕಳಿಗೆ ಬಾಲ್ಯದಿಂದಲೇ ರೂಢಿ ಮಾಡಿಸಬೇಕು. ಮಕ್ಕಳು ಅನಾರೋಗ್ಯಕರ ಆಹಾರ ತಿನ್ನುವುದನ್ನು ತಪ್ಪಿಸಲು ಮೊದಲು ಪೋಷಕರು ಮಕ್ಕಳೆದುರು ಆರೋಗ್ಯಕರ ಆಹಾರ ಸೇವನೆಯನ್ನು ರೂಢಿಸಿಕೊಳ್ಳಬೇಕು. ಸಂಸ್ಕರಿಸಿದ ಆಹಾರಗಳು, ಅತಿಯಾದ ಸಕ್ಕರೆ ಅಂಶ ಇರುವ ಆಹಾರಗಳು, ಕ್ಯಾಂಡಿ ಇವುಗಳಿಂದ ಮಕ್ಕಳನ್ನು ಸದಾ ದೂರವಿಡಬೇಕು.

ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ: ಜಡ ಜೀವನಶೈಲಿಯು ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣವಾಗಿದೆ. ಹಾಗಾಗಿ ಮನೆ ಹಾಗೂ ಶಾಲೆಯಲ್ಲಿ ಮಕ್ಕಳಿಗೆ ಹೊರಾಂಗಣ ಚಟುವಟಿಕೆಗಳಲ್ಲಿ ಹಾಗೂ ಆಟಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು. ಫಿಟ್‌ನೆಸ್‌ ಮಟ್ಟವನ್ನು ಸುಧಾರಿಸಲು ಫುಟ್‌ಬಾಲ್‌ ಹಾಗೂ ಕ್ರಿಕೆಟ್‌ನಂತಹ ಕ್ರೀಡಾ ಚಟುವಟಿಕೆಯಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡಿ.

ಅತಿಯಾದ ಸ್ಕ್ರೀನ್‌ ಟೈಮ್‌ಗೆ ಮಿತಿ ಹೇರಿ: ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ನಿವಾರಣೆಗೆ ಅತಿಯಾದ ಸ್ಕ್ರೀನ್‌ ಟೈಮ್‌ಗೆ ಮಿತಿ ಹೇರುವುದು ಬಹಳ ಮಖ್ಯವಾಗುತ್ತದೆ. ನಿಮ್ಮ ಮಕ್ಕಳನ್ನು ಬ್ಯುಸಿಯಾಗಿರಿಸಲು ಅವರನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ನೋಡಿಕೊಳ್ಳಿ.

ಉತ್ತಮ ನಿದ್ದೆಯೂ ಅವಶ್ಯ: ನಿದ್ದೆಯಲ್ಲಿನ ಅಡಚಣೆಯೂ ಮಕ್ಕಳಲ್ಲಿ ಹಾರ್ಮೋನ್‌ಗಳು ಅಸಮತೋಲನಕ್ಕೆ ಕಾರಣವಾಗಬಹುದು. ಇದರಿಂದ ಅವರಲ್ಲಿ ಹಸಿವಿನ ಸಮಸ್ಯೆಯೂ ಹೆಚ್ಚಬಹುದು. ಆ ಕಾರಣಕ್ಕೆ ಮಕ್ಕಳು ಪ್ರತಿದಿನ ಉತ್ತಮ ನಿದ್ದೆ ಮಾಡುವುದನ್ನ ರೂಢಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು ಅತಿ ಮುಖ್ಯವಾಗುತ್ತದೆ.

(This copy first appeared in Hindustan Times Kannada website. To read more like this please logon to kannada.hindustantimes.com)