ಕನ್ನಡ ಸುದ್ದಿ  /  Lifestyle  /  World Oral Health Day 2024 Follow These Tips To Avoid Tooth Decay Of Children Health Tips In Kannada Rsm

World Oral Health Day: ಇಂದು ವಿಶ್ವ ಬಾಯಿ ಆರೋಗ್ಯ ದಿನ; ಶಿಶುಗಳ ಹಲ್ಲು ಹುಳುಕಾಗುವುದನ್ನು ತಡೆಯಲು ಈ ಸೂತ್ರಗಳನ್ನು ಪಾಲಿಸಿ

World Oral Health Day 2024: ಮಕ್ಕಳಲ್ಲಿ ಬಹಳ ಬೇಗ ದಂತಕ್ಷಯ ಉಂಟಾಗುತ್ತದೆ. ಪೋಷಕರು ಆಗ್ಗಾಗ್ಗೆ ಮಕ್ಕಳ ಆರೋಗ್ಯದತ್ತ ಗಮನ ನೀಡುವುದು ಅಗತ್ಯ. ಇಂದು ವಿಶ್ವ ಬಾಯಿ ಆರೋಗ್ಯ ದಿನ. ಮಕ್ಕಳಲ್ಲಿ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಕುರಿತು ಬೆಂಗಳೂರಿನ ಕಿಂಡರ್‌ ಆಸ್ಪತ್ರೆಯ ಮಕ್ಕಳ ದಂತ ವೈದ್ಯೆ ಡಾ. ಪ್ರಭಾವತಿ ಮಾಹಿತಿ ನೀಡಿದ್ದಾರೆ.

 ಶಿಶುಗಳ ಹಲ್ಲು ಹುಳುಕಾಗುವುದನ್ನು ತಡೆಯಲು ಸಲಹೆಗಳು
ಶಿಶುಗಳ ಹಲ್ಲು ಹುಳುಕಾಗುವುದನ್ನು ತಡೆಯಲು ಸಲಹೆಗಳು (PC: Unsplash)

World Oral Health Day 2024: ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಬಾಯಿಯ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಬಾಯಿಯ ಆರೋಗ್ಯದ ಕಾಳಜಿ ಕುರಿತು ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ. ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಾರ್ಗವೆಂದರೆ ಉತ್ತಮ ಆಹಾರ ಸೇವನೆ. ಈ ನಿಟ್ಟಿನಲ್ಲಿ ಬಾಯಿ ಪ್ರಮುಖ ಪಾತ್ರ ವಹಿಸುತ್ತದೆ.

ಉತ್ತಮ ಆಹಾರ ಸೇವನೆಯಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಬಾಯಿಯ ಆರೋಗ್ಯವನ್ನು ಶಿಶುವಿನ ಹಂತದಲ್ಲೇ ತಿಳಿಯುವುದು ಸಹಕಾರಿ. ಈ ಕುರಿತು ಬೆಂಗಳೂರಿನ ಕಿಂಡರ್‌ ಆಸ್ಪತ್ರೆಯ ಮಕ್ಕಳ ದಂತ ವೈದ್ಯೆ ಡಾ. ಪ್ರಭಾವತಿ ಹೆಚ್‌.ಬಿ. ಸಮಗ್ರ ಮಾಹಿತಿ ನೀಡಲಿದ್ದಾರೆ.

ಏನಿದು ಶಿಶುಗಳ ಬಾಯಿಯ ಆರೋಗ್ಯ ?

ಮಕ್ಕಳು ಶಿಶುವಾಗಿರುವ ಹಂತದಲ್ಲೇ ಬಾಯಿಯ ಆರೋಗ್ಯ ಕಾಳಜಿ ಮುಖ್ಯ. ಉತ್ತಮ ಅಭ್ಯಾಸಗಳನ್ನು ಈ ಹಂತದಿಂದಲೇ ಆರಂಭಿಸುವುದರಿಂದ ಮಕ್ಕಳ ಹಲ್ಲಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಶಿಶುವಿನ ಬಾಯಿ ಆರೋಗ್ಯ ಏಕೆ ಮುಖ್ಯ?

ಮಕ್ಕಳ ಬೆಳವಣಿಗೆಯ ಹಂತದಲ್ಲಿ ಬಾಯಿಯ ಆರೋಗ್ಯ ತುಂಬಾನೆ ಪ್ರಮುಖ ಪಾತ್ರವಹಿಸುತ್ತದೆ. ಏಕೆಂದರೆ ಮಗುವಿನ ಒಟ್ಟಾರೆ ಯೋಗಕ್ಷೇಮಕ್ಕೆ ಇದು ಪ್ರಮುಖವಾದುದು. ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಬಾಯಿ ಸ್ವಚ್ಛತೆಯ ಅಭ್ಯಾಸಗಳನ್ನು ಮಾಡದಿದ್ದಲ್ಲಿ ಹಲ್ಲು ಹುಳುಕು ಕಾಣಿಸಿಕೊಳ್ಳಬಹುದು. ತದನಂತರ ಹಲ್ಲು ನೋವು, ಸೋಂಕುಗಳು ಕಾಣಿಸಿಕೊಂಡು ಮಗುವಿನ ಆರೋಗ್ಯಯುತ ಬದುಕಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಶಿಶುಗಳಲ್ಲಿ ಹಲ್ಲು ಹುಳುಕಾಗಲು ಕಾರಣಗಳು

* ಆಗ್ಗಾಗ್ಗೆ ಸಕ್ಕರೆಯುಕ್ತ ಆಹಾರಗಳು ಮತ್ತು ಪಾನೀಯಗಳ ಸೇವನೆ

* ದೀರ್ಘಕಾಲದ ಹಾಲಿನ ಬಾಟಲಿಗಳ ಬಳಕೆಯಿಂದಲೂ ಹಲ್ಲು ಹುಳುಕಾಗುವ ಸಾಧ್ಯತೆ ಇರುತ್ತದೆ.

* ವಿಶೇಷವಾಗಿ ಶಿಶುವಿನಲ್ಲಿ ಪ್ರಾಥಮಿಕ ಹಲ್ಲು ಕಾಣಿಸಿಕೊಂಡ ನಂತರ ರಾತ್ರಿ ಹೊತ್ತು ಹಾಲುಣಿಸುವುದರಿಂದಲೂ ಶಿಶುಗಳಲ್ಲಿ ಹಲ್ಲು ಹುಳುಕು ಕಾಣಿಸಿಕೊಳ್ಳಬಹುದು.

ಶಿಶುಗಳಲ್ಲಿ ಹಲ್ಲು ಹುಳುಕು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳು

ಪೋಷಕರು ಶಿಶುಗಳಲ್ಲಿ ಹಲ್ಲು ಹುಳುಕಾಗುವುದನ್ನು ತಡೆಗಟ್ಟಲು ಬಾಯಿಯ ಸ್ವಚ್ಛತೆಗೆ ಉತ್ತಮ ಅಭ್ಯಾಸಗಳನ್ನು ಮಾಡಬೇಕು. ಶಿಶುವಿನ ಹಲ್ಲುಗಳನ್ನು ದಿನಕ್ಕೆ ಎರಡು ಬಾರಿ ಮೃದುವಾದ ಬ್ರಷ್ ಬಳಸಿ ಸ್ವಚ್ಛಗೊಳಿಸಬೇಕು. ಸಕ್ಕರೆಯುಕ್ತ ಆಹಾರ ಮತ್ತು ಪಾನೀಯ ಸೇವನೆಯನ್ನು ಮಿತಿಗೊಳಿಸಬೇಕು. ದೀರ್ಘಕಾಲದ ಹಾಲಿನ ಬಾಟಲಿಗಳ ಬಳಕೆಯನ್ನು ನಿಷೇಧಿಸಬೇಕು. ವಿಶೇಷವಾಗಿ ಶಿಶುವಿನಲ್ಲಿ ಪ್ರಾಥಮಿಕ ಹಲ್ಲು ಕಾಣಿಸಿಕೊಂಡ ನಂತರ ಹೆಚ್ಚು ಜಾಗ್ರತೆ ವಹಿಸಬೇಕು.

ಶಿಶುವಿನಲ್ಲಿ ಕಂಡು ಬರುವ ಹಲ್ಲು ಹುಳುಕಿಗೆ ಪರಿಹಾರವೇನು?

ಶಿಶುವಿನಲ್ಲಿ ಹಲ್ಲು ಹುಳುಕು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ತೆಗೆದುಕೊಳ್ಳುವುದು ಒಳಿತು. ವೈದ್ಯರ ಸಲಹೆಯಂತೆ

ಫ್ಲೋರೈಡ್ ವಾರ್ನಿಷ್ ಬಳಕೆ, ಆಹಾರ ಪದ್ಧತಿ ಮತ್ತು ಮೌಖಿಕ ನೈರ್ಮಲ್ಯದ ಅಭ್ಯಾಸಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದಲೂ ಹುಳುಕು ಹಲ್ಲಿಗೆ ಪರಿಹಾರ ಕಂಡುಕೊಳ್ಳಬಹುದು.

ಶಿಶುವಿನ ಹಲ್ಲಿನ ಆರೈಕೆಗೆ ಸಲಹೆಗಳು

  • ಶಿಶುವಿನ ಪ್ರಾಥಮಿಕ ಹಲ್ಲು ಉದರಿದ ತಕ್ಷಣ ಬಾಯಿಯ ಸ್ವಚ್ಛತೆಗೆ ಉತ್ತಮ ಅಭ್ಯಾಸಗಳನ್ನು ಪ್ರಾರಂಭಿಸಿ. ಮೃದುವಾದ ಬ್ರಷ್ ಬಳಸಿ ದಿನಕ್ಕೆ ಎರಡು ಬಾರಿ ಹಲ್ಲುಗಳನ್ನು ಸ್ವಚ್ಛಗೊಳಿಸಿ.
  • 6 ರಿಂದ 12 ತಿಂಗಳ ನಡುವಿನ ಶಿಶುವಿಗೆ ಘನ ಆಹಾರವನ್ನು ಅಭ್ಯಾಸ ಮಾಡಿ.
  • ಶಿಶುವಿನಲ್ಲಿ ಪ್ರಾಥಮಿಕ ಹಲ್ಲು ಕಾಣಿಸಿಕೊಂಡ ನಂತರ ರಾತ್ರಿ ಸಮಯ ಹಾಲುಣಿಸುವಿಕೆಯನ್ನು ಸ್ಥಗಿತಗೊಳಿಸಿ.
  • ಹೆಚ್ಚಿನ ಸಮಯ ಹಾಲಿನ ಬಾಟಲ್ ಬಳಕೆಯನ್ನು ಮಿತಿಗೊಳಿಸಿ. 12 ರಿಂದ 14 ತಿಂಗಳ ಮಗುವಿಗೆ ಕಪ್‌ನಲ್ಲಿ ಹಾಲು ಕುಡಿಯಲು ಅಭ್ಯಾಸ ಮಾಡಿಸಿ
  • ಮಕ್ಕಳಿಗೆ ಹಣ್ಣಿನ ರಸದ ಬದಲಾಗಿ ಕತ್ತರಿಸಿದ/ಸುಲಿದ ಹಣ್ಣುಗಳನ್ನೇ ಸೇವಿಸಲು ನೀಡಿ.
  • 6 ತಿಂಗಳ ನಂತರದ ಶಿಶುವಿಗೆ ತಾಯಿಯ ಎದೆಹಾಲಿನ ಜೊತೆಗೆ ಖನಿಜಾಂಶ ತುಂಬಿದ ಸಿರಿಧಾನ್ಯಗಳ ಆಹಾರ ನೀಡಬೇಕು.
  • ಶಿಶುವಿಗೆ ಒಂದು ವರ್ಷ ತುಂಬುವವರೆಗೂ ಹಸುವಿನ ಹಾಲು ನೀಡದಿರುವುದು ಒಳಿತು.
  • ನವಜಾತ ಶಿಶುವಿನ ಹಂತದಿಂದಲೇ ಬಾಯಿಯ ಆರೋಗ್ಯಕ್ಕಾಗಿ ನಿಯಮಿತ ತಪಾಸಣೆಗಳನ್ನು ಮಾಡಿಸುವುದು ಪೋಷಕರ ಮಹತ್ವದ ಜವಾಬ್ದಾರಿ.

ಇದನ್ನೂ ಓದಿ: ಮಕ್ಕಳು, ಹದಿವಯಸ್ಸಿನವರಲ್ಲಿ ಹೆಚ್ಚುತ್ತಿದೆ ಟೈಪ್‌ 1 ಡಯಾಬಿಟಿಸ್‌; ಕೋವಿಡ್‌ಗೂ ಮಧುಮೇಹಕ್ಕೂ ಇದೆ ನಂಟು: ಅಧ್ಯಯನ